ಪೆರು: ‘ಸೊಡಾಲಿತಿಯಂ’ನಿಂದ ಬಲಿಯಾದವರಿಗಾಗಿ ಪವಿತ್ರ ಪ್ರಾಯಶ್ಚಿತ್ತ ಬಲಿಪೂಜೆ
ವ್ಯಾಟಿಕನ್ ವರದಿ
ಪೆರು ದೇಶದ ವಾಯುವ್ಯ ಭಾಗದ ಪಿಯೂರಾ ಪ್ರದೇಶದಲ್ಲಿರುವ ಕಟಾಕಾವೋಸ್‌ನ ಸಂತ ಜುವಾನ್ ಬೌತಿಸ್ತ ದೇವಾಲಯದಲ್ಲಿ, ಟಲ್ಲಾನ್ ಮೂಲನಿವಾಸಿ ಸಮುದಾಯಗಳಿಗಾಗಿ ಗಂಭೀರ ಪವಿತ್ರ ಆಚರಣೆಯೊಂದು ನಡೆಯಿತು. ಒಂದು ದಶಕಕ್ಕೂ ಹೆಚ್ಚು ಕಾಲ, ಈ ಸಮುದಾಯಗಳು “ಸೊಡಾಲಿತಿಯಂ ಕ್ರಿಸ್ತಿಯಾನೆ ವಿಟೇ” (SCV) ಎಂಬ ಸಂಘದಿಂದ ಹಿಂಸೆ, ಭೂಮಿ ಕಬಳಿಕೆ ಮತ್ತು ಕಿರುಕುಳವನ್ನು ಅನುಭವಿಸಿದ್ದವು. ಈ ಸಂಘವನ್ನು 2025ರಲ್ಲಿ ಪೂಜ್ಯ ಜಗದ್ಗುರು ಫ್ರಾನ್ಸಿಸ್ ರದ್ದುಪಡಿಸಿದ್ದರು.
ಮೇ 23ರ ಶನಿವಾರ ಆಚರಿಸಲಾದ ಈ ಪವಿತ್ರ ಬಲಿಪೂಜೆ, ಭೂಸ್ವಾಮ್ಯ ಮತ್ತು ಸಾಮಾಜಿಕ ಹಕ್ಕುಗಳ ಮೇಲಿನ ವರ್ಷಗಳ ಉಲ್ಲಂಘನೆಗಳ ನಂತರ, ಸಾರ್ವಜನಿಕ ಪ್ರಾಯಶ್ಚಿತ್ತ ಮತ್ತು ನ್ಯಾಯದ ಸಂಕೇತವಾಗಿ ನೆರವೇರಿಸಲಾಯಿತು. ಇದು ಆಳವಾದ ಗಾಯಗಳಿಂದ ಗುಣಮುಖತೆಯತ್ತ ಸಾಗುವ ಪಯಣದಲ್ಲಿ ಜೊತೆಗಿರುವ ಕಾರ್ಯವಾಗಿಯೂ ಉದ್ದೇಶಿತವಾಗಿತ್ತು.
“ಸೊಡಾಲಿಸಿಯೋ” ಎಂಬ ಹೆಸರಿನಿಂದ ಹೆಚ್ಚು ಪರಿಚಿತವಾಗಿದ್ದ ಈ ಲೌಕಿಕ ಸಂಸ್ಥೆ, 1970ರ ದಶಕದಿಂದ ಲ್ಯಾಟಿನ್ ಅಮೆರಿಕಾದ ಅತ್ಯಂತ ಸಕ್ರಿಯ ಮತ್ತು ವ್ಯಾಪಕ ಸಂಸ್ಥೆಗಳಲ್ಲಿ ಒಂದಾಗಿತ್ತು. ಆದರೆ, ನಂತರ ಇದರ ಸ್ಥಾಪಕರು ಮತ್ತು ಉನ್ನತ ನಾಯಕತ್ವವನ್ನು ಒಳಗೊಂಡ ಗಂಭೀರ ದೌರ್ಜನ್ಯ ಮತ್ತು ಭ್ರಷ್ಟಾಚಾರದ ಹಗರಣಗಳ ಕೇಂದ್ರವಾಗಿ ಮಾರ್ಪಡಿಸಿದರು. 2025ರ ಏಪ್ರಿಲ್ 14ರಂದು, “ಮೂಲಭೂತ ಧರ್ಮಸ್ಫೂರ್ತಿಯ ಕೊರತೆ” ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ, ಪೂಜ್ಯ ಜಗದ್ಗುರು ಫ್ರಾನ್ಸಿಸ್ ಈ ಚಳವಳಿಯನ್ನು ರದ್ದುಪಡಿಸುವ ಆದೇಶ ಹೊರಡಿಸಿದರು.
ಆಲಿಸುವಿಕೆಯ ಪಯಣ
ದಿವಂಗತ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಕೈಗೊಂಡ ಈ ನಿರ್ಣಾಯಕ ಕ್ರಮವು, ಅವರ ಆಡಳಿತದ ಅಂತಿಮ ಕಾರ್ಯಗಳಲ್ಲಿ ಒಂದಾಗಿತ್ತು. ಇದು ಪೆರುವಿನಲ್ಲಿ ಧರ್ಮಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ಮತ್ತು ಸೊಡಾಲಿತಿಯಂ ಸಂತ್ರಸ್ತರು ಹಾಗೂ ತನಿಖೆಗಳ ಪ್ರಮುಖ ಬೆಂಬಲಿಗರಲ್ಲಿ ಒಬ್ಬರಾಗಿದ್ದ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರ ಆಯ್ಕೆಗೆ ಸುಮಾರು ಒಂದು ತಿಂಗಳ ಮುಂಚೆ ನಡೆಯಿತು. ಈ ರದ್ದತಿ ಕ್ರಮದೊಂದಿಗೆ, ಸಂಸ್ಥೆಯ ವಿಸರ್ಜನಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಅಪೋಸ್ತೋಲಿಕ ಆಯುಕ್ತರಾಗಿ ವಂದನೀಯ ಗುರು ಜೋರ್ಡಿ ಬೆರ್ಟೊಮೆಯು ಫಾರ್ನೋಸ್ ಅವರನ್ನು ನೇಮಿಸಲಾಯಿತು.
ಧರ್ಮಸಿದ್ಧಾಂತ ವಿಭಾಗದ ಅಧಿಕೃತ ಸದಸ್ಯರಾಗಿರುವ ಈ ಕಟಲಾನ್ ಧರ್ಮಗುರು, ಹಿಂದೆ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರಿಂದ ಚಿಲಿ ಮತ್ತು ಲ್ಯಾಟಿನ್ ಅಮೆರಿಕಾದ ಇತರ ಭಾಗಗಳಲ್ಲಿ ನಡೆದ ದೌರ್ಜನ್ಯ ಪ್ರಕರಣಗಳನ್ನು ತನಿಖೆ ಮಾಡುವ ಜವಾಬ್ದಾರಿಯನ್ನು ಮಹಾಧರ್ಮಾಧ್ಯಕ್ಷ ಚಾರ್ಲ್ಸ್ ಸ್ಕಿಕ್ಲುನಾ ಅವರೊಂದಿಗೆ ಸೇರಿ ವಹಿಸಿಕೊಂಡಿದ್ದರು. ಅದರಲ್ಲಿ, ಸೊಡಾಲಿತಿಯಂ ಸಂಘದ ಸ್ಥಾಪಕರಾದ ಲೂಯಿಸ್ ಫೆರ್ನಾಂಡೊ ಫಿಗಾರಿ ಅವರ ತಾಯ್ನಾಡಾದ ಪೆರು ಸಹ ಸೇರಿತ್ತು.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).