ಹುಡುಕಿ

ಜೋಸೆಫಿನಾ ರಾಮೋನ್ ಬೆರ್ನಾ ಅವರ “ಅವಿಭಜಿತ ಹೃದಯ” ಕೃತಿಯ ಮುಖಪುಟ. ಜೋಸೆಫಿನಾ ರಾಮೋನ್ ಬೆರ್ನಾ ಅವರ “ಅವಿಭಜಿತ ಹೃದಯ” ಕೃತಿಯ ಮುಖಪುಟ. 

‘ಅವಿಭಜಿತ ಹೃದಯ’: ಧರ್ಮಪ್ರಚಾರ ಮತ್ತು ಕನ್ಯತ್ವದ ಕುರಿತು ಕಾರ್ಮೆನ್ ಹೆರ್ನಾಂಡೆಸ್ ಅವರ ಚಿಂತನೆ

ಜೋಸೆಫಿನಾ ರಾಮೋನ್ ಬೆರ್ನಾ ಅವರ “ಅವಿಭಜಿತ ಹೃದಯ – ಕಾರ್ಮೆನ್ ಹೆರ್ನಾಂಡೆಸ್ ಅವರ ಧರ್ಮಪ್ರಚಾರ ಮತ್ತು ಕನ್ಯತ್ವ” ಕೃತಿ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಬಿಡುಗಡೆಯನ್ನು, ಪೊಂಪೆಯಿಯ ಪ್ರಾರ್ಥನಾ ದಿನ ಹಾಗೂ ನವ-ಕ್ರೈಸ್ತ ದೀಕ್ಷಾಮಾರ್ಗದ ಉದ್ಭವದ ಸ್ಮರಣೆಯಾದ ಮೇ 8ರೊಂದಿಗೆ ಸಂಕೇತಾತ್ಮಕವಾಗಿ ಹೊಂದಿಸಲಾಗಿದೆ.

ಲೇಖಕರು: ಲೇಖಕರು: ದೆಬೋರ ಡೊನ್ನಿನಿ

ತನ್ನ ಗರ್ಭದಲ್ಲಿ “ಜೀವನದ ಕಾರ್ಖಾನೆ”ಯನ್ನೇ ಹೊತ್ತಿರುವ ಮಹಿಳೆ ಸಮಾಜದಲ್ಲಿ ಮೂಲಭೂತ ಧ್ಯೇಯವನ್ನು ಹೊಂದಿದ್ದಾಳೆ. ಈ ದೈಹಿಕ ವಾಸ್ತವಿಕತೆಯೊಂದಿಗೆ ಆಳವಾಗಿ ಸಂಬಂಧಿಸಿರುವ ಮತ್ತೊಂದು ಅಂಶವೆಂದರೆ ಕನ್ಯತ್ವದ ಅರ್ಥ — ಅದು ಪರಲೋಕದತ್ತ ಮುಖಮಾಡಿರುವ ಪ್ರೀತಿಯನ್ನು ಸೂಚಿಸುವ ಅಂತ್ಯಕಾಲದ ಸಂಕೇತವಾಗಿ ಅರ್ಥ.ಈ ವಿಚಾರಗಳೇ ಇತ್ತೀಚೆಗೆ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಪ್ರಕಟವಾದ “ಅವಿಭಜಿತ ಹೃದಯ: ಕಾರ್ಮೆನ್ ಹೆರ್ನಾಂಡೆಸ್ ಅವರ ಧರ್ಮಪ್ರಚಾರ ಮತ್ತು ಕನ್ಯತ್ವ” ಎಂಬ ಕೃತಿಯ ಕೇಂದ್ರಬಿಂದುಗಳಾಗಿವೆ. ಈ ಕೃತಿಯನ್ನು ಕ್ರಮವಾಗಿ ಡಿನೊ ಫುರ್ಜಿಯೋನೆ ಮತ್ತು ಜುಲಿಯಾನೊ ಬೊನೋಮಿ ಸಂಪಾದಿಸಿದ್ದಾರೆ. 

ಲೇಖಕಿಯಾದ ಜೋಸೆಫಿನಾ ರಾಮೋನ್ ಬೆರ್ನಾ, ನವ-ಕ್ರೈಸ್ತ ದೀಕ್ಷಾಮಾರ್ಗದ ಒಬ್ಬ ಸಾಮಾನ್ಯ ಧರ್ಮಪ್ರಚಾರಕಿಯಾಗಿದ್ದು, ದೇವದಾಸಿಯಾದ ಕಾರ್ಮೆನ್ ಹೆರ್ನಾಂಡೆಸ್ ಅವರ ಸುಮಾರು 400 ಉಲ್ಲೇಖಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ, ಮಹಿಳೆಯರ ಕುರಿತು ಹಾಗೂ ವಿಶೇಷವಾಗಿ ಕನ್ಯತ್ವ ಮತ್ತು ಧರ್ಮಪ್ರಚಾರದ ನಡುವಿನ ಸಂಬಂಧದ ಕುರಿತು ಹೆರ್ನಾಂಡೆಸ್ ಅವರ ಚಿಂತನೆಗಳ ವಿಶಾಲ ಚಿತ್ರಣವನ್ನು ಅವರು ನೀಡಿದ್ದಾರೆ.

ಈ ಕೃತಿ, ಹೆರ್ನಾಂಡೆಸ್ ಅವರ ಉಪದೇಶಾತ್ಮಕ ಮತ್ತು ದೈವಶಾಸ್ತ್ರೀಯ ಚಿಂತನೆಯ ಆಳವನ್ನು ಸ್ಪಷ್ಟಪಡಿಸುತ್ತದೆ. ಇದೇ ಸಮಯದಲ್ಲಿ, ಮ್ಯಾಡ್ರಿಡ್‌ನಲ್ಲಿ ಅವರ ಧನ್ಯಪಟ್ಟ ಮತ್ತು ಸಂತ ಪದವಿಗಾಗಿ ನಡೆಯುತ್ತಿರುವ ಪ್ರಕ್ರಿಯೆಯ ಧರ್ಮಕ್ಷೇತ್ರ ಹಂತವೂ ಪ್ರಗತಿಯಲ್ಲಿದೆ.

 ಕ್ರಿಸ್ತನೊಂದಿಗೆ ಒಂದಾಗಿ

ಈ ಕೃತಿಯ ಮುನ್ನುಡಿಯಲ್ಲಿ, ಈ ಕರೆಯ ವರದ ಮಹತ್ವವನ್ನೂ ಕ್ರಿಸ್ತನೊಂದಿಗೆ ಒಂದಾಗಿ ಉಳಿಯುವ ಅಗತ್ಯವನ್ನೂ ಕಿಕೊ ಅರ್ಗುಯೆಲ್ಲೊ ಒತ್ತಿಹೇಳುತ್ತಾರೆ. ಅದು ಸಂಚಾರಿ ಧರ್ಮಪ್ರಚಾರಕರ ಜೀವನವಾಗಿರಲಿ, ಆಫ್ರಿಕಾದಲ್ಲಿ ಸೇವೆ ಸಲ್ಲಿಸುವ ಧರ್ಮಭಗಿನಿಯ ಜೀವನವಾಗಿರಲಿ ಅಥವಾ ಆಸ್ಪತ್ರೆಯಲ್ಲಿ ಏಡ್ಸ್ ರೋಗಿಗಳ ಆರೈಕೆ ಮಾಡುವ ಸೇವೆಯಾಗಿರಲಿ — ಎಲ್ಲವೂ ಕ್ರಿಸ್ತನೊಂದಿಗಿನ ಏಕತೆಯಲ್ಲಿಯೇ ನೆಲೆಗೊಂಡಿರಬೇಕು. “ಕನ್ಯತ್ವವು, ಈ ಆಧ್ಯಾತ್ಮಿಕ ಮತ್ತು ಶಾಶ್ವತ ಪ್ರೀತಿಯ ಅಂತ್ಯಕಾಲದ ಸಂಕೇತವಾಗಿದೆ” ಎಂದು  ಹೇಳಿದ್ದಾರೆ.

ಧರ್ಮಪ್ರಚಾರ ಮತ್ತು ಕನ್ಯತ್ವ

ಲೇಖಕಿ ವಿಶೇಷವಾಗಿ ಒತ್ತಿಹೇಳಿರುವ ಪ್ರಮುಖ ವಿಚಾರಗಳಲ್ಲಿ ಒಂದೆಂದರೆ ಧರ್ಮಪ್ರಚಾರ ಮತ್ತು ಕನ್ಯತ್ವದ ನಡುವಿನ ಆಪ್ತ ಸಂಬಂಧ. ಅದೇ ರೀತಿ, ಕನ್ಯತ್ವ ಮತ್ತು ಮಾತೃತ್ವವೂ ಮೇಲ್ನೋಟಕ್ಕೆ ವಿರೋಧಾಭಾಸದಂತಿದ್ದರೂ ಸಹ ಪರಸ್ಪರ ಬೇರ್ಪಡಿಸಲಾಗದ ಅಂಶಗಳಾಗಿವೆ. ನವ-ಕ್ರೈಸ್ತ ದೀಕ್ಷಾಮಾರ್ಗದ ಅಂತರರಾಷ್ಟ್ರೀಯ ತಂಡದ ಸದಸ್ಯೆಯಾದ ಮರಿಯಾ ಅಸೆನ್ಸಿಯೋನ್ ರೊಮೆರೊ, ಮುನ್ನುಡಿಯಲ್ಲಿ ಈ ವಿಚಾರದ ಕುರಿತು ಚಿಂತನೆ ಹಂಚಿಕೊಂಡಿದ್ದಾರೆ.

ಯೇಸು ಕ್ರಿಸ್ತನ ಮೇಲಿನ ಪ್ರೀತಿಯ ಮೂಲಕ ಕನ್ಯತ್ವವು ಹೆಚ್ಚು ಫಲವತ್ತತೆಯಿಂದ ಕೂಡಿರುತ್ತದೆ ಎಂದು ಅವರು ವಿವರಿಸುತ್ತಾರೆ. ಏಕೆಂದರೆ ನಿಜವಾದ ಪ್ರೀತಿ ಯಾವಾಗಲೂ ಜೀವವನ್ನು ಹುಟ್ಟಿಸುತ್ತದೆ. ದೇಹಾತ್ಮಕವಾಗಿ ಮಕ್ಕಳನ್ನು ಹೊಂದದವರಾದರೂ, ಇತರರಿಗಾಗಿ ತಮ್ಮ ಜೀವನವನ್ನು ಅರ್ಪಿಸುವವರ ಸಾಕ್ಷಿ ಮತ್ತು ಸಾರಣೆಯಿಂದ ಅನೇಕ ಫಲಗಳು ಹುಟ್ಟುತ್ತವೆ ಎಂದು ಅವರು ಹೇಳಿದ್ದಾರೆ.

ಈ ಕೃತಿ, ನವ-ಕ್ರೈಸ್ತ ದೀಕ್ಷಾ ಮಾರ್ಗದೊಳಗೆ ಧರ್ಮಪ್ರಚಾರ, ಯಾಜಕತ್ವ ಮತ್ತು ಸಮರ್ಪಿತ ಜೀವನಕ್ಕೆ ಬಂದಿರುವ ಅನೇಕ ಕರೆಯನ್ನೂ, ಮರುಸ್ಥಾಪಿತ ದಾಂಪತ್ಯ ಜೀವನಗಳನ್ನೂ ಹಾಗೂ ಜೀವಕ್ಕೆ ಮುಕ್ತ ಮನೋಭಾವವನ್ನೂ ಈ ಫಲವತ್ತತೆಯ ಸ್ಪಷ್ಟ ಚಿಹ್ನೆಗಳೆಂದು ಸೂಚಿಸುತ್ತದೆ. ಇದಲ್ಲದೆ, ಕನ್ಯತ್ವವೆಂದರೆ ಸಂಪೂರ್ಣವಾಗಿ ದೇವರ ಕೃಪೆಯೇ ಹೊರತು ನೈತಿಕತಾವಾದದಿಂದ ಹುಟ್ಟಿದದ್ದು ಅಲ್ಲ ಎಂದು ರೊಮೆರೊ ಒತ್ತಿಹೇಳುತ್ತಾರೆ.

ಕ್ರೈಸ್ತ ಧರ್ಮದಲ್ಲಿನ ಕನ್ಯತ್ವ

ಈ ಕೃತಿಯಲ್ಲಿ ಸಂಗ್ರಹಿಸಲಾದ ಕಾರ್ಮೆನ್ ಹೆರ್ನಾಂಡೆಸ್ ಅವರ ಚಿಂತನೆಗಳು, ಕ್ರೈಸ್ತಧರ್ಮಕ್ಕೂ ಮುಂಚಿನ ಅನ್ಯಧರ್ಮೀಯ ಜಗತ್ತಿನ ಪೂಜಾರಿಣಿಯರು ಮತ್ತು ಯೆಹೂದಿ ಧರ್ಮದಲ್ಲಿ ಮಹಿಳೆಯರ ಕುರಿತು ಇರುವ ದೃಷ್ಟಿಕೋನಗಳ ನಡುವಿನ ವ್ಯತ್ಯಾಸವನ್ನೂ ಪರಿಶೀಲಿಸುತ್ತವೆ. ಪ್ರಾಚೀನ ಅನ್ಯಧರ್ಮೀಯ ಸಂಪ್ರದಾಯಗಳಲ್ಲಿ, ಪೂಜಾರಿಣಿಯರು ರಹಸ್ಯ ಆರಾಧನಾ ಪದ್ಧತಿಗಳೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಯೆಹೂದಿ ಸಂಪ್ರದಾಯದಲ್ಲಿ ಮಹಿಳೆಯರ ಪಾತ್ರ ಬೇರೆ ರೀತಿಯದ್ದಾಗಿತ್ತು. ಉದಾಹರಣೆಗೆ, ಕುಟುಂಬದೊಳಗೆ ಸಬ್ಬತ್ ದೀಪವನ್ನು ಬೆಳಗಿಸುವ ಕಾರ್ಯವನ್ನು ಮಹಿಳೆಯರು ನಿರ್ವಹಿಸುತ್ತಾರೆ.

ಹಳೆಯ ಒಡಂಬಡಿಕೆಯಲ್ಲಿ ಕೂಡ ಮಹಿಳೆಯರ ಮಹತ್ವದ ಪಾತ್ರ ಸ್ಪಷ್ಟವಾಗಿ ಕಾಣಿಸುತ್ತದೆ. ದೆಬೋರಾ, ಜೂಡಿತ್ ಮತ್ತು ಎಸ್ತೇರ್ ಮೊದಲಾದ ಮಹಿಳೆಯರನ್ನು ಇಸ್ರಾಯೇಲ್ ಜನರನ್ನು ರಕ್ಷಿಸಲು ಸಹಾಯ ಮಾಡಿದವರಾಗಿ ಪರಿಚಯಿಸಲಾಗಿದೆ. ಆದರೂ ಅವರು ಪೂಜಾರಿಣಿಯರಲ್ಲ.  ಕ್ರೈಸ್ತ ಧರ್ಮದಲ್ಲಿ, ಕನ್ಯತ್ವವು ಯಾಜಕತ್ವದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಲೇಖಕಿ ವಿವರಿಸುತ್ತಾರೆ. ಬದಲಾಗಿ, “ಧರ್ಮಸಭೆಯ ಕೇಂದ್ರದಲ್ಲಿ ಇರಿಸಲ್ಪಟ್ಟಿರುವ ಕನ್ಯಾಮರಿಯಮ್ಮನನ್ನು ಮಾದರಿಯನ್ನಾಗಿಟ್ಟುಕೊಂಡು, ಅದು ಪರಿಪೂರ್ಣತೆಯತ್ತ ಮುಖಮಾಡಿದೆ” ಎಂದು ಅವರು ಹೇಳುತ್ತಾರೆ. ಈ ಅರ್ಥದಲ್ಲಿ, “ಕನ್ಯತ್ವವು ದೇವರ ಸೃಜನಶೀಲತೆಯ ಪ್ರತೀಕವಾಗಿದೆ” ಎಂದು ಲೇಖಕಿ ವಿವರಿಸುತ್ತಾರೆ.

“ಜೀವನದ ಕಾರ್ಖಾನೆ”

ಮಹಿಳೆ, ವಾಸ್ತವವಾಗಿ, ಅಪಾರ ಮಹತ್ವದ ಒಂದು ವರವನ್ನು ಹೊಂದಿದ್ದಾಳೆ — ಗರ್ಭವನ್ನು. ಕಾರ್ಮೆನ್ ಹೆರ್ನಾಂಡೆಸ್ ಅದನ್ನು “ಜೀವನ ಮತ್ತು ಇತಿಹಾಸದ ಕಾರ್ಖಾನೆ” ಎಂದು ವರ್ಣಿಸುತ್ತಾರೆ. ಅದಕ್ಕಾಗಿ, ತಮ್ಮ ಚಿಂತನೆಗಳಲ್ಲಿ ಅವರು, “ಸಾವು ಯಾವಾಗಲೂ ಮಹಿಳೆಯನ್ನು ನಾಶಮಾಡಲು ಪ್ರಯತ್ನಿಸುತ್ತದೆ” ಎಂದು ಹೇಳುತ್ತಾರೆ. ಈ ಹೋರಾಟವು ಆದಿಕಾಂಡದ ಹವ್ವಳಿಂದ ಹಿಡಿದು ಪ್ರಕಟಣಾ ಗ್ರಂಥದಲ್ಲಿನ ಸೂರ್ಯವಸ್ತ್ರ ಧರಿಸಿದ ಮಹಿಳೆಯವರೆಗೆ ಪವಿತ್ರ ಗ್ರಂಥದಾದ್ಯಂತ ಕಾಣಿಸುತ್ತದೆ.

ಈ ಕೃತಿಯಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಯ ಅನೇಕ ಮಹಿಳಾ ವ್ಯಕ್ತಿಗಳ ಉಲ್ಲೇಖಗಳಿವೆ. ಜೊತೆಗೆ, ಯೆಹೂದಿ ಸಂಪ್ರದಾಯ, ಧರ್ಮಸಭೆಯ ಪಿತೃಗಳ ಬೋಧನೆಗಳು, ದ್ವಿತೀಯ ವ್ಯಾಟಿಕನ್ ಮಹಾಸಭೆಯ ದಾಖಲೆಗಳು ಹಾಗೂ ಪೂಜ್ಯ ಜಗದ್ಗುರುಗಳ ಬೋಧನಾ ಪರಂಪರೆಯ ಕುರಿತ ಉಲ್ಲೇಖಗಳೂ ಸೇರಿವೆ. ಇವೆಲ್ಲವೂ ಸೇರಿ, ಕಾರ್ಮೆನ್ ಹೆರ್ನಾಂಡೆಸ್ ಹೊಂದಿದ್ದ ವಿಶಾಲವಾದ ಅಧ್ಯಯನ, ಸಂಸ್ಕೃತಿ ಮತ್ತು ರೂಪುಗೊಳಿಕೆಯನ್ನು ಪ್ರತಿಬಿಂಬಿಸುತ್ತವೆ. ಇದಕ್ಕೆ ಜೊತೆಗೆ, ಅವರ ವೈಜ್ಞಾನಿಕ ಹಿನ್ನೆಲೆ ಮತ್ತು ಕಿಕೊ ಅರ್ಗುಯೆಲ್ಲೊ ಅವರೊಂದಿಗೆ ಐವತ್ತು ವರ್ಷಗಳ ಕಾಲ ಜಗತ್ತಿನಾದ್ಯಂತ ಶುಭಸಂದೇಶವನ್ನು ಸಾರಿದ ಧರ್ಮಪ್ರಚಾರಕ ಅನುಭವವೂ ಈ ಕೃತಿಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ.

ದೇವರ ಪಿತೃತ್ವ

ಈ ಕೃತಿಯಲ್ಲಿ, ಕನ್ಯತ್ವದೊಂದಿಗೆ ಸಂಬಂಧಿಸಿದ ದೇವರ ಪಿತೃತ್ವದ ವಿಚಾರವನ್ನೂ ಚಿಂತಿಸಲಾಗಿದೆ. ಜೊತೆಗೆ, ಯುವಕರಲ್ಲಿ ಶುದ್ಧತೆಯ ಜೀವನವು ತಮ್ಮ ಕರೆಯನ್ನು ಕಂಡುಹಿಡಿಯುವ ಮಾರ್ಗವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಯಾಜಕರ ಬ್ರಹ್ಮಚರ್ಯದ ಅರ್ಥವೇನು ಎಂಬುದನ್ನೂ ವಿವರಿಸಲಾಗಿದೆ.

ಇದಲ್ಲದೆ, “ರಹಮೀಮ್” ಎಂಬ ಹೀಬ್ರೂ ಪದದ ಆಳವಾದ ಅರ್ಥವನ್ನೂ ಈ ಕೃತಿ ಅನ್ವೇಷಿಸುತ್ತದೆ. “ಕರುಣೆ” ಎಂಬ ಅರ್ಥ ನೀಡುವ ಈ ಪದವು “ರೆಹೆಮ್” — ಅಂದರೆ ಗರ್ಭ — ಎಂಬ ಪದದಿಂದ ಬಂದಿದ್ದು, ಅದು ಹೃದಯದ ಪ್ರೀತಿಗಿಂತಲೂ ಹೆಚ್ಚು ತಾಯಿಯ ಕರುಣೆಯೊಂದಿಗೆ ಸಂಬಂಧಿಸಿದ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.

ಈ ದೈವಶಾಸ್ತ್ರೀಯ ಮತ್ತು ಉಪದೇಶಾತ್ಮಕ ಸಮೃದ್ಧಿಯ ಕೇಂದ್ರದಲ್ಲಿ, ಕ್ರಿಸ್ತನ ಮೇಲಿನ ಪ್ರೀತಿ ಮತ್ತು ಧರ್ಮಪ್ರಚಾರದ ನಡುವಿನ ಆಳವಾದ ಸಂಬಂಧವಿದೆ.

ಜೋಸೆಫಿನಾ ರಾಮೋನ್ ಬೆರ್ನಾ ಬರೆಯುವಂತೆ, ಕಾರ್ಮೆನ್ ಹೆರ್ನಾಂಡೆಸ್ “ತಮ್ಮ ಸಂಪೂರ್ಣ ಜೀವನವನ್ನೇ ಧರ್ಮಪ್ರಚಾರಕ್ಕೆ ಅರ್ಪಿಸಲು ಬಯಸಿದರು. ಏಕೆಂದರೆ ಅವರು ಕ್ರಿಸ್ತನೊಂದಿಗೆ ಆಂತರಿಕ ಪ್ರೇಮ ಸಂಬಂಧದಲ್ಲಿ ಜೀವಿಸುತ್ತಿದ್ದರು. ಶುಭಸಂದೇಶವನ್ನು ಸಾರಲು ಹೊರಡುವುದು, ಯೇಸು ಕ್ರಿಸ್ತನ ಪ್ರೀತಿಯ ಅಪ್ರತಿರೋಧ್ಯ ಕರೆಯ ಸಹಜ ಫಲವಾಗಿತ್ತು.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

15 ಮೇ 2026, 23:02