ಹುಡುಕಿ

ಫ್ಲೊರೆಸ್, ಇಂಡೋನೇಷ್ಯಾದಲ್ಲಿ ನಡೆದ ಹಬ್ಬ ಮತ್ತು ಮೆರವಣಿಗೆ ಫ್ಲೊರೆಸ್, ಇಂಡೋನೇಷ್ಯಾದಲ್ಲಿ ನಡೆದ ಹಬ್ಬ ಮತ್ತು ಮೆರವಣಿಗೆ 

ಸೃಷ್ಟಿಯ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿರುವ ಫ್ಲೊರೆಸ್‌ನ ಮರಿಯ ಯಾತ್ರೆ

ಇಂಡೋನೇಷ್ಯಾದ ಫ್ಲೊರೆಸ್ ದ್ವೀಪದ ಲಬುವಾನ್ ಬಾಜೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಆಗಸ್ಟ್‌ನಲ್ಲಿ ನಡೆಯಲಿರುವ ವಾರ್ಷಿಕ ಗೊಲೊ ಕೋಯೆ ಉತ್ಸವಕ್ಕೂ ಮುನ್ನ ಸ್ವರ್ಗಾರೋಹಣ ಮಾತೆಗೆ ಸಮರ್ಪಿತವಾದ ಹಲವು ವಾರಗಳ ಯಾತ್ರೆಗೆ ಚಾಲನೆ ನೀಡಿದ್ದಾರೆ. ಈ ವರ್ಷದ ಯಾತ್ರೆಯು ಮರಿಯಮ್ಮನವರ ಭಕ್ತಿಯನ್ನು ಪರಿಸರ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಜೋಡಿಸುವ ಉದ್ದೇಶ ಹೊಂದಿದೆ.

ಲೇಖಕರು: ವಂದನೀಯ ಗುರು ಕಾಸ್ಮಿರ್ ನೇಮಾ, SVD – ಲಬುವಾನ್ ಬಾಜೋ, ಇಂಡೋನೇಷ್ಯಾ

ಇಂಡೋನೇಷ್ಯಾದ ಫ್ಲೊರೆಸ್ ದ್ವೀಪದ ಬೆಟ್ಟಗಳು ಮತ್ತು ಹಳ್ಳಿಗಳನ್ನು ದಾಟುವ ಮರಿಯಮ್ಮನವರ ಯಾತ್ರೆಯು, ಕಥೋಲಿಕ ವಿಶ್ವಾಸಿಗಳನ್ನು ಕನ್ಯಾ ಮರಿಯಮ್ಮನವರ ಮೇಲಿನ ಭಕ್ತಿಯನ್ನು ಇನ್ನಷ್ಟು ಗಾಢಗೊಳಿಸುವುದರ ಜೊತೆಗೆ ಸೃಷ್ಟಿಯ ಸಂರಕ್ಷಣೆಯ ಬದ್ಧತೆಯನ್ನೂ ಗಟ್ಟಿಗೊಳಿಸಲು ಆಹ್ವಾನಿಸುತ್ತಿದೆ.

ಜುಲೈ 10ರಂದು ಲಬುವಾನ್ ಬಾಜೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮಕ್ಸಿಮಸ್ ರೇಗಸ್, ಲೆಂಗ್ಕೊಂಗ್ ಸೆಪಾಂಗ್ನಲ್ಲಿರುವ ಸಂತ ಜೋಸೆಫ್ ಕಾರ್ಮಿಕರ ಧರ್ಮಕೇಂದ್ರದಲ್ಲಿ ಮಾರಿಯಾ ಅಸುಂಪ್ತಾ ನುಸಂತರಾ ಮಹಾ ಮೆರವಣಿಗೆಗೆ ಚಾಲನೆ ನೀಡಿದರು. ಈ ಯಾತ್ರೆಯು ಆಗಸ್ಟ್‌ನಲ್ಲಿ ನಡೆಯಲಿರುವ ವಾರ್ಷಿಕ ಗೊಲೊ ಕೋಯೆ ಉತ್ಸವದ ಪರಾಕಾಷ್ಠೆಯ ಮೊದಲು ಸ್ವರ್ಗಾರೋಹಣ ಮಾತೆಯ ಪ್ರತಿಮೆಯನ್ನು ಅನೇಕ ಧರ್ಮಕೇಂದ್ರಗಳ ಮೂಲಕ ಕೊಂಡೊಯ್ಯಲಿದೆ.

ಈ ವರ್ಷದ ಯಾತ್ರೆಯು ವಿಶಿಷ್ಟ ಸಂದೇಶವನ್ನು ಹೊತ್ತು ಸಾಗುತ್ತಿದೆ. "ಸೃಷ್ಟಿಯ ಸಮಗ್ರತೆಯನ್ನು ಕಾಪಾಡಲು ಸಾಮರಸ್ಯದ ಸಹಭಾಗಿತ್ವದಲ್ಲಿ ಸಮುದಾಯದ ಯಾತ್ರೆ" ಎಂಬ ಧ್ಯೇಯದಡಿ, ಲಬುವಾನ್ ಬಾಜೋ ಧರ್ಮಕ್ಷೇತ್ರವು ಮರಿಯಮ್ಮನವರ ಭಕ್ತಿಯನ್ನು ಪರಿಸರದ ಜವಾಬ್ದಾರಿಯೊಂದಿಗೆ ಜೋಡಿಸುತ್ತಿದ್ದು, ವಿಶ್ವಾಸದಲ್ಲಿ ಬೇರುಬಿಟ್ಟಿರುವ ಪರಿಸರ ಪರಿವರ್ತನೆಗಾಗಿ ಪೂರ್ವ ಜಗದ್ಗುರು ಫ್ರಾನ್ಸಿಸ್ ಅವರು ಲೌದಾತೋ ಸಿ ವಿಶ್ವಪತ್ರಿಕೆಯಲ್ಲಿ ನೀಡಿದ ಕರೆಯನ್ನು ಪ್ರತಿಧ್ವನಿಸುತ್ತಿದೆ.

ಪರಿಸರದ ಧ್ಯೇಯ ಹೊಂದಿರುವ ಯಾತ್ರೆ

ಈ ಪರಿಸರ ಕಾಳಜಿಯು ಜೂನ್ 4ರಂದು ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದಾಗಲೇ ಸ್ಪಷ್ಟವಾಗಿ ಗೋಚರಿಸಿತು. ಲಬುವಾನ್ ಬಾಜೋದ ಸುದಾಮಲಾ ಕಡಲತೀರದಲ್ಲಿ ಮಾತನಾಡಿದ ಪೂಜ್ಯ ಧರ್ಮಾಧ್ಯಕ್ಷ ರೇಗಸ್, ಹವಾಮಾನ ಬದಲಾವಣೆ ಮತ್ತು ಪರಿಸರ ಹಾನಿಯ ಸವಾಲುಗಳನ್ನು ಮಾನವಕುಲ ಎದುರಿಸುತ್ತಿದೆ ಎಂದು ಹೇಳಿ, ಪ್ರತಿಯೊಂದು ಧರ್ಮದ ಜನರು ತಮ್ಮ ನೈಜ ಕಾರ್ಯಗಳ ಮೂಲಕ ವ್ಯಕ್ತವಾಗುವ ಪರಿಸರ ಪರಿವರ್ತನೆಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕಡಲತೀರ ಸ್ವಚ್ಛತಾ ಅಭಿಯಾನ, ಕರಾವಳಿಯಲ್ಲಿ ತೆಂಗಿನ ಗಿಡಗಳ ನೆಡುವಿಕೆ ಹಾಗೂ ಶಾಂತಿ ಮತ್ತು ಸೃಷ್ಟಿಯ ಕಾಳಜಿಯ ಸಂಕೇತವಾಗಿ ಪಾರಿವಾಳಗಳನ್ನು ಹಾರಿಸಲಾಯಿತು.

ಪಶ್ಚಿಮ ಮಂಗ್ಗರಾಯಿ ಪ್ರದೇಶದ ಮುಖ್ಯಸ್ಥ ಎಡಿಸ್ಟಾಸಿಯಸ್ ಎಂಡಿ ಕೂಡ, ಉತ್ಸವದ ಪರಿಸರ ಸಂದೇಶವು ಕೇವಲ ಔಪಚಾರಿಕ ವಿಷಯವಾಗದೆ, ಜೀವನದಲ್ಲಿ ಅಳವಡಿಸಿಕೊಳ್ಳುವ ಬದ್ಧತೆಯಾಗಬೇಕೆಂದು ಭಾಗವಹಿಸಿದವರಿಗೆ ಕರೆ ನೀಡಿದರು.

ಸಹೋದರತ್ವದ ಸಾಕ್ಷಿ

ಈ ಯಾತ್ರೆಯು ಆ ಪ್ರದೇಶದ ಧರ್ಮಸೌಹಾರ್ದತೆಯ ಪರಂಪರೆಯನ್ನೂ ಎತ್ತಿಹಿಡಿಯಿತು. ಮರಿಯಮ್ಮನವರ ಪ್ರತಿಮೆಯು ನಂಗಾ ಲಿಲಿ ಗ್ರಾಮವನ್ನು ಹಾದುಹೋದಾಗ, ಅಲ್ಲಿನ ಮುಸ್ಲಿಂ ನಿವಾಸಿಗಳು ಸಾಂಪ್ರದಾಯಿಕ ಮಂಗ್ಗರಾಯಿ ನೃತ್ಯದ ಮೂಲಕ ಮೆರವಣಿಗೆಯನ್ನು ಸ್ವಾಗತಿಸಿದರು. ಇದು ವಿವಿಧ ಧಾರ್ಮಿಕ ಸಮುದಾಯಗಳ ನಡುವಿನ ಆತ್ಮೀಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಆತಿಥ್ಯದ ಸಂಕೇತವಾಗಿತ್ತು.

ನಂತರ ಜಪಮಾಲೆ ಪ್ರಾರ್ಥನೆ ಹಾಗೂ ಮರಿಯಮ್ಮನವರ ಗೀತೆಗಳ ನಡುವೆ ಪ್ರತಿಮೆಯನ್ನು ಸಂತ ಜೋಸೆಫ್ ಕಾರ್ಮಿಕರ ಧರ್ಮಕೇಂದ್ರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ವಿಶ್ವಾಸಿಗಳು ಗೌರವ ಮತ್ತು ಸನ್ಮಾನದ ಸ್ಥಳೀಯ ಸಂಕೇತವಾದ ಸಾಂಪ್ರದಾಯಿಕ ಸೊಂಗ್ಕೆಟ್ ವಸ್ತ್ರದೊಂದಿಗೆ ಪ್ರತಿಮೆಯನ್ನು ಬರಮಾಡಿಕೊಂಡರು.

"ಮರಿಯ ಕ್ರಿಸ್ತನ ಬಳಿಗೊಯ್ಯುವ ಮಾರ್ಗ"

ಉದ್ಘಾಟನಾ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷ ರೇಗಸ್, ಸಂದರ್ಶನದ ಘಟನೆಯನ್ನು ಆಧರಿಸಿದ ಪ್ರವಾದನೆಯಲ್ಲಿ, ಮರಿಯಮ್ಮನವರು ಎಲ್ಲಿಗೆ ಹೋದರೂ ಜನರನ್ನು ತಮ್ಮ ಪುತ್ರನಾದ ಕ್ರಿಸ್ತನ ಬಳಿಗೆ ಕರೆದೊಯ್ಯುತ್ತಾರೆ ಎಂದು ವಿಶ್ವಾಸಿಗಳಿಗೆ ನೆನಪಿಸಿದರು. ಮರಿಯಮ್ಮನವರು ಎಲಿಜಬೆತ್ ಅವರನ್ನು ಭೇಟಿಯಾದ ಘಟನೆಯನ್ನು ಉಲ್ಲೇಖಿಸಿದ ಅವರು, ಈ ಯಾತ್ರೆಯು ಕುಟುಂಬಗಳು ಮತ್ತು ಸಮುದಾಯಗಳು ತಮ್ಮ ನಿರೀಕ್ಷೆಗಳನ್ನು ಕ್ರಿಸ್ತನಲ್ಲಿ ಸಮರ್ಪಿಸಬೇಕೆಂದು ಆಹ್ವಾನಿಸುತ್ತದೆ ಎಂದರು. ಇದೇ ರೀತಿ ಕ್ರೈಸ್ತರು ಕೂಡ ಜಗತ್ತಿನಲ್ಲಿ ನಿರೀಕ್ಷೆ, ಸಂತೋಷ ಮತ್ತು ಪ್ರೀತಿಯ ಸಂದೇಶವಾಹಕರಾಗಲು ಕರೆಯಲ್ಪಟ್ಟಿದ್ದಾರೆ ಎಂದು ಹೇಳಿದರು. 

ಈ ಪವಿತ್ರ ಬಲಿಪೂಜೆಯಲ್ಲಿ ಧರ್ಮಕ್ಷೇತ್ರದ ಕುರಿಯಾ ಹಾಗೂ ವಾಯೆ ನಾಕೆಂಗ್ ಡೀನರಿಯ ಯಾಜಕರು ಸಹಬಲಿದಾನ ಅರ್ಪಿಸಿದರು. ಗೊಲೊ ಕೋಯೆ ಉತ್ಸವ ಸಮಿತಿಯ ಅಧ್ಯಕ್ಷರಾದ ವಂದನೀಯ ಗುರು ಇವಾನ್ ಸೆಲ್ಮನ್ ಅವರು, ಮರಿಯಮ್ಮನವರ ಯಾತ್ರೆಯೇ ಈ ಉತ್ಸವದ ಆಧ್ಯಾತ್ಮಿಕ ಹೃದಯವಾಗಿದೆ ಎಂದು ಹೇಳಿದರು.

ಅಂತಿಮ ಸಂಭ್ರಮಾಚರಣೆಗೆ ಸಾವಿರಾರು ಜನರು ಲಬುವಾನ್ ಬಾಜೋದಲ್ಲಿ ಸೇರುವ ಮೊದಲು, ಮರಿಯಮ್ಮನವರು ಪ್ರತಿಯೊಂದು ಧರ್ಮಕೇಂದ್ರಕ್ಕೂ ಭೇಟಿ ನೀಡುತ್ತಾರೆ. ಇದು ಸಹಭಾಗಿತ್ವದಲ್ಲಿ ಒಟ್ಟಾಗಿ ಪಯಣಿಸುವ ಧರ್ಮಸಭೆಯ ಕರೆಯನ್ನು ವ್ಯಕ್ತಪಡಿಸುತ್ತದೆ ಎಂದು ಅವರು ವಿವರಿಸಿದರು.

ವಿಶ್ವಾಸ, ಸಂಸ್ಕೃತಿ ಮತ್ತು ನಮ್ಮ ಭೂಮಿಯ ಕಾಳಜಿ

ಈಗ ಐದನೇ ಆವೃತ್ತಿಗೆ ಕಾಲಿಟ್ಟಿರುವ ಗೊಲೊ ಕೋಯೆ ಉತ್ಸವ ಇಂಡೋನೇಷ್ಯಾದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾಗಿ ಬೆಳೆದಿದ್ದು, ದೇಶದ ಟಾಪ್ 10 ಖರಿಸ್ಮಾ ಇವೆಂಟ್ ನುಸಂತರಾ ರಾಷ್ಟ್ರೀಯ ಪ್ರವಾಸೋದ್ಯಮ ಕಾರ್ಯಕ್ರಮದಲ್ಲಿಯೂ ಸ್ಥಾನ ಪಡೆದಿದೆ.

ಕೊಮೊಡೊ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಲಬುವಾನ್ ಬಾಜೋ ಇತ್ತೀಚಿನ ವರ್ಷಗಳಲ್ಲಿ ವೇಗವಾಗಿ ಪ್ರವಾಸೋದ್ಯಮದ ಬೆಳವಣಿಗೆಯನ್ನು ಕಂಡಿದೆ. ಈ ಉತ್ಸವವನ್ನು ವಿಶ್ವಾಸ, ಸ್ಥಳೀಯ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆಯನ್ನು ಒಗ್ಗೂಡಿಸುವ ಅವಕಾಶವೆಂದು ಧರ್ಮಕ್ಷೇತ್ರ ಪರಿಗಣಿಸುತ್ತಿದ್ದು, ಪ್ರವಾಸಿಗರು ಫ್ಲೊರೆಸ್‌ನ ಸೌಂದರ್ಯವನ್ನು ಮಾತ್ರವಲ್ಲದೆ ಅದರ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಅರಿತುಕೊಳ್ಳುವಂತೆ ಉತ್ತೇಜಿಸುತ್ತಿದೆ.

ಆಗಸ್ಟ್ 10ರಿಂದ 15ರವರೆಗೆ ನಡೆಯಲಿರುವ ಉತ್ಸವದ ಪ್ರಮುಖ ಆಚರಣೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಪ್ರದಾಯಿಕ ಮಂಗ್ಗರಾಯಿ ಕಾಸಿ ನೃತ್ಯ, ಗಂಭೀರ ಪವಿತ್ರ ಬಲಿಪೂಜೆ ಹಾಗೂ ಯುವಜನರು, ಶಾಲೆಗಳು ಮತ್ತು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಮರ ನೆಡುವಿಕೆ ಮತ್ತು ಕಡಲತೀರ ಸ್ವಚ್ಛತಾ ಅಭಿಯಾನಗಳಂತಹ ಪರಿಸರ ಕಾರ್ಯಕ್ರಮಗಳು ಸೇರಿವೆ. ಇದೇ ವೇಳೆ, ಸ್ವರ್ಗಾರೋಹಣ  ಮಾತೆಯ  ಪ್ರತಿಮೆಯು ವಾಯೆ ನಾಕೆಂಗ್, ಪಕಾರ್ ಮತ್ತು ಲಬುವಾನ್ ಬಾಜೋ ಡೀನರಿಗಳ ಮೂಲಕ ತನ್ನ ಯಾತ್ರೆಯನ್ನು ಮುಂದುವರಿಸಿಕೊಂಡು, ಆಗಸ್ಟ್ ಆರಂಭದಲ್ಲಿ ಪವಿತ್ರ ಆತ್ಮರ ಪ್ರಧಾನ ದೇವಾಲಯಕ್ಕೆ ತಲುಪಿ ಮಹಾ ಮರಿಯಮ್ಮನವರ ಮೆರವಣಿಗೆಯಲ್ಲಿ ಭಾಗವಹಿಸಲಿದೆ.

ಧರ್ಮಾಧ್ಯಕ್ಷ ರೇಗಸ್ ಅವರ ಪ್ರಕಾರ, ಈ ಯಾತ್ರೆಯು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾರ್ಥನೆ ಮತ್ತು ಆತ್ಮೀಯ ನವೀಕರಣದ ಕಾಲವಾಗಿದೆ—ಇದು ವಿಶ್ವಾಸಿಗಳ ಹೃದಯಗಳಲ್ಲಿ ಆರಂಭವಾಗಿ, ಪರಸ್ಪರ ಪ್ರೀತಿಯಲ್ಲಿಯೂ ಎಲ್ಲರಿಗೂ ಒಪ್ಪಿಸಲಾದ ನಮ್ಮ ಸಾಮಾನ್ಯ ನಿವಾಸದ ಮೇಲಿನ ಕಾಳಜಿಯಲ್ಲಿಯೂ ವಿಸ್ತರಿಸುತ್ತದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

11 ಜುಲೈ 2026, 19:45