ಸಂಘರ್ಷಪೀಡಿತ ಮಯನ್ಮಾರ್‌ನ ಕಲೇ ಧರ್ಮಪ್ರಾಂತ್ಯದಲ್ಲಿ ಹೊಸ ಧರ್ಮಕೇಂದ್ರ ಉದ್ಘಾಟನೆ
ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್
ವಾಯುವ್ಯ ಮಯನ್ಮಾರ್‌ನ ಕಲೇ ಧರ್ಮಪ್ರಾಂತ್ಯದಲ್ಲಿ ಹೊಸ ಧರ್ಮಕೇಂದ್ರದ ಉದ್ಘಾಟನೆಯು, ಮಾನವೀಯ ಬಿಕ್ಕಟ್ಟಿನ ನಡುವೆಯೂ ಅಲ್ಲಿನ ವಿಶ್ವಾಸಿಗಳಿಗೆ ಹೊಸ ಭರವಸೆಯನ್ನು ನೀಡಿದೆ.
ವ್ಯಾಟಿಕನ್ ವಾರ್ತಾ ಸಂಸ್ಥೆ 'ಫೀಡೆಸ್’ ನೀಡಿರುವ ಮಾಹಿತಿಯ ಪ್ರಕಾರ, ಆಂತರಿಕವಾಗಿ ಸ್ಥಳಾಂತರಗೊಂಡವರನ್ನು ಒಳಗೊಂಡಂತೆ 600ಕ್ಕೂ ಹೆಚ್ಚು ಕಥೋಲಿಕರು ಖೈಕಾಮ್ ಮ್ಯೋ ಪಟ್ಟಣದಲ್ಲಿ ಸೇರಿ, ಸಂತ ಪ್ಯಾಟ್ರಿಕ್ ಧರ್ಮಕೇಂದ್ರದ ಐತಿಹಾಸಿಕ ಉದ್ಘಾಟನೆಯನ್ನು ಸಂಭ್ರಮಿಸಿದರು. ಈ ಪವಿತ್ರ ಬಲಿಪೂಜೆಗೆ ಧರ್ಮಾಧ್ಯಕ್ಷ ಫೆಲಿಕ್ಸ್ ಲಿಯನ್ ಖೆನ್ ಥಾಂಗ್ ಅಧ್ಯಕ್ಷತೆ ವಹಿಸಿದ್ದು, ಹನ್ನೆರಡು ಗುರುಗಳು ಸಹಬಲಿಪೂಜೆ ಅರ್ಪಿಸಿದರು.
ಮಾನವೀಯ ಮತ್ತು ಸಾಮಾಜಿಕ ಬಿಕ್ಕಟ್ಟು
ಕಲೇ ಧರ್ಮಪ್ರಾಂತ್ಯವು ಸಗೈಂಗ್ ಪ್ರದೇಶ ಮತ್ತು ಚಿನ್ ರಾಜ್ಯಗಳ ನಡುವೆ ನೆಲೆಗೊಂಡಿದ್ದು, 2021ರ ಫೆಬ್ರವರಿಯಲ್ಲಿ ನಡೆದ ಸೇನಾ ದಂಗೆಯ ನಂತರ ಆರಂಭವಾದ ಅಂತರ್ಯುದ್ಧದಿಂದ ಅತ್ಯಂತ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ. ಈ ಪ್ರದೇಶವು ಇನ್ನೂ ಗಂಭೀರ ಮಾನವೀಯ ಹಾಗೂ ಸಾಮಾಜಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಮಂಡಲೇ ಮಹಾಧರ್ಮಪ್ರಾಂತ್ಯದ ಅಧೀನದಲ್ಲಿರುವ ಈ ಧರ್ಮಪ್ರಾಂತ್ಯವು ಸುಮಾರು 60,000 ಕಥೋಲಿಕರಿಗೆ ಆಧ್ಯಾತ್ಮಿಕ ಸೇವೆ ಸಲ್ಲಿಸುತ್ತದೆ. ಇದರ ಹೆಚ್ಚಿನ ಭಾಗ ಸಗೈಂಗ್ ಪ್ರದೇಶದಲ್ಲಿದ್ದು, ಉಳಿದ ಭಾಗ ಚಿನ್ ರಾಜ್ಯಕ್ಕೆ ವಿಸ್ತರಿಸಿದೆ.
ಕಲೇ ನಗರವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಧರ್ಮಕ್ಷೇತ್ರದಲ್ಲಿ ಸಂತ ಮರಿಯ ಪ್ರಧಾನ ದೇವಾಲಯ ಹಾಗೂ ಧರ್ಮಕ್ಷೇತ್ರದ ಕೇಂದ್ರವಿದೆ. ಭಾರತದ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿನ್ ಸಮುದಾಯ ಸೇರಿದಂತೆ ವಿವಿಧ ಜನಾಂಗೀಯ ಅಲ್ಪಸಂಖ್ಯಾತರು ವಾಸಿಸುತ್ತಿದ್ದಾರೆ.
ಯುವಜನರು ಮತ್ತು ಕ್ರೈಸ್ತರ ಮೇಲೆ ಸಂಘರ್ಷದ ತೀವ್ರ ಪರಿಣಾಮ
2021ರ ಸೇನಾ ದಂಗೆಯ ನಂತರ ಆರಂಭವಾದ ಅಂತರ್ಯುದ್ಧವು ಕಲೇ ಪ್ರದೇಶವನ್ನು ತೀವ್ರವಾಗಿ ಹಾನಿಗೊಳಗಾಗಿಸಿದೆ. ಫೀಡೆಸ್ ವರದಿ ಪ್ರಕಾರ, ಸಂಘರ್ಷದ ಪರಿಣಾಮಗಳಿಂದ ಅಲ್ಲಿನ ಸಮುದಾಯಗಳು ಇನ್ನೂ ಬಹುಮುಖ ಬಿಕ್ಕಟ್ಟಿನ ನಡುವೆ ಬದುಕು ಸಾಗಿಸುತ್ತಿವೆ. ಬಲವಂತದ ಸೇನಾ ನೇಮಕಾತಿಯಿಂದ ತಪ್ಪಿಸಿಕೊಳ್ಳಲು ಅನೇಕ ಯುವಕರು ತಮ್ಮ ಊರುಗಳನ್ನು ತೊರೆದಿದ್ದು, ಮಾನವೀಯ ತುರ್ತು ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ವರದಿ ತಿಳಿಸುತ್ತದೆ.
ಸ್ಥಳೀಯ ಮೂಲಗಳ ಪ್ರಕಾರ, ಪ್ರತಿರೋಧ ಪಡೆಗಳಿಗೆ ಆಶ್ರಯ ಅಥವಾ ನೆರವು ನೀಡುತ್ತಿದ್ದಾರೆ ಎಂಬ ಅನುಮಾನದ ಮೇರೆಗೆ ಸರ್ಕಾರಿ ಸೈನಿಕರು ಹಲವು ಬಾರಿ ದೇವಾಲಯಗಳು, ಕನ್ಯಾಸ್ತ್ರೀಯರ ಆಶ್ರಮಗಳು ಹಾಗೂ ಕಥೋಲಿಕ ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಫೀಡೆಸ್ ವರದಿ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ವೈಮಾನಿಕ ದಾಳಿಗಳು, ಬಾಂಬ್ ದಾಳಿಗಳು ಮತ್ತು ಭಾರೀ ಘರ್ಷಣೆಗಳಿಂದ ಕಲೇ ಪ್ರದೇಶದ ಅನೇಕ ದೇವಾಲಯಗಳು ಹಾನಿಗೊಳಗಾಗಿವೆ.
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).