ಹುಡುಕಿ

ಸಹಾಯ ಮಾತೆಯ ಪುತ್ರಿಯರ ಸಭೆಯ (FMA)  ಸಹೋದರಿಯರು ಹಾಗೂ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ ಭಾಗವಹಿಸಿದ ಯುವತಿಯರು ಸಹಾಯ ಮಾತೆಯ ಪುತ್ರಿಯರ ಸಭೆಯ (FMA) ಸಹೋದರಿಯರು ಹಾಗೂ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ ಭಾಗವಹಿಸಿದ ಯುವತಿಯರು 

ಡಿಜಿಟಲ್ ಸಂಸ್ಕೃತಿಯ ಮಧ್ಯೆ ಧಾರ್ಮಿಕ ಸಹೋದರಿಯರ ಶುಭಸಂದೇಶ ಪ್ರಚಾರದ ಸೇವೆ

ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಸಹಾಯ ಮಾತೆಯ ಪುತ್ರಿಯರ ಸಭೆಯ (FMA) ಸಹೋದರಿಯರು, ಇಪ್ಪತ್ತರ ಹಾಗೂ ಮೂವತ್ತರ ವಯೋಮಾನದ ಮಹಿಳೆಯರನ್ನು ಎಂಟು ತಿಂಗಳ ಅವಧಿಯ "ಆನ್‌ಲೈಫ್" (Onlife) ಅನುಭವದ ಮೂಲಕ ಜೊತೆಗೂಡಿಸುತ್ತಿದ್ದಾರೆ. ಈ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ ("ಮೂರನೇ ಸ್ಥಳ" ಎಂಬ ಪರಿಕಲ್ಪನೆಯಡಿ) ಹಾಗೂ ಕೆಲವು ಸಂದರ್ಭಗಳಲ್ಲಿ ನೇರ ಭೇಟಿಗಳ ಮೂಲಕ ನಡೆಯುತ್ತದೆ. ವಿವಾಹ ಜೀವನ, ದೇವರ ಸಮರ್ಪಿತ ಜೀವನ ಅಥವಾ ಕನ್ಯತ್ವದ ಸಮರ್ಪಿತ ಜೀವನದ ಕರೆಯನ್ನು ವಿವೇಚಿಸಲು ಮಾರ್ಗದರ್ಶನ ನೀಡುವ ಈ ಪಯಣವು, ಭಾಗವಹಿಸುವವರಿಗೆ ತಮ್ಮ ಜೀವನದ ದೇವಕರೆಯನ್ನು ಅರಿಯಲು ಸಹಾಯ ಮಾಡುತ್ತದೆ.

ಲೇಖಕರು: ಸಹೋದರಿ ಅಲೆಜಾಂಡ್ರಾ ಟ್ರೆವಿನೊ, FMA

'ಫಿಯಾಟ್ ಪ್ರಾಜೆಕ್ಟ್' ಕಾರ್ಯಕ್ರಮದ ಬೀಜವು 2017ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನವು ಕಥೋಲಿಕ ನಾಯಕರಿಗಾಗಿ ಆಯೋಜಿಸಿದ್ದ ಸಮಾವೇಶದಲ್ಲಿ ಬಿತ್ತಲ್ಪಟ್ಟಿತು. ಈ ಸಮಾವೇಶದಲ್ಲಿ ಪಶ್ಚಿಮ ಅಮೆರಿಕ ಪ್ರಾಂತ್ಯದ ಸಹೋದರಿ ಬರ್ನಡೆಟ್ ಮೊಟಾ, FMA ಹಾಗೂ ಸಹೋದರಿ ಫುವಾಂಗ್ ನ್ಗುಯೆನ್, FMA, ಇಟಲಿಯಲ್ಲಿ 'ಅಪೋಸ್ತಲ್ಸ್ ಆಫ್ ದಿ ಇಂಟೀರಿಯರ್ ಲೈಫ್' y ಆರಂಭಗೊಂಡ ಯುವಜನರ ಜೀವನದೇವಕರೆಯ ವಿವೇಚನಾ ಕಾರ್ಯಕ್ರಮವಾದ 'ಸ್ಯಾಮ್ಯುಯೆಲ್ ಗ್ರೂಪ್' ಕುರಿತು ತಿಳಿದುಕೊಂಡರು.

ಅದೇ ವರ್ಷದ ನಂತರ, ಈ ಸಹೋದರಿಯರು ಕೊಲೊರಾಡೊ ಸ್ಪ್ರಿಂಗ್ಸ್ ಧರ್ಮಕ್ಷೇತ್ರದಲ್ಲಿ 'ಸ್ಯಾಮ್ಯುಯೆಲ್ ಗ್ರೂಪ್' ಕಾರ್ಯಕ್ರಮವನ್ನು ಆರಂಭಿಸಿದರು. ಶೀಘ್ರದಲ್ಲೇ ಸಹೋದರಿ ಲಿಂಡಾ ಗೊನ್ಸಾಲೆಜ್, FMA ಸಹ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡುವ ತಂಡವನ್ನು ಸೇರಿದರು. 2019ರ ಮಾರ್ಚ್ ವೇಳೆಗೆ ಈ ಉಪಕ್ರಮವು ಉತ್ತಮವಾಗಿ ಬೆಳೆಯುತ್ತಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕದ ಕಾರಣ ಎಲ್ಲ ನೇರ ಸಭೆಗಳು ಏಕಾಏಕಿ ಸ್ಥಗಿತಗೊಂಡವು.

ಸೇವಾಕಾರ್ಯಕ್ಕೆ ಸೃಜನಾತ್ಮಕ ಡಿಜಿಟಲ್ ವಿಧಾನ

ಹೊಸ ಪರಿಸ್ಥಿತಿಯು ಸಹೋದರಿಯರನ್ನು ಆನ್‌ಲೈನ್‌ನಲ್ಲಿ ಒಂದಾಗಿಸಿ, ಯುವತಿಯರ ದೇವಕರೆಯ ವಿವೇಚನೆಗೆ ಪರ್ಯಾಯ ಮಾರ್ಗವನ್ನು ರೂಪಿಸುವಂತೆ ಪ್ರೇರೇಪಿಸಿತು. ಪಶ್ಚಿಮ ಅಮೆರಿಕ ಪ್ರಾಂತ್ಯದ ಸಹೋದರಿಯರ ದೇವಕರೆಯ ನಿರ್ದೇಶಕಿಯಾದ ಸಹೋದರಿ ಸಿಡ್ನಿ ಮಾಸ್, FMA ಅವರು, "COVID ಸಮಯದಲ್ಲಿ ನಮ್ಮ ಸೇವಾಕಾರ್ಯಕ್ಕೆ ಹೊಸ ವಿಧಾನವನ್ನು ಕಂಡುಹಿಡಿಯಬೇಕಾದ ಪರಿಸ್ಥಿತಿ ಎದುರಾದಾಗ, 'ಫಿಯಾಟ್ ಪ್ರಾಜೆಕ್ಟ್' ಎಂಬ ಕಲ್ಪನೆ ಹುಟ್ಟಿದ್ದು ಸಂಪೂರ್ಣವಾಗಿ ಪವಿತ್ರಾತ್ಮರ ಪ್ರೇರಣೆಯಿಂದಲೇ" ಎಂದು ಸ್ಮರಿಸುತ್ತಾರೆ.

'ಸ್ಯಾಮ್ಯುಯೆಲ್ ಗ್ರೂಪ್' ಕಾರ್ಯಕ್ರಮವು ನಂತರ 'ಫಿಯಾಟ್ ಪ್ರಾಜೆಕ್ಟ್' ಆಗಿ ರೂಪುಗೊಂಡಿತು. ಇದರಲ್ಲಿ ಸಹೋದರಿ ಕ್ಲೇರ್ ಮಥಿಯಾಸ್ ಅವರ Discerning Religious Life ಪುಸ್ತಕವನ್ನು ಆಧರಿಸಿ, ದೇವರ ಸಮರ್ಪಿತ ಜೀವನದ ಕುರಿತು ವಿಶೇಷವಾಗಿ ಗಮನಹರಿಸುವ ಮೂರು ತಿಂಗಳ ಅಂತಿಮ ಸಲೇಸಿಯನ್ ತರಬೇತಿ ಹಂತವನ್ನು ಸೇರಿಸಲಾಯಿತು. ಈ ಯೋಜನೆಗೆ 'ಫಿಯಾಟ್' ಎಂಬ ಹೆಸರನ್ನು, ಕನ್ಯಾ ಮರಿಯಮ್ಮನವರು ದೇವರಿಗೆ ಹೇಳಿದಂತೆ ಭಾಗವಹಿಸುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ "ಹೌದು" ಎಂದು ಪ್ರತಿಕ್ರಿಯಿಸಲು ಪ್ರೇರೇಪಿಸುವ ಉದ್ದೇಶದಿಂದ ನೀಡಲಾಯಿತು. "ಈ ಹೊಸ ಯೋಜನೆಯ ಮೂಲಕ, ನಾವು ಹಿಂದಿನ ರೀತಿಯಲ್ಲೇ ಮುಂದುವರಿದಿದ್ದರೆ ತಲುಪಲು ಸಾಧ್ಯವಾಗದಷ್ಟು ಹೆಚ್ಚಿನ ಮಹಿಳೆಯರನ್ನು ತಲುಪಲು ಸಾಧ್ಯವಾಗಿದೆ" ಎಂದು ಅವರು ಹೇಳಿದರು.

ಹೊಸ ಸಮುದಾಯಗಳ ನಿರ್ಮಾಣ

'ಫಿಯಾಟ್ ಪ್ರಾಜೆಕ್ಟ್' ಸಮುದಾಯವನ್ನು ನಿರ್ಮಿಸುವ ಒಂದು ಆಧ್ಯಾತ್ಮಿಕ ವೇದಿಕೆಯಾಗಿದೆ. 2025–2026ರ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ ಭಾಗವಹಿಸಿದ ಮೇರಿಲಿನ್ ಅಲ್ವಾರಾಡೊ, "ನನ್ನಂತೆಯೇ ದೇವಕರೆಯನ್ನು ವಿವೇಚಿಸುತ್ತಿರುವ ಇತರ ಯುವತಿಯರನ್ನು ಭೇಟಿಯಾದದ್ದು ಬಹಳ ಸಂತೋಷವನ್ನು ನೀಡಿತು. ನಾವು ಈ ಪಯಣದಲ್ಲಿ ಒಟ್ಟಾಗಿ ಸಾಗುತ್ತಿದ್ದೇವೆ. ನಾನು ಈ ಸಮುದಾಯವನ್ನು ಒಬ್ಬಳೇ ಸೇರಲಿಲ್ಲ; ಇದು ದೇವರ ಮಾರ್ಗದರ್ಶನದಲ್ಲಿ ನಡೆದ ವಿವೇಚನೆಯ ಪಯಣವಾಗಿದೆ. ನಾನು ಪ್ರಭು ಯೇಸು ಕ್ರಿಸ್ತರೊಂದಿಗೆ ನಡೆಯುತ್ತಿದ್ದೇನೆ ಮತ್ತು ನಾನು ಒಂಟಿಯಾಗಿಲ್ಲ" ಎಂದು ಹಂಚಿಕೊಳ್ಳುತ್ತಾರೆ.

ಆಧ್ಯಾತ್ಮಿಕ ಮಾರ್ಗದರ್ಶನದ ಹೊಸ ಅನುಭವ

ಈ ಕಾರ್ಯಕ್ರಮದ ಭಾಗವಾಗಿ, ಪ್ರತಿ ತಿಂಗಳು ಒಮ್ಮೆ ಆಧ್ಯಾತ್ಮಿಕ ಮಾರ್ಗದರ್ಶಕರನ್ನು ಭೇಟಿಯಾಗಿ, ಪ್ರತಿ ಅಧಿವೇಶನದಲ್ಲಿ ಹಂಚಿಕೊಳ್ಳುವ ವಿಷಯಗಳನ್ನು ಆಳವಾಗಿ ಚಿಂತಿಸಲು ಭಾಗವಹಿಸುವವರಿಗೆ ಸೂಚಿಸಲಾಗುತ್ತದೆ. 2024–2025ರ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ ಭಾಗವಹಿಸಿದ್ದ ಲೂಸಿಯಾ ಮಾರ್ಟಿನೆಜ್, "ಒಬ್ಬ ಸಹೋದರಿಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ನಿರ್ದೇಶನ ಪಡೆದದ್ದು ನನಗೆ ಅತ್ಯಂತ ಮಹತ್ವದ ಅನುಭವವಾಗಿತ್ತು. ಸಹೋದರಿಯ ಅನುಭವ ಮತ್ತು ಜ್ಞಾನದಿಂದ ಕಲಿಯಲು ಅವಕಾಶ ದೊರೆತಿದ್ದು, ದೇವರು ನನ್ನ ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ನನ್ನನ್ನು ಯಾವ  ಕಡೆಗೆ ಕರೆಯುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಸಹಾಯವಾಯಿತು" ಎಂದು ಹೇಳುತ್ತಾರೆ.

ಗೊಂದಲಗಳಿಂದ ದೂರ ಸರಿದು ದೇವರ ಧ್ವನಿಯನ್ನು ಆಲಿಸುವ ಅವಕಾಶ

ವಿವಾಹ ಜೀವನ ಮತ್ತು ಸಮುದಾಯ ಜೀವನದ ನಡುವಿನ ದೇವಕರೆಯನ್ನು ವಿವೇಚಿಸುತ್ತಿದ್ದ ಸೆಸಿಲಿಯಾ ಗಾರ್ಸಿಯಾ, 2021–2022ರ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ 'ಆನ್‌ಲೈಫ್' ವಿಧಾನದಲ್ಲಿ ಭಾಗವಹಿಸಿದ್ದರು. ಅವರು ಕ್ಯಾಲಿಫೋರ್ನಿಯಾದಲ್ಲಿ ನೇರವಾಗಿ ಭಾಗವಹಿಸುತ್ತಿದ್ದರೂ, ಅಮೆರಿಕದ ವಿವಿಧ ರಾಜ್ಯಗಳು ಹಾಗೂ ಇತರ ದೇಶಗಳ ಭಾಗವಹಿಸುವವರೊಂದಿಗೆ ಆನ್‌ಲೈನ್ ಮೂಲಕ ಸಂಪರ್ಕ ಹೊಂದಿದ್ದರು. ಅವರು ಹೇಳುವುದೇನೆಂದರೆ, "'ಫಿಯಾಟ್ ಪ್ರಾಜೆಕ್ಟ್' ನನ್ನ ವಿದ್ಯಾರ್ಥಿ ಜೀವನದ ಬಿಡುವಿಲ್ಲದ ವೇಳಾಪಟ್ಟಿಯಿಂದ ಸ್ವಲ್ಪ ವಿರಾಮ ಪಡೆದು, ಎಲ್ಲ ಗೊಂದಲಗಳನ್ನು ಬದಿಗಿಟ್ಟು, ದೇವರು ನನ್ನಿಂದ ಏನನ್ನು ಬಯಸುತ್ತಾರೆ ಎಂಬುದನ್ನು ಆಲಿಸಲು ಒಂದು ಅವಕಾಶವನ್ನು ನೀಡಿತು. ಜೀವನದ ವಿವಿಧ ದೇವಕರೆಯ ಕುರಿತು ಚರ್ಚಿಸಲು ಮತ್ತು ಪವಿತ್ರ ಬೈಬಲ್ ವಾಕ್ಯಗಳನ್ನು ಧ್ಯಾನಿಸಲು ಸಮಯವನ್ನು ಮೀಸಲಿಡುವ ಶಿಸ್ತನ್ನು ಇದು ನನಗೆ ಕಲಿಸಿತು. ನಾವು ಕನ್ಯಾ ಮರಿಯಮ್ಮನವರ ಜೀವನ, ಅವರು ಜೀವಿಸಿದ ಆದರ್ಶಗಳು ಮತ್ತು ಪ್ರತಿಯೊಂದು ದೇವಕರೆಯೊಂದಿಗೆ ಸಂಬಂಧಿಸಿದ ಪವಿತ್ರಾತ್ಮರ ವರಗಳ ಕುರಿತು ಆಳವಾಗಿ ಚರ್ಚಿಸಿದ್ದೇವೆ.”

ಆಂತರಿಕ ಗಾಯಗಳ ವಿವೇಚನೆ

'ಫಿಯಾಟ್ ಪ್ರಾಜೆಕ್ಟ್'ನ ಅವಧಿಯಲ್ಲಿ ಸಹೋದರಿಯರು ಜೀವನದೇವಕರೆಯ ವಿವೇಚನೆ, ಆತ್ಮಪರಿಚಯ, ಆಂತರಿಕ ಗಾಯಗಳಿಂದ ಗುಣಮುಖರಾಗುವುದು ಹಾಗೂ ದೇವರ ಸಮರ್ಪಿತ ಜೀವನದ ವಿವಿಧ ಆಯಾಮಗಳ ಕುರಿತು Zoom ಮೂಲಕ ಉಪನ್ಯಾಸಗಳನ್ನು ನಡೆಸುತ್ತಾರೆ. ಆನ್‌ಲೈನ್ ಹಂತದ ಅಂತ್ಯದಲ್ಲಿ, ಭಾಗವಹಿಸುವವರಿಗೆ ಐಚ್ಛಿಕವಾಗಿ ನೇರವಾಗಿ ಭಾಗವಹಿಸಬಹುದಾದ ಆಧ್ಯಾತ್ಮಿಕ ಧ್ಯಾನ ಶಿಬಿರವನ್ನೂ ಆಯೋಜಿಸಲಾಗುತ್ತದೆ. ಡಿಜಿಟಲ್ ಅನುಭವವನ್ನು ನೇರ ಭೇಟಿಯೊಂದಿಗೆ ಜೋಡಿಸುವ ಈ ನಾಲ್ಕನೇ ಸ್ಥಳ (Fourth Space), ಎಂಟು ತಿಂಗಳುಗಳ ಕಾಲ ಡಿಜಿಟಲ್ ವೇದಿಕೆಯಲ್ಲಿ ಜೊತೆಯಾಗಿ ಪಯಣಿಸಿದ ನಂತರ, ಲೋಕದ ಗದ್ದಲದಿಂದ ದೂರ ಸರಿದು ವೈಯಕ್ತಿಕವಾಗಿ ಭೇಟಿಯಾಗಿ ಪ್ರಾರ್ಥನೆ, ಧ್ಯಾನ ಮತ್ತು ಸಹಭಾಗಿತ್ವದಲ್ಲಿ ಸಮಯ ಕಳೆಯಲು ಅವಕಾಶ ಕಲ್ಪಿಸುತ್ತದೆ.

ಆಳವಾದ ಆತ್ಮೀಯ ಅರಿವುಗಳು

2024–2025ರ 'ಫಿಯಾಟ್ ಪ್ರಾಜೆಕ್ಟ್'ನಲ್ಲಿ ಆನ್‌ಲೈನ್ ಮೂಲಕ ಹಾಗೂ ಕೊನೆಯಲ್ಲಿ ನಡೆದ ನೇರ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ್ದ ಕೋರ್ಟ್‌ನಿ, ಈ ಕಾರ್ಯಕ್ರಮದ ಮೂಲಕ ತಮ್ಮ ದೇವಕರೆಯನ್ನು ವಿವೇಚಿಸಿದರು. ಸಹೋದರಿಯರ ಉಪನ್ಯಾಸಗಳು ತಮ್ಮ ವಿವೇಚನಾ ಪಯಣಕ್ಕೆ ಮಹತ್ತರ ಸಹಾಯ ಮಾಡಿದವು ಎಂದು ಅವರು ಹೇಳುತ್ತಾ, ಕೆಲವು ಪ್ರಮುಖ ಪ್ರಶ್ನೆಗಳನ್ನು ಹಂಚಿಕೊಳ್ಳುತ್ತಾರೆ.

"ನಿಮ್ಮ ಹೃದಯವು ಹೇಗೆ ಪ್ರೀತಿಸಲು ರೂಪುಗೊಂಡಿದೆ? ನಿಮ್ಮ ಹೃದಯವು ಒಬ್ಬ ವ್ಯಕ್ತಿಯನ್ನು ಮಾತ್ರ ಸಂಪೂರ್ಣವಾಗಿ ಪ್ರೀತಿಸುವಂತೆ ರೂಪುಗೊಂಡಿದೆ ಎಂದು ನಿಮಗೆ ಅನಿಸುತ್ತದೆಯೇ? ಹಾಗಿದ್ದರೆ, ದೇವರು ನಿಮ್ಮನ್ನು ಅದೇ ಮಾರ್ಗದ ಮೂಲಕ ಸಂತರಾಗಲು ಕರೆಯುತ್ತಿದ್ದಾರೆ" ಎಂದು ಅವರು ಸ್ಮರಿಸುತ್ತಾರೆ. ನೇರ ಧ್ಯಾನ ಶಿಬಿರದಲ್ಲಿ ಭಾಗವಹಿಸಿದ ಬಳಿಕ, ಅವರು ತಮ್ಮ ಜೀವನದ ಮುಂದಿನ ಹೆಜ್ಜೆಯನ್ನು ಇಟ್ಟು, ಪ್ರಸ್ತುತ ಸಹಾಯ ಮಾತೆಯ ಪುತ್ರಿಯರ ಸಭೆಯ ಆರಂಭಿಕ ತರಬೇತಿಯ ಮೊದಲ ಹಂತದಲ್ಲಿದ್ದಾರೆ.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ತಮ್ಮ "ಭವಿಷ್ಯವನ್ನು ರೂಪಿಸುವ ನಿಷ್ಠೆ" (A Fidelity that Generates the Future) ಎಂಬ ಪ್ರೇಷಿತ ಪತ್ರದಲ್ಲಿ ಹೀಗೆ ಹೇಳಿದ್ದಾರೆ: "ಧರ್ಮಸಭೆಯಲ್ಲಿನ ಪ್ರತಿಯೊಂದು ದೇವಕರೆಯೂ ಕ್ರಿಸ್ತರೊಂದಿಗಿನ ವೈಯಕ್ತಿಕ ಭೇಟಿಯಿಂದ ಹುಟ್ಟುತ್ತದೆ. ಆ ಭೇಟಿ 'ಜೀವನಕ್ಕೆ ಹೊಸ ದಿಗಂತವನ್ನೂ ನಿರ್ಣಾಯಕ ದಿಕ್ಕನ್ನೂ ನೀಡುತ್ತದೆ.' ಯಾವುದೇ ಬದ್ಧತೆ, ವೈಯಕ್ತಿಕ ಬಯಕೆ ಅಥವಾ ಸೇವೆಗಿಂತ ಮೊದಲು, 'ನನ್ನನ್ನು ಹಿಂಬಾಲಿಸು (ಮಾರ್ಕ 1:17) ಎಂಬ ಗುರುವಿನ ಕರೆಯೇ ಮೊಳಗುತ್ತದೆ."

 'ಫಿಯಾಟ್ ಪ್ರಾಜೆಕ್ಟ್' ಮೂಲಕ ಡಿಜಿಟಲ್ ಸಂಸ್ಕೃತಿಯ ಮಧ್ಯೆ ಶುಭಸಂದೇಶ ಪ್ರಚಾರದ ಸಾನ್ನಿಧ್ಯವನ್ನು ಸಹಾಯ ಮಾತೆಯ ಪುತ್ರಿಯರ ಸಭೆಯ ಸಹೋದರಿಯರು ಈಗ ಆರನೇ ವರ್ಷವೂ ಮುಂದುವರಿಸುತ್ತಿದ್ದಾರೆ. ಯುವತಿಯರು ತಮ್ಮ ದೇವಕರೆಯನ್ನು ವಿವೇಚಿಸಲು "ಆನ್‌ಲೈಫ್" ಎಂಬ ಆಧ್ಯಾತ್ಮಿಕ ವಾತಾವರಣವನ್ನು ಅವರು ಒದಗಿಸುತ್ತಿದ್ದಾರೆ.

'ಫಿಯಾಟ್ ಪ್ರಾಜೆಕ್ಟ್' ಮೂಲಕ ಸಹೋದರಿಯರು ಮತ್ತು ಭಾಗವಹಿಸುವವರ ನಡುವಿನ ಈ ಆಧ್ಯಾತ್ಮಿಕ ಭೇಟಿ, ವಿವಾಹ ಜೀವನ ಮತ್ತು ದೇವರ ಸಮರ್ಪಿತ ಜೀವನಕ್ಕಾಗಿ ಪವಿತ್ರ ದೇವಕರೆಗಳು ಬೆಳೆಯಲೆಂದು ಪ್ರಾರ್ಥಿಸುವ ಎಲ್ಲರ ಸಹಕಾರದಿಂದ ಹಾಗೂ ಈ ಯೋಜನೆಗೆ ಆರ್ಥಿಕ ಬೆಂಬಲ ನೀಡುತ್ತಿರುವ ದಾನಿಗಳಿಂದ ಸಾಧ್ಯವಾಗಿದೆ. ವಿಶೇಷವಾಗಿ ಅವರ್ ಸಂಡೇ ವಿಸಿಟರ್ ಇನ್‌ಸ್ಟಿಟ್ಯೂಟ್ (OSV) ಮತ್ತು ಸ್ಕ್ಯಾನ್ಲಾನ್ ಫೌಂಡೇಶನ್ ನೀಡುತ್ತಿರುವ ಬೆಂಬಲಕ್ಕೆ ಸಹೋದರಿಯರು ಕೃತಜ್ಞತೆ ಸಲ್ಲಿಸಿದ್ದಾರೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

06 ಜುಲೈ 2026, 13:16