ಹುಡುಕಿ

ವೆನೆಜುವೆಲಾದಲ್ಲಿ ಭೂಕಂಪದ ಬಳಿಕ ವೆನೆಜುವೆಲಾದಲ್ಲಿ ಭೂಕಂಪದ ಬಳಿಕ  (AFP or licensors)

“ವೆನೆಜುವೆಲಾಗಾಗಿ ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ” ಎಂದು ಲಾ ಗುವೈರಾ ಧರ್ಮಕೇಂದ್ರದ ಧರ್ಮಗುರುಗಳ ಮನವಿ

ಜೂನ್ 24ರಂದು ದೇಶಕ್ಕೆ ತೀವ್ರ ಹಾನಿಯನ್ನುಂಟು ಮಾಡಿದ ವಿನಾಶಕಾರಿ ಭೂಕಂಪದ ಬಳಿಕ, ನಿರ್ಮಲ ಹೃದಯದ ಮರಿಯಮ್ಮನ ಧರ್ಮಕೇಂದ್ರದ ಗುರು ವಂ. ಆಂಟೋನಿಯೊ ರೆಲ್ಲಾ ಅವರು ದುಃಖ, ಅನಿಶ್ಚಿತತೆ ಮತ್ತು ಐಕ್ಯತೆಯಿಂದ ಕೂಡಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅವರ ಧರ್ಮಕೇಂದ್ರವು ಅತ್ಯಂತ ತೀವ್ರವಾಗಿ ಹಾನಿಗೊಳಗಾದ ಸಮುದಾಯಗಳಿಗೆ ನೆರವು ನೀಡುವ ಕೇಂದ್ರವಾಗಿ ಮಾರ್ಪಟ್ಟಿದ್ದು, ಭೌತಿಕ ಹಾಗೂ ಆಧ್ಯಾತ್ಮಿಕ ಪುನರ್ನಿರ್ಮಾಣಕ್ಕೆ ಸಮಯ, ತಾಳ್ಮೆ ಮತ್ತು ಪ್ರಾರ್ಥನೆ ಅಗತ್ಯವೆಂದು ಅವರು ಹೇಳಿದ್ದಾರೆ.

ಲೇಖಕರು: ಸೆಬಾಸ್ಟಿಯನ್ ಸಾನ್ಸೋನ್ ಫೆರಾರಿ 

ಕುಸಿದ ಕಟ್ಟಡಗಳು, ನಾಪತ್ತೆಯಾದ ತಮ್ಮ ಪ್ರೀತಿಪಾತ್ರರ ಬಗ್ಗೆ ಇನ್ನೂ ಸುದ್ದಿಗಾಗಿ ಕಾಯುತ್ತಿರುವ ಕುಟುಂಬಗಳು ಹಾಗೂ ತಮ್ಮ ಜೀವನವನ್ನು ಮರುನಿರ್ಮಿಸಲು ಹೋರಾಡುತ್ತಿರುವ ಸಮುದಾಯಗಳ ನಡುವೆ, ಜೂನ್ 24ರ ಬುಧವಾರ ವೆನೆಜುವೆಲಾವನ್ನು ತತ್ತರಗೊಳಿಸಿದ ವಿನಾಶಕಾರಿ ಅವಳಿ ಭೂಕಂಪದಿಂದ ಬಾಧಿತರಾದವರೊಂದಿಗೆ ಲಾ ಗುವೈರಾದ ಧರ್ಮಸಭೆ ನಿರಂತರವಾಗಿ ನಿಂತಿದೆ.

ನಿರ್ಮಲ ಹೃದಯದ ಮರಿಯಮ್ಮನ ಧರ್ಮಕೇಂದ್ರದ ಗುರು ವಂ. ಆಂಟೋನಿಯೊ ರೆಲ್ಲಾ ಅವರ ಪ್ರಕಾರ, ಅನೇಕ ಪ್ರದೇಶಗಳಿಗೆ ಪ್ರವೇಶ ಇನ್ನೂ ನಿರ್ಬಂಧಿತವಾಗಿರುವುದರಿಂದ ಹಾಗೂ ನಾಶದ ಪ್ರಮಾಣ ಅಪಾರವಾಗಿರುವುದರಿಂದ ಈ ದುರಂತದ ಸಂಪೂರ್ಣ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟಕರವಾಗಿದೆ.

“ವಿನಾಶವು ಭೀಕರವಾಗಿತ್ತು,” ಎಂದು ಅವರು ಹೇಳುತ್ತಾರೆ. “ಕೆಲವು ಪ್ರದೇಶಗಳು ಯುದ್ಧಭೂಮಿಯಂತಿದ್ದರೆ, ಇನ್ನೂ ಕೆಲವು ಸಂಪೂರ್ಣ ಕಟ್ಟಡಗಳು ಅವಶೇಷಗಳಾಗಿ ಮಾರ್ಪಟ್ಟಿರುವ ಕಾರಣ ಪ್ರಳಯದ ದೃಶ್ಯಗಳನ್ನು ನೆನಪಿಸುತ್ತವೆ.”

ಭರವಸೆ ಮತ್ತು ಶೋಕದ ನಡುವೆ

ಭೂಕಂಪ ಸಂಭವಿಸಿ ಹದಿನೈದು ದಿನಗಳು ಕಳೆದರೂ ಅನೇಕ ಕುಟುಂಬಗಳು ತಮ್ಮ ನಾಪತ್ತೆಯಾದ ಬಂಧುಗಳು ಜೀವಂತವಾಗಿ ಸಿಗುತ್ತಾರೆ ಎಂಬ ಆಶೆಯನ್ನು ಇನ್ನೂ ಕೈಬಿಡಿಲ್ಲ. ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ಮೃತದೇಹಗಳನ್ನು ಮಾತ್ರ ಪತ್ತೆಹಚ್ಚುವ ನೋವನ್ನು ಎದುರಿಸಿದ್ದಾರೆ. “ಇನ್ನೂ ಅನೇಕ ಕುಟುಂಬಗಳಲ್ಲಿ ಅಪಾರ ನಿರೀಕ್ಷೆಯಿದೆ,” ಎಂದು ಧರ್ಮಗುರು ಹೇಳುತ್ತಾ, ಇತ್ತೀಚೆಗೆ ಅವಶೇಷಗಳಡಿ ಜೀವಂತವಾಗಿ ರಕ್ಷಿಸಲ್ಪಟ್ಟ ಇಬ್ಬರು ಸಹೋದರಿಯರ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಈ ಅನಿಶ್ಚಿತತೆ ಕೇವಲ ಭಾವನಾತ್ಮಕ ನೋವಿನಲ್ಲೇ ಸೀಮಿತವಾಗಿಲ್ಲ ಎಂದು ಅವರು ವಿವರಿಸುತ್ತಾರೆ. ಕುಡಿಯುವ ನೀರು, ಆಹಾರ ಮತ್ತು ಆರ್ಥಿಕ ಭದ್ರತೆಯಂತಹ ಮೂಲಭೂತ ಅಗತ್ಯಗಳ ಮೇಲೂ ಇದು ಪರಿಣಾಮ ಬೀರಿದೆ. ಕೆಲವು ವ್ಯಾಪಾರ ಸಂಸ್ಥೆಗಳು ಪುನಃ ಆರಂಭವಾಗಿದ್ದರೂ ವಾಣಿಜ್ಯ ಚಟುವಟಿಕೆಗಳು ಇನ್ನೂ ಸೀಮಿತವಾಗಿದ್ದು, ಅಸಂಖ್ಯಾತ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.

“ನಾವು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ನೆರವು ಕೇಂದ್ರವಾಗಿ ಮಾರ್ಪಟ್ಟ ಧರ್ಮಕೇಂದ್ರ

ನಿರ್ಮಲ ಹೃದಯದ ಮರಿಯಮ್ಮನ ಧರ್ಮಕೇಂದ್ರವು ಧರ್ಮಕ್ಷೇತ್ರದ ಇತರ ಸಮುದಾಯಗಳಿಗೆ ಹೋಲಿಸಿದರೆ ಅಲ್ಪ ಪ್ರಮಾಣದ ಹಾನಿಯನ್ನಷ್ಟೇ ಅನುಭವಿಸಿದೆ. ಕೆಲವು ಧಾರ್ಮಿಕ ಮೂರ್ತಿಗಳು ಬಿದ್ದಿದ್ದು, ಬಲಿಪೀಠಕ್ಕೆ ಹಾನಿಯಾಗಿದೆ. ಆದರೆ ದೇವಾಲಯದ ಕಟ್ಟಡವು ದೃಢವಾಗಿ ಉಳಿದಿದೆ. ಆದರೆ ನೆರೆಯ ಧರ್ಮಕೇಂದ್ರಗಳ ಪರಿಸ್ಥಿತಿ ಭಿನ್ನವಾಗಿದೆ. ಪ್ರಧಾನ ದೇವಾಲಯವು ವ್ಯಾಪಕ ಹಾನಿಗೊಳಗಾಗಿದ್ದು, ಭೂಕಂಪದ ಪರಿಣಾಮದಿಂದ ಹಲವು ದೇವಾಲಯಗಳನ್ನು ನೆಲಸಮಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಧರ್ಮಕೇಂದ್ರದ ದೇವಾಲಯ ಸುರಕ್ಷಿತವಾಗಿ ಉಳಿದಿರುವುದರಿಂದ ಅದು ಈಗ ತುರ್ತು ಪರಿಹಾರ ಕಾರ್ಯಗಳ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. “ನಮ್ಮ ಧರ್ಮಕೇಂದ್ರವು ಧರ್ಮಗುರುಗಳ ಸಭಾ ಸ್ಥಳವಾಗಿಯೂ, ನೆರೆಯ ಸಮುದಾಯಗಳಿಗೆ ನೆರವು ವಿತರಿಸುವ ಕೇಂದ್ರವಾಗಿಯೂ ಮಾರ್ಪಟ್ಟಿದೆ,” ಎಂದು ವಂ. ಗುರು ರೆಲ್ಲಾ ವಿವರಿಸುತ್ತಾರೆ.

ವೆನೆಜುವೆಲಾದಿಂದ ಹಾಗೂ ವಿದೇಶಗಳಿಂದ ವ್ಯಕ್ತವಾದ ಐಕ್ಯತೆ

ವೆನೆಜುವೆಲಾದಾದ್ಯಂತ ಹಾಗೂ ಜಗತ್ತಿನ ಅನೇಕ ದೇಶಗಳಿಂದ ವ್ಯಕ್ತವಾದ ಅಪೂರ್ವ ಐಕ್ಯತೆಯನ್ನು ಧರ್ಮಗುರು ವಿಶೇಷವಾಗಿ ಉಲ್ಲೇಖಿಸಿದರು. “ಇಷ್ಟೊಂದು ದೊಡ್ಡ ಪ್ರಮಾಣದ ದುರಂತವನ್ನು ನಾನು ಹಿಂದೆಂದೂ ನೋಡಿಲ್ಲ,” ಎಂದು ಅವರು ಹೇಳುತ್ತಾ, ಬಳಿಕ ಆರಂಭವಾದ ಅನೇಕ ಮಾನವೀಯ ಸೇವಾ ಕಾರ್ಯಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಆದಾಗ್ಯೂ, ತುರ್ತು ಪರಿಸ್ಥಿತಿಯ ತೀವ್ರತೆ ಹಾಗೂ ಅನೇಕ ಸಂಸ್ಥೆಗಳು ಒಂದೇ ಸಮಯದಲ್ಲಿ ಆಗಮಿಸಿದ್ದರಿಂದ ಮೊದಲ ಕೆಲವು ದಿನಗಳಲ್ಲಿ ನೆರವು ಕಾರ್ಯಗಳಲ್ಲಿ ಸ್ವಲ್ಪ ಅಸ್ತವ್ಯಸ್ತತೆ ಕಂಡುಬಂದಿತೆಂದು ಅವರು ಒಪ್ಪಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಕರಿತಸ್ ವೆನೆಜುವೆಲಾದ ಪಾತ್ರವನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ಅದರ ಧರ್ಮಕ್ಷೇತ್ರ ಹಾಗೂ ಧರ್ಮಕೇಂದ್ರಗಳ ಜಾಲತಾಣವು ಸಂಪನ್ಮೂಲಗಳು ಮತ್ತು ಸ್ವಯಂಸೇವಕರನ್ನು ತ್ವರಿತವಾಗಿ ಸಂಘಟಿಸಲು ನೆರವಾಯಿತು. “ತಕ್ಷಣ ಸ್ಪಂದಿಸಿದ ಮೊದಲ ಸಂಸ್ಥೆ ಕರಿತಸ್,” ಎಂದು ಅವರು ಒತ್ತಿ ಹೇಳುತ್ತಾರೆ.

ಅತ್ಯಂತ ದೊಡ್ಡ ಸವಾಲು: ನೋವಿನಲ್ಲಿರುವವರ ಜೊತೆಗಿರುವುದು

ಆಹಾರ ಮತ್ತು ಔಷಧಿಗಳನ್ನು ವಿತರಿಸುವುದರಾಚೆಗೆ, ಆಧ್ಯಾತ್ಮಿಕ ಆರೈಕೆ ಒದಗಿಸುವುದು ಧರ್ಮಪ್ರಾಂತ್ಯದ ಧರ್ಮಗುರುಗಳು ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. “ಇನ್ನೊಬ್ಬರ ಸ್ಥಾನದಲ್ಲಿ ನಮ್ಮನ್ನು ನಾವು ಇರಿಸಿಕೊಳ್ಳದೇ ಇರುವುದು ಸುಲಭವಲ್ಲ. ಸಹಾನುಭೂತಿ ತೋರದೆ ಇರುವುದು ಬಹುತೇಕ ಅಸಾಧ್ಯ,” ಎಂದು ವಂ. ಗುರು ರೆಲ್ಲಾ ಒಪ್ಪಿಕೊಳ್ಳುತ್ತಾರೆ. 

ತಮ್ಮ ಮನಸ್ಸಿಗೆ ಆಳವಾಗಿ ತಟ್ಟಿದ ಅನೇಕ ಘಟನೆಗಳಲ್ಲಿ, ಅವಶೇಷಗಳಡಿ ಸಿಲುಕಿದ್ದ ಮೊಮ್ಮಗಳನ್ನು ಹುಡುಕುತ್ತಿದ್ದ ಅಜ್ಜಿಯೊಬ್ಬರ ಘಟನೆ ಅವರನ್ನು ಹೆಚ್ಚು ಕಾಡಿದೆ. ಇತ್ತೀಚೆಗೆ ಭೂಕಂಪದಲ್ಲಿ ಮೃತಪಟ್ಟ ಹಲವರ, ಅವರಲ್ಲಿ ಕೇವಲ ಒಂದು ವರ್ಷದ ಮಗುವಿನ ಅಂತ್ಯಕ್ರಿಯೆಯ ಬಲಿಪೂಜೆ ನೆರವೇರಿಸಿದ ಅನುಭವವನ್ನೂ ಅವರು ನೆನಪಿಸಿಕೊಳ್ಳುತ್ತಾ, “ಇಂತಹ ವಾಸ್ತವಿಕತೆಯ ಮೇಲೆ ನಂಬಿಕೆಯ ಬೆಳಕನ್ನು ಚೆಲ್ಲುವ ಸರಿಯಾದ ಮಾತುಗಳನ್ನು ಕಂಡುಹಿಡಿಯುವುದು ಸುಲಭದ ಕೆಲಸವಲ್ಲ,” ಎಂದು  ಹೇಳುತ್ತಾರೆ.

ದೇವಾಲಯಗಳ ಪುನರ್ನಿರ್ಮಾಣ ಮತ್ತು ಭರವಸೆಯ ಮರುಸ್ಥಾಪನೆ

1999ರ ವಿನಾಶಕಾರಿ ವರ್ಗಾಸ್ ಭೂಕುಸಿತವನ್ನು ಅವರು ಇಂದಿನ ಪರಿಸ್ಥಿತಿಗೆ ಹೋಲಿಸುತ್ತಾ, ಆ ಅನುಭವವು ವೆನೆಜುವೆಲಾದ ಜನರ ದೃಢತೆಯನ್ನು ತೋರಿಸಿತೆಂದು ಹೇಳುತ್ತಾರೆ. “ ನಾನು ಮೊದಲ ಬಾರಿಗೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ,” ಎಂದು ಅವರು ಹೇಳುತ್ತಾರೆ. ಸ್ಥಳೀಯ ಧರ್ಮಸಭೆಯ ಪ್ರಮುಖ ಆದ್ಯತೆಗಳಲ್ಲಿ ದೇವಾಲಯಗಳ ಪುನರ್ನಿರ್ಮಾಣವೂ ಒಂದಾಗಿದೆ. ಅವು ಕೇವಲ ಕಟ್ಟಡಗಳಲ್ಲ, ತಮ್ಮ ಸಮುದಾಯಗಳಿಗೆ ಭೇಟಿಯಾಗುವ, ಸಾಂತ್ವನ ಪಡೆಯುವ ಮತ್ತು ಪ್ರಾರ್ಥಿಸುವ ಸ್ಥಳಗಳಾಗಿವೆ.

“ನಾನು ಯಾವಾಗಲೂ ನನ್ನ ಧರ್ಮಕೇಂದ್ರದ ಜನರಿಗೆ ಇದು ಅವರ ಮನೆಯೇ ಎಂದು ಹೇಳುತ್ತೇನೆ,” ಎಂದು ಧರ್ಮಗುರು ಹೇಳುತ್ತಾರೆ. “ದೇವರನ್ನು ಸ್ತುತಿಸಲು, ಅವರಿಗೆ ಕೃತಜ್ಞತೆ ಸಲ್ಲಿಸಲು ಅಥವಾ ಅವರೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳಲು ಅವರು ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು.”

ದೇವಾಲಯಗಳ ಪುನರ್ನಿರ್ಮಾಣದ ಜೊತೆಗೆ, ಭಕ್ತರಿಗೆ ಹಾಗೂ ಈ ದುರಂತದಿಂದ ತಾವೂ ಬಾಧಿತರಾಗಿರುವ ಪಾಲನಾ ಸೇವಕರಿಗೆ ಆಧ್ಯಾತ್ಮಿಕ ಮತ್ತು ಮಾನಸಿಕ ಬೆಂಬಲವನ್ನು ಬಲಪಡಿಸುವುದು ಅತ್ಯಗತ್ಯವೆಂದು ಅವರು ನಂಬಿದ್ದಾರೆ. ಈ ಸೇವೆಯನ್ನು ಅಭಿಷಿಕ್ತ ಸೇವಕರ ಜೊತೆಗೆ ಧರ್ಮಸಭೆಯಲ್ಲಿ ಸೇವೆ ಸಲ್ಲಿಸುವ ಸಾಮಾನ್ಯ ವಿಶ್ವಾಸಿಗಳೂ ನಿರ್ವಹಿಸುತ್ತಿದ್ದಾರೆ.

ನೀರು ಮತ್ತು ಆಹಾರ ಇನ್ನೂ ಅತ್ಯಂತ ತುರ್ತು ಅಗತ್ಯಗಳು

ಭೌತಿಕ ಮಟ್ಟದಲ್ಲಿ, ಆಹಾರ ಹಾಗೂ ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯೇ ಇನ್ನೂ ಪ್ರಮುಖ ಅಗತ್ಯಗಳಾಗಿವೆ. ಅನೇಕ ನಿವಾಸಿಗಳು ಮೈಕೆಟಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಲಾ ಗುವೈರಾ ಬಂದರು ಅಥವಾ ಈಗ ಮುಚ್ಚಲ್ಪಟ್ಟಿರುವ ಅಥವಾ ನಾಶವಾಗಿರುವ ಸಣ್ಣ ವ್ಯಾಪಾರಗಳ ಮೇಲೆ ತಮ್ಮ ಜೀವನೋಪಾಯಕ್ಕಾಗಿ ಅವಲಂಬಿತರಾಗಿದ್ದರು.

“ಕೆಲವರು ತಮ್ಮ ಮನೆಗಳನ್ನು ಕಳೆದುಕೊಳ್ಳಲಿಲ್ಲ. ಆದರೆ ತಮ್ಮ ಆದಾಯದ ಮೂಲವನ್ನು ಕಳೆದುಕೊಂಡಿದ್ದಾರೆ ಮತ್ತು ಈಗ ತಮ್ಮನ್ನು ತಾವು ಪೋಷಿಸಿಕೊಳ್ಳುವ ಯಾವುದೇ ಮಾರ್ಗ ಅವರ ಬಳಿ ಇಲ್ಲ,” ಎಂದು ವಂ. ಗುರು ರೆಲ್ಲಾ ವಿವರಿಸುತ್ತಾರೆ. ಔಷಧಿಗಳ ದೇಣಿಗೆಗಳು ಸಾಕಷ್ಟು ಪ್ರಮಾಣದಲ್ಲಿ ಬಂದಿದ್ದು, ಧರ್ಮಕೇಂದ್ರವು ಸಮುದಾಯ ಔಷಧಿ ಬ್ಯಾಂಕ್‌ನ್ನೂ ಸ್ಥಾಪಿಸಿದೆ. ಆದರೂ ಮುಂಬರುವ ವಾರಗಳಲ್ಲಿ ಆಹಾರದ ನಿರಂತರ ಪೂರೈಕೆಯನ್ನು ಖಚಿತಪಡಿಸುವುದೇ ಅತ್ಯಂತ ದೊಡ್ಡ ಆದ್ಯತೆಯಾಗಿದೆ.

ಕೊನೆಗೆ, ಭೂಕಂಪದ ಸಂತ್ರಸ್ತರಿಗೆ ನೆರವು ನೀಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳೆಲ್ಲರಿಗೂ ವಂ. ಗುರು ಆಂಟೋನಿಯೊ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಮಾಧ್ಯಮಗಳ ಗಮನ ಬೇರೆಡೆಗೆ ಸರಿದರೂ ಐಕ್ಯತೆಯ ಮನೋಭಾವ ಕುಂದದಿರಲಿ ಎಂದು ಮನವಿ ಮಾಡಿದರು.

“ಸಹಾಯವು ಕ್ರಮೇಣ ಕಡಿಮೆಯಾಗಲು ಆರಂಭಿಸಿದಾಗಲೂ, ನಾವು ಮತ್ತೆ ಎದ್ದು ನಿಲ್ಲಲು ಮತ್ತು ಪುನರ್ನಿರ್ಮಾಣ ಕಾರ್ಯವನ್ನು ಆರಂಭಿಸಲು ಆ ಹೆಚ್ಚುವರಿ ಸಹಾಯದ ಕೈ ನಮಗೆ ಇನ್ನೂ ಅಗತ್ಯವಾಗಿರುತ್ತದೆ,” ಎಂದು ಹೇಳುತ್ತಾರೆ. ತಾಯ್ನಾಡಿನ ಬೆಳವಣಿಗೆಗಳನ್ನು ತೀವ್ರ ಕಳವಳದಿಂದ ಗಮನಿಸುತ್ತಿರುವ ವಿದೇಶದಲ್ಲಿರುವ ವೆನೆಜುವೆಲಾದ ಜನರಿಗೂ ಅವರು ಭರವಸೆಯ ಸಂದೇಶ ನೀಡುತ್ತಾರೆ.

ಕೊನೆಯಲ್ಲಿ,” ವೆನೆಜುವೆಲಾಗಾಗಿ ಪ್ರಾರ್ಥಿಸುವುದನ್ನು ಎಂದಿಗೂ ನಿಲ್ಲಿಸಬೇಡಿ,” ಎಂದು ಸದುದ್ದೇಶವುಳ್ಳ ಎಲ್ಲರಿಗೂ ಅವರು ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದರು. “ಪ್ರತಿಯೊಬ್ಬರೂ ಭೌತಿಕವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಪ್ರತಿದಿನ ನಮಗಾಗಿ ಮಾಡುವ ಒಂದು ಪ್ರಾರ್ಥನೆ ದೇವರ ಸಿಂಹಾಸನವನ್ನು ತಲುಪಿ ಫಲ ನೀಡುವುದರಿಂದ ಅದು ಅಪಾರ ಮೌಲ್ಯವನ್ನು ಹೊಂದಿದೆ.”

ದುರಂತದಿಂದ ಬಾಧಿತರೊಂದಿಗೆ ಧರ್ಮಸಭೆ ಹೇಗೆ ನಿರಂತರವಾಗಿ ಜೊತೆಯಾಗಿ ಸಾಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುವ ಮಾತುಗಳೊಂದಿಗೆ ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾರೆ: “ನಂಬಿಕೆಯು ಎಲ್ಲವನ್ನೂ ಸುಲಭಗೊಳಿಸುವುದಿಲ್ಲ; ಆದರೆ ಅದು ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಏಕೆಂದರೆ ಅದು ಮುಂದೆ ಸಾಗಲು ಬೇಕಾದ ಆತ್ಮಬಲವನ್ನು ನಮಗೆ ನೀಡುತ್ತದೆ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

10 ಜುಲೈ 2026, 22:37