ಹುಡುಕಿ

ಯಾಂಗೋನ್‌ನ ಧರ್ಮಾಧ್ಯಕ್ಷ ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ಯಾಂಗೋನ್‌ನ ಧರ್ಮಾಧ್ಯಕ್ಷ ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ 

ಸ್ವಯಂಚಾಲಿತ ಮಾರಕ ಶಸ್ತ್ರಾಸ್ತ್ರಗಳ ಮೇಲೆ ನಿಷೇಧಕ್ಕೆ ಶಾಸಕರು ಶ್ರಮಿಸಬೇಕು: ಪ್ರಧಾನ ಗುರು ಬೋ

ಅಸ್ಸಿಸಿಯಲ್ಲಿ ಸಭೆ ಸೇರಿದ್ದ ಕ್ರೈಸ್ತ ಶಾಸಕರು ಮತ್ತು ರಾಜಕೀಯ ನಾಯಕರನ್ನುದ್ದೇಶಿಸಿ ಮುಖ್ಯ ಭಾಷಣ ಮಾಡಿದ ಯಾಂಗೋನ್‌ನ ಧರ್ಮಾಧ್ಯಕ್ಷ ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ, ಕೃತಕ ಬುದ್ಧಿಮತ್ತೆಯ ಅಲ್ಗಾರಿದಮ್‌ಗಳು “ಸಂಪೂರ್ಣ ಸಮಾಜಗಳನ್ನು ವ್ಯವಸ್ಥಿತವಾಗಿ ಬಾಲಿಶಗೊಳಿಸುವ” ಅಪಾಯದ ಕುರಿತು ಎಚ್ಚರಿಕೆ ನೀಡಿದರು.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

“ನಮ್ಮ ನಾಗರಿಕರು ಏನನ್ನು ಓದಬೇಕು, ಖರೀದಿಸಬೇಕು, ನಂಬಬೇಕು ಮತ್ತು ಯಾವುದಕ್ಕೆ ಮೌಲ್ಯ ನೀಡಬೇಕು ಎಂಬುದನ್ನು ಅಲ್ಗಾರಿದಮ್‌ಗಳು ಮೌನವಾಗಿ ಪೂರ್ವನಿರ್ಧರಿಸಲು ನಾವು ಅವಕಾಶ ನೀಡುವುದರ ಮೂಲಕ, ಸಂಪೂರ್ಣ ಸಮಾಜಗಳನ್ನು ವ್ಯವಸ್ಥಿತವಾಗಿ ಬಾಲಿಶಗೊಳಿಸುತ್ತಿದ್ದೇವೆ.”

ಯಾಂಗೋನ್‌ನ ಧರ್ಮಾಧ್ಯಕ್ಷ ಹಾಗೂ ಮಯನ್ಮಾರ್‌ನ ಕಥೋಲಿಕ ಧರ್ಮಾಧ್ಯಕ್ಷರ ಸಮ್ಮೇಳನದ ಅಧ್ಯಕ್ಷರಾಗಿರುವ ಪ್ರಧಾನ ಗುರು ಚಾರ್ಲ್ಸ್ ಮೌಂಗ್ ಬೋ ಅವರು ಸೋಮವಾರ ಅಸ್ಸಿಸಿಯಲ್ಲಿ “ಕ್ರೈಸ್ತ ನಾಯಕರಿಂದ ಪರಿಣಾಮಕಾರಿ ಶಾಂತಿ ನಿರ್ಮಾತೃಗಳಾಗಲು ತುರ್ತು ಕರೆ” ಎಂಬ ಕಾರ್ಯಕ್ರಮದಲ್ಲಿ ಸಭೆ ಸೇರಿದ್ದ ಕ್ರೈಸ್ತ ಶಾಸಕರು ಮತ್ತು ರಾಜಕೀಯ ನಾಯಕರನ್ನುದ್ದೇಶಿಸಿ ಮುಖ್ಯ ಭಾಷಣ ಮಾಡುವಾಗ ಈ ಎಚ್ಚರಿಕೆಯನ್ನು ನೀಡಿದರು.

ಪ್ರಧಾನ ಗುರು ಬೋ ಅವರ ಭಾಷಣದ ಮುಖ್ಯ ವಿಷಯ “ಡಿಜಿಟಲ್ ಯುಗದಲ್ಲಿ ಕ್ರಿಸ್ತನನ್ನು ಕೇಂದ್ರವಾಗಿರಿಸಿಕೊಂಡು ಶಾಂತಿ ನಿರ್ಮಾತೃಗಳಾಗಲು ಕ್ರೈಸ್ತ ನಾಯಕರಿಗೆ ತುರ್ತು ಕರೆ” ಎಂಬುದಾಗಿತ್ತು. ಮಾನವ ಘನತೆ, ಕೃತಕ ಬುದ್ಧಿಮತ್ತೆ ಮತ್ತು ಶಾಂತಿ ಎಂಬ ಮೂರು ಪ್ರಮುಖ ವಿಷಯಗಳು ಈ ಕಾರ್ಯಕ್ರಮದಲ್ಲಿ ಒಂದಕ್ಕೊಂದು ಸಂಬಂಧ ಹೊಂದಿದ್ದವು.

ಮಾರ್ಗದರ್ಶನವಿಲ್ಲದ ತಾಂತ್ರಿಕ ಪರಿವರ್ತನೆಯ ಮಾನಸಿಕ ಪರಿಣಾಮಗಳ ಕುರಿತು ಕಾರ್ಡಿನಲ್ ಎಚ್ಚರಿಕೆ ನೀಡಿದರು. ಸಮಾಜವು “ಒಂದು ಇಡೀ ಪೀಳಿಗೆಗೆ ತರ್ಕಬದ್ಧ ಮತ್ತು ನೈತಿಕ ತೀರ್ಮಾನದ ಬದಲಾಗಿ ವ್ಯಸನಕಾರಿಯಾದ, ಊಹಾತ್ಮಕ ಪ್ರತಿಕ್ರಿಯಾ ಚಕ್ರಗಳನ್ನು ಅವಲಂಬಿಸುವಂತೆ” ಮಾಡುವ ಅಪಾಯವಿದೆ.ಇದು ಅಪಾಯಕಾರಿ ಮಾರ್ಗವಾಗಿದೆ. ಇದು ಪ್ರಜಾಪ್ರಭುತ್ವದ ಚಳಿಗಾಲಕ್ಕೂ, ಭೀಕರ ಪರಿಣಾಮಗಳೊಂದಿಗೆ ನಿರಂಕುಶ ಆಡಳಿತದ ಉದಯಕ್ಕೂ ದಾರಿ ಮಾಡಿಕೊಡುತ್ತದೆ,” ಎಂದು ಅವರು ಹೇಳಿದರು.

ಸ್ವಯಂಚಾಲಿತ ಯುದ್ಧವನ್ನು ತಿರಸ್ಕರಿಸಬೇಕು

ಪ್ರಧಾನ ಗುರು ಬೋ ಅವರು ಯುದ್ಧ ಮತ್ತು ಹತ್ಯೆಯ ಸ್ವಯಂಚಾಲಿತೀಕರಣವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಕರೆ ನೀಡಿದರು. ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಹಿಂಸಾಚಾರದ ವಿರುದ್ಧದ ನೈತಿಕ ತಡೆಗೋಡೆ ದುರ್ಬಲವಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಯಂತ್ರಗಳು “ಸರಿಯಾದ ಉದ್ದೇಶವನ್ನು ಹೊಂದಲು ಅಥವಾ ದುಃಖ, ಕರುಣೆ ಮತ್ತು ಮಾನವ ಜೀವದ ಪವಿತ್ರ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಅವು ಸಾಂಖ್ಯಿಕ ಹೊಂದಾಣಿಕೆಯನ್ನು ಮಾತ್ರ ನಿರ್ವಹಿಸಬಲ್ಲವು” ಎಂದು ಒತ್ತಿಹೇಳಿದರು.

“ಯುದ್ಧಭೂಮಿಯನ್ನು ಸ್ವಯಂಚಾಲಿತಗೊಳಿಸುವುದು ಹಿಂಸಾಚಾರದ ನೈತಿಕ ಮಿತಿಯನ್ನು ಕೆಳಗಿಳಿಸುವಂತಾಗಿದೆ. ಇದು ಸಂಘರ್ಷದಿಂದ ಮಾನವ ಮನಸ್ಸಾಕ್ಷಿಯನ್ನು ತೆಗೆದುಹಾಕಿ, ನಮ್ಮ ಪುತ್ರರು, ಪುತ್ರಿಯರು ಮತ್ತು ನಾಗರಿಕರನ್ನು ರಕ್ತವಿಲ್ಲದ ದತ್ತಾಂಶದ ಅಂಶಗಳಾಗಿ ಪರಿವರ್ತಿಸುತ್ತದೆ. ಆದ್ದರಿಂದ, ಜನರ ಪ್ರತಿನಿಧಿಗಳಾಗಿ ನಿಮ್ಮ ಕರ್ತವ್ಯ ಸ್ಪಷ್ಟವಾಗಿದೆ: ಸಂಪೂರ್ಣವಾಗಿ ಸ್ವಯಂಚಾಲಿತ ಮಾರಕ ಶಸ್ತ್ರಾಸ್ತ್ರಗಳ ಮೇಲೆ ತಕ್ಷಣವೇ ಜಾರಿಗೆ ಬರುವ, ಕಡ್ಡಾಯವಾದ ಅಂತರರಾಷ್ಟ್ರೀಯ ನಿಷೇಧವನ್ನು ಜಾರಿಗೆ ತರಲು ನೀವು ಮುಂಚೂಣಿಯಲ್ಲಿ ನಿಲ್ಲಬೇಕು,” ಎಂದು ಅವರು ಕರೆ ನೀಡಿದರು.

ಜಾಗತಿಕ ಯುದ್ಧಗಳು, ನಾಗರಿಕ ಅಶಾಂತಿ ಮತ್ತು ಆರ್ಥಿಕ ಅಸ್ಥಿರತೆಗಳಿಂದ ವಿಶಿಷ್ಟವಾಗಿ ತೊಂದರೆಗೊಳಗಾಗಿರುವ ಈ ಕಾಲಘಟ್ಟದಲ್ಲಿ, ಕ್ರೈಸ್ತ ನಾಯಕರು ಶಾಂತಿ ಮತ್ತು ನ್ಯಾಯವನ್ನು ಕೇಂದ್ರವಾಗಿರಿಸಿಕೊಂಡ ಪರ್ಯಾಯ ಮಾರ್ಗವನ್ನು ಅನುಸರಿಸಬೇಕೆಂದು ಪ್ರಧಾನ ಗುರು ಬೋ ಹೇಳಿದರು.

“ಶಾಂತಿ ಎಂದರೆ ಕೇವಲ ಯುದ್ಧದ ಅನುಪಸ್ಥಿತಿಯಲ್ಲ; ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ  ಸುಂದರವಾಗಿ ಹೇಳಿರುವಂತೆ, ‘ಶಾಂತಿ ಎಂದರೆ ಕಾರ್ಯರೂಪಕ್ಕೆ ಬಂದ ನ್ಯಾಯ’,” ಎಂದು ಅವರು ಹೇಳಿದರು.

ಸಮೃದ್ಧಿ ಮತ್ತು ಮಾನವ ಘನತೆ

ಎಲ್ಲರಿಗೂ ಸಮೃದ್ಧಿಯನ್ನು ಒದಗಿಸುವುದನ್ನು ಮತ್ತೊಂದು ಪ್ರಮುಖ ಗುರಿಯಾಗಿ ಗುರುತಿಸಿದ ಪ್ರಧಾನ ಗುರು ಬೋ, ತಂತ್ರಜ್ಞಾನವು ಮನುಷ್ಯರಿಗೆ ಸೇವೆ ಸಲ್ಲಿಸಬೇಕೇ ಹೊರತು ಅವರನ್ನು ಸರಕುಗಳಾಗಿ ಪರಿವರ್ತಿಸಬಾರದು ಎಂದು ಒತ್ತಿಹೇಳಿದರು. ನಿಜವಾದ ಸಮೃದ್ಧಿ “ತಂತ್ರಜ್ಞಾನವು ಮಾನವನ ಸೃಜನಶೀಲತೆಯನ್ನು ಹೆಚ್ಚಿಸಬೇಕು ಮತ್ತು ಅಪಾಯಕಾರಿ ಕೆಲಸದ ಹೊರೆಯನ್ನು ಕಡಿಮೆ ಮಾಡಬೇಕು; ಆದರೆ ಅದೇ ಸಮಯದಲ್ಲಿ ಮನುಷ್ಯರನ್ನು ಬಿಸಾಡಬಹುದಾದ ಯಂತ್ರದ ಭಾಗಗಳಾಗಿ ಪರಿವರ್ತಿಸಬಾರದು.

ಅನೇಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಂಪನಿಗಳು ಮಾರ್ಗದರ್ಶನ ಮತ್ತು ಕೆಲವು ನಿಯಂತ್ರಣ ಮಿತಿಗಳನ್ನು ಹುಡುಕುತ್ತಿವೆ. “ಅದು ನಮ್ಮ ಕರ್ತವ್ಯ,” ಎಂದು ಅವರು ಹೇಳಿದರು.

ವಿಶೇಷವಾಗಿ ವಿನಯಪೂರ್ವಕವಾದ ಮಾತಿನಲ್ಲಿ, ಕೆಲವು ತಂತ್ರಜ್ಞಾನ ಸಂಸ್ಥೆಗಳ ಕಾರ್ಯನಿರ್ವಾಹಕರು “ಚರ್ಚ್‌ನ ನೈತಿಕ ಹಸ್ತಕ್ಷೇಪವನ್ನು ಬಹಿರಂಗವಾಗಿ ಸ್ವಾಗತಿಸಿದ್ದಾರೆ” ಎಂದು ಅವರು ಹೇಳಿದರು. ಕಾನೂನು ಮತ್ತು ವಾಣಿಜ್ಯ ಕಾರಣಗಳಿಂದ ತಾವೇ ನಿಗದಿಪಡಿಸಲು ಸಾಧ್ಯವಾಗದ ಕಠಿಣ ನೈತಿಕ ಮಿತಿಗಳನ್ನು ರೂಪಿಸಲು ಅವರು “ತತ್ವಜ್ಞಾನಿಗಳು, ಆಧ್ಯಾತ್ಮಿಕ ನಾಯಕರು ಮತ್ತು ಮುಖ್ಯವಾಗಿ ಚುನಾಯಿತ ಶಾಸಕರಾದ ನಿಮ್ಮಂತಹ ಹೊರಗಿನವರತ್ತ” ನೋಡುತ್ತಿದ್ದಾರೆ ಎಂದು ಕಾರ್ಡಿನಲ್ ಹೇಳಿದರು.

ಮಾರ್ಗದರ್ಶನಕ್ಕಾಗಿ ತಂತ್ರಜ್ಞಾನ ನಾಯಕರು

ಡಿಜಿಟಲ್ ಭವಿಷ್ಯವನ್ನು ರೂಪಿಸುತ್ತಿರುವವರು ಆಡಳಿತ ಮತ್ತು ನಿಯಂತ್ರಣಕ್ಕಾಗಿ ಮನವಿ ಮಾಡುತ್ತಿದ್ದಾರೆ ಎಂದು ಕಾರ್ಡಿನಲ್ ಬೋ ಹೇಳಿದರು. ತಂತ್ರಜ್ಞಾನದ ಬಗ್ಗೆ ಅವರಿಗೆ ತಿಳುವಳಿಕೆ ಇದ್ದರೂ, ಮಾನವ ಘನತೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ತಮ್ಮ ಬಳಿ ಉತ್ತರಗಳಿಲ್ಲ. “ನೀವು ನಿಯಂತ್ರಣವನ್ನು ನಿರಾಕರಿಸಿದರೆ, ತಾಂತ್ರಿಕ ಅನಿವಾರ್ಯತೆಯ ಪುರಾಣವನ್ನು ಒಪ್ಪಿಕೊಂಡರೆ, ನಿಮ್ಮನ್ನು ಆಯ್ಕೆ ಮಾಡಿದ ಜನರ ಮೇಲಿನ ನಿಮ್ಮ ಸಾರ್ವಭೌಮ ಕರ್ತವ್ಯದಿಂದ ನೀವು ಹಿಂದೆ ಸರಿಯುತ್ತಿದ್ದೀರಿ,” ಎಂದು ಅವರು ಎಚ್ಚರಿಸಿದರು.

ನಿಜವಾದ ನಾಯಕರಾಗಿ ಮುಂದೆ ಬರಬೇಕೆಂದು ಶಾಸಕರಿಗೆ ಕರೆ ನೀಡಿದ ಪ್ರಧಾನ ಗುರು  ಬೋ, ಅವರಿಗೆ “ಕಡ್ಡಾಯವಾದ ಕಾನೂನುಬದ್ಧ ನಿಯಂತ್ರಣ ಮಿತಿಗಳನ್ನು ಸ್ಥಾಪಿಸಿ, ಸಂಸ್ಥೆಗಳ ಪಾರದರ್ಶಕತೆಯನ್ನು ಒತ್ತಾಯಿಸಿ, ಮಾನವ ಹತ್ಯೆಯ ಸ್ವಯಂಚಾಲಿತೀಕರಣವನ್ನು ತಿರಸ್ಕರಿಸಿ ಮತ್ತು ದೇವರು ನಮ್ಮ ಆರೈಕೆಗೆ ವಹಿಸಿರುವ ಅದ್ಭುತ ಮಾನವೀಯತೆಗೆ ತಂತ್ರಜ್ಞಾನವು ಸಂಪೂರ್ಣವಾಗಿ ಅಧೀನವಾಗಿರುವುದನ್ನು ಖಚಿತಪಡಿಸಿಕೊಳ್ಳಿ” ಎಂದು ಒತ್ತಾಯಿಸಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಆಗಸ್ಟ್ 2026, 14:54