ಹುಡುಕಿ

ರಿಮಿನಿ ಸಭೆಯ ಕೊನೆಯ ದಿನ ಮಾತನಾಡಿದ ಜೆರುಸಲೇಮ್‌ನ ಪ್ರಧಾನ ಗುರು ಪಿಜ್ಜಬಲ್ಲಾ ರಿಮಿನಿ ಸಭೆಯ ಕೊನೆಯ ದಿನ ಮಾತನಾಡಿದ ಜೆರುಸಲೇಮ್‌ನ ಪ್ರಧಾನ ಗುರು ಪಿಜ್ಜಬಲ್ಲಾ  (ANSA)

ಪ್ರಧಾನ ಗುರು ಪಿಜ್ಜಬಲ್ಲಾ: ಪಶ್ಚಿಮ ದಂಡೆಯು ‘ಕಾನೂನುರಹಿತ ಭೂಮಿಯಾಗಿದೆ’

ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರು ರಿಮಿನಿ ಸಭೆಯ ಕೊನೆಯ ದಿನ ಮಾತನಾಡಿ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಯಲು ಪಶ್ಚಿಮ ರಾಷ್ಟ್ರಗಳು ಹೆಚ್ಚಿನ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಬೇಕೆಂದು ಕರೆ ನೀಡಿದರು. ಭರವಸೆಯನ್ನು ನಿರ್ಮಿಸುವುದು ಮತ್ತು ಜನಮಟ್ಟದಿಂದ ಅಂತರಧರ್ಮೀಯ ಸಂವಾದವನ್ನು ಬೆಳೆಸುವುದು ಅಗತ್ಯವೆಂದು ಅವರು ಪುನರುಚ್ಚರಿಸಿದರು. ಇತರರನ್ನು ಅಮಾನವೀಯರಂತೆ ಕಾಣುವ ಮನೋಭಾವವನ್ನು ತಿರಸ್ಕರಿಸಿದ ಅವರು, ಎರಡು-ರಾಜ್ಯ ಪರಿಹಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಪಶ್ಚಿಮ ದಂಡೆಯು ಈಗ “‘ಕಾನೂನುರಹಿತ ಭೂಮಿಯಾಗಿದೆ” ಮತ್ತು ಅಲ್ಲಿ ಇಸ್ರಾಯೇಲಿ ವಸಾಹತುಗಾರರು ಹಾಗೂ ಪ್ಯಾಲೆಸ್ತೀನಿಯರ ನಡುವಿನ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿ “ಯಾವುದೇ ಪರಿಣಾಮಕಾರಿ ಭದ್ರತಾ ಅಥವಾ ಕಾನೂನು ನಿಯಂತ್ರಣಗಳಿಲ್ಲದೆ” ಮುಂದುವರಿಯುತ್ತಿದೆ. ವಸಾಹತುಗಾರರಿಂದ ನಿರಂತರ ಆಕ್ರಮಣ ನಡೆಯುತ್ತಿರುವುದು ಸುಸ್ಥಾಪಿತ ಸಂಗತಿಯಾಗಿದೆ.ಜೆರುಸಲೇಮ್‌ನ ಲ್ಯಾಟಿನ್ ಪ್ರಧಾನ ಧರ್ಮಕೇಂದ್ರಗಳ ಧರ್ಮಾಧ್ಯಕ್ಷರಾದ  ಪ್ರಧಾನ ಗುರು ಪಿಯರ್‌ಬತ್ತಿಸ್ತಾ ಪಿಜ್ಜಬಲ್ಲಾ ಅವರು ರಿಮಿನಿಯಲ್ಲಿ ನಡೆದ ಜನರ ಸ್ನೇಹಕ್ಕಾಗಿ ನಡೆದ ಸಭೆಯ ಕೊನೆಯ ದಿನದಂದು ಮಾತನಾಡಿದರು. ಮೊದಲು ಪತ್ರಕರ್ತರನ್ನು ಭೇಟಿಯಾದ ಅವರು, ನಂತರ ಯುವಜನರ ಗುಂಪಿನೊಂದಿಗೆ ಸಂವಾದ ನಡೆಸಿದರು.

“ಪಶ್ಚಿಮವು ತನ್ನ ದೃಷ್ಟಿಯನ್ನು ಸ್ವಲ್ಪ ಮೇಲಕ್ಕೆತ್ತಬೇಕು, ಭವಿಷ್ಯದ ದೃಷ್ಟಿಕೋನಗಳನ್ನು ಸೃಷ್ಟಿಸಬೇಕು ಮತ್ತು ಹೆಚ್ಚುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಈ ನಿರಂತರ ಕುಸಿತದ ಚಕ್ರವನ್ನು ಶಮನಗೊಳಿಸಲು ಸಹಾಯ ಮಾಡಬೇಕು,” ಎಂದು ಪ್ರಧಾನ ಗುರು ಒತ್ತಿಹೇಳಿದರು. “ಅದರ ಎಲ್ಲಾ ದೌರ್ಬಲ್ಯಗಳ ಹೊರತಾಗಿಯೂ,” ಶಸ್ತ್ರಾಸ್ತ್ರ, ಹಿಂಸಾಚಾರ ಮತ್ತು ಸೈನಿಕ ಬಲದ ಬಳಕೆಯನ್ನು ತಪ್ಪಿಸಿ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸುವ “ಏಕೈಕ ಮಾರ್ಗ” ರಾಜತಾಂತ್ರಿಕತೆಯೇ ಎಂದು ಅವರು ಹೇಳಿದರು.

ಪ್ರಧಾನ ಗುರು ಪಿಜ್ಜಬಲ್ಲಾ ಅವರು ಗಾಜಾದ ಪರಿಸ್ಥಿತಿಯತ್ತಲೂ ಗಮನ ಹರಿಸಿ, ಅಲ್ಲಿ ಪರಿಸ್ಥಿತಿ “ಅತ್ಯಂತ ಹದಗೆಟ್ಟಿದ್ದು,” ಮಾನವೀಯ ದೃಷ್ಟಿಯಿಂದ “ಬಹಳಷ್ಟು ಧ್ವಂಸಗೊಂಡಿದೆ” ಎಂದು ಅವರು ಹೇಳಿದರು. ಆದಾಗ್ಯೂ, ಒಂದು ದೃಷ್ಟಿಕೋನದಿಂದ ಅದು “ಹೆಚ್ಚು ಸ್ಥಿರವಾಗಿದೆ; ರಾಜಕೀಯವಾಗಿ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ” ಎಂದರು.

ಆದರೆ “ಭರವಸೆಯನ್ನು ‘ಎಲ್ಲವೂ ಸರಿಯಾಗುತ್ತದೆ’ ಎಂಬುದರೊಂದಿಗೆ ಅಥವಾ ರಾಜಕೀಯ ಪರಿಹಾರದೊಂದಿಗೆ ಅಪಾರ್ಥಮಾಡಿಕೊಳ್ಳಬಾರದು ಎಂದು ಪ್ರಧಾನ ಗುರು ಪಿಜ್ಜಬಲ್ಲಾ ಎಚ್ಚರಿಕೆ ನೀಡಿದರು. ಭರವಸೆ ಬೇರೆಯದೇ ಆಗಿದೆ.” ಅದು “ಒಳಗಿನಿಂದ” ಹುಟ್ಟುತ್ತದೆ; ಭೇಟಿಗಳ ಮೂಲಕ ಮತ್ತು ಜನರ ಮೂಲಕ ಹುಟ್ಟುತ್ತದೆ. ಈ ಸಭೆಯಲ್ಲಿ ಸೇರಿರುವ ಜನರಂಥಹ ಇಸ್ರಾಯೇಲಿಗಳ ಮತ್ತು ಪ್ಯಾಲೆಸ್ತೀನಿಯರ, ಯೆಹೂದಿಗಳ, ಮುಸ್ಲಿಮರು ಮತ್ತು ಕ್ರೈಸ್ತರ ಮೂಲಕ ಭರವಸೆ ಬೆಳೆಯುತ್ತದೆ. ಇವರು ತಮ್ಮನ್ನು ಅಪಾಯಕ್ಕೆ ಒಳಪಡಿಸಿಕೊಂಡು “ಸುಂದರವಾದದ್ದನ್ನು ಮಾಡಲು, ಸಹಾಯ ಮಾಡಲು, ಬೆಂಬಲಿಸಲು ಅಥವಾ ಕನಿಷ್ಠ ಇತರರನ್ನು ಅಮಾನವೀಯರೆಂದು ಪರಿಗಣಿಸಲು ನಿರಾಕರಿಸಲು” ಮುಂದಾಗುವ ಜನರ ಮೂಲಕ ಭರವಸೆ ಹುಟ್ಟುತ್ತದೆ.

ಇಸ್ರಾಯೇಲ್ ಮತ್ತು ಪ್ಯಾಲೆಸ್ತೀನ್ ಒಳಗೊಂಡ ಎರಡು-ರಾಜ್ಯ ಪರಿಹಾರವನ್ನು ಪೂಜ್ಯ ಜಗದ್ಗುರು ಪುನರುಚ್ಚರಿಸಿರುವುದಾಗಿ ಹೇಳಿದ ಪ್ರಧಾನ ಗುರು, ಅದು “ಇಸ್ರಾಯೇಲಿಗಳು ಮತ್ತು ಪ್ಯಾಲೆಸ್ತೀನಿಯರಿಗೆ ತಮ್ಮದೇ ಭೂಮಿಯಲ್ಲಿ ತಮ್ಮದೇ ಮನೆಯನ್ನು ಹೊಂದುವ ಹಕ್ಕನ್ನು ಗುರುತಿಸುವ ಏಕೈಕ ಮಾರ್ಗ” ಎಂದು ಹೇಳಿದರು.

“ಪೂಜ್ಯ ಜಗದ್ಗುರು ಪವಿತ್ರ ಭೂಮಿಗೆ ಈಗಲಾದರೂ ಅಥವಾ ನಂತರವಾದರೂ ಬರುತ್ತಾರೆಬರುತ್ತಾರೆ—ಅದು ಸಮಯದ ಪ್ರಶ್ನೆ ಮಾತ್ರ. ಈ ಭೇಟಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ಸಿದ್ಧಪಡಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ, ಇದರಿಂದ ಅದು ನಿಜವಾಗಿಯೂ ಫಲಪ್ರದವಾಗಬಹುದು. ನಾವು ಇದಕ್ಕಾಗಿ ಜಗದ್ಗುರುಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಆದರೆ ಆತುರಪಡಬಾರದು ಮತ್ತು ಕೇವಲ ಪ್ರತ್ಯೇಕ ಘಟನೆಗಳಾಗಿ ಉಳಿಯುವ ಪ್ರದರ್ಶನಾತ್ಮಕ ಕಾರ್ಯಕ್ರಮಗಳನ್ನೂ ತಪ್ಪಿಸಬೇಕು. ಈ ಭೇಟಿ ಅರ್ಥಪೂರ್ಣವಾದ ಪ್ರಕ್ರಿಯೆಯ ಒಂದು ಭಾಗವಾಗಿರಬೇಕು.”

ಯುದ್ಧದ ಅಮಾನವೀಯಗೊಳಿಸುವ ಮನೋಭಾವ

ದಿನದ ಅಂತ್ಯದಲ್ಲಿ ನಡೆದ “ಜೆರುಸಲೇಮ್‌ನ ಆಕಾಶವನ್ನು ನೋಡುವುದು” ಎಂಬ ಕಾರ್ಯಕ್ರಮದಲ್ಲಿ, ಪ್ರಧಾನ ಗುರು ಪಿಜ್ಜಬಲ್ಲಾ ಅವರು ಮಿಲಾನ್‌ನ ವಿದ್ಯಾರ್ಥಿ, ಅಮೆರಿಕದ ಯುವಕ ಮತ್ತು ರಿಮಿನಿಯಲ್ಲಿ ವಾಸಿಸುವ ಉಕ್ರೇನಿಯನ್ ಮೂಲದ ಪ್ರೌಢಶಾಲಾ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸಿದರು. ಅವರ ಕಳೆದ ಏಪ್ರಿಲ್‌ನಲ್ಲಿ ಪ್ರಕಟವಾದ ‘ಅವರು ಮಹಾ ಸಂತೋಷದಿಂದ ಜೆರುಸಲೇಮ್‌ಗೆ ಮರಳಿದರು’ ಎಂಬ ಧರ್ಮಾಧ್ಯಕ್ಷೀಯ ಪತ್ರದ ವಿಷಯಗಳನ್ನೇ ಪ್ರಶ್ನೆಗಳು ಒಳಗೊಂಡಿದ್ದವು. ಆ ಪತ್ರವು ಇಸ್ರಾಯೇಲ್, ಪ್ಯಾಲೆಸ್ತೀನ್, ಜೋರ್ಡಾನ್ ಮತ್ತು ಸೈಪ್ರಸ್ ಒಳಗೊಂಡ ಅವರ ಧರ್ಮಕ್ಷೇತ್ರದ ಜನರನ್ನು ಉದ್ದೇಶಿಸಿತ್ತು.

ಉಕ್ರೇನಿಯನ್ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಪ್ರಧಾನ ಗುರು, ಯುದ್ಧದ ಅಮಾನವೀಯಗೊಳಿಸುವ ಮನೋಭಾವವು “ನಿಮ್ಮ ಆಲೋಚನೆಯ, ಬದುಕುಳಿಯುವಿಕೆಯ ಮಾರ್ಗವಾಗುವುದನ್ನು” ತಡೆಯುವುದು ಅಗತ್ಯ ಎಂದು ಹೇಳಿದರು. ಏಕೆಂದರೆ “ಯುದ್ಧವು ಯುವಜನರಿಂದ ಅವರ ಜೀವನದ ಅತ್ಯಂತ ಸುಂದರ ವರ್ಷಗಳನ್ನು ಕಸಿದುಕೊಳ್ಳುತ್ತದೆ; ಅವರ ಜೀವವನ್ನೇ ಕಸಿದುಕೊಳ್ಳದಿದ್ದರೆ.” ಇದು ಉಕ್ರೇನ್‌ಗೆ ಮಾತ್ರವಲ್ಲ, ಮಧ್ಯಪ್ರಾಚ್ಯಕ್ಕೂ ಅನ್ವಯಿಸುತ್ತದೆ.

“ಯುದ್ಧವು ತನ್ನದೇ ಆದ ಚಲನೆಗಳನ್ನು ಹೊಂದಿದೆ ಮತ್ತು ಅವು ನಿಮ್ಮನ್ನು ಕ್ರೂರರನ್ನಾಗಿ ಮಾಡುತ್ತವೆ. ಇನ್ನೊಬ್ಬ ವ್ಯಕ್ತಿಯನ್ನು ಮಾನವನಾಗಿ ಮತ್ತು ನಿಮ್ಮ ಸಮೀಪದಲ್ಲಿರುವವನಾಗಿ ನೋಡಿದರೆ, ಅವನ ಮೇಲೆ ದಾಳಿ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಇನ್ನೊಬ್ಬನನ್ನು ಅಮಾನವೀಯನನ್ನಾಗಿ ಮಾಡಲಾಗುತ್ತದೆ.”

“ಯುದ್ಧವು ಯುವಜನರಿಂದ ಅವರ ಜೀವನದ ಅತ್ಯಂತ ಸುಂದರ ವರ್ಷಗಳನ್ನು ಕಸಿದುಕೊಳ್ಳುತ್ತದೆ...”

ಯುದ್ಧದ ಈ ಚಲನೆಗಳು “ಮನಸ್ಸಾಕ್ಷಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಾರದು” ಎಂದು ಅವರು ಒತ್ತಿಹೇಳಿದರು.

ಶಾಂತಿ ಒಂದು ಘೋಷವಾಕ್ಯವಲ್ಲ

“ಶಾಂತಿಯನ್ನು ಕೇವಲ ಘೋಷವಾಕ್ಯವನ್ನಾಗಿ ಮಾಡುವುದನ್ನು, ಹಾಗೆಯೇ ಮಧ್ಯಪ್ರಾಚ್ಯದಂತಹ ಸಂಕೀರ್ಣ ವಾಸ್ತವಿಕತೆಗೆ ಸಂಬಂಧಿಸಿದ ನಿಷ್ಕಪಟ ವಿಧಾನಗಳನ್ನು ತಪ್ಪಿಸುವುದು” ಅಗತ್ಯ ಎಂದು ಪ್ರಧಾನ ಗುರು ಪಿಜ್ಜಬಲ್ಲಾ ಹೇಳಿದರು. ಶಾಂತಿಗೆ ರಾಜಕೀಯ ಕ್ರಮ ಅಗತ್ಯ. ಅದಕ್ಕೆ ತನ್ನದೇ ಆದ ಚಲನೆಗಳಿವೆ. ರಾಜಕೀಯವು ಸಮತೋಲನಗಳು, ಹಿತಾಸಕ್ತಿಗಳು ಮತ್ತು ಅಧಿಕಾರ ಸಂಬಂಧಗಳಿಂದ ರೂಪುಗೊಳ್ಳುತ್ತದೆ. ಸಮಸ್ಯೆ ಉಂಟಾಗುವುದು ರಾಜಕೀಯವನ್ನು ಪಕ್ಷಪಾತದ ಹಿತಾಸಕ್ತಿಗಳು ಮತ್ತು ಅಧಿಕಾರದ ಸಮತೋಲನಗಳಿಗೆ ಮಾತ್ರ ಸೀಮಿತಗೊಳಿಸಿದಾಗ; “ಅದರ ಪರಿಣಾಮಗಳು ನಮ್ಮ ಕಣ್ಣಮುಂದಿವೆ.”

ಆದ್ದರಿಂದ “ಸಾಮಾನ್ಯ ಹಿತವೆಂದರೇನು ಎಂಬುದನ್ನು ನೆನಪಿಸುವ” ಯಾರಾದರೂ ತಮ್ಮ ಧ್ವನಿಯನ್ನು ಎತ್ತಬೇಕಾಗಿದೆ. ಏಕೆಂದರೆ ಸಾಮಾನ್ಯ ಹಿತವನ್ನು “ನಿರ್ಲಕ್ಷಿಸಬಾರದು ಅಥವಾ ಮರೆಯಬಾರದು.”

ಮಧ್ಯಪ್ರಾಚ್ಯದಲ್ಲಿ ಸಾಮಾನ್ಯ ಹಿತದ ಅರಿವು ಕಳೆದುಹೋಗಿದೆ ಎಂದು ಪ್ರಧಾನ ಗುರು ಗಮನಿಸಿದರು. ಸಂಸ್ಥೆಗಳು ತಮ್ಮ ಸ್ವಂತ ಅಥವಾ ತಮ್ಮ ರಾಜಕೀಯ ಪಕ್ಷದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತದೆ. ಆದ್ದರಿಂದ ಧಾರ್ಮಿಕ ನಾಯಕರು ಇದನ್ನು ಜನರಿಗೆ ನೆನಪಿಸಬೇಕು. ರಾಜಕೀಯವು ನಾಗರಿಕ ಸಮಾಜಕ್ಕೂ ಸಂಬಂಧಿಸಿದೆ. ರಾಜಕೀಯ ಸಂಸ್ಥೆಗಳು ದುರ್ಬಲತೆ ಮತ್ತು ಸಾಮಾನ್ಯ ಹಿತಕ್ಕಾಗಿ ಕಾರ್ಯನಿರ್ವಹಿಸಲು ಅಸಮರ್ಥತೆಯನ್ನು ತೋರಿಸುತ್ತಿರುವ ಸಂದರ್ಭದಲ್ಲಿ, ಬಳಸಲಾಗುವ ಭಾಷೆಯನ್ನು ಬದಲಾಯಿಸುವ ಅಗತ್ಯವಿದೆ.

ಸಂಕಷ್ಟದ ಸಮಯದಲ್ಲಿ ಇತರರಿಗಾಗಿ ಜೊತೆಯಾಗಿರುವುದು

ಮಧ್ಯಪ್ರಾಚ್ಯದಂತಹ ವಾಸ್ತವಿಕತೆಯಲ್ಲಿ ನೋವನ್ನು ಹೇಗೆ ಎದುರಿಸಬೇಕು ಮತ್ತು ದೃಢವಾಗಿ ಉಳಿಯಬೇಕು ಎಂಬ ಪ್ರಶ್ನೆಗೂ ಪ್ರಧಾನ ಗುರು ಉತ್ತರಿಸಿದರು. ಅವರ ಉತ್ತರ ಶಿಲುಬೆಯತ್ತ ನೋಡುವುದಾಗಿತ್ತು. ಶಿಲುಬೆ “ಯೇಸು ಮಾನವೀಯವಾಗಿ ವಿಫಲವಾಗುವ ಸ್ಥಳ; ಆದರೆ ನಮಗೆ ಅದು ರಕ್ಷಣೆಯ ಮೂಲವಾಗಿದೆ,” ಮತ್ತು ಅಲ್ಲಿಂದ ಪುನರುತ್ಥಾನವು ಉದಯಿಸುತ್ತದೆ. ಪ್ರದೇಶದಲ್ಲಿನ ನೋವು ಮುರಿದ ಸಂಬಂಧಗಳ, ಜನರು ಕಾಣುತ್ತಿರುವ ಹಿಂಸೆಯ, ಇನ್ನು ಮುಂದೆ ನಮ್ಮೊಂದಿಗಿಲ್ಲದವರ ಮತ್ತು ವಿವಿಧ ಪರಿಸ್ಥಿತಿಗಳ ಎದುರು ತಾನು ಅಸಹಾಯಕನೆಂದು ಭಾವಿಸುವ ನೋವಾಗಿದೆ ಎಂದು ಅವರು ವಿವರಿಸಿದರು.

“ಏಕೆಂದರೆ ನೀವು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ”: ಪ್ರತಿಯೊಬ್ಬರನ್ನೂ ತಲುಪಲು ಅಥವಾ ನೀವು ಬಯಸಿದಷ್ಟು ಸಹಾಯ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಾರ್ಥನೆಯು ನಮ್ಮ ಅಸಹಾಯಕತೆಯನ್ನು ದೇವರಿಗೆ ಒಪ್ಪಿಸಬಹುದಾದ ಸ್ಥಳವಾಗಿದೆ ಎಂದು ಪ್ರಧಾನ ಗುರು ಹೇಳಿದರು.

ಒಬ್ಬನು ಬಿದ್ದಾಗ, ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಭಾವಿಸಿದಾಗ, ಕ್ರಿಸ್ತನತ್ತ ನೋಡಿ “ಮತ್ತೆ ಆರಂಭಿಸಬೇಕು.” ನೋವಿನ ಸಮಯದಲ್ಲಿ ಸಂತ್ರಸ್ತರನ್ನು ಒಂಟಿಯಾಗಿ ಬಿಡದಿರುವುದು ಮುಖ್ಯ. ಅನೇಕ ಮಾತುಗಳಿಗಿಂತ ಕೇವಲ ಅವರೊಂದಿಗೆ ಇರುವುದೇ ಹೆಚ್ಚು ಮುಖ್ಯ.

ಭರವಸೆ ಹೃದಯದಲ್ಲಿ ಹುಟ್ಟುತ್ತದೆ

ಆದರೆ ಭರವಸೆಯನ್ನು ಹೇಗೆ ಜೀವಂತವಾಗಿರಿಸಬಹುದು? “ದ್ವೇಷ, ಅಸಮಾಧಾನ ಮತ್ತು ಸಂಕಷ್ಟಗಳಿಂದ ತುಂಬಿ, ತುಂಡುತುಂಡಾಗಿರುವ” ಮಧ್ಯಪ್ರಾಚ್ಯದಲ್ಲಿ ಭರವಸೆಯನ್ನು ಬೆಳೆಸುವುದು ಸುಲಭವಲ್ಲ. ಭರವಸೆ “ಸಮಸ್ಯೆಗಳಿಗೆ ಪರಿಹಾರವಲ್ಲ” ಎಂದು ಪ್ರಧಾನ ಗುರು ಒತ್ತಿಹೇಳಿದರು. ಅಲ್ಲದೆ, ಕ್ಷಿತಿಜದಲ್ಲಿ ಇನ್ನೂ ಯಾವುದೇ ಪರಿಹಾರ ಕಾಣಿಸುತ್ತಿಲ್ಲ.

“ಪರಿಸ್ಥಿತಿ ಹದಗೆಟ್ಟಿರುವುದರಿಂದ ನಾವು ವಾಸ್ತವಿಕರಾಗಿರಬೇಕು,” ಎಂದು ಅವರು ಒಪ್ಪಿಕೊಂಡರು. ಆದರೆ ಭರವಸೆ “ಹೊರಗಿನಿಂದ ಬರಬೇಕಾದ ಯಾವುದನ್ನೋ ಕಾಯುವುದಲ್ಲ. ಅದು ಹೃದಯದೊಳಗೆ ಹುಟ್ಟುತ್ತದೆ; ಅದು ನಂಬಿಕೆಯ ಮಗು; ನಾವು ಒಂಟಿಯಲ್ಲ ಎಂಬ ಅರಿವು.”

ನಂಬಿಕೆಯಲ್ಲಿ ಕ್ರಿಸ್ತನೊಂದಿಗಿನ ಭೇಟಿಯ ಉಪಸ್ಥಿತಿಯು ಜನರಲ್ಲಿ, ಮುಖಗಳಲ್ಲಿ, ಸಂಘಟನೆಗಳಲ್ಲಿ ಮತ್ತು ಒಟ್ಟಾಗಿ ಏನನ್ನಾದರೂ ಮಾಡಲು ತಮ್ಮನ್ನು ತೊಡಗಿಸಿಕೊಳ್ಳುವ ಸಮುದಾಯಗಳಲ್ಲಿ ಕಾಣಿಸುತ್ತದೆ. 

ಪ್ರಧಾನ ಗುರು ಪಿಜ್ಜಬಲ್ಲಾ ಅವರು ಇತ್ತೀಚೆಗೆ ಗಾಜಾದ ಸಾರ್ವಜನಿಕ ವಿಶ್ವವಿದ್ಯಾಲಯದ ಯುವಜನರನ್ನು ಭೇಟಿಯಾದುದನ್ನು ನೆನಪಿಸಿಕೊಂಡರು. ಅವರು ಚೈತನ್ಯದಿಂದ ಮತ್ತು ಬದುಕುವ ಬಯಕೆಯಿಂದ ತುಂಬಿದ್ದರು. “ಅದು ಭರವಸೆಯ ಮೂಲ,” ಎಂದು ಅವರು ಹೇಳಿದರು. ಹಿಂಸೆಯನ್ನು ತಿರಸ್ಕರಿಸಬೇಕು ಎಂಬುದರಲ್ಲಿ ಅವರೂ ಒಪ್ಪಿಕೊಂಡಿದ್ದರು.

ನಿಜವಾದ ಅಂತರಧರ್ಮೀಯ ಸಂವಾದ ಜನರ ನಡುವೆ ನಡೆಯುತ್ತದೆ

ಅಂತರಧರ್ಮೀಯ ಸಂವಾದದ ಕುರಿತ ಪ್ರಶ್ನೆಗೂ ಪ್ರಧಾನ ಗುರು ಉತ್ತರಿಸಿದರು. ಜನರು “ಇತರರನ್ನು ಭೇಟಿಯಾಗಲು ಹೆದರದಾಗ,” ತಮ್ಮದೇ ನಂಬಿಕೆಯಲ್ಲಿ ಭದ್ರವಾಗಿರುವುದರಿಂದ ಇತರರಿಂದ ಬೆದರಿಕೆಯನ್ನು ಅನುಭವಿಸದಾಗ ಮತ್ತು “ಪೂರ್ವಾಗ್ರಹವಿಲ್ಲದೆ” ಇತರರೊಂದಿಗೆ ಸಂಬಂಧ ಬೆಳೆಸಿದಾಗ ಸಂವಾದ ಬೆಳೆಯುತ್ತದೆ.

“ಧರ್ಮಗಳ ನಡುವಿನ ಸಂವಾದ” ಎನ್ನುವುದಕ್ಕಿಂತ “ಅಂತರಧರ್ಮೀಯ ಸಂವಾದ” ಎಂಬ ಪದಪ್ರಯೋಗವನ್ನು ತಾವು ಹೆಚ್ಚು ಇಷ್ಟಪಡುತ್ತೇನೆ ಎಂದು ಪ್ರಧಾನ ಗುರು ಪಿಜ್ಜಬಲ್ಲಾ ವಿವರಿಸಿದರು. ಏಕೆಂದರೆ ಒಂದು ನಂಬಿಕೆಯವರು ತಮ್ಮದೇ ನಂಬಿಕೆಯ ಅನುಭವದಿಂದ ಆರಂಭಿಸಿ ಪರಸ್ಪರ ಮಾತನಾಡುತ್ತಾರೆ. ಸಮುದಾಯಗಳು ಸಂವಾದದಲ್ಲಿ ತೊಡಗುತ್ತವೆ. ಇಲ್ಲಿಯವರೆಗೆ ಯೆಹೂದಿಗಳು, ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂವಾದವು ಬಹುಪಾಲು ಗಣ್ಯರ ನಡುವೆ ನಡೆದಿತ್ತು ಎಂದು ಅವರು ಗಮನಿಸಿದರು. ಆದರೆ ಸಂವಾದವು ಸಾಮಾನ್ಯ ಜನರ ನಡುವೆ ಬೆಳೆಯಬೇಕು.

“ಗಾಜಾ ಯುದ್ಧದ ನಂತರ, ನಾವು ಹಿಂದೆ ಇದ್ದ ರೀತಿಗೆ ಮರಳಲು ಸಾಧ್ಯವಿಲ್ಲ; ಅನೇಕ ಗಾಯಗಳು ಮತ್ತು ತಪ್ಪುಗ್ರಹಿಕೆಗಳು ಉಂಟಾಗಿವೆ,” ಎಂದು ಅವರು ಹೇಳಿದರು. ಆದ್ದರಿಂದ “ಸ್ಥಳೀಯ ಮಟ್ಟದಲ್ಲಿ ಅವಕಾಶಗಳು” ಬೇಕಾಗಿವೆ. ಅಲ್ಲಿ ಸಂವಾದ ಬೆಳೆಯಬಹುದು, “ಏಕೆಂದರೆ ಅಲ್ಲಿಯೇ ಸುಂದರವಾದ ಮತ್ತು ವಿಭಿನ್ನವಾದದ್ದು ಹುಟ್ಟಿ ನಿರ್ಮಾಣವಾಗುತ್ತದೆ.” ಇತರರನ್ನು ವರ್ಗೀಕರಿಸುವ ಬದಲು ಭೇಟಿಯಾಗಿ ಅವರನ್ನು ತಿಳಿದುಕೊಳ್ಳುವಂತೆ ಪ್ರಧಾನ ಗುರು ಪಿಜ್ಜಬಲ್ಲಾ ಜನರನ್ನು ಪ್ರೋತ್ಸಾಹಿಸಿದರು.

“ಪವಿತ್ರ ಭೂಮಿಯಲ್ಲಿರುವ ಪ್ರತಿಯೊಬ್ಬರೂ ತಾವೇ ಸಂತ್ರಸ್ತರು, ಏಕೈಕ ಸಂತ್ರಸ್ತರು ಎಂದು ಭಾವಿಸುತ್ತಾರೆ. ಇದು ಒಂದು ವಿಷವರ್ತುಲ. ಇನ್ನೊಬ್ಬನು ಶತ್ರುವಾಗುತ್ತಾನೆ. ಮೊದಲ ಹಿಂಸಾಚಾರವು ಹೃದಯದಲ್ಲಿ ಮತ್ತು ಮಾತುಗಳಲ್ಲಿ ಆರಂಭವಾಗುತ್ತದೆ,” ಎಂದು ಪ್ರಧಾನ ಗುರು ಒತ್ತಿಹೇಳಿದರು.

“ಪವಿತ್ರ ಭೂಮಿಯಲ್ಲಿರುವ ಪ್ರತಿಯೊಬ್ಬರೂ ತಾವೇ ಸಂತ್ರಸ್ತರು, ಏಕೈಕ ಸಂತ್ರಸ್ತರು ಎಂದು ಭಾವಿಸುತ್ತಾರೆ. ಇದು ಒಂದು ವಿಷವರ್ತುಲ. ಇನ್ನೊಬ್ಬನು ಶತ್ರುವಾಗುತ್ತಾನೆ. ಮೊದಲ ಹಿಂಸಾಚಾರವು ಹೃದಯದಲ್ಲಿ ಮತ್ತು ಮಾತುಗಳಲ್ಲಿ ಆರಂಭವಾಗುತ್ತದೆ.”

ಜನರನ್ನು ಅವರದೇ ಕಥೆಗಳು, ಭಾವನೆಗಳು ಮತ್ತು ಸಂಬಂಧಗಳೊಂದಿಗೆ ಭೇಟಿಯಾಗುವಂತೆ ಅವರು ಒತ್ತಾಯಿಸಿದರು. “ಇದು ನಮಗೆ ಸಾಮಾನ್ಯೀಕರಣ ಮಾಡದಿರಲು ಸಹಾಯ ಮಾಡುತ್ತದೆ.” ನಮ್ಮ ಸಮುದಾಯಗಳೊಳಗೆ ಇರುವ ಗಡಿಗಳನ್ನು ಮೀರಿ ಹೋಗಲು ಸಹಾಯ ಮಾಡುವ “ಸಾಕ್ಷಿಗಳು” ಬೇಕಾಗಿದ್ದಾರೆ. ಆ ಗಡಿಗಳು ಇರಬಹುದು, ಆದರೆ ಅವು ಭೇದಿಸಲಾಗದಂತಿರಬಾರದು—“ತೆರೆಯುವಿಕೆಗಳನ್ನು ಸೃಷ್ಟಿಸುವ ಜನರು ನಮಗೆ ಬೇಕು.” ತನ್ನನ್ನು ಏಕೈಕ ಮತ್ತು ಸಂಪೂರ್ಣ ಸಂತ್ರಸ್ತನೆಂದು ನೋಡುವ ಹಾಗೂ ಇತರರನ್ನು ಅಪರಾಧಿಗಳೆಂದು ನೋಡುವ ಈ ವಿಷವರ್ತುಲದಿಂದ ಹೊರಬರುವುದು ಅಗತ್ಯ.

ಅನೇಕ ಧ್ವನಿಗಳಿಗೆ ಕಿವಿಗೊಡುವುದು

ಇಂದಿನ ಘಟನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಮೌಲ್ಯಮಾಪನ ಮಾಡಲು, ಇಷ್ಟೊಂದು ಧ್ರುವೀಕರಣ ಮತ್ತು ಸುಳ್ಳು ಸುದ್ದಿಗಳ ನಡುವೆ “ಅನೇಕ ಧ್ವನಿಗಳಿಗೆ ಕಿವಿಗೊಡುವುದು ಅಗತ್ಯ. ಅಲ್ಗಾರಿದಮ್‌ಗಳು ಜನರಿಗೆ ತಮ್ಮ ಆಸಕ್ತಿಯ ವಿಷಯಗಳನ್ನು ಮಾತ್ರ ತೋರಿಸುವಂತೆ ಮಾಡುತ್ತವೆ. ಆದ್ದರಿಂದ ನಾವು “ನಮ್ಮೊಂದಿಗೆ ಒಪ್ಪದ” ಧ್ವನಿಗಳಿಗೂ ಕಿವಿಗೊಡಬೇಕು. ಇತರರು ಬಳಸುವ ಭಾಷೆಯನ್ನು ಮೌಲ್ಯಮಾಪನ ಮಾಡಲು ಕಲಿಯಬೇಕು—ಅದು ಆಕ್ರಮಣಕಾರಿ ಮತ್ತು ಅಮಾನವೀಯಗೊಳಿಸುವಂತಿದೆಯೇ, ಹಾಗಿದ್ದರೆ ಅದನ್ನು ಅನುಸರಿಸಬಾರದು ಎಂಬುದನ್ನು ಗುರುತಿಸಬೇಕು.

“ಇದು ಮಧ್ಯಪ್ರಾಚ್ಯದಲ್ಲಿ ನಿರಂತರವಾಗಿ ಕೈಗೊಳ್ಳಬೇಕಾದ ಕಾರ್ಯ,” ಎಂದು ಅವರು ಹೇಳಿದರು. ಅಲ್ಲಿ “ಯಾವುದೂ ಕಾಣಿಸುವಂತೆಯೇ ಇರುವುದಿಲ್ಲ ಮತ್ತು ಎಲ್ಲವೂ ಬಹಳ ಸಂಕೀರ್ಣವಾಗಿದೆ.”

ಸ್ಮೃತಿಯ ಶುದ್ದೀಕರಣ

ತಮ್ಮ ಧರ್ಮಾಧ್ಯಕ್ಷೀಯ ಪತ್ರದಲ್ಲಿ ಉಲ್ಲೇಖಿಸಲಾದ ಮತ್ತೊಂದು ವಿಷಯವಾದ “ಸ್ಮೃತಿಯ ಶುದ್ಧೀಕರಣ”ವನ್ನೂ ಸಂವಾದದಲ್ಲಿ ಚರ್ಚಿಸಲಾಯಿತು. ಅವರ ಪ್ರಕಾರ, ಇದು “ಹಿಂದಿನದನ್ನು ಮರೆತುಬಿಡುವುದು ಎಂದಲ್ಲ.” ಬದಲಾಗಿ, “ನೋವು ಮತ್ತು ಅನ್ಯಾಯದ ಅನುಭವವು” ಭವಿಷ್ಯವನ್ನು ನಿರ್ಧರಿಸಲು ಮತ್ತು ಇತಿಹಾಸದ ವ್ಯಾಖ್ಯಾನಗಳನ್ನು ರೂಪಿಸಲು ಅವಕಾಶ ನೀಡದಿರುವುದು.

ಮಧ್ಯಪ್ರಾಚ್ಯದಲ್ಲಿ ವಿಭಿನ್ನ ನಿರೂಪಣೆಗಳಿವೆ. ಅವುಗಳನ್ನು ಎಲ್ಲರೂ ಹಂಚಿಕೊಳ್ಳಬೇಕೆಂದಿಲ್ಲ. ಆದರೆ ಇತರರು ಘಟನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ನಿರಾಕರಿಸಲಾಗದು. ಭವಿಷ್ಯದ ಪೀಳಿಗೆಗಳಲ್ಲಿ ಅಸಮಾಧಾನವನ್ನು ಸಮರ್ಥಿಸಲು ಇತಿಹಾಸದ ವಿಕೃತ ವ್ಯಾಖ್ಯಾನಗಳನ್ನು ಬಳಸಬಾರದು.

“ನಾವು ಹೊಸ ಪೀಳಿಗೆಗಳಿಗೆ ವಿಮೋಚಿಸಲ್ಪಟ್ಟ ಭೂತಕಾಲವನ್ನು ಹಸ್ತಾಂತರಿಸಬೇಕು,” ಎಂದು ಪ್ರಧಾನ ಗುರು ಕೊನೆಗೆ ಹೇಳಿದರು. “ಇದು ಪ್ರತಿಯೊಂದು ಮಟ್ಟದಲ್ಲಿಯೂ ಅಗತ್ಯ ಮತ್ತು ನಿರ್ಣಾಯಕ: ವಿಶ್ವವಿದ್ಯಾಲಯಗಳಲ್ಲಿ, ಶಾಲೆಗಳಲ್ಲಿ, ಮಸೀದಿಗಳಲ್ಲಿ, ಧರ್ಮಸಭೆಗಳಲ್ಲಿ ಮತ್ತು ಕುಟುಂಬಗಳಲ್ಲಿ.”

ಅಂತಿಮವಾಗಿ, ಉದಾಸೀನತೆಯ ಎದುರು “ಉತ್ಸಾಹ ಅಗತ್ಯ; ಅದು ಸಾಂಕ್ರಾಮಿಕವಾದದ್ದು,” ಜೊತೆಗೆ “ಸಂತೋಷ ಮತ್ತು ಸ್ನೇಹವೂ” ಅಗತ್ಯ ಎಂದು ಅವರು ಹೇಳಿದರು.

“ಅಗತ್ಯವಾಗಿರುವುದು ಸಾಂಕ್ರಾಮಿಕ ಉತ್ಸಾಹ.”

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಆಗಸ್ಟ್ 2026, 19:41