ಹುಡುಕಿ

ರೋಮ್‌ನ ಸಂತ ಆಗಸ್ಟೀನ್ ಬಸಿಲಿಕಾದಲ್ಲಿರುವ ಸಂತ ಮೋನಿಕಾರ ಪವಿತ್ರ ಅವಶೇಷಗಳನ್ನು ಸಂರಕ್ಷಿಸಿರುವ ಪ್ರಾರ್ಥನಾಲಯ ರೋಮ್‌ನ ಸಂತ ಆಗಸ್ಟೀನ್ ಬಸಿಲಿಕಾದಲ್ಲಿರುವ ಸಂತ ಮೋನಿಕಾರ ಪವಿತ್ರ ಅವಶೇಷಗಳನ್ನು ಸಂರಕ್ಷಿಸಿರುವ ಪ್ರಾರ್ಥನಾಲಯ 

ಸಂತ ಮೋನಿಕಾರ ಅವಶೇಷಗಳನ್ನು ರೋಮ್‌ಗೆ ಸ್ಥಳಾಂತರಿಸಿದ ಸಾಹಸಗಾಥೆ

15ನೇ ಶತಮಾನದಲ್ಲಿ ರೋಮ್‌ನ ಪ್ರಾಚೀನ ನದಿಬಂದರಿನ ಅವಶೇಷಗಳ ಸಮೀಪದ ಸಂತ ಔರೆಯಾ ದೇವಾಲಯದ ಬಳಿ, ಸಂತ ಆಗಸ್ಟೀನ್ ಅವರ ತಾಯಿಯಾದ ಸಂತ ಮೋನಿಕಾರ ಪಾರ್ಥಿವ ಅವಶೇಷಗಳು ಪತ್ತೆಯಾದವು. ಪೂಜ್ಯ ಜಗದ್ಗುರು ಐದನೇ ಮಾರ್ಟಿನ್ ಅವರ ಅನುಮತಿಯೊಂದಿಗೆ ಆಗಸ್ಟೀನಿಯನ್ ಧರ್ಮಗುರುಗಳು ಅವುಗಳನ್ನು ರೋಮ್‌ಗೆ ಸ್ಥಳಾಂತರಿಸಿದರು. ಇಂದು ಅವು ಕ್ಯಾಂಪೊ ಮಾರ್ಜಿಯೊದಲ್ಲಿರುವ ರೋಮ್‌ನ ಸಂತ ಆಗಸ್ಟೀನ್ ಬಸಿಲಿಕಾದ ವಿಶೇಷ ಪ್ರಾರ್ಥನಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ.

ಲೇಖಕರು: ಜೋಸೆಫ್ ಸ್ಕಿಬೆರಾಸ್, ಸಂತ ಆಗಸ್ಟೀನ್ ಧರ್ಮಸಭೆಯ ಐತಿಹಾಸಿಕ ಸಂಸ್ಥೆಯ ಕಾರ್ಯದರ್ಶಿ

ಕ್ರಿ.ಶ. 387ರಲ್ಲಿ ಆರಂಭಿಕ ಕ್ರೈಸ್ತಧರ್ಮದ ಅಸಾಧಾರಣ ವ್ಯಕ್ತಿತ್ವವೂ ಸಂತ ಆಗಸ್ಟೀನ್ ಅವರ ತಾಯಿಯೂ ಆಗಿದ್ದ ಸಂತ ಮೋನಿಕಾ ಓಸ್ಟಿಯಾ ಟೈಬೆರಿನಾದಲ್ಲಿ ನಿಧನರಾದರು. ಅನೇಕ ಶತಮಾನಗಳವರೆಗೆ ಅವರ ಸಮಾಧಿ ಓಸ್ಟಿಯಾದಲ್ಲಿಯೇ ಇತ್ತು. ಆ ಕಾಲದ ಅತ್ಯಂತ ಮಹತ್ವದ ಪುರಾತತ್ವ ಸಾಕ್ಷ್ಯವೆಂದರೆ ಕಾನ್ಸಲ್ ಅನಿಸಿಯಸ್ ಆಕೆನಿಯಸ್ ಬಾಸ್ಸೊ ರಚಿಸಿದ ಪದ್ಯರೂಪದ ಸ್ಮರಣಗೀತೆ. 1945ರಲ್ಲಿ ಓಸ್ಟಿಯಾದಲ್ಲಿರುವ ಪ್ರಸ್ತುತ ಸಂತ ಔರೆಯಾ ದೇವಾಲಯಕ್ಕೆ ಹೊಂದಿಕೊಂಡಿರುವ ಆವರಣದಲ್ಲಿ, ಸಮಾಧಿಶಿಲೆಯ ಮೇಲೆ ಅದರ ಒಂದು ತುಣುಕು ಪತ್ತೆಯಾಯಿತು. ಮಧ್ಯಯುಗದ ಸಮಾಧಿಯಲ್ಲಿ ಈ ಶಿಲೆಯನ್ನು ಮರುಬಳಕೆ ಮಾಡಲಾಗಿರಬಹುದೆಂದು ತಿಳಿದುಬಂದಿದೆ. ಈ ಪತ್ತೆಯು ಸಂತೆಯ ಸಮಾಧಿಯ ಮೂಲ ಸ್ಥಳವು ಇದೇ ಸ್ಮಶಾನ ಪ್ರದೇಶದಲ್ಲಿತ್ತು ಎಂಬುದನ್ನು ದೃಢಪಡಿಸಿತು.

ಅವಶೇಷಗಳ ಪತ್ತೆ

ಸಂತ ಮೋನಿಕಾರ ಸಮಾಧಿಗೆ ಭಿನ್ನವಾಗಿ, ಅವರ ಪವಿತ್ರ ಅವಶೇಷಗಳ ಇತಿಹಾಸ ಸಂಪೂರ್ಣವಾಗಿ ಬೇರೆಯಾಗಿದೆ. ಸಮಾಧಿಯ ಸ್ಥಳ ಮರೆತುಹೋಗಿದ್ದ ಸಂದರ್ಭದಲ್ಲಿ, 12ನೇ ಶತಮಾನದಲ್ಲಿ ಅರ್ರುವಾಯ್ಸ್‌ನ ಒಬ್ಬ ಧರ್ಮಗುರು ಅವಶೇಷಗಳನ್ನು ಕದ್ದು ಫ್ರಾನ್ಸ್‌ಗೆ ಕೊಂಡೊಯ್ದನೆಂದು ಹೇಳಲಾಗುತ್ತಿದ್ದ ಸಂಶಯಾಸ್ಪದ ಸ್ಥಳಾಂತರದ ಕಥೆಯನ್ನೂ ತಳ್ಳಿಹಾಕಲಾಯಿತು.

ನಿಜವಾದ ಐತಿಹಾಸಿಕ ತಿರುವು 1430ರ ಏಪ್ರಿಲ್‌ನಲ್ಲಿ ಸಂಭವಿಸಿತು. ಸಂತ ಆಗಸ್ಟೀನ್ ಅವರ ಹರ್ಮಿಟ್ ಧರ್ಮಸಭೆಯ ಧರ್ಮಗುರುಗಳು, ಮಾನವತಾವಾದಿ ಆಂದ್ರೆಯಾ ಬಿಗ್ಲಿಯಾ ಅವರ ಬೆಂಬಲ ಮತ್ತು ಆಗಸ್ಟೀನಿಯನ್ ಆಗಿದ್ದ ಜಗದ್ಗುರು ಅವರ ದೇವಾಲಯ ಪರಿಚಾರಕರಾದ ಪಿಯೆತ್ರೊ ಅಸ್ಸಾಲ್ಹಿತ್ ಅವರ ಸಹಾಯದಿಂದ, ಜೆನಝಾನೊದ ಪೂಜ್ಯ ಜಗದ್ಗುರು ಐದನೇ ಮಾರ್ಟಿನ್  ಅವರ ಅನುಮತಿಯನ್ನು ಪಡೆದು ಸಂತೆಯ ಅವಶೇಷಗಳನ್ನು ಹುಡುಕಿ ಪತ್ತೆಹಚ್ಚಲು ಮುಂದಾದರು. ಹೀಗೆ ಧರ್ಮಗುರುಗಳ ಒಂದು ತಂಡ ಓಸ್ಟಿಯಾಗೆ ತೆರಳಿತು. ಸ್ಥಳೀಯ ನಿವಾಸಿಯೊಬ್ಬರ ಮಾರ್ಗದರ್ಶನದ ಸಹಾಯದಿಂದ ಸಂತ ಔರೆಯಾ ದೇವಾಲಯದ ಬಲಿಪೀಠದ ಕೆಳಗೆ ಅವಶೇಷಗಳನ್ನು ಪತ್ತೆಹಚ್ಚಲಾಯಿತು. ಅವುಗಳನ್ನು ರೋಮ್‌ಗೆ ಸ್ಥಳಾಂತರಿಸುವಂತೆ ಧರ್ಮಸಭೆ ಮನವಿ ಮಾಡಿತು. 1430ರ ಗರಿಗಳ ಭಾನುವಾರದಂದು ಮೋನಿಕಾರ ಅವಶೇಷಗಳು ಅದ್ಭುತ ಘಟನೆಗಳು ಮತ್ತು ಅಪಾರ ಭಕ್ತಿಯ ಅಭಿವ್ಯಕ್ತಿಗಳ ನಡುವೆ ರೋಮ್‌ಗೆ ತಲುಪಿದವು.

ಮೊದಲಿಗೆ ಅವುಗಳನ್ನು ಕ್ಯಾಂಪೊ ಮಾರ್ಜಿಯೊ ಪ್ರದೇಶದಲ್ಲಿದ್ದ ಆಗಸ್ಟೀನಿಯನ್ನರ ಮೂಲ ನೆಲೆಯಾದ ಸಂತ ತ್ರಿಫೋನ್ ದೇವಾಲಯದಲ್ಲಿ ಇರಿಸಲಾಯಿತು. ಅಲ್ಲಿ ಅವು ಇಪ್ಪತ್ತು ವರ್ಷಗಳ ಕಾಲ ಉಳಿದವು. ಸಂತ ಆಗಸ್ಟೀನ್ ಅವರ ತಾಯಿ ಮೋನಿಕಾರಿಂದ ಪ್ರೇರಣೆ ಪಡೆದ ಮೊದಲ ಆಗಸ್ಟೀನಿಯನ್ ತೃತೀಯ ಸದಸ್ಯರಾದ ಧಾರ್ಮಿಕ ಮಹಿಳೆಯರ ಭಕ್ತಿಯಿಂದ ಸಮರ್ಪಿಸಲಾದ ಬೆಳ್ಳಿಯ ದೀಪಗಳ ಬೆಳಕಿನಲ್ಲಿ ಅವುಗಳನ್ನು ಗೌರವದಿಂದ ಕಾಪಾಡಲಾಯಿತು.

ರೋಮ್‌ನ ಸಂತ ಆಗಸ್ಟೀನ್ ಬಸಿಲಿಕಾಕ್ಕೆ ಸ್ಥಳಾಂತರ

1455ರಲ್ಲಿ ಪೂಜ್ಯ ಜಗದ್ಗುರುಗಳಾದ ಮೂರನೇ ಕ್ಯಾಲಿಕ್ಸ್ಟಸ್ ಅವರ ಕಾಲದಲ್ಲಿ ಅವಶೇಷಗಳಿಗೆ ಅಂತಿಮ ವಿಶ್ರಾಂತಿ ಸ್ಥಳ ದೊರೆಯಿತು. ಅವುಗಳನ್ನು ಭವ್ಯವಾಗಿ ಸಂತ ಆಗಸ್ಟೀನ್ ಬಸಿಲಿಕಾಕ್ಕೆ ಸ್ಥಳಾಂತರಿಸಲಾಯಿತು. ಮಾಫಿಯೋ ವೆಜಿಯೋ ಈ ಯೋಜನೆಗೆ ಮುಂದಾಳತ್ವ ವಹಿಸಿದರು. ಅವರು ಪ್ರಾರ್ಥನಾಲಯ ಮತ್ತು ಇಸಾಯಾ ದಾ ಪಿಸಾ ಶಿಲ್ಪಗೊಳಿಸಿದ ಸಮಾಧಿ ಸ್ಮಾರಕಕ್ಕೆ ಹಣಕಾಸು ಒದಗಿಸಿದರು.

ಮೂಲ ಸ್ಮಾರಕವು ಅಮೂಲ್ಯವಾದ ಚಿನ್ನದ ಅಲಂಕಾರ ಹೊಂದಿದ್ದ ಉಬ್ಬುಶಿಲ್ಪಗಳಿಂದ ಅಲಂಕರಿಸಲಾದ ಅಮೃತಶಿಲೆಯ ಶವಪೆಟ್ಟಿಗೆಯನ್ನು ಒಳಗೊಂಡಿತ್ತು. ಅವುಗಳಲ್ಲಿ ಅವಶೇಷಗಳ ಸ್ಥಳಾಂತರದ ದೃಶ್ಯಗಳನ್ನು ಚಿತ್ರಿಸಲಾಗಿತ್ತು. ಅದರ ಮೇಲ್ಭಾಗದಲ್ಲಿ ಸಂತೆಯ ಮಲಗಿರುವ ಭಂಗಿಯ ಸುಂದರ ಪ್ರತಿಮೆಯನ್ನು ಇರಿಸಲಾಗಿತ್ತು. ಈ ಪ್ರತಿಮೆಯನ್ನು ಇಂದಿಗೂ ಪ್ರಾರ್ಥನಾಲಯದ ಎಡಗಡೆಯ ಗೋಡೆಯ ಮೇಲೆ ಕಾಣಬಹುದು.

ಈ ಬಲಿಪೀಠದ ಸುತ್ತ ಆಳವಾದ ಭಕ್ತಿ ಬೆಳೆಯಿತು. ವಿಶೇಷವಾಗಿ “ಸಿಂಚಾರಾತೆ” ಎಂದು ಕರೆಯಲ್ಪಟ್ಟ ಬೆಲ್ಟ್ ಸಹೋದರತ್ವದ ಸದಸ್ಯರು—ಹರ್ಮಿಟ್ ಧರ್ಮಸಭೆಯೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಿದ್ದ ಸಾಮಾನ್ಯ ಪುರುಷರು ಮತ್ತು ಮಹಿಳೆಯರು—ಇದನ್ನು ಬೆಳೆಸಿದರು. ಈ ಏಕತೆಯ ಸಂಕೇತವಾಗಿ ಅವರು ಆಗಸ್ಟೀನಿಯನ್ ಧರ್ಮಗುರುಗಳು ಮತ್ತು ಸನ್ಯಾಸಿನಿಯರ ವಸ್ತ್ರದ ಭಾಗವಾಗಿರುವ ಉದ್ದನೆಯ ಚರ್ಮದ ಪಟ್ಟಿಯನ್ನು ಧರಿಸುತ್ತಿದ್ದರು.

ಅವರು ಅಮೂಲ್ಯ ರತ್ನಗಳಿಂದ ಅಲಂಕರಿಸಲಾದ ಅದ್ಭುತ ಬೆಳ್ಳಿಯ ಅವಶೇಷಪಾತ್ರೆಯ ತಲೆಯನ್ನು ಸಮರ್ಪಿಸಿದರು. ಆದರೆ ನೆಪೋಲಿಯನ್ ಕಾಲದ ವಶಪಡಿಸಿಕೊಳ್ಳುವಿಕೆಯ ಸಂದರ್ಭದಲ್ಲಿ ಅದು ದುರದೃಷ್ಟವಶಾತ್ ಕಳೆದುಹೋಯಿತು.

ಪಾರ್ಥಿವ ಅವಶೇಷಗಳ ಪರಿಶೀಲನೆ

1758ರಿಂದ 1760ರ ನಡುವೆ ಸಂತ ಆಗಸ್ಟೀನ್ ಬಸಿಲಿಕಾದ ಒಳಭಾಗದಲ್ಲಿ ಲೂಯಿಜಿ ವಾನ್‌ವಿಟೆಲ್ಲಿ ಅವರ ನಿರ್ದೇಶನದಲ್ಲಿ ದೊಡ್ಡ ಪ್ರಮಾಣದ ಪುನರ್‌ನಿರ್ಮಾಣ ಕಾರ್ಯ ನಡೆಯಿತು. ಈ ಕಾರ್ಯಕ್ಕಾಗಿ 15ನೇ ಶತಮಾನದ ಶವಪೆಟ್ಟಿಗೆಯನ್ನು ತೆರವುಗೊಳಿಸಿ, ಮೋನಿಕಾರ ದೇಹವನ್ನು ಹೊಸ ಬಲಿಪೀಠದ ಕೆಳಗೆ ಸ್ಥಳಾಂತರಿಸಬೇಕಾಯಿತು. ಈ ಸಂದರ್ಭದಲ್ಲಿ, 1760ರ ಆಗಸ್ಟ್ 1ರಂದು ಅವಶೇಷಗಳ ಕುರಿತು ಅಧಿಕೃತ ಮತ್ತು ದಾಖಲಿಸಲ್ಪಟ್ಟ ನೋಟರಿ ಪರಿಶೀಲನೆ ನಡೆಯಿತು. ಪ್ರೇಷಿತ ಪ್ರತಿನಿಧಿ ಪ್ರಧಾನ ಗುರು ಆಂಟೋನಿಯೊ ಮರಿಯಾ ಎರ್ಬಾ ಓಡೆಸ್ಕಾಲ್ಕಿ ಮತ್ತು ಪವಿತ್ರ ಅವಶೇಷಗಳ ಸಂರಕ್ಷಕರಾದ ಡಾನ್ ಆಗಸ್ಟಿನೊ ಒನೊರಾಂತೆ ಉಪಸ್ಥಿತರಿದ್ದರು. ತಯಾರಿಸಲಾದ ವರದಿಯಲ್ಲಿ ನಡೆದ ಕಾರ್ಯಾಚರಣೆಯ ಪ್ರತಿಯೊಂದು ವಿವರವನ್ನು ದಾಖಲಿಸಲಾಗಿತ್ತು.

ಪ್ರಾಚೀನ ಆಕ್ರೋಟ್ ಮರದ ಶವಪೆಟ್ಟಿಗೆಯ ಮುದ್ರೆಯನ್ನು ತೆರೆಯಲಾದಾಗ, ಅದರೊಳಗೆ ಎರಡು ಪ್ರತ್ಯೇಕ ಪದರಗಳಿರುವುದನ್ನು ಅಲ್ಲಿದ್ದವರು ಗಮನಿಸಿದರು. ಮೊದಲ ಪದರದಲ್ಲಿ ಹಲವು ಪವಿತ್ರ ದೇಹಗಳ ಎಲುಬುಗಳು ಕಂಡುಬಂದವು. ಆದರೆ ಶವಪೆಟ್ಟಿಗೆಯ ತಳಭಾಗವನ್ನು ತಲುಪಿದಾಗ, ಬೂದಿಯಿಂದ ಆವೃತವಾಗಿದ್ದ ಮತ್ತು ವೈಡೂರ್ಯದ ಪಟ್ಟಿಗಳಿಂದ ಅಲಂಕರಿಸಲಾದ ಅಮೂಲ್ಯ ಬಟ್ಟೆಯ ಕೆಳಗೆ ಎರಡನೇ ಪದರ ಕಾಣಿಸಿಕೊಂಡಿತು.

ಅಲ್ಲಿ ಚತುರ್ಭುಜ ಫಲಕವೊಂದರ ಮತ್ತು ರೋಮನ್ ಹಾಗೂ ಗೋಥಿಕ್ ಲಿಪಿಯಲ್ಲಿ ಮೋನಿಕಾ ಎಂಬ ಹೆಸರು ಕೆತ್ತಲಾಗಿದ್ದ ಸೀಸದ ಪದಕವೊಂದರ ಪಕ್ಕದಲ್ಲಿ ಸಂತೆಯ ಅವಶೇಷಗಳು ವಿಶ್ರಾಂತಿಯಾಗಿದ್ದವು.

ಸಂತ ಮೋನಿಕಾರ ಪ್ರಾರ್ಥನಾಲಯ

ಅಮೂಲ್ಯ ಪವಿತ್ರ ಅವಶೇಷಗಳನ್ನು ಪುನಃ ಜೋಡಿಸಿ, ಬಟ್ಟೆಯಲ್ಲಿ ಸುತ್ತಿ, ಪಿತ್ತಳದಿಂದ ಒಳಭಾಗವನ್ನು ಹೊದಿಸಿದ ಹೊಸ ಸೀಸದ ಪೆಟ್ಟಿಗೆಯಲ್ಲಿ ಇರಿಸಲಾಯಿತು. ಅದರ ಮೇಲೆ ಸ್ಮರಣಾರ್ಥ ಶಾಸನವೊಂದನ್ನು ಬೆಸುಗೆ ಹಾಕಲಾಗಿತ್ತು. ಪ್ರಧಾನ ಗುರು ಓಡೆಸ್ಕಾಲ್ಕಿ ಅದನ್ನು ಮೇಣದ ಮುದ್ರೆಯಿಂದ ಮುಚ್ಚಿದರು. ಧರ್ಮಗುರುಗಳು ಮತ್ತು ಪ್ರಧಾನ ಗುರು ಸಂತರ ಹಬ್ಬದ ದಿನದ ಧಾರ್ಮಿಕ ಸ್ತೋತ್ರಗಳನ್ನು ಹಾಡುತ್ತಾ, ಆ ಪೆಟ್ಟಿಗೆಯನ್ನು ಸಂತ ಮೋನಿಕಾರ ಪ್ರಾರ್ಥನಾಲಯದ ಹೊಸ ಬಲಿಪೀಠಕ್ಕೆ ಕೊಂಡೊಯ್ದರು. ಪೆಟ್ಟಿಗೆಯನ್ನು ಹಸಿರು ಪಾಟಿನಾದಿಂದ(ಹಳೆಯ ಕಂಚಿನ ಪಾತ್ರೆಗಳಲ್ಲಿ ಕಾಣಿಸುವ ಕಿಲುಬು) ಅಲಂಕರಿಸಲಾದ ಪೆಪೆರಿನೊ ಕಲ್ಲಿನ ಪವಿತ್ರ ಅವಶೇಷಪಾತ್ರೆಯಲ್ಲಿ ಇರಿಸಲಾಯಿತು. ಅದರ ಮೇಲೆ ಅಮೃತಶಿಲೆಯ ಮುಚ್ಚಳವಿದ್ದು, ಅದರಲ್ಲಿ: “Hic iacet corpus s. matris Monicae” — “ಇಲ್ಲಿ ಪವಿತ್ರ ತಾಯಿ ಮೋನಿಕಾರ ದೇಹವು ವಿಶ್ರಮಿಸುತ್ತಿದೆ.” ಎಂದು ಬರೆಯಲಾಗಿತ್ತು.

ಬಲಿಪೀಠದ ಮೇಲ್ಭಾಗದಲ್ಲಿ ಫಯೆನ್ಜಾದ ಕಲಾವಿದ ಜಿಯೋವಾನಿ ಗೊಟ್ಟಾರ್ಡಿ ರಚಿಸಿದ ಹೊಸ ಚಿತ್ರವನ್ನು ಇರಿಸಲಾಯಿತು. ಅದರಲ್ಲಿ ಹರ್ಮಿಟ್ ಧರ್ಮಸಭೆಯ ಸ್ವರ್ಗೀಯ ಆಶ್ರಯದಾತೆಯಾದ ಮಡೊನ್ನಾ ದೆಲ್ಲಾ ಸಿಂಟುರಾ ಅಥವಾ ಮಡೊನ್ನಾ ದೆಲ್ಲಾ ಕನ್ಸೊಲಾಜಿಯೋನೆ ಅವರು ಬಾಲ ಯೇಸುವಿನೊಂದಿಗೆ ಸಿಂಹಾಸನಾರೂಢರಾಗಿದ್ದು, ಅವರ ಬಲಭಾಗದಲ್ಲಿ ಆಗಸ್ಟೀನ್ ಮತ್ತು ಎಡಭಾಗದಲ್ಲಿ ಮೋನಿಕಾ ಅವರಿಗೆ ಪವಿತ್ರ ಪಟ್ಟಿಯನ್ನು ನೀಡುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ.

ಸಂತ ಆಗಸ್ಟೀನ್ ಧರ್ಮಸಭೆಯ ‘ತಾಯಿ’

ಅವಶೇಷಗಳನ್ನು ರೋಮ್‌ಗೆ ಸ್ಥಳಾಂತರಿಸುವುದು ಕೇವಲ ಆಗಸ್ಟೀನಿಯನ್ನರ ಪುತ್ರಭಕ್ತಿಯ ಅಭಿವ್ಯಕ್ತಿಯಾಗಿರಲಿಲ್ಲ. ತಮ್ಮ ಆಧ್ಯಾತ್ಮಿಕ ತಂದೆಯ ತಾಯಿಯ ಅವಶೇಷಗಳನ್ನು ತಮ್ಮ ಆರೈಕೆಗೆ ತೆಗೆದುಕೊಳ್ಳುವ ಮೂಲಕ, ಆಗಸ್ಟೀನಿಯನ್ ಧರ್ಮಸಭೆಯು ಹಿಪ್ಪೋದ ಮಹಾನ್ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿ ಮತ್ತು ‘ಮಗ’ ಎಂದು ಇಡೀ ಜಗತ್ತಿನ ಮುಂದೆ ತನ್ನನ್ನು ಘೋಷಿಸಿಕೊಳ್ಳಲು ಸಾಧ್ಯವಾಯಿತು.

ಮೋನಿಕಾರನ್ನು ಧರ್ಮಸಭೆಯ “ಪವಿತ್ರ ತಾಯಿ”ಯಾಗಿ ಗೌರವಿಸಲಾಯಿತು. ಅವರು ತೀವ್ರವಾದ ಪಶುಪಾಲನಾ ಮತ್ತು ಭಕ್ತಿಪರ ಚಟುವಟಿಕೆಗಳ ಕೇಂದ್ರಬಿಂದುವಾದರು. ವಿಶೇಷವಾಗಿ ಅವರ ಗೌರವವನ್ನು ಜೀವಂತವಾಗಿಟ್ಟುಕೊಂಡ ಮಹಿಳೆಯರಿಗೆ ಅವರು ಸ್ತ್ರೀ ಪವಿತ್ರತೆಯ ಆದರ್ಶ ಮಾದರಿಯಾದರು.

ಸಂತ ಆಗಸ್ಟೀನ್ ಧರ್ಮಸಭೆಯ ಅಂದಿನ ಪ್ರಧಾನಾಧಿಕಾರಿಯಾಗಿದ್ದ ವಂ.ಗುರು ರಾಬರ್ಟ್ ಪ್ರೆವೋಸ್ಟ್ ಅವರು 2005ರ ಆಗಸ್ಟ್ 27ರಂದು ಕೋಶಿಚೆಯಲ್ಲಿ ನೀಡಿದ ಪ್ರವಚನದಲ್ಲಿ ನೆನಪಿಸಿಕೊಂಡಂತೆ: “ಸಂತ ಮೋನಿಕಾ ತಮ್ಮ ಹೃದಯವನ್ನು ತಮ್ಮ ಮಗ ಆಗಸ್ಟೀನ್‌ಗೆ ಅರ್ಪಿಸಿದರು. ತಮ್ಮ ಮಾದರಿ ಮತ್ತು ಪ್ರಾರ್ಥನೆಯ ಮೂಲಕ ಆಗಸ್ಟೀನ್ ಕಥೋಲಿಕ್ ನಂಬಿಕೆಗೆ ಪರಿವರ್ತಿತರಾಗುವಲ್ಲಿ ಅವರು ಅತ್ಯಂತ ಮಹತ್ವದ ಪಾತ್ರ ವಹಿಸಿದರು.”ಇಂದು ರೋಮ್‌ನ ಬಸಿಲಿಕಾದಲ್ಲಿರುವ ಅವರ ಸಮಾಧಿಯ ಮುಂದೆ ನಿಂತು, ತಮ್ಮ ಹೃದಯಗಳನ್ನೂ ಕಾಣಿಕೆಯಾಗಿ ಅರ್ಪಿಸಲು ಆಹ್ವಾನಿಸಲ್ಪಡುವ ವಿಶ್ವಾಸಿಗಳು, ಆರಂಭಿಕ ಧರ್ಮಸಭೆಯ ತಾಯಿಯಾಗಿ ಮಾತ್ರವಲ್ಲದೆ, ಶತಮಾನಗಳಿಂದ ತನ್ನ ಗುರುತಿನ ಮೂಲವೆಂದು ಗುರುತಿಸಿಕೊಂಡಿರುವ ಆಧ್ಯಾತ್ಮಿಕ ಕುಟುಂಬದ ಜೀವಂತ ಹೃದಯವಾಗಿಯೂ ಸಂತ ಮೋನಿಕಾರನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಅವರ ಮೂಲಕ, ಮಹಾನ್  ಸಂತ ಆಗಸ್ಟೀನ್ ಅವರಲ್ಲಿ ಕೃಪೆಯ ಮೂಲವನ್ನು ಕಾಣುತ್ತಾರೆ; ಏಕೆಂದರೆ ಸಂತ ಮೋನಿಕಾರ ಪ್ರಾರ್ಥನೆಗಳು ಮತ್ತು ಕಣ್ಣೀರಿನ ಮೂಲಕವೇ ಆಗಸ್ಟೀನ್ ಸ್ವತಃ ಪರಿವರ್ತನೆ ಹೊಂದಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

27 ಆಗಸ್ಟ್ 2026, 20:03