ರೆಜೀನಾ ಚೇಲಿಯಲ್ಲಿ ಪೋಪ್: ಆತ್ಮರು ಸಂಧಾನದ ಹಾದಿಗಳನ್ನು ತೆರೆಯಲಿ
ವರದಿ: ಡೆವಿನ್ ವಾಟ್ಕಿನ್ಸ್
ಪವಿತ್ರಾತ್ಮರ ಹಬ್ಬದಂದು ಪೋಪ್ ಹದಿನಾಲ್ಕನೇ ಲಿಯೋ ಅವರು ರೆಜೀನಾ ಚೇಲಿ (ಸ್ವರ್ಗದ ರಾಣಿ) ಪ್ರಾರ್ಥನೆಯನ್ನು ಮುನ್ನಡೆಸುತ್ತಾ ಯುದ್ಧ ಜನರನ್ನು ವಿಭಜಿಸುವ ಪ್ರದೇಶ ಹಾಗೂ ಸಂದರ್ಭಗಳಲ್ಲಿ ಪವಿತ್ರಾತ್ಮರು ಅಲ್ಲಿ ಸಂಧಾನವನ್ನು ಅನುಗೊಳಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಪಾಸ್ಖ ಕಾಲದ ಈ ಪ್ರಾರ್ಥನೆಯನ್ನು ಪಠಿಸುವುದಕ್ಕೂ ಮುಂಚಿತವಾಗಿ ಪೋಪ್ ಹದಿನಾಲ್ಕನೇ ಲಿಯೋ ಅವರು ಪವಿತ್ರಾತ್ಮರು ಯುದ್ಧಗ್ರಸ್ಥ ಈ ಜಗತ್ತಿಗೆ ಹಾಗೂ ನಮ್ಮ ಹೃದಯಗಳಿಗೆ ಶಾಂತಿಯನ್ನು ತರುವವರಾಗಿದ್ದಾರೆ ಎಂದು ಹೇಳಿದ್ದಾರೆ. ನಾವು ಪವಿತ್ರಾತ್ಮರಿಂದ ಶಾಂತಿಯನ್ನು ಬೇಡೋಣ. "ನಮ್ಮ ಹೃದಯಗಳಲ್ಲಿ ಶಾಂತಿ ಇರಲಿ; ಏಕೆಂದರೆ, ನಮ್ಮಲ್ಲಿ ಶಾಂತಿ ಇದ್ದಾಗ ಮಾತ್ರ ನಾವು ನಮ್ಮ ಕುಟುಂಬಗಳಲ್ಲಿ ಹಾಗೂ ಸಮುದಾಯಗಳಲ್ಲಿ ಶಾಂತಿಯನ್ನು ಪಸರಿಸಲು ಸಾಧ್ಯ" ಎಂದು ಪೋಪ್ ಲಿಯೋ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಯುದ್ಧಗಳು ಇರುವ ಕಡೆ ಪುನರುತ್ಥಾನ ಕ್ರಿಸ್ತರ ಆತ್ಮವು ಸಂಧಾನವನ್ನು ಅನುಗೊಳಿಸಬಲ್ಲದು ಎಂದು ಹೇಳಿದ್ದಾರೆ.
"ಕ್ರಿಸ್ತರು ಯುದ್ಧಗ್ರಸ್ಥ ಪ್ರದೇಶಗಳನ್ನು ಪರಿವರ್ತಿಸಿ, ಸಂಧಾನದ ಹಾದಿಯಲ್ಲಿ ನಡೆಯಲು ಅವರು ಸಂವಾದಕ್ಕೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಧರ್ಮಸಭೆ ಹಾಗೂ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಮಾಧ್ಯಮದ ಮೂಲಕ ವೀಕ್ಷಿಸುತ್ತಿರುವ ಎಲ್ಲರಿಗೂ ಪೋಪ್ ಲಿಯೋ ಅವರು ಧನ್ಯವಾದಗಳನ್ನು ತಿಳಿಸಿದರು.
ಅಂತಿಮವಾಗಿ, ಇದೇ ಸಂದರ್ಭದಲ್ಲಿ ಪೋಪ್ ಲಿಯೋ ಅವರು ಇಟಲಿ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷವನ್ನು ಮುಗಿಸಿ, ಬೇಸಿಗೆ ರಜೆಗೆ ತೆರಳುತ್ತಿರುವ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.