ತ್ರಿಕಾಲ ಪ್ರಾರ್ಥನೆ: ದೇವರು ಲೋಕವನ್ನು ದೂರದಿಂದ ನೋಡುವುದಿಲ್ಲ
ವ್ಯಾಟಿಕನ್ ವರದಿ
ಪ್ರಕಾಶಮಾನವಾದ ಚಳಿಗಾಲದ ಸೂರ್ಯನ ಬೆಳಕಿನಲ್ಲಿ, ಪ್ರಭುವಿನ ದೀಕ್ಷಾಸ್ನಾನದ ಹಬ್ಬವನ್ನು ಆಚರಿಸಲು ಭಾನುವಾರ ಸಂತ ಪೇತ್ರರ ಚೌಕದಲ್ಲಿ ಸೇರಿದ್ದ ಸಾವಿರಾರು ವಿಶ್ವಾಸಿಗಳನ್ನು ಜಗದ್ಗುರು ಲಿಯೋರವರು ಆತ್ಮೀಯವಾಗಿ ಅಭಿನಂದಿಸಿದರು. ದೈವದಶ೯ನ ಹಬ್ಬದ ನಂತರದ ಭಾನುವಾರ ಆಚರಿಸಲ್ಪಡುವ ಈ ಹಬ್ಬವು ಕ್ರಿಸ್ಮಸ್ ಕಾಲದ ಅಂತ್ಯವನ್ನು ಸೂಚಿಸಿ, ಸಾಮಾನ್ಯ ಕಾಲದ ಆರಂಭ ಹಾಗೂ ಹೊಸ ಆರಾಧನಾ ವಿಧಿಯ ವರ್ಷದ ಆರಂಭವನ್ನು ಸೂಚಿಸುತ್ತದೆ.
ಪ್ರೇಷಿತರ ಅರಮನೆಯ ಕಿಟಕಿಯಿಂದ ನೀಡಿದ ತಮ್ಮ ಸಂದೇಶದಲ್ಲಿ, ಇದು ನಾವು ಒಟ್ಟಾಗಿ ಪ್ರಭುವನ್ನು ಅನುಸರಿಸಲು, ಅವರ ವಾಕ್ಯವನ್ನು ಆಲಿಸಲು ಮತ್ತು ನಮ್ಮ ನೆರೆಯವರ ಕಡೆಗೆ ಅವರ ಪ್ರೀತಿಯ ಕೃತ್ಯಗಳನ್ನು ಅನುಕರಿಸಲು ಆಹ್ವಾನಿಸುವ ಕಾಲವೆಂದು ಜಗದ್ಗುರುಗಳು ಹೇಳಿದರು. ಜೋರ್ಧಾನ್ ನದಿಯಲ್ಲಿ ಯೇಸುವಿನ ದೀಕ್ಷಾಸ್ನಾನವು ನಮ್ಮ ಪ್ರತಿಯೊಬ್ಬರಿಗೂ ಸಂಸ್ಕಾರದ ವಾಗ್ದಾನಗಳನ್ನು ನವೀಕರಿಸಲು ಕರೆ ನೀಡುತ್ತದೆ. ಇದು ನಮ್ಮನ್ನು ಕ್ರೈಸ್ತರನ್ನಾಗಿ ಮಾಡಿ, ಪಾಪದಿಂದ ಮುಕ್ತಗೊಳಿಸಿ, ಜೀವ ನೀಡುವ ಆತ್ಮದ ಶಕ್ತಿಯಿಂದ ದೇವರ ಮಕ್ಕಳನ್ನಾಗಿ ರೂಪಿಸುತ್ತದೆ ಎಂದು ಅವರು ತಿಳಿಸಿದರು.
ಮತ್ತಾಯನ ಸುವಾರ್ತೆಯನ್ನು ಉಲ್ಲೇಖಿಸಿ, ಈ ಘಟನೆಯಲ್ಲಿ ಸಂಪೂರ್ಣ ಪರಮ ತ್ರಿತ್ವಇತಿಹಾಸದಲ್ಲಿ ಪ್ರಕಟವಾಗುತ್ತದೆ ಎಂದು ಜಗದ್ಗರುಗಳು ವಿವರಿಸಿದರು. ಪುತ್ರನು ನೀರಿನಲ್ಲಿ ಇಳಿದಂತೆ, ಪವಿತ್ರಾತ್ಮನು ಅವನ ಮೇಲೆ ಇಳಿದು, ಅವನ ಮೂಲಕ ನಮಗೆ ರಕ್ಷಣೆಯ ಶಕ್ತಿಯಾಗಿ ದಾನವಾಗುತ್ತಾರೆ ಎಂದು ಹೇಳಿದರು.
ದೇವರು ಲೋಕವನ್ನು ದೂರದಿಂದ ಮಾತ್ರ ನೋಡುವುದಿಲ್ಲ ಎಂದು ಜಗದ್ಗರುಗಳು ಒತ್ತಿಹೇಳುತ್ತಾ, ನಮ್ಮ ಜೀವನ, ಗಾಯಗಳು ಮತ್ತು ಆಶೆಗಳನ್ನು ಸ್ಪರ್ಶಿಸುವಂತೆ ದೇವರು ನಮ್ಮ ನಡುವೆ ವಾಸಿಸುತ್ತಾರೆ ಎಂದರು. ಪಾಪಿಗಳಂತೆ ಯೇಸು ದೀಕ್ಷಾಸ್ನಾನ ಸ್ವೀಕರಿಸಿದುದು ದೇವರ ಅನಂತ ಕರುಣೆಯನ್ನು ಬಹಿರಂಗಪಡಿಸುವುದಕ್ಕಾಗಿ ಎಂದು ವಿವರಿಸಿ, ದೀಕ್ಷಾಸ್ನಾನವು ನಮ್ಮನ್ನು ದೇವಜನರಾಗಿ ರೂಪಿಸಿದ ಧರ್ಮಸಭೆಯ ಜೀವನಕ್ಕೆ ಪರಿಚಯಿಸುತ್ತದೆ ಎಂದರು.
ಕೊನೆಯಲ್ಲಿ, ಜಗದ್ಗುರುಗಳು ವಿಶ್ವಾಸಿಗಳನ್ನು ತಮ್ಮ ದೀಕ್ಷಾಸ್ನಾನ ಎಂಬ ಮಹಾನ್ ವರವನ್ನು ನೆನಪಿಸಿಕೊಳ್ಳುವಂತೆ ಮತ್ತು ಅದಕ್ಕೆ ಸಂತೋಷ ಹಾಗೂ ನೈಜತೆಯೊಂದಿಗೆ ಸಾಕ್ಷಿಯಾಗುವಂತೆ ಪ್ರೋತ್ಸಾಹಿಸಿದರು. ಅದೇ ದಿನ ಸಿಸ್ಟಿನ್ ಚಾಪೆಲ್‌ನಲ್ಲಿ 20 ನವಜಾತ ಶಿಶುಗಳಿಗೆ ದೀಕ್ಷಾಸ್ನಾನ ನೀಡಿದುದನ್ನು ಸ್ಮರಿಸಿ, ಈ ಸಂಸ್ಕಾರವು ನಮ್ಮ ಜೀವನಪೂರ್ತಿ ಜೊತೆಯಾಗಿ ನಿಲ್ಲುವ ಪವಿತ್ರ ಸಂಕೇತವಾಗಿದ್ದು—ಅಂಧಕಾರದಲ್ಲಿ ಬೆಳಕು, ಸಂಘರ್ಷದಲ್ಲಿ ಸಮಾಧಾನ ಮತ್ತು ಮರಣದ ಹೊತ್ತಿನಲ್ಲಿ ಸ್ವರ್ಗದ ದ್ವಾರವಾಗುತ್ತದೆ ಎಂದು ಜಗದ್ಗರು ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.