ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಧರ್ಮಸಭೆ ಎಂದಿಗೂ ಎಲ್ಲರನ್ನೂ ಒಳಗೊಳ್ಳುವ ದೀನತೆಯ ಶಾಲೆಯಾಗಿರಬೇಕು
ವರದಿ: ವ್ಯಾಟಿಕನ್ ನ್ಯೂಸ್
ಇಂದು ಪೋಪ್ ಲಿಯೋ XIV ಅವರು ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಧರ್ಮಸಭೆ ಎಂದಿಗೂ ಎಲ್ಲರನ್ನೂ ಒಳಗೊಳ್ಳುವ ದೀನತೆಯ ಶಾಲೆಯಾಗಿರಬೇಕು ಎಂದು ಪ್ರಾರ್ಥಿಸಿದ್ದಾರೆ. ಎಲ್ಲಾ ರೀತಿಯ ವೈರತ್ವವನ್ನು ಬದಿಗೊತ್ತಿ, ಕ್ರಿಸ್ತರ ಮಾದರಿಯನ್ನು ಅನುಕರಿಸುತ್ತಾ, ಎಲ್ಲರನ್ನೂ ಸಹ ಧರ್ಮಸಭೆ ಸ್ವಾಗತಿಸಬೇಕು ಎಂದು ಹೇಳಿದ್ದಾರೆ.
ಇಂದಿನ ಶುಭಸಂದೇಶದ ಕುರಿತು ಮಾತನಾಡಿದ ಪೋಪ್, ದೀನತೆ ಎಂಬುದು ನಮ್ಮ ಬದುಕಿಗೆ ಎಷ್ಟು ಮುಖ್ಯವಾಗಿದೆ ಎಂಬ ಕುರಿತು ಮಾಹಿತಿಯನ್ನು ನೀಡಿದರು. ನಮ್ಮನ್ನೇ ನಾವು ತಗ್ಗಿಸಿಕೊಂಡಾಗ ದೇವರು ನಮ್ಮನ್ನು ಮೇಲಕ್ಕೆತ್ತುವರು ಎಂದು ಯೇಸು ಹೇಳಿದ ವಾಕ್ಯದ ಮೇಲೆ ಪೋಪ್ ಚಿಂತನೆಯನ್ನು ನಡೆಸಿದರು.
ಫರಿಸಾಯನ ಮನೆಗೆ ಕ್ರಿಸ್ತರು ಹೋದಾಗ ಅವರು ಒಬ್ಬ ಒಳ್ಳೆಯ ಅತಿಥಿಯಂತೆ ಹೋಗುತ್ತಾರೆ. ಅದೇ ರೀತಿ ಅವರಿಗೆ ದಕ್ಕಿದ ಆ ಅವಕಾಶವನ್ನು ಅವರು ಸಾಮತಿಯನ್ನು ಹೇಳಲು ಹಾಗೂ ಆ ಮೂಲಕ ಪ್ರಬೊಧನೆಯನ್ನು ನೀಡಲು ಬಳಸಿಕೊಳ್ಳುತ್ತಾರೆ ಎಂದು ಪೋಪ್ ಲಿಯೋ ಹೇಳಿದರು. ಸಾಮತಿಯನ್ನು ಹೇಳಿದ ನಂತರ ಮಾತನಾಡಿದ ಅವರು ಮದುವೆಯ ಅಥವಾ ಮತ್ಯಾವುದೋ ಕಾರ್ಯಕ್ರಮಗಳಲ್ಲಿ ನೀವೇ ಮೊದಲ ಸ್ಥಾನದಲ್ಲಿ ಕೂರಬೇಡಿ. ಏಕೆಂದರೆ ನಿಮಗಿಂತಲೂ ಯಾರಾದರೂ ಮುಖ್ಯವಾಗಿದ್ದರೆ ಆಗ ನೀವು ಅವರಿಗೆ ನಿಮ್ಮ ಸ್ಥಳವನ್ನು ಬಿಟ್ಟುಕೊಡಬೇಕಾದೀತು. ಆಗ ನಿಮಗೆ ಅವಮಾನವಾಗುತ್ತದೆ. ಅದೇ ನೀವು ಕೊನೆಯ ಸ್ಥಾನದಲ್ಲಿ ಕುಳಿತಾಗ ನಿಮ್ಮ ಸ್ನೇಹಿತ ಬಂದು ಎಲ್ಲರ ಮುಂದೆ ನಿಮ್ಮನ್ನು ಮೊದಲ ಸ್ಥಾನದಲ್ಲಿ ಕುಳ್ಳಿರಿಸಿದರೆ ನಿಮಗೆ ಗೌರವ ಸಿಗುತ್ತದೆ ಎಂದು ಯೇಸು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ "ಪ್ರತಿ ಬಲಿಪೂಜೆಯಲ್ಲಿ ಕ್ರಿಸ್ತರು ನಮ್ಮ ಅಥಿತಿಯಾಗುತ್ತಾರೆ. ಈ ಸಂದರ್ಭದಲ್ಲಿ ನಾವು ಅವರ ಮಾತಿಗೆ ಕಿವಿಗೊಡಬೇಕು" ಎಂದು ಹೇಳಿದರು. ಅವರ ವಾಕ್ಯದಂತೆ ನಾವು ದೀನತೆಯಿಂದ ಇರಬೇಕು. ಆಗ ಮಾತ್ರ ದೇವರು ನಮ್ಮನ್ನು ಮೇಲಕ್ಕೆತ್ತುತ್ತಾರೆ ಎಂದು ಪೋಪ್ ಹೇಳಿದರು.