ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ದೇವರ ವರದಾನಗಳನ್ನು ಬಳಸಿಕೊಂಡು ಹೊಸ ಜಗತ್ತನ್ನು ನಿರ್ಮಿಸೋಣ
ವರದಿ: ವ್ಯಾಟಿಕನ್ ನ್ಯೂಸ್
ಇಂದು ಪೋಪ್ ಲಿಯೋ ಅವರು ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡುತ್ತಾ, ಅಪ್ರಾಮಾಣಿಕ ಕೆಲಸಗಾರನ ಸಾಮತಿಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸುತ್ತಾರೆ. ಹೇಗೆ ನಾವು ದೇವರ ವರದಾನಗಳನ್ನು ಉಪಯೋಗಿಸುತ್ತಿದ್ದೇವೆ ಎಂಬುದರ ಕುರಿತು ಚಿಂತಿಸಲು ಎಲ್ಲರಿಗೆ ಕರೆ ನೀಡುತ್ತಾರೆ.
"ಮುಂದುವರೆದು ಮಾತನಾಡಿದ ಅವರು ನಾವು ನಮ್ಮ ಜೀವನದ ಮಾಲೀಕರಲ್ಲ. ಇಲ್ಲಿ ನಾವು ನಮಗೆ ಇಷ್ಟ ಬಂದಂತೆ ಮಾಡಲಾಗುವುದಿಲ್ಲ. ನಾವೆಲ್ಲರೂ ಇಲ್ಲಿ ಕೆಲಸಗಾರರಂತೆ. ಇದ್ದಷ್ಟು ದಿನ ನಾವೆಲ್ಲರೂ ನಮಗೆ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು" ಪೋಪ್ ಹದಿನಾಲ್ಕನೇ ಲಿಯೋ ಅವರು ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಹೇಳಿದ್ದಾರೆ.
"ಒಂದಲ್ಲ ಒಂದು ದಿನ ನಮ್ಮಿಂದಲೂ ಸಹ ಲೆಕ್ಕವನ್ನು ನಿರೀಕ್ಷಿಸಲಾಗುತ್ತದೆ ಎಂಬುದನ್ನು ಯೇಸುವಿನ ಸಾಮತಿ ನಮಗೆ ತಿಳಿಸುತ್ತದೆ" ಎಂದು ಪೋಪ್ ಲಿಯೋ ಹೇಳಿದರು.
ಸಾಮತಿಯನ್ನು ಮತ್ತಷ್ಟು ವಿಸ್ತರಿಸುತ್ತಾ ಮಾತನಾಡಿದ ಪೋಪ್ "ಈ ಜಗತ್ತಿನಲ್ಲಿರುವುದೆಲ್ಲಾ ನಶ್ವರ. ಇದು ಶಾಶ್ವತವಲ್ಲ. ನಾವೆಲ್ಲರೂ ನಮ್ಮ ಪಾತ್ರವನ್ನು ಇಲ್ಲಿ ಮಾಡಬೇಕಷ್ಟೇ. ಆದರೆ, ನಮ್ಮ ಈ ಜೀವಿತದಲ್ಲಿ ಸದಾ ನಾವು ದೇವರ ಹಾಗೂ ಕ್ರಿಸ್ತರ ಸ್ನೇಹಕ್ಕಾಗಿ ಹಾತೊರೆಯಬೇಕು" ಎಂದು ಹೇಳಿದರು.
ಅಂತಿಮವಾಗಿ, ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡುವ ಮೂಲಕ ತ್ರಿಕಾಲ ಪ್ರಾರ್ಥನೆಯನ್ನು ಸಮಾಪ್ತಿಗೊಳಿಸಿದರು.