ದೈವದಶ೯ನದ ಹಬ್ಬದ ದಿನದಂದು ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್:ಯುದ್ಧದ ಉದ್ಯಮವನ್ನು ಶಾಂತಿಯ ಕರಕುಶಲತೆಯಿಂದ ಬದಲಾಯಿಸಬಹುದೇ?
ವ್ಯಾಟಿಕನ್ ವರದಿ
ದೈವದಶ೯ನದ ಹಬ್ಬದ ಮಹೋತ್ಸವದಂದು (ಜನವರಿ 6, 2026) ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಜ್ಞಾನಿಗಳು ಬಾಲಯೇಸುವಿಗೆ ಅರ್ಪಿಸಿದ ಕಾಣಿಕೆಗಳ ಮೂಲಕ ನಾವು ಇತರರೊಂದಿಗೆ ಹಂಚಿಕೊಳ್ಳಬೇಕಾದುದನ್ನು ಕಲಿಯುತ್ತೇವೆ ಎಂದು ಹೇಳಿದರು. ನಾವು ನಮ್ಮಲ್ಲೇ ಇಟ್ಟುಕೊಳ್ಳಲಾಗದದ್ದನ್ನು, ಇತರರಿಗೆ ನೀಡಬೇಕಾದದ್ದನ್ನು ಆ ಕಾಣಿಕೆಗಳು ಸೂಚಿಸುತ್ತವೆ ಹೀಗೆ ಮಾಡುವುದರಿಂದ ನಮ್ಮ ಮಧ್ಯದಲ್ಲಿ ಯೇಸುವಿನ ಸನ್ನಿಧಿ ಹೆಚ್ಚಾಗುತ್ತದೆ ಎಂದು ಅವರು ವಿವರಿಸಿದರು.
ಸಂತ ಪೀಟರ್ ಮಹಾದೇವಾಲಯದಲ್ಲಿ ನಡೆದ ಪವಿತ್ರ ಬಲಿ ಪೂಜೆಯ ನಂತರ, ಸಂತ ಪೀಟರ್ ಚೌಕದಲ್ಲಿ ವಿಶ್ವಾಸಿಗಳೊಂದಿಗೆ ತ್ರಿಕಾಲ ಪ್ರಾರ್ಥನೆಯನ್ನು ಜಗದ್ಗುರುಗಳು ನೆರವೇರಿಸಿದರು.
ಜ್ಞಾನಿಗಳ ಪ್ರಯಾಣ, ಅವರ ಧೈರ್ಯ, ಮತ್ತು ಬಾಲ ಯೇಸುವಿಗೆ ಅರ್ಪಿಸಿದ ಅಮೂಲ್ಯ ಕಾಣಿಕೆಗಳು—ಚಿನ್ನ, ರಕ್ತಬೋಳ ಮತ್ತು ಸುಗಂಧ ದ್ರವ್ಯ ನಮ್ಮ ಜೀವನದ ಸಂಪೂರ್ಣತೆಯನ್ನು ಯೇಸುವಿಗೆ ಅರ್ಪಿಸಬೇಕೆಂಬುದನ್ನು ಸ್ಮರಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು. ಯೇಸುವೇ ನಮ್ಮ ಅಮೂಲ್ಯ ನಿಧಿಯಾಗಿದ್ದು, ಅವನಿಗೆ ಎಲ್ಲವನ್ನೂ ನೀಡುವುದೇ ಅತ್ಯುತ್ತಮ ಕಾಣಿಕೆ ಎಂದು ಅವರು ಒತ್ತಿ ಹೇಳಿದರು. ಇದಕ್ಕೆ ಉದಾಹರಣೆಯಾಗಿ, ದೇವಾಲಯದ ಭಂಡಾರಕ್ಕೆ ತನ್ನಲ್ಲಿದ್ದ ಕೊನೆಯ ಎರಡು ನಾಣ್ಯಗಳನ್ನು ಅರ್ಪಿಸಿದ ಬಡ ವಿಧವೆಯ ಘಟನೆಯನ್ನು ಜಗದ್ಗುರುಗಳು ಸ್ಮರಿಸಿದರು.
ಬೆತ್ಲೆಹೇಮಿನ ಶಿಶುವಿನ ಮುಂದೆ ಜ್ಞಾನಿಗಳಂತೆ ಮಣಿಯುವುದು ಎಂದರೆ, ದೇವರ ಮಹಿಮೆ ಪ್ರಕಾಶಿಸುವ ನಿಜವಾದ ಮಾನವತ್ವವನ್ನು ನಾವು ಯೇಸುವಿನಲ್ಲಿ ಕಂಡುಕೊಂಡಿದ್ದೇವೆ ಎಂಬುದನ್ನು ಘೋಷಿಸುವುದಾಗಿದೆ ಎಂದು ಜಗದ್ಗುರುಗಳು ವಿವರಿಸಿದರು. ಯೇಸುವಿನಲ್ಲಿ ನಿಜವಾದ ಜೀವ ಪ್ರತ್ಯಕ್ಷವಾಗುತ್ತದೆ ಆತನು ನಮಗೆ ಸ್ವಾರ್ಥರಹಿತ ಜೀವನ, ಪರಸ್ಪರ ಸಹಭಾಗಿತ್ವ ಮತ್ತು ಭೂಮಿಯಲ್ಲಿಯೂ ಸ್ವರ್ಗದಂತೆಯೇ ಬದುಕುವ ಮಾರ್ಗವನ್ನು ಬೋಧಿಸುತ್ತಾನೆ ಎಂದು ಅವರು ಹೇಳಿದರು. ಈ ದೈವಿಕ ಜೀವನ ನಮ್ಮ ಕೈಗೆಟುಕುವಂತಿದ್ದು, ಅದು ಭಯದ ಬಂಧನಗಳನ್ನು ಸಡಿಲಗೊಳಿಸಿ ಶಾಂತಿಯತ್ತ ನಮ್ಮನ್ನು ಮುನ್ನಡೆಸುತ್ತದೆ ಎಂದರು.
ಇಂದು ಪವಿತ್ರ ಬಾಗಿಲು ಮುಚ್ಚುವ ಮೂಲಕ ಸಮಾಪ್ತಿಯಾದ ಆಶೆಯ ಜೂಬಿಲಿ ವರ್ಷವು, ಉಚಿತತೆಯ ಮೇಲೆ ನೆಲೆಯಾದ ನ್ಯಾಯವನ್ನು ನಮಗೆ ನೆನಪಿಸಿದೆ ಎಂದು ಜಗದ್ಗುರುಗಳು ಹೇಳಿದರು. ಜೂಬಿಲಿಯ ಮೂಲ ಆತ್ಮವು ಶಾಂತ ಸಹವಾಸ, ಸಂಪನ್ಮೂಲಗಳ ನ್ಯಾಯಸಮ್ಮತ ಹಂಚಿಕೆ, ಮತ್ತು ನಾವು ಹೊಂದಿರುವುದನ್ನೂ ನಾವು ಯಾರು ಎಂಬುದನ್ನೂ ದೇವರ ಮಹತ್ತಾದ ಯೋಜನೆಗಳಿಗೆ ಮರಳಿಸುವ ಕರೆಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು. ಕ್ರೈಸ್ತ ಆಶೆ ಎಂದರೆ ಕಲ್ಪನೆಗಳಲ್ಲ; ಯೇಸು ಭೂಮಿಗೆ ಇಳಿದು ಬಂದಂತೆ, ಅದು ನಿಜ ಜೀವನದಲ್ಲಿ ನೆಲೆಯಾದದ್ದಾಗಿರಬೇಕು ಎಂದು ಜಗದ್ಗುರುಗಳು ಒತ್ತಿ ಹೇಳಿದರು.
ಕೊನೆಯಲ್ಲಿ, ಜ್ಞಾನಿಗಳ ಕಾಣಿಕೆಗಳನ್ನು ಸ್ಮರಿಸುವಾಗ, ನಾವು ಇತರರೊಂದಿಗೆ ಏನು ಹಂಚಿಕೊಳ್ಳಬಹುದು ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕೆಂದು ಜಗದ್ಗುರುಗಳು ತಿಳಿಸಿದರು. ಹೀಗೆ ಮಾಡಿದಾಗ ಕ್ರಿಸ್ತನ ಸನ್ನಿಧಿ ವೃದ್ಧಿಯಾಗುತ್ತದೆ, ಅವನ ರಾಜ್ಯ ಬೆಳೆಯುತ್ತದೆ, ಅಸಮಾನತೆಯ ಸ್ಥಳದಲ್ಲಿ ನ್ಯಾಯ ಸ್ಥಾಪಿತವಾಗುತ್ತದೆ ಮತ್ತು ಯುದ್ಧದ ಉದ್ಯಮವನ್ನು ಶಾಂತಿಯ ಕರಕುಶಲತೆಯಿಂದ ಬೆಳೆಯುತ್ತದೆ ಮತ್ತು ನಾವು ಒಟ್ಟಾಗಿ ಭವಿಷ್ಯದತ್ತ ಹೊಸ ದಾರಿಯಲ್ಲಿ ಪ್ರಯಾಣಿಸೋಣ ಎಂಬುದಾಗಿ ಹೇಳಿದರು.
