ಹುಡುಕಿ

Pope Leo XIV mass during extraordinary consistory of cardinals at the Vatican

ಬಲಿ ಪೂಜೆಯಲ್ಲಿ ಜಗದ್ಗುರಗಳು : ಕಾರ್ಡಿನಲ್‌ಗಳ ಸಭೆ ಧರ್ಮ ಸಭೆಯ ಪಥದ ಕುರಿತು ಚಿಂತನೆಗೆ ಸಮಯ

ಜಗದ್ಗುರು XIV ನೇ ಲಿಯೋರವರು ತಮ್ಮ ಮೊದಲ ಅಸಾಧಾರಣ ಕಾರ್ಡಿನಲ್‌ಗಳ ಸಭೆಗಾಗಿ ಸೇರಿದ್ದ ಕಾರ್ಡಿನಲ್‌ಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ, ಧರ್ಮ ಸಭೆಯನ್ನು ಮುನ್ನಡೆಸುವಲ್ಲಿ ಜಗದ್ಗುರುಗಳಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ, ಪರಸ್ಪರ ತಮ್ಮ ಧರ್ಮಾಧಿಕಾರಿಗಳ ಜವಾಬ್ದಾರಿಗಳ ಭಾರವನ್ನು ಹಂಚಿಕೊಳ್ಳುವಂತೆ ಅವರು ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು. ಧರ್ಮ ಸಭೆಯ ಮುಂದಿನ ದಾರಿಯ ಕುರಿತು ಆಳವಾದ ಚಿಂತನೆ ನಡೆಸಲು ಈ ಸಭೆ ಒಂದು ಮಹತ್ವದ ಸಮಯವಾಗಿರುವುದಾಗಿ ಜಗದ್ಗುರುಗಳು ತಿಳಿಸಿದರು.

ವ್ಯಾಟಿಕನ್ ವರದಿ

ಕಾರ್ಡಿನಲ್‌ಗಳ ಅಸಾಧಾರಣ ಕನ್ಸಿಸ್ಟರಿಯ ಎರಡನೇ ದಿನದ ಆರಂಭದಲ್ಲಿ, ವಿಶ್ವದ ವಿವಿಧ ಭಾಗಗಳಿಂದ ರೋಮ್‌ಗೆ ಆಗಮಿಸಿದ ಕಾರ್ಡಿನಲ್‌ಗಳೊಂದಿಗೆ ಜಗದ್ಗುರು XIVನೇ ಲಿಯೋರವರು  ಪವಿತ್ರ ಬಲಿ ಪೂಜೆಯನ್ನು ಅಧ್ಯಕ್ಷತೆ ವಹಿಸಿ ಆಚರಿಸಿದರು. ಈ ಸಭೆ ಧರ್ಮ ಸಭೆಯ ಸೇವೆಯಲ್ಲಿ ಏಕತೆಯನ್ನು ವ್ಯಕ್ತಪಡಿಸುವ ದೇವಕೃಪೆಯ ಕ್ಷಣವಾಗಿದ್ದು, ಸಹೋದರ ಪ್ರೀತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಮ್ಮ ಪ್ರಭೊದನೆಯಲ್ಲಿ ಹೇಳಿದರು. ಸಾಮಾನ್ಯ ಕರ್ತವ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ದೇವರ ಜನರ ಹಿತಕ್ಕಾಗಿ ಪ್ರಭುವಿನ ಇಚ್ಛೆಯನ್ನು ವಿವೇಚಿಸಲು ಒಟ್ಟಾಗಿ ಸೇರಿರುವುದೇ ಈ ಕನ್ಸಿಸ್ಟರಿಯ ಅರ್ಥವೆಂದು ಜಗದ್ಗುರುಗಳು ವಿವರಿಸಿದರು.

ಜಗದ್ಗುರುಗಳು “ಕನ್ಸಿಸ್ಟರಿ” ಎಂಬ ಪದದ ಅರ್ಥ ‘ನಿಲ್ಲುವುದು’ ಎಂದು ವಿವರಿಸಿ, ಪ್ರಾರ್ಥನೆ ಮತ್ತು ಮೌನದಲ್ಲಿ ತಾವು ನಿಲ್ಲುವ ಈ ಕ್ರಿಯೆಯನ್ನು ಇಂದಿನ ಅಶಾಂತ ಮತ್ತು ಆತುರಭರಿತ ಜಗತ್ತಿಗೆ ಒಂದು ಪ್ರವಾದೀಯ ಸಂಕೇತವೆಂದು ವರ್ಣಿಸಿದರು. ಪ್ರಾರ್ಥನೆ ಮತ್ತು ಪರಸ್ಪರ ಆಲಿಸುವಿಕೆಯ ಮೂಲಕ ತಮ್ಮ ಗುರಿಯನ್ನು ಸ್ಪಷ್ಟವಾಗಿ ಕಂಡುಕೊಳ್ಳಲು ಸಾಧ್ಯವಾಗುತ್ತದೆ; ಅಂಧ ಕ್ರಿಯೆಯಲ್ಲಿ ಮುಳುಗದಂತೆ ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ವೈಯಕ್ತಿಕ ಅಥವಾ ಗುಂಪು ಉದ್ದೇಶಗಳನ್ನು ಮುಂದೂಡುವ ಬದಲು, ಕ್ರಿಸ್ತನ ಭೋಜನದ ಬೆಳಕಿನಲ್ಲಿ ವಿವೇಚನೆ ನಡೆಸುವಂತೆ ಕಾರ್ಡಿನಲ್‌ಗಳನ್ನು ಆಹ್ವಾನಿಸಿದರು.

ಕಾರ್ಡಿನಲ್‌ಗಳ ಮಹಾಸಭೆ ಅನೇಕ ಪ್ರತಿಭೆಗಳು ಮತ್ತು ವರಗಳಿಂದ ಸಮೃದ್ಧವಾಗಿದ್ದರೂ, ಮೊದಲು ಅದು ತಜ್ಞರ ತಂಡವಾಗಿರದೆ, ವಿಶ್ವಾಸದ ಸಮುದಾಯವಾಗಿರಬೇಕೆಂದು ಜಗದ್ಗುರುಗಳು ಹೇಳಿದರು. ಪ್ರತಿಯೊಬ್ಬರೂ ಪ್ರಭುವಿಗೆ ಅರ್ಪಿಸುವ ವರಗಳು, ದೇವರ ದಯೆಯಿಂದ ಶುದ್ಧಗೊಂಡು, ಬೆಳಗಿಸಿಕೊಂಡು, ರೂಪಾಂತರಗೊಂಡು, ಧರ್ಮ ಸಭೆಗೆ ಸಮೃದ್ಧ ಫಲವನ್ನು ತರುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ನಿಲ್ಲುವ ಕ್ಷಣವನ್ನು ದೇವರು, ಚರ್ಚು ಮತ್ತು ಜಗತ್ತಿನ ಎಲ್ಲ ಜನರತ್ತ ತೋರಿಸುವ ಮಹಾ ಪ್ರೀತಿಯ ಕ್ರಿಯೆಯಾಗಿ ಪರಿವರ್ತಿಸಿಕೊಳ್ಳುವಂತೆ ಜಗದ್ಗುರುಗಳು ಕರೆ ನೀಡಿದರು.

ಮೌನ ಮತ್ತು ಪ್ರಾರ್ಥನೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ನೋಡುವುದು, ಒಬ್ಬರನ್ನೊಬ್ಬರು ಆಲಿಸುವುದು, ಮತ್ತು ದೇವರು ತಮ್ಮ ಧರ್ಮಾಧಿಕಾರಿಗಳ ಜವಾಬ್ದಾರಿಗೆ ಒಪ್ಪಿಸಿದ ಎಲ್ಲರ ಪರವಾಗಿ ಧ್ವನಿಯಾಗುವುದು ಕಾರ್ಡಿನಲ್‌ಗಳ ಕರ್ತವ್ಯವೆಂದು ಜಗದ್ಗುರುಗಳು ಹೇಳಿದರು. ಕನ್ಸಿಸ್ಟರಿ ವಿನಯ ಮತ್ತು ಉದಾರ ಮನಸ್ಸಿನಿಂದ ಬದುಕಬೇಕಾದ ಕ್ರಿಯೆಯಾಗಿದ್ದು, ತಾವು ಹೊಂದಿರುವ ಎಲ್ಲವೂ ದೇವರ ಕೊಡುಗೆ ಎಂಬ ಅರಿವಿನಿಂದ, ಅದನ್ನು ವಿವೇಕ ಮತ್ತು ಧೈರ್ಯದಿಂದ ಬಳಸಬೇಕೆಂದು ಅವರು ನೆನಪಿಸಿದರು.

ಸಮಾರೋಪದಲ್ಲಿ, ಜಗದ್ಗುರು XIVನೇ ಲಿಯೋರವರು ಧಮ೯ಸಭೆಯ ವೈವಿಧ್ಯಮಯ ಸೌಂದರ್ಯ ಮತ್ತು ಕೃಪೆ–ವಿಶ್ವಾಸದ ಏಕತೆಯನ್ನು ಸ್ಮರಿಸಿದರು. ಮಾನವಕುಲದ ಮಹಾ ಸಮೂಹವು ಶಾಂತಿಗಾಗಿ ಹಾತೊರೆಯುತ್ತಿರುವ ಸಂದರ್ಭದಲ್ಲಿ, ಕಾರ್ಡಿನಲ್‌ಗಳು ಪೇತ್ರನ ಉತ್ತರಾಧಿಕಾರಿಯೊಂದಿಗೆ ಹಂಚಿಕೊಳ್ಳುವ ಜವಾಬ್ದಾರಿ ಭಾರೀ ಮತ್ತು ಗಂಭೀರವಾದುದೆಂದು ಅವರು ಹೇಳಿದರು. ತಮ್ಮ ಸೇವೆ ಮತ್ತು ಸಹಕಾರಕ್ಕಾಗಿ ಕಾರ್ಡಿನಲ್‌ಗಳಿಗೆ ಧನ್ಯವಾದ ಅರ್ಪಿಸಿ, ಅವರ ಸಂಯುಕ್ತ ಕಾರ್ಯವನ್ನು ಪ್ರಭುವಿಗೆ ಒಪ್ಪಿಸಿದರು.

10 ಜನವರಿ 2026, 13:28