ದೇವರ ವಾಕ್ಯದ ಭಾನುವಾರ, ಕುಷ್ಟರೋಗ ದಿನ ಮತ್ತು ಕ್ರೈಸ್ತ ಏಕತಾ ವಾರವನ್ನು ಜಗದ್ಗುರುಗಳು ಸ್ಮರಿಸಿದರು
ವ್ಯಾಟಿಕನ್ ವರದಿ
ಸಂತ ಪೇತ್ರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಗಾಗಿ ಸೇರಿದ್ದ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಾಮಾನ್ಯ ಕಾಲದ ಮೂರನೇ ಭಾನುವಾರವಾದ ಈ ದಿನ ದೇವರ ವಾಕ್ಯದ ಭಾನುವಾರವಾಗಿದೆ ಎಂದು ನೆನಪಿಸಿದರು. ಪವಿತ್ರ ಶಾಸ್ತ್ರದ ಆಳವಾದ ಅರಿವು ಮತ್ತು ಚರ್ಚಿನ ಪೂಜೆ ಹಾಗೂ ಸಮುದಾಯಗಳ ಜೀವನದಲ್ಲಿ ದೇವರ ವಾಕ್ಯದ ಮೇಲಿನ ಹೆಚ್ಚಿನ ಗಮನವನ್ನು ಉತ್ತೇಜಿಸಲು, ಜಗದ್ಗುರು ಫ್ರಾನ್ಸಿಸ್ ರವರು ಇದನ್ನು ಏಳು ವರ್ಷಗಳ ಹಿಂದೆ ಸ್ಥಾಪಿಸಿದ್ದರು ಎಂದು ಅವರು ವಿವರಿಸಿದರು.
ವಿಶ್ವಾಸ ಮತ್ತು ಪ್ರೀತಿಯಿಂದ ಈ ಮೂಲಭೂತ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಮತ್ತು ಅವರನ್ನು ಉತ್ತೇಜಿಸುತ್ತೇನೆ ಎಂದು ಜಗದ್ಗುರುಗಳು ಹೇಳಿದರು.
ಕುಷ್ಟರೋಗ ವಿಶ್ವ ದಿನ
ಪ್ರತಿ ವರ್ಷ ಜನವರಿ 25ರಂದು ಆಚರಿಸಲಾಗುವ ಕುಷ್ಟರೋಗ ವಿಶ್ವ ದಿನದ ಕುರಿತು ಮಾತನಾಡಿದ ಜಗದ್ಗುರುಗಳು, ಈ ರೋಗದಿಂದ ಬಳಲಿದವರೊಂದಿಗೆ ತಮ್ಮ ಸಮೀಪತೆಯನ್ನು ವ್ಯಕ್ತಪಡಿಸಿದರು ಹಾಗೂ ಅವರನ್ನು ಆರೈಕೆ ಮಾಡುವವರನ್ನು ಪ್ರೋತ್ಸಾಹಿಸಿದರು. ಈ ದಿನವು ಕುಷ್ಟರೋಗದ ಬಗ್ಗೆ ಜಾಗೃತಿ ಮೂಡಿಸಲು, ಅದಕ್ಕೆ ಸಂಬಂಧಿಸಿದ ಕಳಂಕ ಮತ್ತು ಭೇದಭಾವವನ್ನು ಅಂತ್ಯಗೊಳಿಸಲು ಮೀಸಲಾಗಿದೆ ಎಂದು ಅವರು ಹೇಳಿದರು.
“ಈ ರೋಗದಿಂದ ಪೀಡಿತರಾದ ಎಲ್ಲರಿಗೂ ನನ್ನ ಸಮೀಪತೆಯನ್ನು ವ್ಯಕ್ತಪಡಿಸುತ್ತೇನೆ. ಕುಷ್ಟರೋಗಿಗಳ ಮಾನವ ಗೌರವವನ್ನು ರಕ್ಷಿಸಲು ಸೇವೆ ಸಲ್ಲಿಸುತ್ತಿರುವ ರೌಲ್ ಫೊಲ್ಲೆರೊ ರವರ ಸ್ನೇಹಿತರ ಇಟಾಲಿಯನ್ ಸಂಘಟನೆ ಹಾಗೂ ಇಂತಹ ಸೇವೆಯಲ್ಲಿ ತೊಡಗಿರುವ ಎಲ್ಲರಿಗೂ ನಾನು ಧೈರ್ಯ ತುಂಬುತ್ತೇನೆ ಎಂದು ಜಗದ್ಗುರುಗಳು ಹೇಳಿದರು.
ಕ್ರೈಸ್ತ ಏಕತಾ ಪ್ರಾರ್ಥನಾ ವಾರ
ಜಗದ್ಗರು XIVನೇ ಲಿಯೋರವರು, ಜನವರಿ 18ರಿಂದ 25ರವರೆಗೆ ನಡೆದ ಕ್ರೈಸ್ತ ಏಕತಾ ಪ್ರಾರ್ಥನಾ ವಾರವು ಈ ಭಾನುವಾರಕ್ಕೆ ಅಂತ್ಯವಾಗಿರುವುದನ್ನೂ ನೆನಪಿಸಿದರು. ಈ ವರ್ಷದ ವಿಷಯವಾಗಿದ್ದು ನಿಮ್ಮ ಕರೆಯ ಒಂದೇ ನಿರೀಕ್ಷೆಯಂತೆ, ಒಂದೇ ದೇಹ ಮತ್ತು ಒಂದೇ ಆತ್ಮವಿದೆ ಎಂದು ಅವರು ತಿಳಿಸಿದರು.
ಅದೇ ದಿನ ಮಧ್ಯಾಹ್ನ, ಇತರ ಕ್ರೈಸ್ತ ಪಂಥಗಳ ಪ್ರತಿನಿಧಿಗಳೊಂದಿಗೆ ಸಂತ ಪೌಲರ ಬಸಿಲಿಕಾದಲ್ಲಿ ಸಂಜೆ ಪ್ರಾರ್ಥನೆಯನ್ನು ಆಚರಿಸುವುದಾಗಿ ಜಗದ್ಗುರುಗಳು ಘೋಷಿಸಿದರು. ಮಾಧ್ಯಮಗಳ ಮೂಲಕ ಪಾಲ್ಗೊಂಡವರನ್ನು ಸೇರಿಸಿ, ಈ ಪ್ರಾರ್ಥನಾ ವಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಅವರು ಕೃತಜ್ಞತೆ ವ್ಯಕ್ತಪಡಿಸಿದರು.
