ಯುಎನ್ ನಿರಾಶ್ರಿತರ ಉನ್ನತ ಆಯುಕ್ತರು: ನಿರಾಶ್ರಿತರಿಗೆ ನೆರವಾಗುವಲ್ಲಿ ಧರ್ಮ ಸಭೆಯ ಮಹತ್ವದ ಸಹಭಾಗಿಯಾಗಿದೆ
ವ್ಯಾಟಿಕನ್ ವರದಿ
ಯುಎನ್ ನಿರಾಶ್ರಿತರ ಸಂಸ್ಥೆ (UNHCR) ನೀಡಿರುವ ವರದಿಯ ಪ್ರಕಾರ, 2025ರ ಮಧ್ಯಭಾಗದ ವೇಳೆಗೆ ಜಗತ್ತಿನಾದ್ಯಂತ ಸಂಘರ್ಷ, ಹಿಂಸಾಚಾರ, ಹಿಂಸೆ, ಕಿರುಕುಳ ಮತ್ತು ಇತರ ಕಾರಣಗಳಿಂದಾಗಿ ಸುಮಾರು 117.3 ಮಿಲಿಯನ್ ಜನರು ತಮ್ಮ ಮನೆಗಳನ್ನು ತೊರೆಯಲು ಬಲವಂತಪಡಿಸಿದ್ದಾರೆ, ಅವರಲ್ಲಿ ಸುಮಾರು 42.5 ಮಿಲಿಯನ್ ಮಂದಿ ನಿರಾಶ್ರಿತರಿದ್ದಾರೆ. ಈ ಗಂಭೀರ ವಾಸ್ತವತೆ, ಜಾಗತಿಕ ಮಾನವೀಯ ಸವಾಲಿನ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ.
ಜಗದ್ಗುರು XIVನೇ ಲಿಯೋರವರು ತಮ್ಮ ಪೂರ್ವಾಧಿಕಾರಿಗಳಂತೆ, ವಲಸಿಗರು ಮತ್ತು ನಿರಾಶ್ರಿತರ ಕುರಿತು ಧರ್ಮ ಸಭೆಯ ಆಳವಾದ ಕಾಳಜಿಯನ್ನು ಪುನಃ ಪುನಃ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಯ ಎದುರು ಜಗತ್ತು ನಿರ್ಲಕ್ಷ್ಯ ವಹಿಸಬಾರದೆಂದು ಅವರು ನಿರಂತರವಾಗಿ ಕರೆ ನೀಡಿದ್ದಾರೆ. ಇದೇ ಹಿನ್ನೆಲೆಯಲ್ಲಿ, 2026ರ ಜನವರಿ 26ರಂದು ವ್ಯಾಟಿಕನ್‌ನಲ್ಲಿ ಜಗದ್ಗುರು XIVನೇ ಲಿಯೋರವರು ಯುಎನ್ ನಿರಾಶ್ರಿತರಿಗೆ ಉನ್ನತ ಆಯುಕ್ತರಾದ ಬರ್ಹಾಮ್ ಸಾಲಿಹ್ ರವರನ್ನು ಭೇಟಿಯಾದರು. ಇರಾಕ್ ನ ಮಾಜಿ ರಾಷ್ಟ್ರಪತಿಯಾಗಿದ್ದ ಸಾಲಿಹ್ ಅವರು ತಾವೇ ನಿರಾಶ್ರಿತರ ಜೀವನವನ್ನು ಅನುಭವಿಸಿರುವವರು ಎಂಬುದು ಈ ಭೇಟಿಗೆ ವಿಶೇಷ ಮಹತ್ವ ನೀಡುತ್ತದೆ.
ವ್ಯಾಟಿಕನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಬರ್ಹಾಮ್ ಸಾಲಿಹ್ ರವರು ಜಗದ್ಗುರುಗಳೊಂದಿಗೆ ನಡೆದ ಭೇಟಿಯನ್ನು ಮಹಾನ್ ಗೌರವವೆಂದು ವಿವರಿಸಿದರು.ನಿರಾಶ್ರಿತರ ಪರವಾಗಿ ಜಗದ್ಗುರುಗಳು ನೀಡುತ್ತಿರುವ ಅಚಲ ನೈತಿಕ ಬೆಂಬಲವು ಅತ್ಯಂತ ಮಹತ್ವದ್ದೆಂದು ಅವರು ಒತ್ತಿ ಹೇಳಿದರು. ಜಗತ್ತಿನಾದ್ಯಂತ ಶರಣಾರ್ಥಿಗಳಿಗೆ ನೆರವು ನೀಡುವ ಕಾರ್ಯದಲ್ಲಿ ಧರ್ಮ ಸಭೆ ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ ಹೊಂದಿರುವ ಸಹಭಾಗಿತ್ವವು
ಯು ಎನ್ ಎಚ್ ಸಿ ಆರ್ ಗೆ ಅಮೂಲ್ಯ ಸಂಪತ್ತಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜನವರಿ 1ರಂದು ಅಧಿಕಾರ ಸ್ವೀಕರಿಸಿದ ಬಳಿಕ, ಅಪೂರ್ವ ಪ್ರಮಾಣದ ಸ್ಥಳಚಲನೆ, ಕುಗ್ಗುತ್ತಿರುವ ಮಾನವೀಯ ಸಂಪನ್ಮೂಲಗಳು ಮತ್ತು ಸೀಮಿತ ಹಣಕಾಸಿನ ನಡುವೆಯೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದರು. ನಿರಾಶ್ರಿತರ ರಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಹೆಚ್ಚಿಸಲು ಜಾಗತಿಕ ಮಟ್ಟದಲ್ಲಿ ಬಲವಾದ ವಕಾಲತ್ತು ನಡೆಸುವುದು ಅವರ ಪ್ರಧಾನ ಆದ್ಯತೆಯಾಗಿದೆ. ತುರ್ತು ಜೀವ ರಕ್ಷಕ ನೆರವು ಮಾತ್ರವಲ್ಲದೆ, ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವುದು ಅತ್ಯಗತ್ಯವೆಂದು ಅವರು ಹೇಳಿದರು.
ಅನೇಕ ನಿರಾಶ್ರಿತರು ಐದು ವರ್ಷ, ಹತ್ತು ವರ್ಷ ಅಥವಾ ಇನ್ನೂ ಹೆಚ್ಚು ಕಾಲ ಶಿಬಿರಗಳಲ್ಲಿ ಸಿಲುಕಿಕೊಂಡು ಬದುಕುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಸಾಲಿಹ್ ರವರು ಅಭಿಪ್ರಾಯಪಟ್ಟರು. ಚಾಡ್, ಕೆನ್ಯಾ ಮುಂತಾದ ದೇಶಗಳಲ್ಲಿ ದಶಕಗಳಿಂದ ನಿರಾಶ್ರಿತರಾಗಿ ಬದುಕುತ್ತಿರುವವರನ್ನು ಭೇಟಿಯಾದ ಅನುಭವ, ಶಾಶ್ವತ ಹಾಗೂ ಸಮಾವೇಶಕಾರಿ ಪರಿಹಾರಗಳ ಅಗತ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದರು.
ಕೆನ್ಯಾ, ಉಗಾಂಡಾ, ಎಥಿಯೋಪಿಯಾ ಮತ್ತು ಚಾಡ್ ಮುಂತಾದ ದೇಶಗಳು ನಿರಾಶ್ರಿತರನ್ನು ತಮ್ಮ ರಾಷ್ಟ್ರೀಯ ವ್ಯವಸ್ಥೆಗಳಲ್ಲಿ ಸೇರಿಸಿಕೊಳ್ಳುವ ಸಮಾವೇಶಕಾರಿ ನೀತಿಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ಅವರು ಶ್ಲಾಘಿಸಿದರು. ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಕಾನೂನು ಸೇವೆಗಳಿಗೆ ನಿರಾಶ್ರಿತರಿಗೆ ಪ್ರವೇಶ ನೀಡುವುದರಿಂದ, ಅವರು ನೆರವಿನ ಮೇಲೆ ಅವಲಂಬಿತರಾಗದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗುತ್ತಾರೆ ಎಂದು ಅವರು ತಿಳಿಸಿದರು. ನಿರಾಶ್ರಿತರು ಕೇವಲ ಸಂಖ್ಯೆಗಳಲ್ಲ, ಗೌರವ ಮತ್ತು ಹಕ್ಕುಗಳಿರುವ ಮಾನವರು ಎಂದು ಅವರು ಒತ್ತಿ ಹೇಳಿದರು.
ಇತ್ತೀಚಿನ ತಿಂಗಳಲ್ಲಿ ಹಣಕಾಸು ಕಡಿತಗಳಿಂದಾಗಿ ಎದುರಾಗಿರುವ ಸವಾಲುಗಳ ನಡುವೆಯೂ, ಯುಎನ್ ಮತ್ತು ಇತರ ಸಂಸ್ಥೆಗಳೊಂದಿಗೆ ಯು ಎನ್ ಎಚ್ ಸಿ ಆರ್ ವ್ಯವಸ್ಥೆಯ ಸುಧಾರಣೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಆದರೂ ಸಂಪನ್ಮೂಲಗಳ ಕೊರತೆಯೇ ಅತಿ ದೊಡ್ಡ ಚಿಂತೆ ಎಂದರು. ನಿರಾಶ್ರಿತರು ಸಂಕಷ್ಟಕ್ಕೆ ಅಂತಿಮ ಪರಿಹಾರ ಒಂದೇ ಅದು ಶಾಂತಿ. ಜನರು ಗೌರವ ಮತ್ತು ಸುರಕ್ಷತೆಯೊಂದಿಗೆ ತಮ್ಮ ಮನೆಗಳಿಗೆ ಮರಳುವ ಅವಕಾಶ ಪಡೆಯಬೇಕು ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸಮುದಾಯಕ್ಕೆ ತಮ್ಮ ಮನವಿಯಲ್ಲಿ, ನಿರಾಶ್ರಿತರಿಗೆ ರಕ್ಷಣೆ ಮತ್ತು ನೆರವು ನೀಡುವುದು ಕೇವಲ ಕಾನೂನು ಕರ್ತವ್ಯವಲ್ಲ, ನೈತಿಕ ಹೊಣೆಗಾರಿಕೆಯೂ ಹೌದು ಎಂದು ಸಾಲಿಹ್ ರವರು ಹೇಳಿದರು. ಧರ್ಮ ಸಭೆ ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ, ಹಾಗೆಯೇ ವಿವಿಧ ಧರ್ಮಗಳ ನಡುವೆ ಸಹಕಾರವನ್ನು ಮತ್ತಷ್ಟು ಬಲಪಡಿಸಿ, ಮಾನವೀಯತೆ ಮತ್ತು ಸಹೋದರತ್ವದ ಮೂಲ ಮೌಲ್ಯಗಳಿಗಾಗಿ ಒಟ್ಟಾಗಿ ಕೆಲಸ ಮಾಡುವ ಆಶಯವನ್ನು ಅವರು ವ್ಯಕ್ತಪಡಿಸಿದರು.
