ಜಗದ್ಗುರುಗಳು: ಒಲಿಂಪಿಕ್ಸ್ ಆತಿಥ್ಯ, ಏಕತೆ ಮತ್ತು ಶಾಂತಿಯನ್ನು ಉತ್ತೇಜಿಸಲಿ.
ವ್ಯಾಟಿಕನ್ ನ್ಯೂಸ್
ಸಹೋದರತ್ವ ಮತ್ತು ಶಾಂತಿಯನ್ನು ಉತ್ತೇಜಿಸುವ ಕ್ರೀಡೆ
ಈ ಟೆಲಿಗ್ರಾಂನ ಕೇಂದ್ರಬಿಂದುವಾಗಿರುವುದು ಸಹೋದರತ್ವ ಮತ್ತು ಶಾಂತಿಯನ್ನು ಉತ್ತೇಜಿಸುವ ಕ್ರೀಡೆಯ ದೃಷ್ಟಿಕೋನವಾಗಿದೆ ಎಂದು ಜಗದ್ಗುರು ಲಿಯೋರವರು ತಿಳಿಸಿದರು.
ಸ್ನೇಹ ಮತ್ತು ಸಹೋದರತ್ವ
ಫೆಬ್ರವರಿ 6ರಿಂದ 22ರವರೆಗೆ ನಡೆಯಲಿರುವ ಮಿಲಾನ್–ಕೋರ್ಟಿನಾ ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳಿಗಾಗಿ ಸಿದ್ಧಪಡಿಸಲಾದ ಕ್ರೀಡಾಪಟುಗಳ ಶಿಲುಬೆಯನ್ನು ನಗರಕ್ಕೆ ಅಧಿಕೃತವಾಗಿ ಸ್ವಾಗತಿಸುವ ಆಚರಣೆ, ಗುರುವಾರ ಸಂಜೆ ಸಾನ್ ಬಾಬಿಲಾ ದೇವಾಲಯದಲ್ಲಿ ಮಿಲಾನ್ ಮಹಾಧರ್ಮಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಭಾಗವಹಿಸುವ ಎಲ್ಲರೊಂದಿಗೆ ತಾವು ಆತ್ಮೀಯವಾಗಿ ಒಂದಾಗಿರುವುದಾಗಿ ಜಗದ್ಗುರುಗಳು ಹೇಳಿದರು.
ಈ ಮಹತ್ವದ ಕಾರ್ಯಕ್ರಮವು ಸ್ನೇಹ ಮತ್ತು ಸಹೋದರತ್ವದ ಭಾವನೆಗಳನ್ನು ಜಾಗೃತಗೊಳಿಸಿ, ಮಾನವ ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಸೇವೆ ಮಾಡುವ ಕ್ರೀಡೆಯ ಮೌಲ್ಯದ ಕುರಿತು ಜಾಗೃತಿಯನ್ನು ಬಲಪಡಿಸಲಿ ಎಂಬ ಆಶಯವನ್ನು ಜಗದ್ಗುರುಗಳು ವ್ಯಕ್ತಪಡಿಸಿದರು.
ಜನಾಂಗಗಳು ಮತ್ತು ಸಂಸ್ಕೃತಿಗಳ ನಡುವೆ ಸೇತುವೆ ನಿರ್ಮಾಣ
ಒಲಿಂಪಿಕ್ಸ್‌ನ ಆರೋಗ್ಯಕರ ಸ್ಪರ್ಧೆ ಸಂಸ್ಕೃತಿಗಳು ಮತ್ತು ಜನಾಂಗಗಳ ನಡುವೆ ಸೇತುವೆಗಳನ್ನು ನಿರ್ಮಿಸಲು ಸಹಕಾರಿಯಾಗಲಿ, ಆತಿಥ್ಯ, ಏಕತೆ ಮತ್ತು ಶಾಂತಿಯನ್ನು ಉತ್ತೇಜಿಸಲಿ ಎಂದು ತಾವು ಪ್ರಾರ್ಥಿಸುತ್ತಿರುವುದಾಗಿ ಜಗದ್ಗುರುಗಳು ತಮ್ಮ ಸಂದೇಶದಲ್ಲಿ ಹೇಳಿದರು.
ಈ ಪವಿತ್ರ ಬಲಿಪೂಜೆಯಲ್ಲಿ ಸಹಪೂಜಕರಾಗಿ ಸಂಸ್ಕೃತಿ ಮತ್ತು ಶಿಕ್ಷಣ ಡಿಕಾಸ್ಟರಿಯ ಕಾರ್ಯದರ್ಶಿ ಬಿಷಪ್ ಪಾಲ್ ಟೈಗ್ ಮತ್ತು ಇಟಾಲಿಯನ್ ಧರ್ಮಾಧ್ಯಕ್ಷರ ಮಹಾಸಭೆಯ ಉಪ ಕಾರ್ಯದರ್ಶಿ ಹಾಗೂ ವಿಶ್ರಾಂತಿ, ಪ್ರವಾಸೋದ್ಯಮ ಮತ್ತು ಕ್ರೀಡೆಯ ಪಾಸ್ಟರಲ್ ಕಾಳಜಿಗಾಗಿ ಇರುವ ರಾಷ್ಟ್ರೀಯ ಕಚೇರಿಯ ತಾತ್ಕಾಲಿಕ ನಿರ್ದೇಶಕರಾದ ಫಾದರ್ ಮಿಚೆಲೆ ಜಿಯಾನೋಲಾ ಭಾಗವಹಿಸಲಿದ್ದಾರೆ.
