ಹುಡುಕಿ

ಜಗದ್ಗುರು XIV ನೇ ಲಿಯೋರವರು ಅವರ ವಿಶ್ವವ‌್ಯಾಪಿ ಪ್ರಾಥ೯ನಾ ಜಾಲವನ್ನು ಭೇಟಿ ಮಾಡಿದರು. ಜಗದ್ಗುರು XIV ನೇ ಲಿಯೋರವರು ಅವರ ವಿಶ್ವವ‌್ಯಾಪಿ ಪ್ರಾಥ೯ನಾ ಜಾಲವನ್ನು ಭೇಟಿ ಮಾಡಿದರು.  (ANSA)

ಜಗದ್ಗುರುಗಳು: ಯುವಕರೇ, ಜಗತ್ತಿನ ಅಗತ್ಯಗಳಿಗಾಗಿ ಮಧ್ಯವರ್ತಿಗಳಾಗುವ ಮುಂದಿನ ಪೀಳಿಗೆಯಾಗಿರಿ

ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಜಾಗತಿಕ ಪ್ರಾರ್ಥನಾ ಜಾಲದ ನಾಯಕತ್ವ ಮತ್ತು ಸದಸ್ಯರನ್ನು ಭೇಟಿಯಾಗಿ, ಅವರ ಸೇವೆಗಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ಯುವಕರನ್ನು ಆಕರ್ಷಿಸಿ, ಅವರು ದೇವರಿಗೆ ಇನ್ನಷ್ಟು ಸಮೀಪರಾಗುವಂತೆ ಮಾಡುವಂತೆ ಈ ಜಾಲವು ತನ್ನ ಗುರಿ ಮುಂದುವರಿಸಬೇಕೆಂದು ಅವರು ಪ್ರೋತ್ಸಾಹಿಸಿದರು.

ವ್ಯಾಟಿಕನ್ ನ್ಯೂಸ್

“ಜಗತ್ತಿನ ಸಂಪೂರ್ಣ ಅಗತ್ಯಗಳಿಗಾಗಿ ಮಧ್ಯವರ್ತಿಗಳಾಗುವ ಮುಂದಿನ ಪೀಳಿಗೆಯನ್ನು ರೂಪಿಸಲು ಯುವಕರನ್ನು ಈ ಕಾರ್ಯದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಜಗದ್ಗುರುಗಳು ಹೇಳಿದರು. ಜನವರಿ 30, ಶುಕ್ರವಾರ ವ್ಯಾಟಿಕನ್‌ನಲ್ಲಿ ನಡೆದ ಈ ಭೇಟಿಯಲ್ಲಿ ಅವರು ಈ ಮಾತುಗಳನ್ನು ಉಲ್ಲೇಖಿಸಿದರು.

ಅನೇಕ ಯುವಕರು  ಯೇಸುವಿನೊಂದಿಗೆ ಇನ್ನಷ್ಟು ಆಳವಾದ ಮತ್ತು ವೈಯಕ್ತಿಕ ಸಂಬಂಧವನ್ನು ಹುಡುಕುತ್ತಿದ್ದಾರೆ ಎಂಬುದನ್ನು ಗಮನಿಸಿದ ಜಗದ್ಗುರುಗಳು ಯುಕರಿಸ್ಟಿಕ್ ಯುವ ಚಳವಳಿ ಅವರಲ್ಲಿ ಪ್ರಭುವಿನೊಂದಿಗೆ ಆಂತರಿಕ ಸಮೀಪತೆಯನ್ನು ಬೆಳೆಸಲು ವಿಶೇಷವಾಗಿ ಫಲಪ್ರದ ಮಾರ್ಗವಾಗಬಹುದು ಎಂದು ಹೇಳಿದರು.

ವಿವಿಧ ಸಂಸ್ಕೃತಿಗಳು, ಭಾಷೆಗಳು ಮತ್ತು ವರದಾನಗಳನ್ನು ಒಂದೇ ಸಾಮಾನ್ಯ ಗುರಿಯಲ್ಲಿ ಏಕೀಕರಿಸುವ ಈ ಜಾಲದಲ್ಲಿ ಇನ್ನಷ್ಟು ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವಂತೆ ಅವರು ಭಾಗವಹಿಸಿದ್ದವರಿಗೆ ಮನವಿ ಮಾಡಿದರು.

ಜಗದ್ಗರುಗಳ ಜಾಗತಿಕ ಪ್ರಾರ್ಥನಾ ಜಾಲವು ಯೇಸು ಸಮಾಜಕ್ಕೆ  ಒಪ್ಪಿಸಲಾದ ಒಂದು  ಕಾರ್ಯವಾಗಿದೆ. ಪ್ರತಿ ತಿಂಗಳು, ಮಾನವಕುಲ ಮತ್ತು ಧರ್ಮಸಭೆ ಎದುರಿಸುತ್ತಿರುವ ಸವಾಲುಗಳ ಮೇಲೆ ಕೇಂದ್ರೀಕೃತವಾಗಿರುವ ಜಗದ್ಗುರುಗಳ ಪ್ರಾರ್ಥನಾ ಉದ್ದೇಶವನ್ನು ಈ ಜಾಲವು ಪ್ರಕಟಿಸುತ್ತದೆ. ಈ ಜಾಲವು ವಿಶೇಷವಾಗಿ “ಹೃದಯದ ಮಾರ್ಗ” ಎಂಬ ರೂಪಣಾ ಪಥದ ಮೂಲಕ ಯೇಸುವಿನ ಹೃದಯದ ಆಧ್ಯಾತ್ಮಿಕತೆಯಲ್ಲಿ ಬೇರುಬಿಟ್ಟಿದೆ.

ಈ ಆಧ್ಯಾತ್ಮಿಕತೆ ಜಾಲದ ಸದಸ್ಯರಿಗೆ “ನಮ್ಮ ಪ್ರಭುವನ್ನು ಇನ್ನಷ್ಟು ಆಂತರಿಕವಾಗಿ ತಿಳಿದುಕೊಳ್ಳಲು ಹಾಗೂ ಅಗತ್ಯದಲ್ಲಿರುವವರಿಗಾಗಿ ಪ್ರಾರ್ಥನಾ ಬೆಂಬಲ ನೀಡುವಾಗ ಹೆಚ್ಚು ಕರುಣಾಶೀಲ ಮತ್ತು ಸಹಾನುಭೂತಿಪೂರ್ಣರಾಗಲು ಸಹಾಯ ಮಾಡುತ್ತದೆ ಎಂದು ಜಗದ್ಗುರುಗಳು ವಿವರಿಸಿದರು.

ನಿಮ್ಮ ಪ್ರೇಷಿತರ  ಸೇವೆಯ ಮೂಲಕ, ದೀಕ್ಷಾಸ್ನಾನ ಪಡೆದವರು ಕ್ರಿಸ್ತನ ಸ್ನೇಹಿತರೂ ಪ್ರೇಷಿತರು ಆಗಿದ್ದಾರೆ ಎಂಬ ಅರಿವನ್ನು ಮುಂದುವರಿದು ಬೆಳೆಸಲಿ ಎಂಬುದು ನನ್ನ ಆಶಯವಾಗಿದೆ, ಎಂದು ಜಗದ್ಗುರುಗಳು ಒತ್ತಿಹೇಳಿದರು.

ಪ್ರಾರ್ಥನೆ ಧರ್ಮ ಸಭೆಯ ಅವಿಭಾಜ್ಯ ಅಂಗ

ಧರ್ಮ ಸಭೆಯ ಕಾರ್ಯದಲ್ಲಿ ಪ್ರಾರ್ಥನೆಯ ಮಹತ್ವವನ್ನು ಉಲ್ಲೇಖಿಸುತ್ತಾ, ಜಗತ್ತಿನಾದ್ಯಂತ ಇರುವ ದಶಲಕ್ಷಾಂತರ ಜನರಿಗೆ ತಮ್ಮ ಪ್ರಾರ್ಥನಾ ಉದ್ದೇಶಗಳನ್ನು ಹರಡುವುದಕ್ಕಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಜಗದ್ಗುರುಗಳು ಧನ್ಯವಾದ ಸಲ್ಲಿಸಿದರು.

ಇಂತಹ ಪ್ರಾರ್ಥನೆ ಕ್ರಿಸ್ತನ ದೇಹವಾದ ಧರ್ಮ ಸಭೆಯ ಸುವಾರ್ತಾ ಕಾರ್ಯಕ್ಕೆ ಹೊರಗಿನದ್ದಲ್ಲ, ಬದಲಾಗಿ ಅದರ ಅವಿಭಾಜ್ಯ ಅಂಗವೇ ಆಗಿದೆ ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಜಾಲದ ಅಂತರರಾಷ್ಟ್ರೀಯ ನಿರ್ದೇಶಕರಾದ ಫಾದರ್ ಕ್ರಿಸ್ತೋಬಲ್ ಫೋನೆಸ್, ಉಪ ನಿರ್ದೇಶಕರಾದ ಬೆಟ್ಟಿನಾ ರೇಡ್ ಮತ್ತು ಫಾದರ್ ಮಿಗೇಲ್ ಮೆಲೊ, ಹಾಗೂ ಈ ಗುರಿಗೆ ಬೆಂಬಲ ನೀಡುತ್ತಿರುವ ಎಲ್ಲಾ ಸದಸ್ಯರು ಮತ್ತು ಸಹಭಾಗಿಗಳಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.

30 ಜನವರಿ 2026, 00:00