ಜಗದ್ಗರುಗಳು 2027ರ ಪ್ರಾರ್ಥನಾ ಉದ್ದೇಶಗಳನ್ನು ಪ್ರಕಟಿಸಿದ್ದಾರೆ
ವ್ಯಾಟಿಕನ್ ನ್ಯೂಸ್
ಜಗದ್ಗುರು XIVನೇ ಲಿಯೋರವರು 2027ರ ಪ್ರಾರ್ಥನಾ ಉದ್ದೇಶಗಳನ್ನು ಪ್ರಕಟಿಸಿದ್ದಾರೆ.
ಆ ವರ್ಷದ ಪ್ರತಿಯೊಂದು ತಿಂಗಳಿಗೂ, ಜಗದ್ಗುರುಗಳು ಧರ್ಮ ಸಭೆಯನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರಾರ್ಥಿಸಲು ಆಹ್ವಾನಿಸುತ್ತಾರೆ. ಈ ಉದ್ದೇಶಗಳು ಜಾಗತಿಕ ಸವಾಲುಗಳನ್ನೂ, ಧರ್ಮ ಸಭೆಯ ಒಳಗಿನ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನೂ ಸ್ಪರ್ಶಿಸುತ್ತವೆ.
2027ರ ಈ ಪ್ರಾರ್ಥನಾ ಉದ್ದೇಶಗಳನ್ನು ಜಗದ್ಗುರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲಕ್ಕೆ ಒಪ್ಪಿಸಲಾಯಿತು. ಈ ಜಾಲದ ಸದಸ್ಯರನ್ನು ಜಗದ್ಗುರು ಲಿಯೋರವರು ಶುಕ್ರವಾರ ಬೆಳಿಗ್ಗೆ ವಿಶೇಷ ದರ್ಶನದಲ್ಲಿ ಸ್ವೀಕರಿಸಿದರು.
ದರ್ಶನದ ಬಳಿಕ ವ್ಯಾಟಿಕನ್ ನ್ಯೂಸ್ಗೆ ಮಾತನಾಡಿದ ಜಾಲದ ಅಂತರರಾಷ್ಟ್ರೀಯ ನಿರ್ದೇಶಕ ಫಾದರ್ ಕ್ರಿಸ್ತೋಬಲ್ ಫೋನೆಸ್ ರವರು,ನಾವು ನಿರಂತರವಾಗಿ, ಅತಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಎಂದು ಹೇಳಿದರು.
ಪ್ರಾರ್ಥನಾ ಜಾಲದ ಕಾರ್ಯವೆಂದರೆ, ಪ್ರಭುವಿನೊಂದಿಗೆ, ನಮ್ಮೊಳಗೆ, ಮತ್ತು ಇತರರೊಂದಿಗೆ ಆಳವಾದ ಸಂಪರ್ಕಕ್ಕೆ ನಮಗೆ ಇರುವ ಅಗತ್ಯವನ್ನು ನೆನಪಿಸುವುದು ಎಂದು ಅವರು ಒತ್ತಿ ಹೇಳಿದರು.
ಕೆಳಗೆ ಜಗದ್ಗುರು ಲಿಯೋರವರ 2027ರ ಪ್ರಾರ್ಥನಾ ಉದ್ದೇಶಗಳನ್ನು ನೀಡಲಾಗಿದೆ:
ಜನವರಿ
ಪ್ರಾರ್ಥನೆಯ ಶಕ್ತಿಯನ್ನು ಅನ್ವೇಷಿಸಲೆಂದುಪ್ರಾರ್ಥಿಸೋಣ:
ಧರ್ಮಸಭೆಯಲ್ಲಿರುವ ಪ್ರತಿಯೊಬ್ಬರೂ ಪ್ರಾರ್ಥನೆಯ ಶಕ್ತಿಯನ್ನು—ಪ್ರಭುವಿನೊಂದಿಗೆ ವ್ಯಕ್ತಿಗತ ಸಂವಾದವಾಗಿರುವ ಪ್ರಾರ್ಥನೆಯನ್ನು ಅನ್ವೇಷಿಸಲಿ ಅದು ನಮ್ಮ ಹೃದಯಗಳನ್ನೂ ಜಗತ್ತನ್ನೂ ರೂಪಾಂತರಗೊಳಿಸಲಿ.
ಫೆಬ್ರವರಿ
ಇತರರನ್ನು ನೋಡಿಕೊಳ್ಳುವವರು ಸಹ ಆರೈಕೆಯನ್ನು ಪಡೆಯಲೆಂದು ಪ್ರಾರ್ಥಿಸೋಣ:
ಇತರರ ಸಮಗ್ರ ಆರೋಗ್ಯದ ಆರೈಕೆಯಲ್ಲಿ ತೊಡಗಿರುವವರು ಅಗತ್ಯವಾದ ಬೆಂಬಲವನ್ನು ಪಡೆಯಲಿ ಸಹನಶೀಲತೆ, ಜ್ಞಾನ ಮತ್ತು ಧೈರ್ಯದೊಂದಿಗೆ ಅವರು ಆಂತರಿಕ ಗುಣಮುಖತೆ ಮತ್ತು ಭರವಸೆಯ ಹೊಸ ಮಾರ್ಗಗಳನ್ನು ತೆರೆಯಲಿ.
ಮಾರ್ಚ್
ಮಾನವ ಜೀವದ ಗೌರವವನ್ನು ಕಾಪಾಡಲೆಂದು ಪ್ರಾರ್ಥಿಸೋಣ:
ಉತ್ಪಾದಕತೆ ಮತ್ತು ತಕ್ಷಣದ ಫಲಿತಾಂಶಗಳ ಮೇಲೆ ಕೇಂದ್ರೀಕರಿಸಿರುವ ಸಂಸ್ಕೃತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ನಮ್ಮದೇ ಆಗಲಿ ಅಥವಾ ಇತರರದ್ದಾಗಲಿ ಅದ್ವಿತೀಯ ಗೌರವವನ್ನು ಗುರುತಿಸಿ ಮೌಲ್ಯಮಾಪನ ಮಾಡುವ ಸಾಮರ್ಥ್ಯ ನಮಗೆ ದೊರಕಲಿ.
ಏಪ್ರಿಲ್
ಕಲೆ ಮಾನವೀಯತೆಯನ್ನು ಬೆಳೆಸುವ ವರವಾಗಲೆಂದು ಪ್ರಾರ್ಥಿಸೋಣ:
ಕಲೆ ಮಾನವನನ್ನು ಮಾನವೀಯಗೊಳಿಸುವ, ಆತ್ಮವನ್ನು ಉತ್ತೇಜಿಸುವ ಮತ್ತು ಸೃಷ್ಟಿಯಲ್ಲಿ ದೇವರ ಸೌಂದರ್ಯವನ್ನು ಧ್ಯಾನಿಸಲು ನೆರವಾಗುವ ನಿಜವಾದ ವರವಾಗಿ ಪರಿಗಣಿಸಲ್ಪಡಲಿ.
ಮೇ
ಎಲ್ಲರಿಗೂ ಉದ್ಯೋಗಾವಕಾಶಗಳು ದೊರಕಲೆಂದು ಪ್ರಾರ್ಥಿಸೋಣ:
ತಾಂತ್ರಿಕ ಅಭಿವೃದ್ಧಿ ಮಾನ್ಯವಾದ ಉದ್ಯೋಗಾವಕಾಶಗಳನ್ನು ತೆರೆಯಲಿ ಪೀಳಿಗೆಯ ಸಹಕಾರವು ಪ್ರತಿಯೊಬ್ಬರೂ ತಮ್ಮ ಪ್ರತಿಭೆಯನ್ನು ಸಾಮೂಹಿಕ ಹಿತಕ್ಕಾಗಿ ಬಳಸುವ ಭವಿಷ್ಯವನ್ನು ರೂಪಿಸಲಿ.
ಜೂನ್
ಕೃತಕ ಬುದ್ಧಿಮತ್ತೆಯ ಸದುಪಯೋಗಕ್ಕಾಗಿ ಪ್ರಾರ್ಥಿಸೋಣ:
ಕೃತಕ ಬುದ್ಧಿಮತ್ತೆ ಸದಾ ಮಾನವ ಗೌರವದ ಸೇವೆಗೆ ಅಭಿವೃದ್ಧಿಯಾಗಲಿ ಅದನ್ನು ವಿವೇಕಬುದ್ಧಿಯಿಂದ ಬಳಸುವ ಜ್ಞಾನ ನಮಗೆ ದೊರಕಲಿ.
ಜುಲೈ
ಅಜ್ಜ–ಅಜ್ಜಿ ಮತ್ತು ಹಿರಿಯರಿಗಾಗಿ ಪ್ರಾರ್ಥಿಸೋಣ:
ಧರ್ಮ ಸಭೆಯ ಸದಸ್ಯರು ಅಜ್ಜ–ಅಜ್ಜಿ ಮತ್ತು ಹಿರಿಯರು ನಮಗೆ ನೀಡುವ ವಿಶ್ವಾಸ ಮತ್ತು ಜ್ಞಾನದ ಅಮೂಲ್ಯ ಧನವನ್ನು ಸದಾ ಮೆಚ್ಚಲಿ ಅವರ ಅನುಭವದಿಂದ ಕಲಿಯಲು ಸಿದ್ಧರಾಗಿರಲಿ.
ಆಗಸ್ಟ್
ಯುವಜನರ ಕರೆಗಾಗಿ ಪ್ರಾರ್ಥಿಸೋಣ:
ತಮ್ಮ ಜೀವನದ ಕರೆಯನ್ನು ಹುಡುಕುತ್ತಿರುವ ಯುವಕರು, ಯೇಸು ಕ್ರಿಸ್ತನಲ್ಲಿ ತಮ್ಮ ಜೊತೆಯ ಪ್ರಯಾಣಿಕನನ್ನು ಗುರುತಿಸಲಿ ತಮ್ಮ ಹೃದಯವನ್ನು ಅವರಿಗೆ ತೆರೆಯಲಿ.
ಸೆಪ್ಟೆಂಬರ್
ಸಮಗ್ರ ಪರಿಸರ ಪರಿವರ್ತನೆಗಾಗಿ ಪ್ರಾರ್ಥಿಸೋಣ:
ಸೃಷ್ಟಿಯೊಂದಿಗೆ ಹೊಸ ಸಂಬಂಧದಲ್ಲಿ ಬದುಕಲು ನಾವು ಕಲಿಯಲಿ ನ್ಯಾಯದೊಂದಿಗೆ ಅದನ್ನು ರಕ್ಷಿಸಲಿ ಸೃಷ್ಟಿಯನ್ನು ಧ್ಯಾನಿಸುವ ಮೂಲಕ ಹೆಚ್ಚು ಸೌಹಾರ್ದಯುತ ಮತ್ತು ಕೃತಜ್ಞತೆಯ ಜೀವನದ ಮಾರ್ಗವನ್ನು ಕಂಡುಕೊಳ್ಳಲಿ.
ಅಕ್ಟೋಬರ್
ಕ್ರೈಸ್ತ ಸಮುದಾಯಗಳಿಗಾಗಿ ಪ್ರಾರ್ಥಿಸೋಣ:
ಪ್ರತಿಯೊಂದು ಧರ್ಮ ಕೇಂದ್ರ, ಸಮುದಾಯ ಅಥವಾ ಕ್ರೈಸ್ತ ಗುಂಪು ಸುವಾರ್ತೆಯ ಸೇವೆಗೆ ಹೊಸ ಶಿಷ್ಯರನ್ನು ರೂಪಿಸುವ ಮಿಷನರಿ ಕೇಂದ್ರವಾಗಿರಲಿ.
ನವೆಂಬರ್
ವಲಸಿಗರ ಏಕೀಕರಣಕ್ಕಾಗಿ ಪ್ರಾರ್ಥಿಸೋಣ:
ತಮ್ಮ ಮೂಲದಿಂದ ಕಿತ್ತುಹಾಕಲ್ಪಟ್ಟ ಪಯಣದಲ್ಲಿರುವ ವಲಸಿಗರು ಮತ್ತು ಸ್ಥಳಾಂತರಿಗಳು, ಪವಿತ್ರ ಕುಟುಂಬದ ಸಂಗಡಿಗರು ಮತ್ತು ಸಾಂತ್ವನದೊಂದಿಗೆ, ಗೌರವ, ಐಕ್ಯತೆ ಮತ್ತು ನಿಜವಾದ ಏಕೀಕರಣವನ್ನು ನೀಡುವ ಸಮುದಾಯಗಳನ್ನು ಕಂಡುಕೊಳ್ಳಲಿ.
ಡಿಸೆಂಬರ್
ಕುಟುಂಬದ ಕ್ರೈಸ್ತ ಕರೆಗಾಗಿ ಪ್ರಾರ್ಥಿಸೋಣ:
ಕ್ರೈಸ್ತ ಕುಟುಂಬಗಳು ಸಮಾಜದಲ್ಲಿ ಸುವಾರ್ತೆಯ ಜೀವಂತ ಸಾಕ್ಷಿಗಳಾಗಿರಲಿ ವಿಶ್ವಾಸ, ಭರವಸೆ ಮತ್ತು ಪ್ರೀತಿಯನ್ನು ಪೋಷಿಸುವ ಗೃಹಗಳಾಗುವಲ್ಲಿ ಹೆಚ್ಚು ಹೆಚ್ಚು ಬೆಳೆಯಲಿ.
