ಜಗದ್ಗುರು ಲಿಯೋ: ದೀಕ್ಷಾಸ್ನಾನ ಪಡೆದವರಲ್ಲಿ ಯಾರೂ ಸಹ ಧರ್ಮಪ್ರಚಾರದ ಕರ್ತವ್ಯದಿಂದ ವಿನಾಯಿತಿ ಹೊಂದಿಲ್ಲ
ವ್ಯಾಟಿಕನ್ ವರದಿ
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸಂಘರ್ಷಗಳು ಮತ್ತು ವಿಭಜನೆಯ ನಡುವೆ, ಸುವಾರ್ತೆಯ ಘೋಷಣೆಯು ಶಾಂತ ಹೃದಯಗಳು ಹಾಗೂ ಸಮಾಧಾನಗೊಂಡ ಮನಸ್ಸುಗಳನ್ನು ಅಗತ್ಯಪಡಿಸುತ್ತದೆ ಎಂದು ಜಗದ್ಗರು XIVನೇ ಲಿಯೋರವರು ತಿಳಿಸಿದ್ದಾರೆ. ಕ್ರಿಸ್ತನಲ್ಲಿ ಏಕತೆಯನ್ನು ಬೆಳೆಸಿ, ಮಾನವ ಕುಟುಂಬದೊಳಗೆ ಒಗ್ಗಟ್ಟು ನಿರ್ಮಿಸುವುದು ಧರ್ಮಪ್ರಚಾರದ ಮೂಲ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಜಗದ್ಗುರು XI ನೇ ಭಕ್ತಿನಾಥ ರವರು ಸ್ಥಾಪಿಸಿದ 100ನೇ ವಿಶ್ವ ಧರ್ಮಪ್ರಚಾರ ದಿನದ ಅಂಗವಾಗಿ, ಅಕ್ಟೋಬರ್ 18ರಂದು ಈ ದಿನವನ್ನು ಕ್ರಿಸ್ತನಲ್ಲಿ ಏಕತೆ, ಧರ್ಮಪ್ರಚಾರದಲ್ಲಿ ಒಗ್ಗಟ್ಟು ಎಂಬ ವಿಷಯದೊಂದಿಗೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲೇ ಜಗದ್ಗುರು XIVನೇ ಲಿಯೋರವರು ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಧರ್ಮಪ್ರಚಾರದ ಹೃದಯದಲ್ಲಿ ಕ್ರಿಸ್ತನೊಂದಿಗೆ ಏಕತೆಯ ರಹಸ್ಯ ಅಡಗಿದೆ ಎಂದು ಜಗದ್ಗುರುಗಳು ಬರೆಯುತ್ತಾರೆ. ಧರ್ಮ ಸಭೆಯ ಮೂಲ ಗುರುತು ತ್ರಿತ್ವದಿಂದ ಹುಟ್ಟಿದ ಸಮಾಗಮವಾಗಿದ್ದು, ಅದು ಮಾನವರೆಲ್ಲರ ನಡುವೆ ಸಹೋದರತ್ವಕ್ಕೆ ಮತ್ತು ಸಕಲ ಸೃಷ್ಟಿಯೊಂದಿಗೆ ಸೌಹಾರ್ದತೆಗೆ ಸೇವೆ ಸಲ್ಲಿಸುತ್ತದೆ. ಈ ಕಾರಣದಿಂದಲೇ ಚರ್ಚಿನ ಮೊದಲ ಜವಾಬ್ದಾರಿ ಎಂದರೆ ಅದರೊಳಗಿನ ಆತ್ಮಿಕ ಹಾಗೂ ಸಹೋದರೀಯ ಏಕತೆಯನ್ನು ಪುನರುಜ್ಜೀವನಗೊಳಿಸುವುದು.
ಈ ಏಕತೆ ಸ್ವತಃ ಗುರಿಯಲ್ಲ, ಅದು ಧರ್ಮಪ್ರಚಾರದತ್ತ ಮುಖಮಾಡಿದೆ ಎಂದು ಜಗದ್ಗುರುಗಳು ಸ್ಪಷ್ಟಪಡಿಸುತ್ತಾರೆ. ಚರ್ಚಿನ ಸಮಾಗಮದಲ್ಲೇ ಸುವಾರ್ತೆಯ ಘೋಷಣೆ ತನ್ನ ಸಂಪೂರ್ಣ ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ ದೀಕ್ಷಾಸ್ನಾನ ಪಡೆದ ಯಾರೂ ಸಹ ಧರ್ಮಪ್ರಚಾರದ ಕರ್ತವ್ಯದಿಂದ ಹೊರತಾಗಿಲ್ಲ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನ ಸ್ಥಿತಿ ಮತ್ತು ಕರೆಯಂತೆ ಕ್ರಿಸ್ತನು ಚರ್ಚಿಗೆ ನೀಡಿದ ಮಹಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ.
ಧರ್ಮಪ್ರಚಾರದ ಆತ್ಮವೇ ಪ್ರೀತಿ ಎಂದು ಜಗದ್ಗುರುಗಳು ಹೇಳಿದ್ದಾರೆ. ಘೋಷಿಸಬೇಕಾದ ಶುಭಸಂದೇಶವು ಯಾವುದೇ ಸಿದ್ಧಾಂತವಲ್ಲ, ಬದಲಾಗಿ ಯೇಸು ಕ್ರಿಸ್ತನ ಮುಖ ಮತ್ತು ಜೀವನದಲ್ಲಿ ವ್ಯಕ್ತವಾದ ದೇವರ ನಿಷ್ಠಾವಂತ ಪ್ರೀತಿಯೇ ಆಗಿದೆ. ಶತಮಾನಗಳ ಕಾಲ ಅನೇಕ ಶಹೀದರು, ಧರ್ಮಪ್ರಚಾರಕರು ಮತ್ತು ಸಾಕ್ಷಿಗಳು ಈ ಪ್ರೀತಿಯನ್ನು ಲೋಕಕ್ಕೆ ಪರಿಚಯಿಸಲು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ.
ಸಂದೇಶದ ಅಂತ್ಯದಲ್ಲಿ ಜಗದ್ಗುರು XIVನೇ ಲಿಯೋರವರು ಪ್ರಾರ್ಥಿಸುತ್ತಾರೆ ಚರ್ಚಿನ ಎಲ್ಲಾ ಸದಸ್ಯರು ಕ್ರಿಸ್ತನಲ್ಲಿ ಒಂದಾಗಿ, ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಧೈರ್ಯಶಾಲಿ ಸಾಕ್ಷಿಗಳಾಗಿ ಬೆಳೆಯಲಿ ಧರ್ಮಪ್ರಚಾರಕರು ತಮ್ಮ ಸೇವೆಯಲ್ಲಿ ಬಲಪಡೆಯಲಿ ಮತ್ತು ಮಾತೆ ಮರಿಯಮ್ಮನವರು, ಧರ್ಮಪ್ರಚಾರಗಳ ರಾಣಿ, ಭೂಮಿಯ ಎಲ್ಲ ಮೂಲೆಗಳಲ್ಲಿ ಸುವಾರ್ತೆಯ ಕಾರ್ಯಕ್ಕೆ ಜೊತೆಯಾಗಲಿ. ಲೋಕವು ಕ್ರಿಸ್ತನಲ್ಲಿ ರಕ್ಷಣೆಯ ಬೆಳಕನ್ನು ಕಂಡುಕೊಳ್ಳಲಿ ಎಂಬುದೇ ಅವರ ಪ್ರಾರ್ಥನೆಯಾಗಿದೆ.
