ಡಿಆರ್ ಕಾಂಗೋ ಮತ್ತು ಪ್ರವಾಹದಿಂದ ಪೀಡಿತ ದಕ್ಷಿಣ ಆಫ್ರಿಕಾಗಾಗಿ ಜಗದ್ಗುರುಗಳ ಪ್ರಾರ್ಥನೆ
ವ್ಯಾಟಿಕನ್ ವರದಿ
ಜನವರಿ 18ರಂದು ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಡೆಮೊಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಪೂರ್ವ ಭಾಗದಲ್ಲಿನ ಜನರು ಅನುಭವಿಸುತ್ತಿರುವ ದುಃಖದ ಕಡೆಗೆ ತಮ್ಮ ಗಮನ ಹರಿಸಿದರು. ಅಲ್ಲಿನ ಹಿಂಸಾಚಾರದಿಂದ ಗಂಭೀರ ಮಾನವೀಯ ಸಂಕಷ್ಟ ಮುಂದುವರಿದಿದ್ದು, ಅನೇಕ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಓಡಿಹೋಗಬೇಕಾದ ಪರಿಸ್ಥಿತಿಗೆ ತಲುಪಿವೆ ಎಂದು ಅವರು ಹೇಳಿದರು.
ಅಲ್ಲಿನ ಜನತೆ ಭಾರೀ ಕಷ್ಟಗಳನ್ನು ಎದುರಿಸುತ್ತಿದ್ದು, ಭದ್ರತೆಯ ಕೊರತೆ ಮತ್ತು ಸಶಸ್ತ್ರ ಸಂಘರ್ಷ ಮುಂದುವರಿದಿರುವ ಕಾರಣ ಹಲವಾರು ದೇಶದ ಗಡಿಗಳನ್ನು ದಾಟಿ, ವಿಶೇಷವಾಗಿ ನೆರೆಯ ಬುರುಂಡಿಗೆ ಆಶ್ರಯ ಪಡೆಯಬೇಕಾಗಿದೆ ಎಂದು ಜಗದ್ಗರುಗಳು ಗಮನಿಸಿದರು. ಸಂಘರ್ಷದಲ್ಲಿರುವ ಪಕ್ಷಗಳ ನಡುವೆ ಸಂವಾದ ಸದಾ ಮೇಲುಗೈ ಸಾಧಿಸಿ, ಸಮ್ಮಿಲನ ಮತ್ತು ಶಾಂತಿಗೆ ದಾರಿ ತೆರೆಯಲಿ ಎಂದು ಅವರು ಪ್ರಾರ್ಥನೆಗೆ ಕರೆ ನೀಡಿದರು.
ಕಾಂಗೋದ ದುಃಖವು ಹಿಂಸಾಚಾರದಿಂದ ಮಾತ್ರವಲ್ಲ, ತೀವ್ರ ಹವಾಮಾನದ ಪರಿಣಾಮಗಳಿಂದಲೂ ಹೆಚ್ಚಾಗಿದೆ ಎಂದು ಜಗದ್ಗರುಗಳು ಹೇಳಿದರು. ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, ಈಗಾಗಲೇ ದುರ್ಬಲವಾಗಿರುವ ಮಾನವೀಯ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಸಂಘರ್ಷದಿಂದ ಓಡಿಹೋಗಿರುವ ಜನರು ಅತ್ಯಂತ ಅಸ್ಥಿರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಶರಣಾರ್ಥಿ ಶಿಬಿರಗಳಲ್ಲಿ ಆಹಾರ, ಶುದ್ಧ ನೀರು ಮತ್ತು ವೈದ್ಯಕೀಯ ಸೇವೆಗಳ ಲಭ್ಯತೆ ತೀವ್ರವಾಗಿ ಸೀಮಿತವಾಗಿದ್ದು, ಕಾಲರಾ ಮುಂತಾದ ರೋಗಗಳು ಹಸಿವು, ದಣಿವು ಮತ್ತು ಸ್ಥಳಾಂತರದಿಂದ ಕುಗ್ಗಿರುವ ಜನರಲ್ಲಿ ಹರಡುವ ಅಪಾಯ ಹೆಚ್ಚುತ್ತಿದೆ.
ಇದೇ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋ ರವರು ದಕ್ಷಿಣ ಆಫ್ರಿಕಾದತ್ತವೂ ತಮ್ಮ ಚಿಂತೆಯನ್ನು ಹರಿಸಿದರು. ಇತ್ತೀಚಿನ ದಿನಗಳಲ್ಲಿ ಭಾರೀ ಮಳೆ ಮತ್ತು ವ್ಯಾಪಕ ಪ್ರವಾಹಗಳಿಂದ ನೂರಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, ಸಂಪೂರ್ಣ ಸಮುದಾಯಗಳು ಮುಳುಗಿವೆ ಹಾಗೂ ಮನೆಗಳು ಮತ್ತು ಅಗತ್ಯ ಮೂಲಸೌಕರ್ಯಗಳು ಭಾರೀ ಹಾನಿಗೊಳಗಾಗಿವೆ. ದಕ್ಷಿಣ ಆಫ್ರಿಕಾ, ಮೊಜಾಂಬಿಕ್ ಮತ್ತು ಜಿಂಬಾಬ್ವೆ ದೇಶಗಳ ಜನರಿಗೆ ಜಗದ್ಗುರುಗಳು ತಮ್ಮ ಸಮೀಪತೆಯನ್ನು ವ್ಯಕ್ತಪಡಿಸಿ, ಧರ್ಮ ಸಭೆಯ ಐಕ್ಯತೆಯನ್ನು ಭರವಸೆ ನೀಡಿದರು ಮತ್ತು ಮೃತರು, ಸ್ಥಳಾಂತರಿತರಾದವರು ಹಾಗೂ ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ಎಲ್ಲರಿಗಾಗಿ ಪ್ರಾರ್ಥಿಸಿದರು.
