ಹುಡುಕಿ

ವ್ಯಾಟಿಕನ್ ನಲ್ಲಿ ಜಗದ್ಗುರು ಲಿಯೋರವರು ಮತ್ತು ಪೆರುವಿನ ಬಿಷಪ್ ಗಳು ವ್ಯಾಟಿಕನ್ ನಲ್ಲಿ ಜಗದ್ಗುರು ಲಿಯೋರವರು ಮತ್ತು ಪೆರುವಿನ ಬಿಷಪ್ ಗಳು  (ANSA)

ಜಗದ್ಗುರುಗಳು ಪೆರುವಿನ ಧರ್ಮಾಧ್ಯಕ್ಷರಿಗೆ:ಪ್ರೇಷಿತರಂತೆ ಬದುಕಿರಿ ಎಂದರು

ಇಂದಿನ ಜಗತ್ತಿನಲ್ಲಿ ಸುವಾರ್ತಾ ಸ್ಮರಣೆಯ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಪೆರುದ ಧರ್ಮಾಧ್ಯಕ್ಷರಿಗೆ ಏಕತೆ, ಸುವಾರ್ತೆಗೆ ನಿಷ್ಠೆ ಮತ್ತು ಧರ್ಮಾಧ್ಯಕ್ಷರ ಸಮೀಪತೆಯ ಬದ್ಧತೆಯನ್ನು ನವೀಕರಿಸಿಕೊಳ್ಳುವಂತೆ ಪ್ರೇರೇಪಿಸಿದರು. ಜೊತೆಗೆ, ಪೆರು ದೇಶದಲ್ಲಿ ತಾವು ಅನುಭವಿಸಿದ ವೈಯಕ್ತಿಕ ಧರ್ಮಾಧಿಕಾರಿಗಳ ಅನುಭವಗಳನ್ನು ಸ್ಮರಿಸಿ, ಪೆರು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ಅದ್ ಲಿಮಿನಾ ಭೇಟಿಗಾಗಿ ಆಗಮಿಸಿದ ಪೆರುದ ಧರ್ಮಾಧ್ಯಕ್ಷರನ್ನು ಸ್ವಾಗತಿಸಿದ ಜಗದ್ಗುರು XIVನೇ ಲಿಯೋರವರು ಅವರನ್ನು ಪ್ರೇಷಿತರ  ರೀತಿಯಲ್ಲಿ ಬದುಕಿರಿ ಎಂದು ಆಹ್ವಾನಿಸಿದರು. ಸಂತ ಟೊರಿಬಿಯೋ ದೆ ಮೊಗ್ರೊವೆಹೊರವರ ಸಂತಘೋಷಣೆಯ 300ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿಯೇ ಈ ಯಾತ್ರೆಯನ್ನು ಸ್ಥಾಪಿಸಿ, ಪೆರುದ ಧರ್ಮ ಸಭೆಯ ಆ ಮಹಾನ್ ಧರ್ಮಾಧ್ಯಕ್ಷರು ಬಿತ್ತಿದ ಸುವಾರ್ತಾ ಬೀಜದ ಫಲವಾಗಿದೆ ಎಂದು ಜಗದ್ಗುರುಗಳು ಸ್ಮರಿಸಿದರು.

ಜಗದ್ಗರುಗಳ ಭಾಷಣದ ಕೇಂದ್ರಬಿಂದುವಾಗಿದ್ದದ್ದು ಏಕತೆ ಮತ್ತು ಸಮಾಗಮದ ಬಲವಾದ ಕರೆಯೇ ಆಗಿತ್ತು. ಇಂದು ಧರ್ಮ ಸಭೆಯ ಘೋಷಣೆಯ ವಿಶ್ವಾಸಾರ್ಹತೆ, ಧರ್ಮಾಧಿಕಾರಿಗಳ ನಡುವಿನ ಮತ್ತು   ದೇವಜನರ ನಡುವಿನ ಹೃದಯಪೂರ್ಣ ಸಮಾಗಮದಿಂದಲೇ ಹೊರಹೊಮ್ಮುತ್ತದೆ ಎಂದು ಅವರು ಹೇಳಿದರು. ವಿಭಜನೆಗಳು, ವೈಯಕ್ತಿಕ ಮಹತ್ವಾಕಾಂಕ್ಷೆಗಳು ಮತ್ತು ಏಕಾಂಗಿತನದ ಎಲ್ಲ ರೂಪಗಳನ್ನು ಮೀರಿದಾಗಲೇ ಈ ಸಮಾಗಮ ಸಾಧ್ಯವೆಂದು ಅವರು ಒತ್ತಿಹೇಳಿದರು.

ಪ್ರಾಚೀನ ಧರ್ಮಸಭೆ ಮತ್ತು ಸಂತ ಟೊರಿಬಿಯೋ ಅವರ ಸಾಕ್ಷಿಯನ್ನು ಸ್ಮರಿಸಿದ ಜಗದ್ಗುರುಗಳು, ನಿಜವಾದ ಸಮಾಗಮವು ಕೇವಲ ರಚನಾತ್ಮಕವಾಗಿರದೆ, ಬದಲಾಗಿ ಹಂಚಿಕೊಂಡ ನಂಬಿಕೆ ಮತ್ತು ಗುರಿಯಲ್ಲಿ ಬೇರುಬಿಟ್ಟ ಆಳವಾದ ಆಧ್ಯಾತ್ಮಿಕ ಅನುಭವವಾಗಿರಬೇಕು ಎಂದು ತಿಳಿಸಿದರು. ಇದು ಧರ್ಮಸಭೆಯ ಜೀವಂತತೆಗೆ ಮೂಲವಾಗಿದೆ ಎಂದರು.

ಪೆರುವಿನಲ್ಲಿನ ಇಂದಿನ ಧರ್ಮಸಭೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತಾ, ಜಗದ್ಗುರು XIVನೇ ಲಿಯೋರವರು ಸುವಾರ್ತೆಗೆ ನವೀಕರಿಸಲ್ಪಟ್ಟ ನಿಷ್ಠೆಯ ಅಗತ್ಯವನ್ನು ಸೂಚಿಸಿದರು. ಸಂತ ಟೊರಿಬಿಯೋ ಅವರು ತಮ್ಮದೇ ಮಾತನ್ನು ಅಲ್ಲ, ಬದಲಾಗಿ ದೇವರಿಂದ ಪಡೆದ ವಾಕ್ಯವನ್ನು ಸಾರಿದರು ಅದರ ಪರಿವರ್ತನಾ ಶಕ್ತಿಯಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಜಗದ್ಗುರುಗಳು ಹೇಳಿದರು. ಇಂದಿನ ಧರ್ಮಸಭೆ ಕೂಡ ಕ್ರೈಸ್ತ ಗುರುತನ್ನು ಕಳೆದುಕೊಳ್ಳದೆ ಸಂಸ್ಕೃತಿಯೊಂದಿಗೆ ಸಂವಾದ ನಡೆಸುವ, ಸ್ಪಷ್ಟ, ಧೈರ್ಯಶಾಲಿ ಮತ್ತು ಸಂತೋಷಪೂರ್ಣ ಸುವಾರ್ತಾ ಘೋಷಣೆಗೆ ಕರೆಯಲ್ಪಟ್ಟಿದೆ ಎಂದು ಹೇಳಿದರು.

ಜಗದ್ಗರುಗಳು ಧರ್ಮಾದ್ಯಕ್ಷರ ಸಮೀಪತೆಯ ಮಹತ್ವವನ್ನೂ ವಿಶೇಷವಾಗಿ ಒತ್ತಿಹೇಳಿದರು. ಪ್ರೇಷಿತರ  ಮತ್ತು ಸಂತ ಪೌಲರಂತೆ, ಸುವಾರ್ತೆಯ ನಿಮಿತ್ತ ಎಲ್ಲರಿಗೂ ಎಲ್ಲದಾಗುವ ಮನೋಭಾವವನ್ನು ಧರ್ಮಾಧ್ಯಕ್ಷರು ಅಳವಡಿಸಿಕೊಳ್ಳಬೇಕೆಂದು ಅವರು ಹೇಳಿದರು. ತಮ್ಮ ಆರೈಕೆಗೆ ಒಪ್ಪಿಸಲಾದ ಪ್ರತಿಯೊಬ್ಬರ ಬಳಿಗೆ ಸಮೀಪವಾಗಿ ನಿಂತು, ಅವರ ಜೀವನ ಮತ್ತು ಯಾತ್ರೆಯಲ್ಲಿ ಪಾಲುಗೊಳ್ಳುವುದೇ ಪ್ರೇಷಿತರ ರೀತಿಯಲ್ಲಿ ಬದುಕುವ ಅರ್ಥವೆಂದು ಜಗದ್ಗುರುಗಳು ವಿವರಿಸಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಪೆರುದಲ್ಲಿ ತಮ್ಮದೇ ಧರ್ಮಾಧ್ಯಕ್ಷೀಯ ಜೀವನದ ಅನುಭವವನ್ನು ಸ್ಮರಿಸಿ, ಆ ದೇಶವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಎಂದು ಹೇಳಿದರು. ಪೆರುವಿನ  ಜನರ ಸರಳ ನಂಬಿಕೆಯಿಂದ ತಾವು ಕಲಿತಿದ್ದು, ಪರೀಕ್ಷೆಗಳ ಮಧ್ಯೆಯೂ ನಿರೀಕ್ಷೆಯನ್ನು ಕಳೆದುಕೊಳ್ಳದ ಧರ್ಮ ಸಭೆಯ ಶಕ್ತಿಯನ್ನು ಅಲ್ಲಿ ಅನುಭವಿಸಿದ್ದಾಗಿ ಅವರು ಹೇಳಿದರು. ಅವರು ಪೆರುವಿನ ಧರ್ಮಾಧ್ಯಕ್ಷರು, ಯಾಜಕರು, ಸಮರ್ಪಿತರು ಮತ್ತು ಎಲ್ಲಾ ವಿಶ್ವಾಸಿಗಳನ್ನು ದಯಾಮಾತೆಯಾದ ಧನ್ಯ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಿ, ವಿಶೇಷವಾಗಿ ಬಲ ಮತ್ತು ಸಾಂತ್ವನಕ್ಕೆ ಅತ್ಯಂತ ಅಗತ್ಯವಿರುವವರ ಮೇಲೆ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

30 ಜನವರಿ 2026, 00:00