ಹುಡುಕಿ

ವ್ಯಾಟಿಕನ್ ನಲ್ಲಿ ಯಾತ್ರಿಕರನ್ನು ಸ್ವಾಗತಿಸುತ್ತಿರುವ ಜಗದ್ಗುರು XIV ನೇ ಲಿಯೋ ವ್ಯಾಟಿಕನ್ ನಲ್ಲಿ ಯಾತ್ರಿಕರನ್ನು ಸ್ವಾಗತಿಸುತ್ತಿರುವ ಜಗದ್ಗುರು XIV ನೇ ಲಿಯೋ 

ಜಗದ್ಗರುಗಳು: ಧರ್ಮಸಭೆಯಲ್ಲಿ ಜನರ ಸಂಖ್ಯೆಗಿಂತ ಸ್ವಂತಿಕೆಯ ಭಾವನೆ ಮುಖ್ಯ

ಪಿಯಾಜಾ ಸಾನ್ ಪಿಯೆಟ್ರೋ ಮ್ಯಾಗಜಿನ್‌ನ ಜನವರಿ ಸಂಚಿಕೆಯಲ್ಲಿ, ತಮ್ಮ ಧರ್ಮ ಕೇಂದ್ರದಲ್ಲಿ ಕುಟುಂಬಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಹೋರಾಡುತ್ತಿರುವ ಸ್ವಿಸ್ ಕ್ಯಾಟೆಕಿಸ್ಟ್‌ರನ್ನು ಉತ್ತೇಜಿಸುತ್ತಾ, ಜಗದ್ಗುರು XIVನೇ ಲಿಯೋರವರು ಕ್ಯಾಟೆಕಿಸಿಸ್‌ಗೆ ಮೀಸಲಿಡುವ ಗಂಟೆಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ವ್ಯಾಟಿಕನ್ ವರದಿ

ಇಟಾಲಿಯನ್ ಮ್ಯಾಗಜಿನ್ ಪಿಯಾಜಾ ಸಾನ್ ಪಿಯೆಟ್ರೋಯ ಜನವರಿ ಸಂಚಿಕೆ ಶಾಂತಿಯ ವಿಷಯಕ್ಕೆ ಮೀಸಲಾಗಿದ್ದು, ಅದರಲ್ಲಿ ಜಗದ್ಗುರು XIVನೇ ಲಿಯೋರವರು ಸ್ವಿಟ್ಜರ್ಲ್ಯಾಂಡ್‌ನ 50 ವರ್ಷದ ಕ್ಯಾಟೆಕಿಸ್ಟ್ ನುನ್ಜಿಯಾ ಅವರಿಗೆ ಉತ್ತರಿಸಿದ್ದಾರೆ. ನುನ್ಜಿಯಾ ತಮ್ಮ ಧರ್ಮ ಕೇಂದ್ರದಲ್ಲಿ  ಕುಟುಂಬಗಳು, ಮಕ್ಕಳು ಮತ್ತು ಯುವಜನರನ್ನು ಚರ್ಚಿನ ಜೀವನಕ್ಕೆ ಸೆಳೆಯುವುದು ದಿನೇ ದಿನೇ ಕಷ್ಟವಾಗುತ್ತಿದೆ ಎಂಬ ತಮ್ಮ ಹೋರಾಟವನ್ನು ಪತ್ರದ ಮೂಲಕ ಜಗದ್ಗುರುಗಳೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಪತ್ರದಲ್ಲಿ, ಲಾಫೆನ್‌ಬರ್ಗ್ ಎಂಬ ಸಣ್ಣ ಪಟ್ಟಣದಲ್ಲಿ ವಾಸಿಸುವ ನುನ್ಜಿಯಾ, ಸ್ವಿಟ್ಜರ್ಲ್ಯಾಂಡ್‌ನಲ್ಲಿ ಪೋಷಕರನ್ನು ಧರ್ಮಕೇಂದ್ರದ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಕಷ್ಟಕರವಾಗಿದ್ದು, ಕೆಲವೊಮ್ಮೆ ಮಕ್ಕಳಿಗೂ ಯುವಜನರಿಗೂ ದೇವರ ಮೇಲಿನ ನಂಬಿಕೆ ಬೆಳೆಸುವುದು ಸವಾಲಾಗಿದೆ ಎಂದು ವಿವರಿಸುತ್ತಾರೆ. ಅವರು ಬೀಜ ಬಿತ್ತುವಂತೆ ಕೆಲಸ ಮಾಡುತ್ತಿದ್ದರೂ, ಅವು ಮೊಳಕೆಯೊಡೆಯಲು ಹೋರಾಡುತ್ತಿರುವಂತೆ ಕಾಣುತ್ತದೆ. ಮಕ್ಕಳು ಮತ್ತು ಕುಟುಂಬಗಳು ಧಾರ್ಮಿಕ ಚಟುವಟಿಕೆಗಳಿಗಿಂತ ಕ್ರೀಡೆಗಳು ಮತ್ತು ಹಬ್ಬಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಜಗದ್ಗರು XIVನೇ ಲಿಯೋರವರು ತಮ್ಮ ಉತ್ತರದಲ್ಲಿ, ನುನ್ಜಿಯಾ ಅನುಭವಿಸುತ್ತಿರುವ ಪರಿಸ್ಥಿತಿ ಕ್ರೈಸ್ತ ಪರಂಪರೆ ಹೊಂದಿರುವ ಅನೇಕ ದೇಶಗಳಲ್ಲಿಯೂ ಕಂಡುಬರುತ್ತಿದೆ ಎಂದು ಹೇಳುತ್ತಾರೆ. ಅವರು ಧರ್ಮ ಸಭೆಯಲ್ಲಿ ಜನಸಂಖ್ಯೆಯ ಸಂಖ್ಯೆಗಿಂತ, ನಂಬಿಕೆಯ ಆಳ ಸೇರಿದ್ದೇವೆ ಎಂಬ ಭಾವನೆ ಮುಖ್ಯ ಎಂದು ಒತ್ತಿಹೇಳುತ್ತಾರೆ. ಕ್ಯಾಟೆಕಿಸಿಸ್‌ಗೆ ಮೀಸಲಾದ ಸಮಯ ಎಂದಿಗೂ ವ್ಯರ್ಥವಾಗುವುದಿಲ್ಲ, ಭಾಗವಹಿಸುವವರು ಅಲ್ಪಸಂಖ್ಯೆಯಲ್ಲಿದ್ದರೂ ಸಹ ಎಂದು ಜಗದ್ಗರುಗಳು ಧೈರ್ಯ ತುಂಬುತ್ತಾರೆ.

ಜಗದ್ಗರುಗಳು ಧರ್ಮ ಸಭೆಯ ಮುಂದೆ ಇರುವ ಸವಾಲನ್ನು ಸ್ಪಷ್ಟವಾಗಿ ಸೂಚಿಸುತ್ತಾ, ಸಮಸ್ಯೆ ಕೇವಲ ಸಂಖ್ಯೆಗಳಲ್ಲ, ಬದಲಾಗಿ ಕ್ರಿಸ್ತನ ದೇಹವಾದ ಧರ್ಮ ಸಭೆಯ ಜೀವಂತ ಅಂಗಗಳೆಂದು ತಾವು ಸೇರಿದವರಾಗಿದ್ದೇವೆ ಎಂಬ ಅರಿವಿನ ಕೊರತೆಯಲ್ಲಿದೆ ಎಂದು ಹೇಳುತ್ತಾರೆ. ನಂಬಿಕೆ ಕೇವಲ ಅಭ್ಯಾಸದ ಭಾಗವಾಗಿ ಅಥವಾ ಸಂಸ್ಕಾರಗಳನ್ನು ಬಳಸುವ ಮಟ್ಟಕ್ಕೆ ಸೀಮಿತವಾಗಬಾರದು ಎಂದು ಅವರು ಎಚ್ಚರಿಸುತ್ತಾರೆ.

ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು ನುನ್ಜಿಯಾ ಮತ್ತು ಇಂತಹ ಪರಿಸ್ಥಿತಿಯನ್ನು ಎದುರಿಸುವ ಎಲ್ಲರಿಗೂ ಉತ್ತೇಜನ ನೀಡುತ್ತಾ, ಕ್ರೈಸ್ತರಾಗಿ ನಾವು ಸದಾ ಪರಿವರ್ತನೆಗೆ ಕರೆಯಲ್ಪಟ್ಟವರಾಗಿದ್ದೇವೆ ಮತ್ತು ಅದನ್ನು ಒಟ್ಟಾಗಿ ಹುಡುಕಬೇಕು ಎಂದು ನೆನಪಿಸುತ್ತಾರೆ. ನಿಜವಾದ ನಂಬಿಕೆಯ ದ್ವಾರ ಕ್ರಿಸ್ತನ ಹೃದಯವಾಗಿದ್ದು, ಅದು ಸದಾ ತೆರೆದಿರುತ್ತದೆ ಎಂದು ಹೇಳುವ ಜಗದ್ಗುರುಗಳು, VI ನೇ ಪೌಲರ ಪರಂಪರೆಯನ್ನು ಸ್ಮರಿಸಿ, ಕ್ರಿಸ್ತನ ಸುವಾರ್ತೆಯ ಸಂತೋಷವನ್ನು ಸಾಕ್ಷಿಯಾಗಿ ಬದುಕುವುದೇ ನಮ್ಮ ಕರ್ತವ್ಯ ಎಂದು ಕರೆ ನೀಡುತ್ತಾರೆ.

13 ಜನವರಿ 2026, 18:39