ಹುಡುಕಿ

Pope Leo XIV hosts special audience for young people of the Diocese of Rome

ಮಾನವ ಹಕ್ಕುಗಳು ಮತ್ತು ವ್ಯಾಪಿಸುತ್ತಿರುವ ಯುದ್ಧೋನ್ಮಾದ ಕುರಿತು ಪೋಪ್ ಎಚ್ಚರಿಕೆ

ರಾಜತಾಂತ್ರಿಕ ದಳದ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು ಗಂಭೀರ ಒತ್ತಡದಲ್ಲಿರುವುದಾಗಿ ಎಚ್ಚರಿಸಿದರು. ರಾಜತಾಂತ್ರಿಕ ಸಂವಾದ ಮತ್ತು ಮಾತುಕತೆಯ ಬದಲು, ಶಕ್ತಿ ಮತ್ತು ಯುದ್ಧದ ತರ್ಕಕ್ಕೆ ಜಾಗ ನೀಡಲಾಗುತ್ತಿರುವುದು ಗಂಭೀರ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

ಪವಿತ್ರ ಸಿಂಹಾಸನಕ್ಕೆ ಮಾನ್ಯತೆ ಪಡೆದ ರಾಜತಾಂತ್ರಿಕ ದಳವನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು  ಯುದ್ಧ ಒಂದು ಫ್ಯಾಷನ್ ಆಗಿದೆ ಎಂದು ಎಚ್ಚರಿಸಿ, ನ್ಯಾಯಕ್ಕಿಂತ ಶಕ್ತಿಯ ಮೂಲಕ ಶಾಂತಿಯನ್ನು ಸಾಧಿಸಲು ಪ್ರಯತ್ನಿಸಲಾಗುತ್ತಿರುವುದು ಗಂಭೀರ ಅಪಾಯವೆಂದು ಹೇಳಿದರು. ಸಂವಾಧಾರಿತ ರಾಜತಾಂತ್ರಿಕತೆಯ ಬದಲು ಶಕ್ತಿ, ಭೀತಿ ಮತ್ತು ತಡೆಗಟ್ಟುವಿಕೆಯ ತರ್ಕ ಮೇಲುಗೈ ಸಾಧಿಸುತ್ತಿರುವುದರಿಂದ ಅಂತರರಾಷ್ಟ್ರೀಯ ಸಹಬಾಳ್ವೆಯ ಮೂಲ ಅಡಿಪಾಯಗಳು ಕುಸಿಯುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ದ್ವಿತೀಯ ಮಹಾಯುದ್ಧದ ನಂತರ ರಾಷ್ಟ್ರಗಳು ಪರಸ್ಪರ ಗಡಿಗಳನ್ನು ಉಲ್ಲಂಘಿಸಲು ಬಲಪ್ರಯೋಗ ಮಾಡಬಾರದು ಎಂಬ ತತ್ವ ಸಂಪೂರ್ಣವಾಗಿ ದುರ್ಬಲಗೊಂಡಿದೆ ಎಂದು ಜಗದ್ಗುರುಗಳು ಹೇಳಿದರು. ಅಸ್ತ್ರಗಳ ಮೂಲಕ ಶಾಂತಿ ಎಂಬ ಮನೋಭಾವ ಕಾನೂನಿನ ಆಳ್ವಿಕೆಗೆ ಗಂಭೀರ ಬೆದರಿಕೆ ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದರು. ಶಾಂತಿ ಎಂಬುದು ಸ್ವಾಧೀನವಲ್ಲ, ಅದು ಎಲ್ಲರಿಗೂ ಸೇರಿದ ಸಾಮೂಹಿಕ ಮೌಲ್ಯವಾಗಿರಬೇಕು ಎಂದು ಅವರು ಸಂತ ಅಗಸ್ಟೀನರ ಚಿಂತನೆಗಳನ್ನು ಉಲ್ಲೇಖಿಸಿ ತಿಳಿಸಿದರು.

ಯುದ್ಧದ ಭೀಕರ ಪರಿಣಾಮಗಳ ಬಗ್ಗೆ ಮಾತನಾಡಿದ ಜಗದ್ಗುರಗಳು , ನಾಗರಿಕರ ಮೇಲೆ ನಡೆಯುವ ದಾಳಿಗಳು, ಆಸ್ಪತ್ರೆಗಳು, ಮನೆಗಳು ಹಾಗೂ ಅವಶ್ಯಕ ಮೂಲಸೌಕರ್ಯಗಳ ನಾಶವು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿವೆ ಎಂದರು. ಮಾನವ ಗೌರವ ಮತ್ತು ಜೀವದ ಪಾವಿತ್ರ್ಯವು ಯಾವುದೇ ರಾಷ್ಟ್ರೀಯ ಹಿತಾಸಕ್ತಿಗಿಂತ ಮೇಲಿರಬೇಕು ಎಂದು ಅವರು ಸ್ಪಷ್ಟಪಡಿಸಿ, ಮಾನವೀಯ ಕಾನೂನು ಯಾವ ಸಂದರ್ಭದಲ್ಲೂ ಪಾಲನೆಯಾಗಲೇಬೇಕೆಂದು ಒತ್ತಿ ಹೇಳಿದರು.

ವಿಶ್ವದ ವಿವಿಧ ಸಂಘರ್ಷಗಳನ್ನು ಉಲ್ಲೇಖಿಸಿದ ಜಗದ್ಗುರು XIVನೇ ಲಿಯೋರವರು  ಉಕ್ರೇನ್ ಯುದ್ಧಕ್ಕೆ ತಕ್ಷಣದ ಕದನ ವಿರಾಮ ಮತ್ತು ಸತ್ಯಸಂಧ ಸಂವಾದಕ್ಕೆ ಕರೆ ನೀಡಿದರು. ಪವಿತ್ರ ಭೂಮಿಯಲ್ಲಿ, ಗಾಜಾ ಮತ್ತು ಪಶ್ಚಿಮ ತೀರದಲ್ಲಿನ ಮಾನವೀಯ ಸಂಕಷ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿ, ಎರಡು-ರಾಷ್ಟ್ರ ಪರಿಹಾರವೇ ಶಾಶ್ವತ ಶಾಂತಿಯ ಮಾರ್ಗ ಎಂದು ಪುನರುಚ್ಚರಿಸಿದರು. ಹೈಟಿ, ವೆನಿಜುವೆಲಾ, ಆಫ್ರಿಕಾ, ಏಷ್ಯಾ ಮತ್ತು ಮ್ಯಾನ್ಮಾರ್‌ನ ಪರಿಸ್ಥಿತಿಗಳ ಕುರಿತು ಮಾತನಾಡಿ, ಶಾಂತಿ, ಸಮಾವೇಶಕಾರಿ ಸಂವಾದ ಮತ್ತು ಮಾನವೀಯ ನೆರವಿಗೆ ಪ್ರವೇಶ ಕಲ್ಪಿಸುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದರು.

ಭಾಷಣದ ಕೊನೆಯಲ್ಲಿ, ಜಗದ್ಗುರುಗಳು ಶಾಂತಿಯನ್ನು ಕಷ್ಟಕರವಾದರೂ ಸಾಧ್ಯವಾದ ಮೌಲ್ಯ ಎಂದು ವಿವರಿಸಿ, ಅದನ್ನು ನಿರ್ಮಿಸಲು ವಿನಯ ಮತ್ತು ಕ್ಷಮಿಸುವ ಧೈರ್ಯ ಅಗತ್ಯವಿದೆ ಎಂದರು. ಶಸ್ತ್ರಾಸ್ತ್ರಗಳ ಪೈಪೋಟಿ, ಅಣು ಅಪಾಯ ಮತ್ತು ಕೃತಕ ಬುದ್ಧಿಮತ್ತೆಯ ನೈತಿಕ ಆಡಳಿತದ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಹೊಸ ವರ್ಷದ ಆರಂಭದಲ್ಲಿ ಎಲ್ಲರಿಗೂ ವಿನಯಪೂರ್ಣ ಮತ್ತು ಶಾಂತಿಪ್ರಿಯ ಹೃದಯ ದೊರಕಲಿ ಎಂದು ಆಶಿಸಿದರು.

11 ಜನವರಿ 2026, 08:00