ಜೂಬಿಲಿ ಸಹಭಾಗಿಗಳಿಗೆ ಪೋಪ್: ನಿಮ್ಮ ಕಾರಣದಿಂದ ರೋಮ್ ಆತಿಥ್ಯಪೂರ್ಣ ಮುಖವನ್ನು ಹೊಂದಿತ್ತು
ವ್ಯಾಟಿಕನ್ ವರದಿ
VI ನೇ ಪಾಲ್ ರವರ ಪ್ರೇಕ್ಷಕರ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರು ಜೂಬಿಲಿ ವರ್ಷದ ಆಚರಣೆಗೆ ಸಹಕಾರ ನೀಡಿದ ಎಲ್ಲಾ ಅಧಿಕಾರಿಗಳು, ನಾಗರಿಕ ಹಾಗೂ ಧಾರ್ಮಿಕ ಸಂಸ್ಥೆಗಳ ಸದಸ್ಯರನ್ನು ಆತ್ಮೀಯವಾಗಿ ಅಭಿನಂದಿಸಿದರು. ವಿಶೇಷವಾಗಿ ಇಟಾಲಿಯನ್ ಸರ್ಕಾರ, ಭದ್ರತಾ ಪಡೆಗಳು ಮತ್ತು ಸಂಬಂಧಿಸಿದ ಎಲ್ಲಾ ಡಿಕಾಸ್ಟರಿಗಳಿಗೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇವರ ಬಹುಮುಖವಾದ, ಅನೇಕ ಬಾರಿ ಗೋಚರಿಸದ ಆದರೆ ಜವಾಬ್ದಾರಿಯಿಂದ ಕೂಡಿದ ಸೇವೆಯ ಫಲವಾಗಿ ಮೂವತ್ತು ಮಿಲಿಯನ್‌ಗಿಂತ ಹೆಚ್ಚು ಯಾತ್ರಿಕರು ಜೂಬಿಲಿ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಪವಿತ್ರ ಬಾಗಿಲುಗಳು ಮತ್ತು ಪ್ರೇಷಿತರ ಸಮಾಧಿಗಳ ಭೇಟಿಗಳು ನಿರಾಶೆಗೊಳಿಸದ ಆಶೆಯ ಸ್ಪಷ್ಟ ಅನುಭವವಾಗಿದ್ದವು ಎಂದು ಜಗದ್ಗುರುಗಳು ಹೇಳಿದರು. ಸಂತ ಅಗಸ್ಟಿನ್ ರವರ ಮಾತುಗಳನ್ನು ಉಲ್ಲೇಖಿಸಿ, ಯಾತ್ರಿಕರ ಜೀವನದಲ್ಲಿ ಆಶೆ ಅತ್ಯಾವಶ್ಯಕ ಎಂದರು. ಈ ಯಾತ್ರಿಕರಿಗೆ ಮತ್ತೆ ಆಶೆಯನ್ನು ಕಂಡುಕೊಳ್ಳಲು ಸ್ವಯಂಸೇವಕರು ಮಹತ್ವದ ಪಾತ್ರ ವಹಿಸಿದರು ಎಂದು ಅವರು ಪ್ರಶಂಶಿಸಿದರು.
ಜಗದ್ಗುರು XIV ನೇ ಲಿಯೋರವರು ಜಗತ್ತಿನ ವಿವಿಧ ಭಾಗಗಳಿಂದ ರೋಮ್‌ಗೆ ಬಂದ ಅಪಾರ ಸಂಖ್ಯೆಯ ಯುವಜನರ ಬಗ್ಗೆ ವಿಶೇಷ ಗಮನ ಹರಿಸಿದರು. ಪರಸ್ಪರ ವಿಭಿನ್ನರಾಗಿದ್ದರೂ ಸಹ ಏಕತೆಯಿಂದ ಮತ್ತು ಶಿಸ್ತಿನಿಂದ ವರ್ತಿಸಿದ ಅವರ ಸಾಕ್ಷ್ಯ ಅತ್ಯಂತ ಸುಂದರವಾಗಿತ್ತು ಎಂದು ಅವರು ಹೇಳಿದರು. ಈ ಯುವಜನರ ಭವಿಷ್ಯದ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಇದೆ ಎಂದು ತಿಳಿಸಿ, ಅವರ ಹೃದಯದಲ್ಲಿರುವ ಆಳವಾದ ಪ್ರಶ್ನೆಗಳಿಗೆ ಸತ್ಯ ಉತ್ತರಗಳನ್ನು ಅವರು ಎಲ್ಲಿಂದ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಚಿಂತನೆ ಮಾಡಲು ಸ್ವಯಂಸೇವಕರಿಗೆ ಪ್ರೋತ್ಸಾಹ ನೀಡಿದರು.
ಯುವಜನರಿಗೆ ಪವಿತ್ರತೆಯ ದಾರಿಯಲ್ಲಿ ಮಾರ್ಗದರ್ಶನ ನೀಡುವ ಉತ್ತಮ ಆದರ್ಶ ವ್ಯಕ್ತಿಗಳು ಅಗತ್ಯವೆಂದು ಜಗದ್ಗುರುಗಳು ಹೇಳಿದರು. ಈ ಹಿನ್ನೆಲೆಯಲ್ಲಿ ಸಂತ ಪಿಯರ್ ಜಾರ್ಜಿಯೋ ಫ್ರಾಸ್ಸಾಟಿ ಮತ್ತು ಸಂತ ಕಾರ್ಲೋ ಅಕುಟಿಸ್ ರವರ ಜೀವನ ಉದಾಹರಣೆಗಳತ್ತ ಅವರು ಗಮನ ಸೆಳೆದರು. ಇಂತಹ ಮಾದರಿಗಳು ಯುವಜನರಲ್ಲಿ ಆಶೆ ಮತ್ತು ನಂಬಿಕೆಯನ್ನು ಬೆಳೆಸುತ್ತವೆ ಎಂದು ಹೇಳಿದರು.
ಅಂತಿಮವಾಗಿ , ಜಗದ್ಗುರು ಫ್ರಾನ್ಸಿಸ್ ರವರು 2024ರಲ್ಲಿ ನೀಡಿದ ಆಶೆಯ ಕರೆಯನ್ನು ನೆನಪಿಸಿಕೊಂಡು, ನಮ್ಮ ಹೃದಯಗಳಲ್ಲಿ ಬಿತ್ತಲ್ಪಟ್ಟಿರುವ ಆಶೆಯ ಬೀಜಗಳು ಮುಂದುವರಿದು ಬೆಳೆಸಲಿ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಸ್ವಯಂಸೇವಕರಿಗೆ ಕೃತಜ್ಞತೆಯ ಸಂಕೇತವಾಗಿ ಜೂಬಿಲಿ ಶಿಲುಬೆಯನ್ನು ನೀಡಿ, ನಾನು ನಿಮಗೆ ಆಶೀರ್ವಾದ ನೀಡುತ್ತೇನೆ. ಹೊಸ ವರ್ಷದ ಶುಭಾಶಯಗಳು. ಧನ್ಯವಾದಗಳು ಎಂದು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
