ಪೋಪ್ ಲಿಯೋ: ಕಿರುಕುಳಕ್ಕೊಳಗಾದ ಬಲಿಪಶುಗಳನ್ನು ಸ್ವಾಗತಿಸಲು ವಿಫಲವಾಗುವುದು
ವ್ಯಾಟಿಕನ್ ವರದಿ
ಜನವರಿ 7–8ರಂದು ನಡೆದ ಅಸಾಮಾನ್ಯ ಕಾನ್ಸಿಸ್ಟರಿಯಲ್ಲಿ, ಅಧಿಕೃತ ಕಾಯ೯ಸೂಚಿಯ ವಿಷಯವಾಗಿರದಿದ್ದರೂ ಸಹ, ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ಜೀವನದಲ್ಲಿ ಇನ್ನೂ ಆಳವಾದ ಗಾಯವಾಗಿ ಉಳಿದಿರುವ ಲೈಂಗಿಕ ಕಿರುಕುಳ ಸಂಕಷ್ಟದ ಬಗ್ಗೆ ಸುಮಾರು 170 ಕಾರ್ಡಿನಲ್‌ಗಳಿಗೆ ಸ್ಪಷ್ಟವಾಗಿ ಮಾತನಾಡಿದರು. ಸೈನೋಡಾಲಿಟಿ ಮತ್ತು ಧರ್ಮ ಪ್ರಚಾರದ ಮೇಲೆ ಸಭೆ ಕೇಂದ್ರೀಕೃತವಾಗಿದ್ದರೂ, ಈ ಗಂಭೀರ ಸಮಸ್ಯೆಯನ್ನು ಉಲ್ಲೇಖಿಸಲು ಅವರು ವಿಫಲರಾಗಲಿಲ್ಲ. ಕಾನ್ಸಿಸ್ಟರಿಯ ಅಂತ್ಯದಲ್ಲಿ ನೀಡಿದ ಅವರ ಭಾಷಣದ ಸಂಪೂರ್ಣ ಪಠ್ಯವನ್ನು ಜನವರಿ 10ರಂದು ಪ್ರಕಟಿಸಲಾಯಿತು.
ಜಗದ್ಗುರು XIV ನೇ ಲಿಯೋರವರು, ಕಿರುಕುಳವು ಜೀವನಪೂರ್ತಿ ಉಳಿಯುವ ಆಳವಾದ ಗಾಯವನ್ನುಂಟುಮಾಡುತ್ತದೆ ಆದರೆ ಧರ್ಮ ಸಭೆಯೊಳಗಿನ ಇನ್ನೂ ದೊಡ್ಡ ಅಪಕೀರ್ತಿ ಎಂದರೆ ಬಾಗಿಲುಗಳನ್ನು ಮುಚ್ಚಿ ಬಲಿಪಶುಗಳನ್ನು ಸ್ವಾಗತಿಸದೇ, ನಿಜವಾದ ಪಾಸ್ಟರ್‌ಗಳ ಆತ್ಮೀಯ ಸಮೀಪ ಮತ್ತು ಸಂಗಡಿಗತನವನ್ನು ಅವರಿಗೆ ನೀಡದೇ ಇರುವುದೇ ಎಂದು ಒತ್ತಿ ಹೇಳಿದರು. ಇತ್ತೀಚೆಗೆ ತಾವು ಮಾತನಾಡಿದ ಒಬ್ಬ ಬಲಿಪಶುವಿನ ಸಾಕ್ಷ್ಯವನ್ನು ಹಂಚಿಕೊಂಡ ಅವರು, ಅವಳಿಗೆ ಅತೀ ನೋವುಂಟುಮಾಡಿದ ಸಂಗತಿ ಎಂದರೆ ಯಾವ ಬಿಷಪ್ ಕೂಡ ಆಕೆಯ ಮಾತನ್ನು ಕೇಳಲು ಸಿದ್ಧರಾಗಿರಲಿಲ್ಲ ಎಂದು ಹೇಳಿದರು. ಇಲ್ಲಿ ಕೇಳುವುದು ಅತ್ಯಂತ ಅಗತ್ಯ ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು.
ಕೇಳುವಿಕೆಯ ಮನೋಭಾವವು ಜಗದ್ಗುರು ಮತ್ತು ಕಾರ್ಡಿನಲ್‌ಗಳ ನಡುವೆಯೂ ಅಗತ್ಯವೆಂದು ಹೇಳಿದ ಜಗದ್ಗುರುಗಳು, ಪರಸ್ಪರ ಅರ್ಥಮಾಡಿಕೊಳ್ಳುವಿಕೆಯನ್ನು ಗಾಢಗೊಳಿಸಲು, ಸಂವಾದವನ್ನು ಬಲಪಡಿಸಲು ಮತ್ತು ಸೈನೋಡಾಲಿಟಿಯನ್ನು ಜಾರಿಗೊಳಿಸಲು ಕಾನ್ಸಿಸ್ಟರಿಯಲ್ಲಿ ಆರಂಭಿಸಿದ ಕಾರ್ಯವನ್ನು ಮುಂದುವರಿಸಲು ಕಾರ್ಡಿನಲ್‌ಗಳಿಗೆ ಮನವಿ ಮಾಡಿದರು. ಭವಿಷ್ಯದಲ್ಲಿ ವರ್ಷಕ್ಕೆ ಒಮ್ಮೆ ಮೂರು ಅಥವಾ ನಾಲ್ಕು ದಿನಗಳ ಸಭೆಗಳನ್ನು ನಡೆಸುವ ಸಾಧ್ಯತೆಯನ್ನೂ ಅವರು ಸೂಚಿಸಿದರು. ಈ ವರ್ಷ, ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಸಮೀಪ ಜೂನ್ ಅಂತ್ಯದಲ್ಲಿ ಮತ್ತೊಂದು ಕಾನ್ಸಿಸ್ಟರಿಯನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು.
ಜಗದ್ಗುರು XIV ನೇ ಲಿಯೋರವರು ಸಂವಾದ ಮುಂದುವರಿಯಬೇಕೆಂದು ಒತ್ತಿ ಹೇಳಿ, ಸಿನೋಡಾಲಿಟಿ, ಧರ್ಮ ಪ್ರಚಾರ, ಆರಾಧನಾ ವಿಧಿ ಮತ್ತು ಪ್ರೆಡಿಕೇಟ್ ಎವಂಜಲಿಯುಂ ಸಂವಿಧಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಸಲ್ಲಿಸಲು ಕಾರ್ಡಿನಲ್‌ಗಳಿಗೆ ಆಹ್ವಾನಿಸಿದರು. ಕಾನ್ಸಿಸ್ಟರಿಯ ಅನುಭವವನ್ನು ಅವರು ಸಹಭಾಗಿತ್ವದ (ಕೊಲೆಜಿಯಾಲಿಟಿ) ಒಂದು ಅಮೂಲ್ಯ ಕ್ಷಣವೆಂದು ವರ್ಣಿಸಿ, ತಮ್ಮ ಪೇತ್ರೀಯ ಸೇವೆಗೆ ಬೆಂಬಲವಾಗಿ ಭಾಗವಹಿಸಿದ ಎಲ್ಲ ಕಾರ್ಡಿನಲ್‌ಗಳಿಗೆ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹಾಜರಾಗಲು ಸಾಧ್ಯವಾಗದವರೊಂದಿಗೆ ಸಹಾನುಭೂತಿ ಮತ್ತು ಏಕತೆಯನ್ನು ವ್ಯಕ್ತಪಡಿಸಿದರು.
ಕೊನೆಯಲ್ಲಿ, ಜಗದ್ಗುರುಗಳು ಧರ್ಮ ಸಭೆಯ ಎಲ್ಲ ಹಂತಗಳಲ್ಲಿ—ಸೆಮಿನರಿಗಳಿಂದ ಹಿಡಿದು ಧರ್ಮ ಕೇಂದ್ರದವರೆಗೆ—ರೂಪಣೆಯ ಮಹತ್ವವನ್ನು ಎತ್ತಿ ಹಿಡಿದರು. ಸಿನೋಡಾಲಿಟಿ ಮತ್ತು ಧರ್ಮ ಪ್ರಚಾರ ಎಂಬ ಆಯ್ದ ವಿಷಯಗಳು ದ್ವಿತೀಯ ವ್ಯಾಟಿಕನ್ ಮಹಾಸಭೆಯಲ್ಲಿ ಆಳವಾಗಿ ನೆಲೆಗೊಂಡಿವೆ ಎಂದು ನೆನಪಿಸಿದ ಅವರು, ಯುದ್ಧ, ಹಿಂಸೆ, ಬಡತನ ಮತ್ತು ದುಃಖದಿಂದ ಬಳಲುತ್ತಿರುವ ಜನರೊಂದಿಗೆ ಧರ್ಮ ಸಭೆ ಹೃದಯಪೂರ್ವಕವಾಗಿ ಏಕತೆಯಲ್ಲಿ ನಿಂತಿದೆ ಎಂದು ಹೇಳಿದರು. ಜುಬಿಲಿಯ ಸಂದರ್ಭದಲ್ಲಿ ಮುಚ್ಚಲ್ಪಟ್ಟ ಪವಿತ್ರ ಬಾಗಿಲನ್ನು ನೆನಪಿಸಿ, ಕ್ರಿಸ್ತನ ಮತ್ತು ಅವರ ಪ್ರೀತಿಯ ಬಾಗಿಲು ಎಂದಿಗೂ ಮುಚ್ಚುವುದಿಲ್ಲ ಎಂದು ಆಶೆಯ ಸಂದೇಶದೊಂದಿಗೆ ಜಗದ್ಗುರು XIVನೇ ಲಿಯೋರವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
