ಯುವಜನರಿಗೆ ಪೋಪ್: ನಾವು ವಾಸ್ತವ ಸಂಪರ್ಕಗಳಿಗಾಗಿ ಅಲ್ಲ, ಸತ್ಯಕ್ಕಾಗಿ ಸೃಷ್ಟಿಸಲ್ಪಟ್ಟವರು
ವ್ಯಾಟಿಕನ್ ವರದಿ
ಜನವರಿ 10ರಂದು ವಾಟಿಕನ್‌ನ VI ನೇ ಪಾಲ್ ಸಭಾಂಗಣದಲ್ಲಿ ನಡೆದ ಭೇಟಿಯಲ್ಲಿ, ರೋಮಿನ ಧರ್ಮಪ್ರಾಂತ್ಯದ ಸಾವಿರಾರು ಯುವಕರು ಜಗದ್ಗುರು XIVನೇ ಲಿಯೋರವರನ್ನು ಉತ್ಸಾಹದಿಂದ ಸ್ವಾಗತಿಸಿದರು. ಜುಬಿಲಿ ವರ್ಷದ ಮುಕ್ತಾಯದ ಕೆಲವೇ ದಿನಗಳ ಬಳಿಕ ನಡೆದ ಈ ಸಭೆಯಲ್ಲಿ, ಯಾಜಕರು, ಧಾರ್ಮಿಕ ಸಹೋದರ ಸಹೋದರಿಯರು ಮತ್ತು ಶಿಕ್ಷಕರೊಂದಿಗೆ ಯುವಕರು ಒಳಗೂ ಹೊರಗೂ ಸೇರಿದ್ದರು. ಇತ್ತೀಚೆಗೆ ತಮ್ಮ ಅಣ್ಣನ ಮಗಳಿನಿಂದ ಬಂದ ಸಂದೇಶವನ್ನು ನೆನಪಿಸಿಕೊಂಡ ಜಗದ್ಗುರಗಳು, ಅನೇಕ ಜಾಗತಿಕ ಸಮಸ್ಯೆಗಳ ನಡುವೆಯೂ ತಮಗೆ ಒಂಟಿತನವಾಗದಿರುವುದಕ್ಕೆ ಉತ್ತರವಾಗಿ ತಮ್ಮ ಮುಂದೆ ನಿಂತಿರುವ ಯುವಜನರ ಸಮುದಾಯವನ್ನೇ ಸೂಚಿಸಿದರು.
ಜಗದ್ಗುರು XIV ನೇ ಲಿಯೋರವರು, ಇಂದಿನ ಯುವಜನರು ಅನುಭವಿಸುವ ಒಳಗಿನ ಅಸಮಾಧಾನ ಒಂಟಿತನ, ದಿಕ್ಕುತಪ್ಪುವಿಕೆ ಮತ್ತು ಬೇಸರ, ವಾಸ್ತವ ಜಗತ್ತಿನ ನಡುವೆಯೂ ಹೇಗೆ ಉಂಟಾಗುತ್ತದೆ ಎಂಬುದನ್ನು ಗುರುತಿಸಿದರು. ಅನೇಕ ಜನರ ನಡುವೆ ಇದ್ದರೂ ಒಂಟಿಯಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಕೇಳಿಸಿಕೊಳ್ಳದಿರುವಾಗ, ಅಭಿಪ್ರಾಯಗಳ ಗದ್ದಲದಲ್ಲಿ ಮುಳುಗಿರುವಾಗ, ಮತ್ತು ತುಂಡು-ತುಂಡು ಚಿತ್ರಗಳಿಂದ ಕಣ್ಣು ಮಿಂಚುತ್ತಿರುವಾಗ ಈ ಒಂಟಿತನ ಸ್ಪಷ್ಟವಾಗುತ್ತದೆ ಎಂದು ಅವರು ವಿವರಿಸಿದರು.
ಮಾನವ ಒಂಟಿತನದ ಕುರಿತು ಕವಿ ಸಾಲ್ವತೊರೆ ಕ್ವಾಸಿಮೊಡೊ ಅವರ ಕಾವ್ಯವನ್ನು ಉಲ್ಲೇಖಿಸಿದ ಜಗದ್ಗುರಗಳು , ಅದನ್ನು ನಂಬಿಕೆಯ ಬೆಳಕಿನಲ್ಲಿ ಮರುಅರ್ಥೈಸಿದರು. ಹೃದಯವನ್ನು ಚುಚ್ಚುವ ಬೆಳಕು ಕ್ಷಣಿಕವಲ್ಲ ಅದು ಕ್ರಿಸ್ತನಾದ ನ್ಯಾಯಸೂರ್ಯ, ಎಂದಿಗೂ ನಂದದ ಬೆಳಕು ಎಂದು ಅವರು ಹೇಳಿದರು. ಕ್ರಿಸ್ತನು ನಮ್ಮ ಹೃದಯಗಳನ್ನು ಪ್ರಜ್ವಲಗೊಳಿಸಿ ತನ್ನ ಪ್ರೀತಿಯಿಂದ ತುಂಬಿಸುತ್ತಾರೆ ಎಂದು ಜಗದ್ಗರುಗಳು ಹೇಳಿದರು. ಯೇಸುವಿನೊಂದಿಗೆ ಆಗುವ ಈ ಭೇಟಿಯಿಂದ ವ್ಯಕ್ತಿಯ ಜೀವನವನ್ನೂ ಸಮಾಜವನ್ನೂ ಪರಿವರ್ತಿಸುವ ಶಕ್ತಿ ಹರಿದು ಬರುತ್ತದೆ ಎಂದು ಅವರು ಹೇಳಿದರು.
ಯುವಜನರು ಧರ್ಮ ಕೆಂದ್ರದವರು ಪ್ರಚಾರಕರು ಮತ್ತು ಸೇವಾ ಕಾರ್ಯಗಳಲ್ಲಿ ಅನುಭವಿಸುವ ನಿಜವಾದ ಜೀವನಾನುಭವಗಳಿಗಾಗಿ ಸಂತೋಷ ವ್ಯಕ್ತಪಡಿಸಿದ ಜಗದ್ಗುರುಗಳು, ಸುಲಭವಾದ ಮೆಚ್ಚುಗೆ ಅಥವಾ ಕೈತಟ್ಟಿ ಸ್ವಾಗತವನ್ನು ನಿರೀಕ್ಷಿಸಬೇಡಿ ಎಂದು ಎಚ್ಚರಿಸಿದರು. ಸತ್ಯವಾದ ಸ್ನೇಹಗಳನ್ನು ಕಟ್ಟುವ ಸಾಕ್ಷಿಗಿಂತ, ಬಳಕೆಗೆ ಮಾರಾಟ ಮಾಡುವ ಜಾಹೀರಾತುಗಳು ಜಗತ್ತಿನ ಗಮನವನ್ನು ಹೆಚ್ಚು ಸೆಳೆಯುತ್ತವೆ ಎಂದು ಅವರು ನೆನಪಿಸಿದರು. ಆದ್ದರಿಂದ, ಸಮಾಜವನ್ನು ಬದಲಾಯಿಸಲು ಮೊದಲು ನಾವು ನಮ್ಮನ್ನೇ ಬದಲಾಯಿಸಿಕೊಳ್ಳಬೇಕು ಎಂದು ಸಂತೋಷ ಮತ್ತು ಸ್ಥೈರ್ಯದಿಂದ ನಡೆದುಕೊಳ್ಳುವಂತೆ ಯುವಜನರಿಗೆ ಕರೆ ನೀಡಿದರು.
ಕೊನೆಯಲ್ಲಿ, ಯುವಜನರು ತಮ್ಮನ್ನು ಬಂಧಿಸುವ ಸರಪಳಿಗಳನ್ನು ಹೇಗೆ ಮುರಿಯಬೇಕು ಎಂಬ ಪ್ರಶ್ನೆಗೆ ಜಗದ್ಗುರು XIVನೇ ಲಿಯೋರವರು ಸ್ಪಷ್ಟ ಉತ್ತರ ನೀಡಿದರು: ಮೊದಲು ಪ್ರಾರ್ಥಿಸಿರಿ.ಪ್ರಾರ್ಥನೆ ಅತೀ ನಿಜವಾದ ಮತ್ತು ಪರಿವರ್ತಕ ಕ್ರಿಯೆಯಾಗಿದೆ ಅದು ಬೇಸರ, ಅಹಂಕಾರ ಮತ್ತು ನಿರ್ಲಕ್ಷ್ಯದ ಬಂಧನಗಳನ್ನು ಮುರಿಯುವ ಸ್ವಾತಂತ್ರ್ಯದ ಕ್ರಿಯೆಯಾಗಿದೆ ಎಂದು ಅವರು ಹೇಳಿದರು. ದಿವ್ಯಾ ಬಲಿ ಪೂಜೆಯಲ್ಲಿ, ಸುವಾರ್ತೆಯಲ್ಲಿ ಮತ್ತು ಕೀರ್ತನೆಗಳಲ್ಲಿ ದೇವರನ್ನು ಭೇಟಿಯಾದಾಗ, ದೇವರು ಹೃದಯದಲ್ಲಿ ಬೆಂಕಿಯನ್ನು ಪ್ರಜ್ವಲಿಸುತ್ತಾರೆ. ಆಗ ಕ್ರೈಸ್ತರು ಲೋಕದ ಬೆಳಕು ಮತ್ತು ಭೂಮಿಯ ಉಪ್ಪು ಆಗಲು ಸಾಧ್ಯವಾಗುತ್ತದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು.
