ಹುಡುಕಿ

ಹೊಸ ಅಮೆರಿಕದ ಸುಂಕಗಳು ತೈಲ ಸರಬರಾಜನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ, ಹವಾನಾದಲ್ಲಿ ಕ್ಯೂಬನ್ನರು ತಮ್ಮ ಕಾರುಗಳಿಗೆ ಪೆಟ್ರೋಲ್ ತುಂಬಿಸುತ್ತಿದ್ದಾರೆ. ಹೊಸ ಅಮೆರಿಕದ ಸುಂಕಗಳು ತೈಲ ಸರಬರಾಜನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ, ಹವಾನಾದಲ್ಲಿ ಕ್ಯೂಬನ್ನರು ತಮ್ಮ ಕಾರುಗಳಿಗೆ ಪೆಟ್ರೋಲ್ ತುಂಬಿಸುತ್ತಿದ್ದಾರೆ. 

ಅಮೆರಿಕದೊಂದಿಗೆ ಸಂವಾದಕ್ಕೆ ಕ್ಯೂಬಾ ಬಿಷಪ್‌ಗಳ ಕರೆಯನ್ನು ಜಗದ್ಗುರು ಲಿಯೋರವರು ಬೆಂಬಲಿಸಿದ್ದಾರೆ

ಅಮೆರಿಕ ಮತ್ತು ಕ್ಯೂಬಾ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಜಗದ್ಗುರು XIVನೇ ಲಿಯೋರವರು ತಮ್ಮ ಚಿಂತೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ಯೂಬಾದ ಬಿಷಪ್‌ಗಳೊಂದಿಗೆ ಕೈಜೋಡಿಸಿ, ದೇಶದಲ್ಲಿ ಸಂವಾದಕ್ಕೆ, ಆಳವಾದ ಸುಧಾರಣೆಗೆ ಹಾಗೂ ಮಾನವ ಘನತೆಯ ಗೌರವಕ್ಕೆ ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

 

ಕ್ಯೂಬಾ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಜಗದ್ಗುರು XIVನೇ ಲಿಯೋರವರು ಎಲ್ಲಾ ಪಕ್ಷಗಳನ್ನು ಪ್ರಾಮಾಣಿಕ ಮತ್ತು ಪರಿಣಾಮಕಾರಿ ಸಂವಾದಕ್ಕೆ ಕರೆ ನೀಡಿದ್ದಾರೆ. ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬೆಳವಣಿಗೆಗಳ ಬಗ್ಗೆ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿ, ಹಿಂಸೆಯನ್ನು ತಪ್ಪಿಸಿ ಕ್ಯೂಬಾದ ಜನರ ದುಃಖ ಹೆಚ್ಚಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

ಜಗದ್ಗುರು XIVನೇ ಲಿಯೋರವರು ಕ್ಯೂಬಾದ ಬಿಷಪ್‌ಗಳ ಸಂದೇಶಕ್ಕೆ ತಮ್ಮ ಬೆಂಬಲವನ್ನು ಸೂಚಿಸಿ, ಕ್ಯೂಬಾದ ಪ್ರಿಯ ಜನರ ಹಿತಕ್ಕಾಗಿ ಸಂವಾದ ಮತ್ತು ಸಮಾಧಾನದ ಮಾರ್ಗವನ್ನು ಉತ್ತೇಜಿಸಬೇಕು ಎಂದು ಹೇಳಿದರು. ಜೊತೆಗೆ, ಧನ್ಯ ಕನ್ಯಾ ಮರಿಯಮ್ಮನವರು ಎಲ್ಲಾ ಕ್ಯೂಬನ್ನರ ಮೇಲೆ ಕಾವಲು ಕಾಯಲಿ ಎಂದು ಪ್ರಾರ್ಥಿಸಿ, ಎಲ್ ಕೋಬ್ರೆಯ ಧರ್ಮಪೋಷಕಿ ದಯಾಮಾತೆ ಕ್ಯೂಬಾದ ಎಲ್ಲಾ ಮಕ್ಕಳನ್ನು ರಕ್ಷಿಸಿ ಮಾರ್ಗದರ್ಶನ ನೀಡಲಿ ಎಂದು ಕೋರಿದರು.

ಈ ನಡುವೆ, ಶನಿವಾರ ಕ್ಯೂಬಾದ ಕಥೋಲಿಕ ಬಿಷಪ್‌ಗಳು ಸದ್ಭಾವನೆಯುಳ್ಳ ಎಲ್ಲಾ ಕ್ಯೂಬನ್ನರಿಗೆ ಎಂಬ ಶೀರ್ಷಿಕೆಯಲ್ಲಿ ಸಂದೇಶವನ್ನು ಹೊರಡಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಮಾನವೀಯ ಪರಿಸ್ಥಿತಿ ದಿನೇದಿನೇ ಗಂಭೀರವಾಗುತ್ತಿದೆ ಎಂದು ಎಚ್ಚರಿಸಿದರು. ಕ್ಯೂಬಾಕ್ಕೆ ಬದಲಾವಣೆಗಳು ಅಗತ್ಯ ಮತ್ತು ಅವು ತುರ್ತು, ಆದರೆ ಇನ್ನಷ್ಟು ನೋವು, ಆತಂಕ ಮತ್ತು ರಕ್ತಪಾತ ಬೇಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬಿಷಪ್‌ಗಳು, ತೈಲ ರಫ್ತು ಮಾಡುವ ದೇಶಗಳ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳು ಕ್ಯೂಬಾದಲ್ಲಿ ಸಾಮಾಜಿಕ ಅಸ್ಥಿರತೆ ಮತ್ತು ಅರಾಜಕತೆಗೆ ಕಾರಣವಾಗುವ ಅಪಾಯವಿದೆ ಎಂದು ಎಚ್ಚರಿಸಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ಸರ್ಕಾರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳಿಂದಲೇ ಬಗೆಹರಿಸಬೇಕು, ಬಲವಂತ ಅಥವಾ ಯುದ್ಧದಿಂದಲ್ಲ ಎಂಬುದು ಜಗದ್ಗುರುಗಳು ಹಾಗೂ ಜಗದ್ಗುರು ಅಧಿಕಾರ ಹುದ್ದೆಯ  ಸ್ಥಿರ ನಿಲುವು ಎಂದು ಅವರು ನೆನಪಿಸಿದರು.

ಅದೇ ಸಮಯದಲ್ಲಿ, ಬಾಹ್ಯ ಸಂಘರ್ಷಗಳ ಕಾರಣದಿಂದ ಯಾವುದೇ ದೇಶದೊಳಗಿನ ಪ್ರತಿಯೊಬ್ಬ ಮಾನವನ ಘನತೆ ಮತ್ತು ಸ್ವಾತಂತ್ರ್ಯದ ಗೌರವವನ್ನು ಕಡಿಮೆ ಮಾಡಲಾಗಬಾರದು ಎಂದು ಬಿಷಪ್‌ಗಳು ಒತ್ತಿಹೇಳಿದರು. ಕ್ಯೂಬಾದೊಳಗೆ ಆರೋಗ್ಯಕರ ಬಹುಸ್ವರತೆ ಮತ್ತು ಪರಸ್ಪರ ಗೌರವದ ವಾತಾವರಣ ನಿರ್ಮಾಣವಾಗಬೇಕೆಂದು ಅವರು ಕರೆ ನೀಡಿದರು, ಏಕೆಂದರೆ ಅದು ಅಂತರರಾಷ್ಟ್ರೀಯ ಮಟ್ಟದ ಫಲಪ್ರದ ಸಂವಾದಕ್ಕೆ ಸಹಕಾರಿಯಾಗುತ್ತದೆ.

ಸಂದೇಶದ ಅಂತ್ಯದಲ್ಲಿ, ಕ್ಯೂಬಾದ ಕಥೋಲಿಕ ಧರ್ಮಸಭೆ ಕ್ಯೂಬಾ ಜನರೊಂದಿಗೆ ಸದಾ ಜೊತೆಯಾಗಿರುತ್ತದೆ ಎಂದು ಬಿಷಪ್‌ಗಳು ಭರವಸೆ ನೀಡಿದರು. ಪರಿವರ್ತನೆಗೆ ಆಹ್ವಾನಿಸುವುದು, ಸುವಾರ್ತೆಯನ್ನು ಘೋಷಿಸುವುದು ಮತ್ತು ಅಗತ್ಯದಲ್ಲಿರುವ ಎಲ್ಲರನ್ನು ಸೇವಿಸುವ ಮೂಲಕ ಕ್ಯೂಬಾ ಜನರಿಗೆ ನಿರಂತರವಾಗಿ ಸಹಾಯ ಮಾಡುವುದಾಗಿ ಅವರು ತಿಳಿಸಿದರು.

01 ಫೆಬ್ರವರಿ 2026, 15:19