ಹುಡುಕಿ

ಫೆಬ್ರವರಿ 5ರಂದು ಕ್ವಾರಾ ರಾಜ್ಯದ ವೋರೊ ಪ್ರದೇಶದಲ್ಲಿ ನಡೆದ ದಾಳಿಯ ನಂತರ, ಬಲಿಯಾದ ವ್ಯಕ್ತಿಯ ಶವವು ಮರದ ಸ್ಟ್ರೆಚ್ಚರ್ ಮೇಲೆ ಇಡಲ್ಪಟ್ಟಿದೆ. ಫೆಬ್ರವರಿ 5ರಂದು ಕ್ವಾರಾ ರಾಜ್ಯದ ವೋರೊ ಪ್ರದೇಶದಲ್ಲಿ ನಡೆದ ದಾಳಿಯ ನಂತರ, ಬಲಿಯಾದ ವ್ಯಕ್ತಿಯ ಶವವು ಮರದ ಸ್ಟ್ರೆಚ್ಚರ್ ಮೇಲೆ ಇಡಲ್ಪಟ್ಟಿದೆ.  (AFP or licensors)

ನೈಜೀರಿಯಾದಲ್ಲಿ ನಡೆದ ಮಾರಾಣಾಂತಿಕ ದಾಳಿಗಳನ್ನು ಜಗದ್ಗುರುಗಳು ಖಂಡಿಸಿದರು

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ನೈಜೀರಿಯಾದಲ್ಲಿ ಇತ್ತೀಚೆಗೆ ನಡೆದ ಮಾರಾಣಾಂತಿಕ ದಾಳಿಗಳ ಸರಣಿಯಿಂದಾಗಿ ದಶಕಗಳಷ್ಟು ಜನರು ಜೀವ ಕಳೆದುಕೊಂಡಿರುವುದರ ಕುರಿತು ತೀವ್ರ ದುಃಖ ಮತ್ತು ಚಿಂತೆ ವ್ಯಕ್ತಪಡಿಸಿದರು. ಪ್ರತಿಯೊಬ್ಬ ನಾಗರಿಕರ ಜೀವದ ಭದ್ರತೆ ಮತ್ತು ರಕ್ಷಣೆಯನ್ನು ಖಚಿತಪಡಿಸಲು ಅಧಿಕಾರಿಗಳು ದೃಢಸಂಕಲ್ಪದಿಂದ ಕೆಲಸ ಮುಂದುವರಿಸಲಿ ಎಂಬ ತಮ್ಮ ಆಶಯವನ್ನು ಅವರು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ನೈಜೀರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಮತ್ತೊಂದು ಮಾರಾಣಾಂತಿಕ ಹಿಂಸಾಚಾರದ ಅಲೆಯ ಕುರಿತು ತೀವ್ರ ದುಃಖ ಮತ್ತು ಚಿಂತೆ ವ್ಯಕ್ತಪಡಿಸಿ, ದೇಶಕ್ಕಾಗಿ ಮತ್ತೆ ಪ್ರಾರ್ಥನೆಗೆ ಕರೆ ನೀಡಿದರು. ಭಾನುವಾರದ ಮಧ್ಯಾಹ್ನದ ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಅವರು, ವಿವಿಧ ಸಮುದಾಯಗಳ ಮೇಲೆ ನಡೆದ ದಾಳಿಗಳಿಂದ ಅನೇಕ ನಿರಪರಾಧಿಗಳು ಜೀವ ಕಳೆದುಕೊಂಡಿರುವುದನ್ನು ವಿಷಾದದಿಂದ ಉಲ್ಲೇಖಿಸಿದರು.

ಫೆಬ್ರವರಿ 3ರ ಸಂಜೆ, ನೈಜೀರಿಯಾದ ಮಧ್ಯ–ಪಶ್ಚಿಮ ಭಾಗದಲ್ಲಿರುವ ವೊರೊ ಗ್ರಾಮದಲ್ಲಿ ನಡೆದ ಭೀಕರ ದಾಳಿಯಲ್ಲಿ ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಹಿಂಸಾಚಾರದಿಂದ ಪೀಡಿತವಾದ ಎಲ್ಲಾ ಕುಟುಂಬಗಳು ಮತ್ತು ಸಮುದಾಯಗಳೊಂದಿಗೆ ತಾವು ಪ್ರಾರ್ಥನೆಯ ಮೂಲಕ ಸಮೀಪದಲ್ಲಿರುವುದಾಗಿ ಜಗದ್ಗುರುಗಳು ಭರವಸೆ ನೀಡಿದರು.

ಹಿಂಸಾಚಾರ ಮತ್ತು ಭಯೋತ್ಪಾದನೆಯ ಎಲ್ಲಾ ಬಲಿಪಶುಗಳಿಗಾಗಿ ತಾವು ವಿಶೇಷವಾಗಿ ಪ್ರಾರ್ಥಿಸುತ್ತಿರುವುದಾಗಿ ಜಗದ್ಗುರುಗಳು ಹೇಳಿದರು. ಜೊತೆಗೆ, ಪ್ರತಿಯೊಬ್ಬ ನಾಗರಿಕರ ಜೀವದ ಭದ್ರತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ದೃಢಸಂಕಲ್ಪದಿಂದ ಕಾರ್ಯನಿರ್ವಹಿಸುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಇದೇ ವೇಳೆ, ಕಳೆದ ಮೂರು ದಿನಗಳಲ್ಲಿ ಕಡೂನಾ ರಾಜ್ಯದ ನಾಲ್ಕು ಗ್ರಾಮಗಳಲ್ಲಿ ನಡೆದ ದಾಳಿಗಳಲ್ಲಿ ಕನಿಷ್ಠ 51 ಜನರನ್ನು ಅಪಹರಿಸಲಾಗಿದ್ದು, ಆರು ಮಂದಿ ಹತ್ಯೆಯಾಗಿದ್ದಾರೆ. ಈ ದಾಳಿಗಳು ಮುಖ್ಯವಾಗಿ ದಕ್ಷಿಣ ಕಡೂನಾ ಪ್ರದೇಶದಲ್ಲಿ ನಡೆದಿದ್ದು, ಇದು ಬಹುಮಟ್ಟಿಗೆ ಕ್ರೈಸ್ತ ಸಮುದಾಯ ವಾಸಿಸುವ ಪ್ರದೇಶವಾಗಿದೆ. ಜನವರಿಯಲ್ಲಿ ಇಲ್ಲಿ ಅಪಹರಿಸಲ್ಪಟ್ಟಿದ್ದ 180ಕ್ಕೂ ಹೆಚ್ಚು ಜನರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸುತ್ತವೆ.

ಕಾಜೂರು ಸ್ಥಳೀಯ ಆಡಳಿತ ಪ್ರದೇಶದ ಕಾರ್ಕು ಗ್ರಾಮದಲ್ಲಿನ ಕಥೋಲಿಕ ಸಮುದಾಯದ ಮೇಲೂ ದಾಳಿ ನಡೆದಿದ್ದು, ಅಲ್ಲಿ ಒಬ್ಬ ಯಾಜಕರು ಸೇರಿ 11 ಜನರನ್ನು ಅಪಹರಿಸಲಾಗಿದ್ದು, ಮೂವರು ಹತ್ಯೆಯಾಗಿದ್ದಾರೆ. ಕಾಫಾಂಚನ್ ಮಹಾಧರ್ಮಪ್ರಾಂತ್ಯವು ಹೋಲಿ ಟ್ರಿನಿಟಿ ಚರ್ಚಿನ ಧರ್ಮ ಕೇಂದ್ರದ ಯಾಜಕರಾದ ಫಾದರ್ ನಾಥನಿಯೇಲ್ ಅಸುವಯಿರವರ ಅಪಹರಣವನ್ನು ದೃಢಪಡಿಸಿದೆ. ಶನಿವಾರ ಬೆಳಗಿನ ಜಾವ ಅವರ ನಿವಾಸದ ಮೇಲೆ ನಡೆದ ಈ ದಾಳಿಯನ್ನು ಸಾಕ್ಷಿಗಳು ಭಯೋತ್ಪಾದಕರ ಗುಂಪಿನ ದಾಳಿ ಎಂದು ವಿವರಿಸಿದ್ದಾರೆ.

ಬೋಕೊ ಹರಾಮ್ ಮುಂತಾದ ಜಿಹಾದಿ ಸಂಘಟನೆಗಳ ದಾಳಿಗಳು ಹಾಗೂ ಶಸ್ತ್ರಸಜ್ಜಿತ ಗುಂಪುಗಳ ದರೋಡೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಧ್ಯಕ್ಷ ಬೋಲಾ ಟಿನುಬುರವರ ಆದೇಶದಂತೆ ನೈಜೀರಿಯಾ ಕೇಂದ್ರ ಸರ್ಕಾರವು ಕೈಯಾಮಾ ಜಿಲ್ಲೆಗೆ ಸೇನಾ ಪಡೆಯೊಂದನ್ನು ನಿಯೋಜಿಸಿದೆ. ಈ ಕ್ರಮವು ಭದ್ರತೆ ಪುನಃಸ್ಥಾಪಿಸಲು ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ನೈಜೀರಿಯಾ ಮಾತ್ರವಲ್ಲದೆ, ಮಾನವ ಕಳ್ಳಸಾಗಣೆ ಬಲಿಪಶುಗಳು ಹಾಗೂ ಸ್ಪೇನ್, ಮೊರೊಕ್ಕೊ, ಪೋಚು೯ಗಲ್ ಮತ್ತು ಸಿಸಿಲಿಯಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ ಪೀಡಿತರಾದವರಿಗಾಗಿ ಸಹ ಜಗದ್ಗುರು XIVನೇ ಲಿಯೋರವರು ಭಾನುವಾರ ಪ್ರಾರ್ಥಿಸಿದರು.

08 ಫೆಬ್ರವರಿ 2026, 16:22