ಜಗದ್ಗುರು XIVನೇ ಲಿಯೋರವರು ಮೊನಾಕೋ ಪ್ರಿನ್ಸಿಪಾಲಿಟಿಗೆ ಭೇಟಿ ನೀಡುವ ಸಾಧ್ಯತೆ
ವ್ಯಾಟಿಕನ್ ನ್ಯೂಸ್
ಮಾರ್ಚ್ ತಿಂಗಳ ಕೊನೆಯಲ್ಲಿ ಜಗದ್ಗುರು XIVನೇ ಲಿಯೋರವರು ಮೊನಾಕೋ ಪ್ರಿನ್ಸಿಪಾಲಿಟಿಗೆ ಒಂದು ದಿನದ ಭೇಟಿ ನೀಡುವ ವಿಚಾರವನ್ನು ಪರಿಗಣಿಸಲಾಗುತ್ತಿದೆ ಎಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿದೆ. ಮಂಗಳವಾರ ವಿವಿಧ ಸುದ್ದಿಸಂಸ್ಥೆಗಳ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಈ ಮಾಹಿತಿ ನೀಡಲಾಗಿದೆ.
ಈ ಭೇಟಿ ದೃಢಪಟ್ಟರೆ, ಅದು ಜಗದ್ಗುರುಗಳ ಆರಂಭದಿಂದ ಎರಡನೇ ವಿದೇಶ ಪ್ರವಾಸವಾಗಿದ್ದು, ಆಧುನಿಕ ಇತಿಹಾಸದಲ್ಲಿ ಮೊನಾಕೋ ಪ್ರಿನ್ಸಿಪಾಲಿಟಿಗೆ ಜಗದ್ಗುರುಗಳು ನೀಡುವ ಮೊದಲ ಭೇಟಿ ಆಗಲಿದೆ.
ಜಗದ್ಗುರು XIVನೇ ಲಿಯೋರವರು ಮೊದಲ ಇಟಲಿಯ ಹೊರಗಿನ ಯಾತ್ರೆ 2025ರ ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ಟರ್ಕಿ ಮತ್ತು ಲೆಬನಾನ್ ದೇಶಗಳಿಗೆ ನಡೆಯಿತು. ಹಿಂದಿರುಗುವ ವಿಮಾನಯಾನ ಸಂದರ್ಭದಲ್ಲಿ, ಭವಿಷ್ಯದ ಪ್ರವಾಸಗಳ ಬಗ್ಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಗದ್ಗುರುಗಳು, ಸಂತ ಆಗಸ್ಟಿನ್ ಸಂಬಂಧಿಸಿದ ಸ್ಥಳಗಳನ್ನು ಭೇಟಿ ಮಾಡಲು ಅಲ್ಜೀರಿಯಾಗೆ ಹೋಗುವ ತನ್ನ ಆಸೆಯನ್ನು ವ್ಯಕ್ತಪಡಿಸಿದರು. ಅಲ್ಲದೆ ಕ್ರೈಸ್ತರು ಮತ್ತು ಮುಸ್ಲಿಮರ ನಡುವಿನ ಸಂವಾದವನ್ನು ಮತ್ತಷ್ಟು ಬಲಪಡಿಸಲು ಬಯಸುವುದಾಗಿ ಹೇಳಿದರು.
ಲ್ಯಾಟಿನ್ ಅಮೆರಿಕಾಕ್ಕೆ ಭೇಟಿ ನೀಡಲು ನನಗೆ ತುಂಬಾ ಆಸೆಯಿದೆ, ಎಂದು ಅರ್ಜೆಂಟಿನಾ ಮತ್ತು ಉರುಗ್ವೆ ದೇಶಗಳ ನಿರೀಕ್ಷೆಯನ್ನು ಉಲ್ಲೇಖಿಸಿದರು. ಜೊತೆಗೆ ಪೆರು ದೇಶವನ್ನೂ ಅವರು ಪ್ರಸ್ತಾಪಿಸಿದರು ಅಲ್ಲಿ ರಾಬರ್ಟ್ ಪ್ರೀವೋಸ್ಟ್ ರವರು ಮೊದಲಿಗೆ ಮಿಷನರಿಯಾಗಿ ಸೇವೆ ಸಲ್ಲಿಸಿ, ನಂತರ ಬಿಷಪ್ ಆಗಿ ಕಾರ್ಯನಿರ್ವಹಿಸಿದ್ದರು.
ಜನವರಿ 17ರಂದು ಜಗದ್ಗುರು XIVನೇ ಲಿಯೋರವರು II ನೇ ಮೊನಾಕೋ ಪ್ರಿನ್ಸ್ ಆಲ್ಬರ್ಟ್ ರವರನ್ನು ವ್ಯಾಟಿಕನ್‌ನಲ್ಲಿ ಭೇಟಿಯಾದರು. ಈ ಭೇಟಿಯ ನಂತರ ರಾಜ್ಯ ಕಾರ್ಯದರ್ಶಾಲಯದಲ್ಲಿ ಚರ್ಚೆಗಳು ನಡೆಯಿತು. ಆ ಸಂದರ್ಭದಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ತಿಳಿಸಿದಂತೆ, ಈ ಭೇಟಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಇರುವ ಉತ್ತಮ ದ್ವಿಪಕ್ಷೀಯ ಸಂಬಂಧಗಳು ಹಾಗೂ ಮೊನಾಕೋ ಸಮಾಜ ಜೀವನದಲ್ಲಿ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಕೊಡುಗೆಗಳ ಕುರಿತು ಚರ್ಚೆ ನಡೆಯಿತು.
ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಪಿಯೇತ್ರೋ ಪಾರೋಲಿನ್ ರವರು ಹಾಗೂ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿ ಮಹಾಧಮಾ೯ಧ್ಯಕ್ಷ ಪೌಲ್ ರಿಚರ್ಡ್ ಗ್ಯಾಲಘರ್ ರವರೊಂದಿಗೆ ನಡೆದ ಮಾತುಕತೆಯಲ್ಲಿ ಪರಿಸರ ಸಂರಕ್ಷಣೆ, ಮಾನವೀಯ ಸಹಾಯ, ಮಾನವ ಗೌರವದ ರಕ್ಷಣೆ ಮತ್ತು ಉತ್ತೇಜನ ಮುಂತಾದ ಸಾಮಾನ್ಯ ಆಸಕ್ತಿಯ ವಿಷಯಗಳು ಚರ್ಚಿಸಲ್ಪಟ್ಟವು. ಅಂತರರಾಷ್ಟ್ರೀಯ ಬೆಳವಣಿಗೆಗಳ ಕುರಿತು ಕೂಡ ಸಂವಾದ ನಡೆಯಿತು, ವಿಶೇಷವಾಗಿ ಶಾಂತಿ ಮತ್ತು ಭದ್ರತೆಯ ವಿಚಾರಗಳಿಗೆ ಗಮನ ಹರಿಸಲಾಯಿತು.
