ಸಾರ್ವಜನಿಕ ಸಭೆಯಲ್ಲಿ ಜಗದ್ಗುರುಗಳು: ದೇವರ ವಾಕ್ಯವು ನಮ್ಮ ಅರ್ಥ ಮತ್ತು ಸತ್ಯದ ದಾಹಕ್ಕೆ ಉತ್ತರ ನೀಡುತ್ತದೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಫೆಬ್ರವರಿ 11, 2026ರಂದು ವ್ಯಾಟಿಕನ್‌ನ VIನೇ ಪೌಲ್ ಸಭಾಂಗಣದಲ್ಲಿ ನಡೆದ ಬುಧವಾರದ ಸಾಮಾನ್ಯ ಸಾರ್ವಜನಿಕ ಸಭೆಯಲ್ಲಿ ದೇವರ ವಾಕ್ಯವು ಪ್ರತಿಯೊಬ್ಬ ವಿಶ್ವಾಸಿಯ ಜೀವನಕ್ಕೆ ಮಾತನಾಡುತ್ತದೆ ಎಂದು ಹೇಳಿದರು. ಅದು ನಮಗೆ ಪ್ರಭುವಿನೊಂದಿಗೆ ಸಂವಾದಕ್ಕೆ ಕರೆದುಕೊಂಡು ಹೋಗುತ್ತದೆ ಮತ್ತು ಧರ್ಮ ಸಭೆ ತನ್ನ ಧರ್ಮಪ್ರಚಾರ ಕಾರ್ಯದಲ್ಲಿ ಶಕ್ತಿಯನ್ನು ಪಡೆಯಲು ಕಾರಣವಾಗುತ್ತದೆ ಎಂದರು. ನಮ್ಮ ಜೀವನದ ಅರ್ಥ ಮತ್ತು ಸತ್ಯದ ದಾಹಕ್ಕೆ ದೇವರ ವಾಕ್ಯವೇ ಉತ್ತರ ನೀಡುತ್ತದೆ, ಎಂದು ಅವರು ಒತ್ತಿಹೇಳಿದರು.
ಇಂದು ನಾವು ಅನೇಕ ಪದಗಳಿಂದ ಸುತ್ತುವರಿದಿದ್ದರೂ, ಅವುಗಳಲ್ಲಿ ಎಷ್ಟು ಪದಗಳು ಶೂನ್ಯವಾಗಿವೆ ಎಂಬುದನ್ನು ಜಗದ್ಗುರುಗಳು ಗಮನಿಸಿದರು. ಕೆಲವೊಮ್ಮೆ ಜ್ಞಾನಪೂರ್ಣವಾದ ಮಾತುಗಳನ್ನು ಕೇಳಿದರೂ ಅವು ನಮ್ಮ ಅಂತಿಮ ಗುರಿಯನ್ನು ಸ್ಪರ್ಶಿಸುವುದಿಲ್ಲ ಎಂದು ಹೇಳಿದರು. ಈ ಹಿನ್ನೆಲೆ, ದೇವರ ವಾಕ್ಯವೇ ನಿಜವಾದ ದಾರಿದೀಪವಾಗಿದ್ದು, ಅದು ನಮ್ಮ ಜೀವನಕ್ಕೆ ದಿಕ್ಕು ತೋರಿಸುತ್ತದೆ ಎಂದರು.
ಜಗದ್ಗರುಗಳು ತಮ್ಮ ಧರ್ಮೋಪದೇಶ ಸರಣಿಯನ್ನು ಎರಡನೇ ವ್ಯಾಟಿಕನ್ ಮಹಾಸಭೆಯ 1965ರ ದಿವ್ಯ ಪ್ರಕಟಣೆಯ ಕುರಿತ ದೈ ವಬ೯ಮ್ ದಸ್ತಾವೇಜಿನ ಮೇಲೆ ಮುಂದುವರಿಸಿದರು. ದೇವರ ವಾಕ್ಯ ಮತ್ತು ಧರ್ಮ ಸಭೆಯ ನಡುವಿನ ಆಳವಾದ ಮತ್ತು ಜೀವಂತ ಸಂಬಂಧವನ್ನು ಅವರು ವಿವರಿಸಿದರು. ಧರ್ಮ ಸಭೆ ಸದಾ ದಿವ್ಯ ಗ್ರಂಥಗಳನ್ನು ಪ್ರಭುವಿನ ದೇಹವನ್ನು ಹೇಗೆ ಗೌರವಿಸುತ್ತದೆಯೋ ಹಾಗೆಯೇ ಗೌರವಿಸಿದೆ ಎಂದು ಮಹಾಸಭೆ ನಮಗೆ ಸ್ಮರಿಸುತ್ತದೆ ಎಂದರು.
ಪವಿತ್ರ ಶಾಸ್ತ್ರದ ಮಹತ್ವದ ಮೂಲ ಕಾರಣವು ಅದು ಯೇಸು ಕ್ರಿಸ್ತನೊಂದಿಗೆ ಹೊಂದಿರುವ ಆಪ್ತ ಸಂಬಂಧದಲ್ಲಿದೆ ಎಂದು ಜಗದ್ಗುರುಗಳು ಹೇಳಿದರು. ಕ್ರಿಸ್ತನೇ ತಂದೆಯ ಜೀವಂತ ವಾಕ್ಯ, ಮಾನವನಾಗಿ ಆಗಿರುವ ದೇವರ ವಾಕ್ಯ. ಎಲ್ಲಾ ಶಾಸ್ತ್ರಗಳು ಅವರ ವ್ಯಕ್ತಿತ್ವ ಮತ್ತು ರಕ್ಷಣಾ ಕಾರ್ಯವನ್ನು ಘೋಷಿಸುತ್ತವೆ. ಆದ್ದರಿಂದ ಪವಿತ್ರ ಶಾಸ್ತ್ರದ “ಸ್ವಾಭಾವಿಕ ಮನೆ” ಧರ್ಮ ಸಭೆ ಆಗಿದೆ ಪವಿತ್ರಾತ್ಮನ ಪ್ರೇರಣೆಯಿಂದ ಅದು ದೇವಜನರಿಂದ ಉದ್ಭವಿಸಿ ದೇವಜನರಿಗಾಗಿಯೇ ಉದ್ದೇಶಿತವಾಗಿದೆ.
ಶಾಸ್ತ್ರವನ್ನು ಓದಿ ಧ್ಯಾನಿಸುವುದರ ಅಂತಿಮ ಗುರಿ ಕ್ರಿಸ್ತನನ್ನು ತಿಳಿದುಕೊಳ್ಳುವುದು ಮತ್ತು ಅವರ ಮೂಲಕ ದೇವರೊಂದಿಗೆ ಸಂಬಂಧವನ್ನು ಬೆಳೆಸುವುದಾಗಿದೆ ಎಂದು ಜಗದ್ಗುರುಗಳು ಹೇಳಿದರು. ಸಂತ ಜೆರೋಮ್ ಉಲ್ಲೇಖಿಸಿದಂತೆ, ಶಾಸ್ತ್ರಗಳ ಅಜ್ಞಾನವೆಂದರೆ ಕ್ರಿಸ್ತನ ಅಜ್ಞಾನವೇ. ಪ್ರಾರ್ಥನೆಯ ಮನೋಭಾವದೊಂದಿಗೆ ಬೈಬಲನ್ನು ಓದಿದಾಗ ದೇವರೊಂದಿಗೆ ಸ್ನೇಹಿತರಂತೆ ಸಂವಾದ ನಡೆಯುತ್ತದೆ ಎಂದು ಅವರು ವಿವರಿಸಿದರು.
ಕೊನೆಯಲ್ಲಿ, ಪವಿತ್ರ ಶಾಸ್ತ್ರವು ಧರ್ಮ ಸಭೆಯ ಜೀವನದಲ್ಲಿ ಸಕ್ರಿಯ ಪಾತ್ರ ವಹಿಸುತ್ತದೆ ಎಂದು ಜಗದ್ಗುರುಗಳು ಪುನರುಚ್ಚರಿಸಿದರು. ವಿಶೇಷವಾಗಿ ಬಿಷಪ್‌ಗಳು, ಯಾಜಕರುಗಳು, ಉಪ ಯಾಜಕರು ಮತ್ತು ಧರ್ಮೋಪದೇಶಕರು ದೇವರ ವಾಕ್ಯ ಸೇವೆಯನ್ನು ನಿರ್ವಹಿಸುವುದರಿಂದ ಅವರಿಗೆ ಶಾಸ್ತ್ರಗಳ ಮೇಲಿನ ಪ್ರೀತಿ ಮತ್ತು ಪರಿಚಯ ಅತ್ಯಂತ ಅಗತ್ಯವಾಗಿದೆ ಎಂದರು. ಧರ್ಮಶಾಸ್ತ್ರ ಮತ್ತು ಬೈಬಲ್ ಅಧ್ಯಯನದಲ್ಲಿ ತೊಡಗಿರುವವರ ಕಾರ್ಯ ಅಮೂಲ್ಯವಾದದ್ದು ದೇವರ ವಾಕ್ಯವೇ ತತ್ವಶಾಸ್ತ್ರದ ಆಧಾರ ಮತ್ತು ಆತ್ಮವಾಗಿದೆ ಎಂದು ಹೇಳಿದರು.
