ಎಲೆತ್ರಾ ಮಾರ್ಕೋನಿ: ರೇಡಿಯೋ ಇನ್ನೂ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ
ವ್ಯಾಟಿಕನ್ ವರದಿ
ರೋಮ್‌ನ ವಿಯಾ ಕೊಂಡೋತ್ತಿಯಲ್ಲಿರುವ ತಮ್ಮ ನಿವಾಸದಲ್ಲಿ ರಾಜಕುಮಾರಿ ಎಲೆತ್ರಾ ಮಾರ್ಕೋನಿಯನ್ನು ಭೇಟಿಯಾಗುವುದು ಒಂದು ವಿಶಿಷ್ಟ ಅನುಭವವಾಗಿದೆ. ಆ ಮನೆಯಲ್ಲಿ ಅನೇಕ ಸ್ಮೃತಿಗಳು ನೆಲೆಸಿವೆ. 1931ರ ಅಕ್ಟೋಬರ್ 12ರಂದು ಅವರ ತಂದೆ ಗುಗ್ಲಿಯೆಲ್ಮೊ ಮಾರ್ಕೋನಿ ಒಂದು ಬಟನ್ ಒತ್ತುವ ಮೂಲಕ ರಿಯೋ ಡಿ ಜನೈರೋದಲ್ಲಿನ ಯೇಸುಕ್ರಿಸ್ತ ಪ್ರತಿಮೆಯನ್ನು ಬೆಳಗಿಸಿದ್ದರು. ವಿಶ್ವದ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರಾದ ತಮ್ಮ ತಂದೆಯ ಪರಂಪರೆಯನ್ನು ಜೀವಿತಾವಧಿಯವರೆಗೆ ಉಳಿಸಿ ಬೆಳೆಸುವುದೇ ತನ್ನ ಧ್ಯೇಯವೆಂದು ಅವರು ಹೇಳಿದ್ದಾರೆ.
ವ್ಯಾಟಿಕನ್ ರೇಡಿಯೋದ 95ನೇ ವಾರ್ಷಿಕೋತ್ಸವವು ತಮ್ಮ ಜೀವನದಲ್ಲಿಯೂ ಮಹತ್ವದ ದಿನವೆಂದು ಅವರು ವಿವರಿಸಿದ್ದಾರೆ. ಜಗದ್ಗುರು XIನೇ ಪಿಯಸ್ ರವರ ಆಹ್ವಾನದಿಂದ 1931ರಲ್ಲಿ ಮಾರ್ಕೋನಿ ವ್ಯಾಟಿಕನ್ ರೇಡಿಯೋವನ್ನು ನಿರ್ಮಿಸಿ ಉದ್ಘಾಟಿಸಿದರು. ದೇವರ ಮೇಲಿನ ಗಾಢ ನಂಬಿಕೆ ಮತ್ತು ಜಗದ್ಗುರುಗಳೊಂದಿಗೆ ಇದ್ದ ಆಪ್ತ ಸ್ನೇಹದಿಂದ ಈ ಯೋಜನೆ ಅವರಿಗೆ ಅತ್ಯಂತ ಹೃದಯಸ್ಪರ್ಶಿಯಾಗಿತ್ತು. ಜಗದ್ಗರುಗಳು ಸ್ವತಃ ಸಂಶೋಧನಾ ಮನೋಭಾವ ಹೊಂದಿದ್ದು, ಹೊಸ ಆವಿಷ್ಕಾರಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.
ಮಾರ್ಕೋನಿ ವ್ಯಾಟಿಕನ್ ರೇಡಿಯೋ ನಿರ್ಮಾಣಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಾಮಾನ್ಯವಾಗಿ ಲಂಡನ್, ನ್ಯೂಯಾರ್ಕ್ ಮುಂತಾದ ನಗರಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿದ್ದರೂ, ಈ ಯೋಜನೆಯ ನಿಮಿತ್ತ ಅವರು ಹಲವು ತಿಂಗಳುಗಳ ಕಾಲ ರೋಮ್‌ನಲ್ಲಿ ತಂಗಿದ್ದರು. ಪ್ರತಿದಿನವೂ ವ್ಯಾಟಿಕನ್‌ಗೆ ತೆರಳಿ ಕೆಲಸದ ಪ್ರಗತಿಯನ್ನು ಗಮನಿಸುತ್ತಿದ್ದರು. ಈ ಐತಿಹಾಸಿಕ ಕ್ಷಣಗಳ ಚಿತ್ರಗಳು ಮತ್ತು ಚಲನಚಿತ್ರಗಳು ಇಂದಿಗೂ ದೊರೆಯುತ್ತವೆ.
ತಮ್ಮ ತಂದೆಯ ಪರಂಪರೆಯನ್ನು ಜಗತ್ತಿನಾದ್ಯಂತ ಪರಿಚಯಿಸುವುದೇ ತನ್ನ ಕರ್ತವ್ಯವೂ ಸಂತೋಷವೂ ಆಗಿದೆ ಎಂದು ಎಲೆತ್ರಾ ಹೇಳಿದ್ದಾರೆ. ಬ್ರೆಜಿಲ್, ಆಸ್ಟ್ರೇಲಿಯಾ, ಅಮೆರಿಕಾ, ಚೀನಾ, ಜಪಾನ್ ಸೇರಿದಂತೆ ಅನೇಕ ದೇಶಗಳಿಗೆ ಭೇಟಿ ನೀಡಿ ಜನರ ಕೃತಜ್ಞತೆಯನ್ನು ಸ್ವೀಕರಿಸಿದ್ದಾರೆ. ರೇಡಿಯೋ ಮೂಲಕ ತಮ್ಮ ತಂದೆ ವಿಶ್ವದ ರಾಷ್ಟ್ರಗಳನ್ನು ಒಂದಾಗಿಸಿದರು ಎಂದು ಅವರು ಗರ್ವದಿಂದ ಹೇಳಿದರು.
ಕೃತಕ ಬುದ್ಧಿಮತ್ತೆ (ಎಐ) ಕುರಿತು ಅವರು ಇದು ಒಳ್ಳೆಯ ಸಾಧನವಾಗಬಹುದು, ಆದರೆ ಸರಿಯಾಗಿ ನಿಯಂತ್ರಿಸಬೇಕು ಎಂದು ಅಭಿಪ್ರಾಯಪಟ್ಟರು. ಇಂದಿನ ತಂತ್ರಜ್ಞಾನ ಬದಲಾವಣೆಯ ಕಾಲದಲ್ಲಿ ವ್ಯಾಟಿಕನ್ ರೇಡಿಯೋದಲ್ಲಿ ಕೆಲಸ ಮಾಡುವವರಿಗೆ ತಮ್ಮ ಪ್ರೀತಿ ಮತ್ತು ಕೃತಜ್ಞತೆಯನ್ನು ತಿಳಿಸಿದ್ದಾರೆ. ಯುವಕರು ತಮ್ಮ ತಂದೆಯ ಆದರ್ಶಗಳಿಂದ ಪ್ರೇರಿತರಾಗಿ ಬೆಳೆಯಲಿ ಎಂಬುದು ಅವರ ಆಶಯವಾಗಿದೆ.
ಕೊನೆಯಲ್ಲಿ, ರೇಡಿಯೋ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ಎಂದು ಅವರು ಸ್ಪಷ್ಟಪಡಿಸಿದರು. ದೇವರ ಮೇಲಿನ ನಂಬಿಕೆ ಮತ್ತು ಪರರ ಮೇಲಿನ ಪ್ರೀತಿ ಜೀವನದ ಮೌಲ್ಯಗಳು ಎಂದು ಹೇಳಿ, ಎಲ್ಲರೂ ಶಾಂತಿಯುತ ಮನಸ್ಸಿನಿಂದ ಬದುಕಲಿ ಎಂಬ ಶುಭಾಶಯಗಳನ್ನು ವ್ಯಕ್ತಪಡಿಸಿದರು.
