ಜಗದ್ಗುರುಗಳ ಮೊದಲ ಧರ್ಮ ಕೇಂದ್ರದ ಭೇಟಿಯ ವೇಳೆ: ಒಸ್ಟಿಯಾ ದುರುಪಯೋಗದ ಸಂಸ್ಕೃತಿಗೆ ತಲೆಬಾಗಬಾರದು
ವ್ಯಾಟಿಕನ್ ವರದಿ
ತಪಸ್ಸು ಕಾಲದ ಆರಂಭಕ್ಕೂ ಮುನ್ನದ ಭಾನುವಾರದಂದು, ರೋಮ್‌ನ ಒಸ್ಟಿಯಾ ಪ್ರದೇಶವು ಜಗದ್ಗುರು XIVನೇ ಲಿಯೋರವರುನ್ನು ಆತ್ಮೀಯವಾಗಿ ಸ್ವಾಗತಿಸಿತು. ಮಧ್ಯಾಹ್ನ ಸುಮಾರು 3:45ಕ್ಕೆ ಅವರು ಧರ್ಮ ಕೇಂದ್ರಕ್ಕೆ ಆಗಮಿಸಿದರು. ಇದು ಪುನರುತ್ಥಾನದ ಹಬ್ಬದವರೆಗೆ ನಡೆಯುವ ಐದು ಭಾನುವಾರದ ಭೇಟಿಗಳಲ್ಲಿ ಮೊದಲನೆಯದು. ಕಾರ್ಡಿನಲ್ ವಿಕಾರ್ ಬಾಲ್ಡೋ ರೀನಾ ಹಾಗೂ ಧರ್ಮ ಕೇಂದ್ರದ ಯಾಜಕ ಜಿಯೋವಾನಿ ಪಟಾನೆರವರು ಅವರನ್ನು ಬರಮಾಡಿಕೊಂಡರು. ಈ ಸ್ಥಳವು ಸಂತ ಅಗಸ್ಟಿನ್ ಮತ್ತು ಅವರ ತಾಯಿ ಸಂತ ಮೋನಿಕಾರವರ ಆತ್ಮೀಯ ಪರಂಪರೆಯಿಂದ ಪ್ರಸಿದ್ಧವಾಗಿದೆ. ನನ್ನ ಹೊಸ ಧರ್ಮಪ್ರಾಂತ್ಯದಲ್ಲಿ ಇದು ನನ್ನ ಮೊದಲ ಧರ್ಮ ಕೇಂದ್ರದ ಭೇಟಿ ಎಂದು ಜಗದ್ಗುರುಗಳು ಸಂತೋಷ ವ್ಯಕ್ತಪಡಿಸಿದರು.
ಪವಿತ್ರ ಬಲಿಪೂಜೆಯ ಪ್ರಭೋಧನೆಯಲ್ಲಿ ಜಗದ್ಗುರುಗಳು ಒಸ್ಟಿಯಾದಲ್ಲಿ ಕಂಡುಬರುವ ಹಿಂಸಾಚಾರ ಮತ್ತು ಅಪರಾಧಗಳ ಕುರಿತು ವಿಷಾದ ವ್ಯಕ್ತಪಡಿಸಿದರು. ಯುವಕರಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಅಪರಾಧ ಸಂಘಟನೆಗಳ ಪ್ರಭಾವದಿಂದ ಹಿಂಸಾಚಾರ ಹೆಚ್ಚುತ್ತಿದೆ ಎಂದು ಅವರು ಉಲ್ಲೇಖಿಸಿದರು. ಆದಾಗ್ಯೂ, ನಿರಾಶರಾಗದೆ ಭರವಸೆಯಿಂದ ಮುಂದೆ ನೋಡಬೇಕು ಮತ್ತು ಸಮಾಜದಲ್ಲಿ ಗೌರವ, ಸೌಹಾರ್ದತೆ, ತಾಳ್ಮೆ ಹಾಗೂ ಸೌಮ್ಯತೆಯ ಶಕ್ತಿಯನ್ನು ಬೆಳೆಸಬೇಕು ಎಂದು ಅವರು ಕರೆ ನೀಡಿದರು.
ಜಗದ್ಗರುಗಳ ಮಾತುಗಳು ಮಕ್ಕಳಿಗೆ, ಯುವಕರಿಗೆ, ಕುಟುಂಬಗಳಿಗೆ, ವಲಸಿಗರಿಗೆ, ಬಡವರಿಗೆ ಮತ್ತು ರೋಗಿಗಳಿಗೆ ಉದ್ದೇಶಿತವಾಗಿದ್ದವು. ಅವರು ಮಕ್ಕಳಿಗೆ ಆಶೀರ್ವಾದ ನೀಡಿ, ವ್ಹೀಲ್ಚೇರ್‌ನಲ್ಲಿದ್ದವರನ್ನು ಭೇಟಿ ಮಾಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ವಿವಿಧ ಗುಂಪುಗಳಿಗೆ “ನಮೋ ಮರಿಯ” ಮತ್ತು "ಪ್ರಭುವಿನ" ಪ್ರಾರ್ಥನೆಗಳನ್ನು ಮಾಡಲು ಆಹ್ವಾನಿಸಿದರು.
ಯುವಕರನ್ನು ಉದ್ದೇಶಿಸಿ ಅವರು ನೀವೇ ಆ ಭರವಸೆ ಎಂದು ಹೇಳಿದರು. ನಿಮ್ಮ ಹೃದಯಗಳಲ್ಲಿ ಮತ್ತು ನಿಮ್ಮ ಯೌವನದಲ್ಲಿ ನಾಳೆಯ ಭರವಸೆಯಿದೆ ಎಂದು ಅವರು ತಿಳಿಸಿದರು. ಯೇಸು ನಮ್ಮೊಡನೆ ಜೀವಂತವಾಗಿದ್ದು, ಶಾಂತಿ, ಪ್ರೀತಿ ಮತ್ತು ಸ್ನೇಹದಲ್ಲಿ ಬದುಕುವ ಭರವಸೆಯನ್ನು ನೀಡುತ್ತಾನೆ ಎಂದು ಅವರು ನೆನಪಿಸಿದರು.
ಧರ್ಮ ಕೇಂದ್ರ ಶೀಘ್ರದಲ್ಲೇ ತನ್ನ ಶತಮಾನೋತ್ಸವವನ್ನು ಆಚರಿಸಲಿರುವ ಸಂದರ್ಭದಲ್ಲಿ, ಜಗದ್ಗುರುಗಳು ಹೃದಯ ಪರಿವರ್ತನೆಗೆ ಕರೆ ನೀಡಿದರು. ದುರುಪಯೋಗ ಮತ್ತು ಅನ್ಯಾಯದ ಸಂಸ್ಕೃತಿಗೆ ತಲೆಬಾಗಬಾರದು ಬದಲಾಗಿ ಗೌರವ ಮತ್ತು ಶಾಂತಿಯನ್ನು ಹರಡಬೇಕು ಎಂದು ಹೇಳಿದರು. ಧರ್ಮ ಕೇಂದ್ರ ಪ್ರಾಮಾಣಿಕತೆ, ಸ್ವಾಗತ ಮತ್ತು ಗಡಿ ಮೀರುವ ಪ್ರೀತಿಯ ಶಾಲೆಯಾಗಬೇಕು ಎಂದು ಅವರು ಒತ್ತಿಹೇಳಿದರು.
ಭೇಟಿಯ ಅಂತ್ಯದಲ್ಲಿ, ಜಗದ್ಗುರುಗಳು ಧರ್ಮಧ್ಯಕ್ಷರ ಸಮಿತಿಯನ್ನು ಭೇಟಿ ಮಾಡಿ, ಪ್ರಾರ್ಥನೆ ಮತ್ತು ನಂಬಿಕೆಯ ಜೀವನದ ಮಹತ್ವವನ್ನು ನೆನಪಿಸಿದರು. “ಧಮ೯ಕೇಂದ್ರ ಎಂದರೆ ಜನರು ಬಂದು ಕೇಳಿಸಿಕೊಳ್ಳುವ ಸ್ಥಳವಾಗಿರಬೇಕು ಒಳಗೆ ಮಾತ್ರ ಉಳಿಯಬೇಡಿ, ಹೊರಗೆ ಹೋಗಿ ಆಹ್ವಾನಿಸಿ, ಸ್ವಾಗತಿಸಿ ಮತ್ತು ಜೊತೆಯಾಗಿ ನಡೆಯಿರಿ” ಎಂದು ಅವರು ಪ್ರೇರೇಪಿಸಿದರು. ಒಸ್ಟಿಯಾದ ಭರವಸೆ ಅದರ ಯುವಕರಲ್ಲಿ ಜೀವಂತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
