ಹುಡುಕಿ

ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಐರಿಷ್ ದೌರ್ಜನ್ಯ ಪೀಡಿತನಿಗೆ ಜಗದ್ಗುರು XIVನೇ ಲಿಯೋರವರ ಭೇಟಿಯ ಅನುಭವ: ಅವರು ನನ್ನ ನೋವನ್ನು ಅನುಭವಿಸಿದರು

ಐರ್ಲೆಂಡ್‌ನ ಬ್ಲ್ಯಾಕ್ರಾಕ್ ಕಾಲೇಜಿನ ಹಳೆಯ ವಿದ್ಯಾರ್ಥಿ ಡೇವಿಡ್ ರಾಯನ್ ರವರನ್ನು ಜಗದ್ಗುರು XIVನೇ ಲಿಯೋರವರು ಭೇಟಿ ಮಾಡಿ, ಅವರು ಹಾಗೂ ಅವರ ನಿಧನರಾದ ಸಹೋದರ ಮಾರ್ಕ್ ಅನುಭವಿಸಿದ ಲೈಂಗಿಕ ದೌರ್ಜನ್ಯದ ಕಥೆಯನ್ನು ಆಲಿಸಿದರು

ವ್ಯಾಟಿಕನ್ ವರದಿ

 ಡೇವಿಡ್ ರಾಯನ್ ರವರು ಐರಿಷ್ ಲೈಂಗಿಕ ದೌರ್ಜನ್ಯ ಪೀಡಿತರಾಗಿದ್ದು, 2022ರ ನವೆಂಬರ್‌ನಲ್ಲಿ ಪ್ರಸಾರವಾದ ಆರ್ ಟಿ ಇ  ರೇಡಿಯೋ 1 ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡಿದ್ದರು. ಆ ವರದಿಯಲ್ಲಿ, ಅವರು ಮತ್ತು ಅವರ ಸಹೋದರ ಮಾರ್ಕ್ ರವರು ಕಥೋಲಿಕ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅನುಭವಿಸಿದ ದೌರ್ಜನ್ಯದ ವಿವರಗಳು ಹೊರಬಂದಿದ್ದವು.

ಅವರು 12 ರಿಂದ 17 ವರ್ಷ ವಯಸ್ಸಿನ ಅವಧಿಯಲ್ಲಿ ಡಬ್ಲಿನ್ ಕೌಂಟಿಯ ಬ್ಲ್ಯಾಕ್ರಾಕ್ ಕಾಲೇಜು ಮತ್ತು ಅದರ ಪೂರ್ವಸಿದ್ಧತಾ ಶಾಲೆಯಾದ ವಿಲೋ ಪಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.ಜಗದ್ಗುರುಗಳೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ರಾಯನ್, ಜಗದ್ಗುರು ಲಿಯೋರವರು ತಮ್ಮ ಅನುಭವಗಳನ್ನು ಅತ್ಯಂತ ಗಮನಪೂರ್ವಕವಾಗಿ ಆಲಿಸಿದರು ಎಂದು ಹೇಳಿದರು.

ನಾನು ಇಂದು ಅವರೊಂದಿಗೆ ಮಾತನಾಡಿದ್ದರಿಂದ, ಇನ್ನೂ ಹಲವರು ಮುಂದೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಇತರರೂ ಮುಂದೆ ಬರಬೇಕೆಂದು ಅವರು ಬಯಸುತ್ತಾರೆ, ಎಂದು ಶ್ರೀ ರಾಯನ್ ಹೇಳಿದರು.

ಪೀಡಿತರು ಹಾಗೂ ಅವರ ಕುಟುಂಬಗಳ ಬಗ್ಗೆ ಜಗದ್ಗುರು ಲಿಯೋರವರಲ್ಲಿರುವ ಸಹಾನುಭೂತಿ ಮತ್ತು ಕರುಣೆಯನ್ನು ತಾನು ಸ್ಪಷ್ಟವಾಗಿ ಅನುಭವಿಸಿದೆನೆಂದು ಅವರು ಹೇಳಿದರು.

ನನ್ನ ನೋವಿನ ಬಗ್ಗೆ, ನನ್ನ ಕುಟುಂಬದ ನೋವಿನ ಬಗ್ಗೆ, ಹಾಗೂ ಇನ್ನೂ ಮುಂದೆ ಬಾರದ ಇತರ ಪೀಡಿತರ ನೋವಿನ ಬಗ್ಗೆ ಅವರು ತುಂಬಾ ವಿಷಾದ ವ್ಯಕ್ತಪಡಿಸಿದರು, ಎಂದು ಅವರು ಹೇಳಿದರು. ಅದು ನಿಜವಾದ ಸಹಾನುಭೂತಿಯೇ ಎಂಬುದು ನನಗೆ ಗೊತ್ತಿದೆ… ನಾನು ಇದನ್ನು ಮಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ, ಎಂದು ಶ್ರೀ ರಾಯನ್ ಮಾಧ್ಯಮಗಳಿಗೆ ಹೇಳಿದರು.

ದೌರ್ಜನ್ಯ ತನ್ನ ತಪ್ಪಲ್ಲ, ಆದರೆ ದೌರ್ಜನ್ಯ ಎಸಗಿದವರ ತಪ್ಪು ಎಂಬುದನ್ನು ಅರಿತುಕೊಳ್ಳಲು ತಮಗೆ 40 ವರ್ಷಗಳಾಯಿತೆಂದು ಅವರು ತಿಳಿಸಿದರು.

ಸಭೆಯ ವೇಳೆ, ಫೆಬ್ರವರಿ 1ರಂದು ಸಂತ ಬ್ರಿಜಿಡ್ ಆಫ್ ಕಿಲ್ಡೇರ್ ಅವರ ಹಬ್ಬವನ್ನು ಧರ್ಮ ಸಭೆ ಆಚರಿಸುತ್ತಿದ್ದ ಸಂದರ್ಭದಲ್ಲೇ, ಶ್ರೀ ರಾಯನ್ ಜಗದ್ಗುರು ಲಿಯೋರವರಿಗೆ ಸಂತ ಬ್ರಿಜಿಡ್ ರವರ ಲ್ಯಾಪೆಲ್ ಪಿನ್ ಅನ್ನು ಉಡುಗೊರೆಯಾಗಿ ನೀಡಿದರು. ಅದೇ ಸಂದರ್ಭದಲ್ಲಿ, ಬ್ಲ್ಯಾಕ್ರಾಕ್ ಕಾಲೇಜಿನಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಹಾಗೂ 2023ರಲ್ಲಿ 62ನೇ ವಯಸ್ಸಿನಲ್ಲಿ ಅಕಸ್ಮಾತ್ತಾಗಿ ನಿಧನರಾದ ತಮ್ಮ ಸಹೋದರ ಮಾರ್ಕ್ ರವರ ಛಾಯಾಚಿತ್ರವನ್ನೂ ಜಗದ್ಗುರುಗಳಿಗೆ ತೋರಿಸಿದರು.

ಜಗದ್ಗುರುಗಳೊಂದಿಗೆ ನಡೆದ ಈ ಭೇಟಿಯನ್ನು ಕುರಿತು ಮಾತನಾಡಿದ ಶ್ರೀ ರಾಯನ್, ಅದು ಅನನ್ಯ ಅನುಭವ. ನಾನು ಅದನ್ನು ಎಂದಿಗೂ  ಮರೆತೇ ಇಲ್ಲ. ಅವರ ಪ್ರಾಮಾಣಿಕತೆ, ಅವರ ಸಹಾನುಭೂತಿ  ಅವರು ನನ್ನ ನೋವನ್ನು ಅನುಭವಿಸಿದರು. ಅವರು ನನ್ನ ನೋವನ್ನು ನೇರವಾಗಿ ಅನುಭವಿಸಿರಲಿಲ್ಲ, ಆದರೆ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ನೋವನ್ನು ಅವರು ಆಳವಾಗಿ ಅರಿತುಕೊಂಡಿದ್ದರು, ಎಂದು ಹೇಳಿದರು.

02 ಫೆಬ್ರವರಿ 2026, 00:00