ಪುನರುತ್ಥಾನದ ಹಬ್ಬದವರೆಗೆ ಜಗದ್ಗುರು XIVನೇ ಲಿಯೋರವರ ಧಾರ್ಮಿಕ ಆಚರಣೆಗಳ ವೇಳಾಪಟ್ಟಿ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಪುನರುತ್ಥಾನದ ಹಬ್ಬದವರೆಗೆ ರೋಮ್ ಧರ್ಮಪ್ರಾಂತ್ಯದ ವಿಶ್ವಾಸಿಗಳೊಂದಿಗೆ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಐದು ರೋಮನ್ ಧರ್ಮ ಕೇಂದ್ರಗಳಿಗೆ ಧರ್ಮಾಧಿಕಾರಿಗಳ ಭೇಟಿಗಳನ್ನು ಕೈಗೊಳ್ಳಲಿದ್ದಾರೆ. ಈ ಭೇಟಿಗಳು ಫೆಬ್ರವರಿ 15ರಿಂದ ಮಾರ್ಚ್ 15ರವರೆಗೆ ನಡೆಯಲಿದ್ದು, ತಪಸ್ಸು ಕಾಲದ ಕಾಲದ ಆಧ್ಯಾತ್ಮಿಕ ಅಭ್ಯಾಸಗಳು ಹಾಗೂ ಪುನರುತ್ಥಾನದ ಹಬ್ಬದ ಆಚರಣೆಗಳೊಂದಿಗೆ ಸಮಕಾಲೀನವಾಗಿರುತ್ತವೆ.
ವ್ಯಾಟಿಕನ್‌ನ ದೈವಾರಾಧನೆ ವಿಧಿಯ ಆಚರಣೆಗಳ ಕಚೇರಿ ಫೆಬ್ರವರಿ 3ರಂದು ಪ್ರಕಟಿಸಿದ ಕ್ಯಾಲೆಂಡರ್ ಪ್ರಕಾರ, ಜಗದ್ಗುರುಗಳ ಧರ್ಮ ಕೇಂದ್ರದ ಭೇಟಿಗಳು ಸಾಮಾನ್ಯವಾಗಿ ಭಾನುವಾರದ ಮಧ್ಯಾಹ್ನ ನಡೆಯಲಿದ್ದು, ಸಂಜೆ 5 ಗಂಟೆಗೆ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಆದರೆ ಫೆಬ್ರವರಿ 22ರಂದು ಮಾತ್ರ ಅವರು ಬೆಳಿಗ್ಗೆ 9 ಗಂಟೆಗೆ ಕ್ಯಾಸ್ಟ್ರೋ ಪ್ರೆಟೋರಿಯೋದಲ್ಲಿರುವ (ಟರ್ಮಿನಿ ನಿಲ್ದಾಣದ ಸಮೀಪ) ಯೇಸು ಕ್ರಿಸ್ತನ ಪವಿತ್ರ ಹೃದಯದ ಧರ್ಮ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಈ ಧರ್ಮ ಕೇಂದ್ರಗಳ ಭೇಟಿಗಳಲ್ಲಿ, ಫೆಬ್ರವರಿ 15ರಂದು ಆಸ್ಟಿಯಾ ಲಿಡೊದಲ್ಲಿರುವ ಶಾಂತಿಯ ರಾಣಿ ಮಾತೆ ಮರಿಯಮ್ಮನ ಧರ್ಮ ಕೇಂದ್ರ, ಮಾರ್ಚ್ 1ರಂದು ಅಲೆಸಾಂದ್ರಿನೋ ಪ್ರದೇಶದ ಯೇಸು ಕ್ರಿಸ್ತನ ಸ್ವರ್ಗಾರೋಹಣ ಧರ್ಮ ಕೇಂದ್ರ, ಮಾರ್ಚ್ 8ರಂದು ಟೊರೆವೆಕ್ಕಿಯಾ ಪ್ರದೇಶದ ಪ್ರದರ್ಶನ ಮಾತೆಯ ಧರ್ಮ ಕೇಂದ್ರ ಮತ್ತು ಮಾರ್ಚ್ 15ರಂದು ಪೊಂಟೆ ಮಾಮೋಲೊದಲ್ಲಿರುವ ಯೇಸು ಕ್ರಿಸ್ತನ ಪವಿತ್ರ ಹೃದಯದ ಧರ್ಮ ಕೇಂದ್ರಗಳು ಸೇರಿವೆ.
ತಪಸ್ಸು ಕಾಲದ ಆರಂಭದಲ್ಲಿ, ಫೆಬ್ರವರಿ 18ರಂದು ಜಗದ್ಗುರು XIVನೇ ಲಿಯೋರವರು ಅವೆಂಟೈನ್ ಬೆಟ್ಟದಲ್ಲಿರುವ ಸಂತ ಸಬೀನಾ ಬಸಿಲಿಕಾದಲ್ಲಿ ಮಧ್ಯಾಹ್ನ ಪವಿತ್ರ ಬಲಿಪೂಜೆಯನ್ನು ಆಚರಿಸಲಿದ್ದಾರೆ. ಈ ಬಲಿಪೂಜೆಗೂ ಮುನ್ನ ಸಮೀಪದ ಸಂತ ಅನ್ಸೆಲ್ಮ್ ದೇವಾಲಯದಿಂದ ಪ್ರಾಯಶ್ಚಿತ್ತ ಮೆರವಣಿಗೆಯೊಂದಿಗೆ ಸ್ಟಾಟಿಯೋದಲ್ಲಿ ನಡೆಯಲಿದೆ. ಫೆಬ್ರವರಿ 22ರಿಂದ 27ರವರೆಗೆ ಅವರು ಪ್ರೇಷಿತರ ಅರಮನೆಯಲ್ಲಿ ರೋಮನ್ ಕುರಿಯಾದೊಂದಿಗೆ ವಾರ್ಷಿಕ ತಪಸ್ಸು ಕಾಲದ ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ಭಾಗವಹಿಸಲಿದ್ದಾರೆ.
ಪುನರುತ್ಥಾನ ಹಬ್ಬದ 3 ದಿನಗಳ ಧ್ಯಾನದ ಆಚರಣೆಗಳು ಮಾರ್ಚ್ 29ರಂದು ಗುರಿಗಳು ಹಬ್ಬದಂದು ಸಂತ ಪೇತ್ರ ಚೌಕದಲ್ಲಿ ಪವಿತ್ರ ಬಲಿ ಪೂಜೆಯಿಂದ ಆರಂಭವಾಗುತ್ತದೆ. ಪವಿತ್ರ ಗುರುವಾರ ಏಪ್ರಿಲ್ 2ರಂದು ಬೆಳಿಗ್ಗೆ ಸಂತ ಪೇತ್ರ ಬಸಿಲಿಕಾದಲ್ಲಿ ತೈಲಗಳ ಪವಿತ್ರೀಕರಣದ ಬಲಿಪೂಜೆ ಹಾಗೂ ಸಂಜೆ ರೋಮ್‌ನ ಮಹಾಧರ್ಮಾಧ್ಯಕ್ಷರ ಕ್ಯಾಥೆಡ್ರಲ್ ಆಗಿರುವ ಸಂತ ಜಾನ್ ಲಾಟೆರನ್ ಬಸಿಲಿಕಾದಲ್ಲಿ ಬಲಿ ಪೂಜೆಯನ್ನು ನೆರವೇರಿಸಲಿದ್ದಾರೆ. ಪವಿತ್ರ ಶುಕ್ರವಾರದಂದು ಜಗದ್ಗುರುಗಳು ಯೇಸು ಕ್ರಿಸ್ತನ ಪಾಡುಗಳ ದೈವಾರಾಧನ ವಿಧಿಯ ಆಚರಣೆಗೆ ಅಧ್ಯಕ್ಷತೆ ವಹಿಸಿ, ನಂತರ ಕೊಲೋಸಿಯಂನಲ್ಲಿ ಪರಂಪರೆಯ ಶಿಲುಬೆಯ ಮಾರ್ಗದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪುನರುತ್ಥಾನ ಹಬ್ಬದ ಜಾಗರಣೆಯನ್ನು ಪವಿತ್ರ ಶನಿವಾರದ ರಾತ್ರಿ ಏಪ್ರಿಲ್ 4ರಂದು ಸಂತ ಪೇತ್ರ ಬಸಿಲಿಕಾದಲ್ಲಿ ಆಚರಿಸಲಿದ್ದು, ಪುನರುತ್ಥಾನ ಹಬ್ಬದ ಭಾನುವಾರ ಏಪ್ರಿಲ್ 5ರಂದು ಸಂತ ಪೇತ್ರ ಚೌಕದಲ್ಲಿ ಪುನರುತ್ಥಾನದ ಮಹಾಬಲಿಪೂಜೆಯೊಂದಿಗೆ ಪುನರುತ್ಥಾನ ಹಬ್ಬದ ಆಚರಣೆಗಳು ಸಮಾಪ್ತಿಯಾಗುತ್ತವೆ. ಬಲಿಪೂಜೆಯ ನಂತರ ಜಗದ್ಗುರು XIVನೇ ಲಿಯೋರವರು ಸಂತ ಪೇತ್ರ ಬಸಿಲಿಕಾದ ಕೇಂದ್ರ ಲೋಗ್ಜಿಯಾದಿಂದ ಪರಂಪರೆಯ “ಉರ್ಬಿ ಎಟ್ ಓರ್ಬಿ” ಆಶೀರ್ವಾದವನ್ನು ನೀಡಲಿದ್ದಾರೆ.
