ಹುಡುಕಿ

ಸಾಮಾನ್ಯ ಪ್ರೇಕ್ಷಕರಲ್ಲಿ ಜಗದ್ಗುರು XIV ನೇ ಲಿಯೋರವರು ಸಾಮಾನ್ಯ ಪ್ರೇಕ್ಷಕರಲ್ಲಿ ಜಗದ್ಗುರು XIV ನೇ ಲಿಯೋರವರು  (ANSA)

ಯುರೋಪಿನಲ್ಲಿ ಉದ್ವಿಗ್ನತೆಗಳನ್ನು ನಿವಾರಿಸಲು ಏಕತೆಯನ್ನು ಪುನಃ ಕಂಡುಹಿಡಿಯಲು ಜಗದ್ಗುರು ಲಿಯೋರವರ ಪ್ರಾರ್ಥನೆ

ತಮ್ಮ ವಾರಾಂತ್ಯದ ಸಾಮಾನ್ಯ ಸಭೆಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಯುರೋಪ್ ದೇಶಗಳು ಉದ್ವಿಗ್ನತೆಗಳನ್ನು ದಾಟಿ, ಏಕತೆಯನ್ನು ಮತ್ತೆ ಕಂಡುಹಿಡಿಯಬೇಕೆಂದು ಕರೆ ನೀಡಿದರು. ಅವರು ಅಸ್ವಸ್ಥರಿಗಾಗಿ ಪ್ರಾರ್ಥನೆ ಸಲ್ಲಿಸಿದರು, ಕೊಲಂಬಿಯಾದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವವರನ್ನು ಸ್ಮರಿಸಿದರು ಹಾಗೂ ತಪಸ್ಸು ಕಾಲಕ್ಕೆ ಹೇಗೆ ಸಿದ್ಧರಾಗಬೇಕು ಎಂಬ ಕುರಿತು ಮಾರ್ಗದರ್ಶನ ನೀಡಿದರು.

ವ್ಯಾಟಿಕನ್  ವರದಿ

ಫೆಬ್ರವರಿ 11, 2026 ರಂದು ನಡೆದ ಸಾಮಾನ್ಯ ಸಭೆಯಲ್ಲಿ, ಜಗದ್ಗುರು ಲಿಯೋರವರು ಪೋಲಿಷ್ ಯಾತ್ರಿಕರನ್ನು ಅಭಿನಂದಿಸುತ್ತಾ, ಸ್ಲಾವ್ ಜನರ ಪ್ರೇಷಿತರು ಹಾಗೂ ಯುರೋಪಿನ ಪಾಲಕರಾದ ಸಂತ ಸಿರಿಲ್ ಮತ್ತು ಸಂತ ಮೆಥೋಡಿಯಸ್ ರವರ ಕುರಿತು ಮನನ ಮಾಡಿದರು. ಫೆಬ್ರವರಿ 14ರಂದು ಆಚರಿಸಲ್ಪಡುವ ಇವರ ಸ್ಮರಣಾ ಹಬ್ಬವನ್ನು ಉಲ್ಲೇಖಿಸಿ, ಅವರು ಸ್ಲಾವ್ ಜನರ ಕ್ರೈಸ್ತಧರ್ಮ, ಭಾಷೆ ಮತ್ತು ಸಂಸ್ಕೃತಿಯ ಪಿತೃಗಳೆಂದು ಹೇಳಿದರು. ಯುರೋಪಿನ ಆತ್ಮೀಯ ಚೈತನ್ಯವನ್ನು ಪುನರುಜ್ಜೀವನಗೊಳಿಸಲು ಇವರ ಜೀವನ ಮತ್ತು ಸೇವೆ ಪ್ರೇರಣೆಯಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು.

ಸಂತ ದ್ವಿತೀಯ ಜಾನ್ ಪಾಲರ ಪ್ರೇರಣೆಯನ್ನು ನೆನಪಿಸಿಕೊಂಡ ಜಗದ್ಗುರುಗಳು, ವಿಶ್ವಾಸಿಗಳನ್ನು ಈ ಇಬ್ಬರು ಸಂತರ ಪ್ರೇಷಿತರ ಕಾರ್ಯದತ್ತ ಮರಳುವಂತೆ ಆಹ್ವಾನಿಸಿದರು. ಧಾರ್ಮಿಕ ಮತ್ತು ರಾಜಕೀಯ ಉದ್ವಿಗ್ನತೆಗಳು, ವಿಭಜನೆಗಳು ಹಾಗೂ ವೈಮನಸ್ಯಗಳನ್ನು ಮೀರಿ ಹೊಸ ಏಕತೆಯ ಯುರೋಪನ್ನು ನಿರ್ಮಿಸಲು ನಾವು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇಂದು ರೋಗಿಗಳ ವಿಶ್ವ ದಿನವಾಗಿರುವುದನ್ನು ಸ್ಮರಿಸಿ, ಜಗದ್ಗುರು ಲಿಯೋರವರು ರೋಗಿಗಳು ಮತ್ತು ಅವರ ಕುಟುಂಬಗಳನ್ನು ಪರಮಪವಿತ್ರ ತಾಯಿಯ ಕಾಳಜಿಗೆ ಒಪ್ಪಿಸಿದರು. ವಾಟಿಕನ್‌ನ  VI ಪೌಲ್ ಸಭಾಂಗಣದಲ್ಲಿ ಅವರು ಲೂರ್ಡ್ಸ್ ಮಡೋನ್ನಾ ಮೂರ್ತಿಯ ಮುಂದೆ ಒಂದು ದೀಪ ಹಚ್ಚಿ ಪ್ರಾರ್ಥಿಸಿದರು. ಬಳಿಕ ವ್ಯಾಟಿಕನ್ ಉದ್ಯಾನವನದಲ್ಲಿರುವ ಲೂರ್ಡ್ಸ್ ಗುಹೆಗೆ ತೆರಳಿ, ಇಂದು ರೋಗಿಗಳ ವಿಶ್ವ ದಿನದ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸುವ ಎಲ್ಲಾ ರೋಗಿಗಳಿಗಾಗಿ ಪ್ರಾರ್ಥನೆಯ ಸಂಕೇತವಾಗಿ ದೀಪ ಹಚ್ಚುವುದಾಗಿ ಹೇಳಿದರು.

ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದ ಜಗದ್ಗುರುಗಳು, ಈ ವರ್ಷ ರೋಗಿಗಳ ವಿಶ್ವ ದಿನವನ್ನು ಪೆರುವಿನ ಚಿಕ್ಲಾಯೋದಲ್ಲಿರುವ ಶಾಂತಿಯ ತಾಯಿಯ ಧಾಮದಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ತಾವು ಆಧ್ಯಾತ್ಮಿಕವಾಗಿ ಅವರೊಂದಿಗೆ ಒಂದಾಗಿದ್ದೇನೆ ಎಂದು ಹೇಳಿ, ಈ ಸಂದರ್ಭದಲ್ಲಿ ಕಾರ್ಡಿನಲ್ ಮೈಕೆಲ್ ಚೆರ್ನಿಯನ್ನು ಅಲ್ಲಿ ಕಳುಹಿಸಿರುವುದಾಗಿ ತಿಳಿಸಿದರು.

ಕೊಲಂಬಿಯಾದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರನ್ನೂ ಹಾಗೂ ತೊಂದರೆ ಅನುಭವಿಸುತ್ತಿರುವವರನ್ನೂ ಮಾತೆ ಮೇರಿಯ ಕಾಳಜಿಗೆ ಒಪ್ಪಿಸಿ, ಪೀಡಿತ ಕುಟುಂಬಗಳಿಗೆ ದಾನಧರ್ಮ ಮತ್ತು ಪ್ರಾರ್ಥನೆಯ ಮೂಲಕ ಸಹಾಯ ಮಾಡಲು ಎಲ್ಲರನ್ನೂ ಪ್ರೇರೇಪಿಸಿದರು.

ತಪಸ್ಸು ಕಾಲವು ಮುಂದಿನ ಬುಧವಾರದಿಂದ ಆರಂಭವಾಗಲಿದ್ದು, ಇದು ನಮ್ಮ ಹೃದಯ ಮತ್ತು ಜೀವನವನ್ನು ಪರಿಶೀಲಿಸಿ, ಯೇಸುವಿನ ಮೇಲಿನ ನಮ್ಮ ಪ್ರೀತಿ ಮತ್ತು ಅರಿವನ್ನು ಗಾಢಗೊಳಿಸುವ ಕಾಲವೆಂದು ಜಗದ್ಗುರುಗಳು ಹೇಳಿದರು. ಪ್ರಾರ್ಥನೆ, ಉಪವಾಸ ಮತ್ತು ದಾನಧರ್ಮದ ಈ ದಿನಗಳು ಪ್ರತಿದಿನ ಕ್ರಿಸ್ತನನ್ನು ಅನುಸರಿಸಲು ನಮಗೆ ಶಕ್ತಿಯ ಮೂಲವಾಗಲಿ ಎಂದು ಆಶಿಸಿ ಅವರು ಸಂದೇಶವನ್ನು ಮುಕ್ತಾಯಗೊಳಿಸಿದರು.

11 ಫೆಬ್ರವರಿ 2026, 17:20