ಹುಡುಕಿ

ಬಿಕ್ಕಟ್ಟಿನಿಂದ ಆರೈಕೆಗೆ ಮಕ್ಕಳಿಗಾಗಿ ಕಥೋಲಿಕ ಕ್ರಿಯೆ ಉಪಕ್ರಮದ ಸಂಘಟನಾ ಸಮಿತಿಯೊಂದಿಗೆ ಜಗದ್ಗುರು XIV ನೇ ಲಿಯೋರವರು ಸಭೆ ನಡೆಸಿದರು. ಬಿಕ್ಕಟ್ಟಿನಿಂದ ಆರೈಕೆಗೆ ಮಕ್ಕಳಿಗಾಗಿ ಕಥೋಲಿಕ ಕ್ರಿಯೆ ಉಪಕ್ರಮದ ಸಂಘಟನಾ ಸಮಿತಿಯೊಂದಿಗೆ ಜಗದ್ಗುರು XIV ನೇ ಲಿಯೋರವರು ಸಭೆ ನಡೆಸಿದರು.  (ANSA)

ಮಕ್ಕಳ ಹಕ್ಕುಗಳನ್ನು ಗೌರವಿಸಿ, ಅವರನ್ನು ಅಪಾಯಗಳಿಂದ ರಕ್ಷಿಸುವ ಅಗತ್ಯವನ್ನು ಜಗದ್ಗುರುಗಳು ಪುನರುಚ್ಚರಿಸಿದರು

ಅಂತರರಾಷ್ಟ್ರೀಯ ಬದ್ಧತೆಗಳಿದ್ದರೂ ಕೂಡ, ಜಗತ್ತಿನ ಅತೀ ಕಿರಿಯವರ ಸ್ಥಿತಿ ಇನ್ನೂ ಅತ್ಯಂತ ಆತಂಕಕಾರಿಯಾಗಿಯೇ ಉಳಿದಿದೆ ಎಂದು ಎಚ್ಚರಿಕೆ ನೀಡುತ್ತಾ, ಮಕ್ಕಳನ್ನು ಜಾಗತಿಕ ಚಿಂತನೆಯ ಕೇಂದ್ರಬಿಂದುವಾಗಿ ಇರಿಸಬೇಕೆಂಬ ಧರ್ಮ ಸಭೆಯ ಕರೆಯನ್ನು ಜಗದ್ಗುರು XIVನೇ ಲಿಯೋರವರು ಮತ್ತೊಮ್ಮೆ ನವೀಕರಿಸಿದರು.

ವ್ಯಾಟಿಕನ್ ವರದಿ

ವ್ಯಾಟಿಕನ್‌ನಲ್ಲಿ ನಡೆದ ಸಭೆಯಲ್ಲಿ ಬಿಕ್ಕಟ್ಟಿನಿಂದ ಆರೈಕೆಗೆ ಮಕ್ಕಳಿಗಾಗಿ ಕಥೋಲಿಕ ಉಪಕ್ರಮದ ಆಯೋಜನಾ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಕಳೆದ ವರ್ಷ ನಡೆದ ಮಕ್ಕಳ ಹಕ್ಕುಗಳ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಆರಂಭವಾದ ಕಾರ್ಯವನ್ನು ಮುಂದುವರೆಸುತ್ತಿರುವ ಭಾಗವಹಿಸುವವರನ್ನು ಉತ್ತೇಜಿಸಿದರು. ಜಗದ್ಗುರು ಫ್ರಾನ್ಸಿಸ್ ರವರು ಮಕ್ಕಳ ಹಕ್ಕು, ಗೌರವ ಮತ್ತು ಕಲ್ಯಾಣವನ್ನು ರಕ್ಷಿಸುವಂತೆ ನೀಡಿದ ತುರ್ತು ಕರೆಯ ಪ್ರತಿಫಲವಾಗಿ ಈ ಉಪಕ್ರಮ ಉದ್ಭವಿಸಿದ್ದು, ಜಗದ್ಗುರುಗಳ ಅಧಿಕಾರ ಸ್ಥಳದ ಸಂಸ್ಥೆಗಳು, ಧಾರ್ಮಿಕ ಸಂಘಗಳು, ಅಪ್ರಾಪ್ತರ ರಕ್ಷಣೆಗೆ ಇರುವ ಜಗದ್ಗುರುಗಳ ಆಯೋಗ, ವಿವಿಧ ಧಾರ್ಮಿಕ ಸಮುದಾಯಗಳು ಹಾಗೂ ಸಾಮಾನ್ಯ ತಜ್ಞರ ಸಹಭಾಗಿತ್ವದಲ್ಲಿ ಇದು ನಡೆಯುತ್ತಿದೆ.

ಐದು ಖಂಡಗಳಾದ್ಯಂತ ಮಕ್ಕಳ ಮತ್ತು ಕುಟುಂಬಗಳೊಂದಿಗೆ ನೇರವಾಗಿ ಕೆಲಸ ಮಾಡುವ ಈ ಉಪಕ್ರಮ, ಧರ್ಮ ಸಭೆಯ ನಾಯಕರು, ಸಮುದಾಯಗಳು ಮತ್ತು ಸಹಭಾಗಿಗಳಿಗೆ ಬೆಂಬಲ ನೀಡುವ ಸಾರ್ವಜನಿಕ ಕ್ರಿಯಾ ಯೋಜನೆಯಲ್ಲಿ ಅಂತ್ಯಗೊಳ್ಳುವ ಗುರಿಯನ್ನು ಹೊಂದಿದೆ. ಪ್ರತಿಯೊಬ್ಬ ಮಗು ಸುರಕ್ಷಿತ ಹಾಗೂ ಪೋಷಕ ಕುಟುಂಬ ವಾತಾವರಣದಲ್ಲಿ, ಬಲಿಷ್ಠ ಮತ್ತು ಸಮನ್ವಿತ ವ್ಯವಸ್ಥೆಗಳ ಬೆಂಬಲದೊಂದಿಗೆ ಬೆಳೆಯಬೇಕು ಎಂಬುದು ಇದರ ಮೂಲ ಉದ್ದೇಶವಾಗಿದೆ.

ಇಂದಿನ ಕಾಲದಲ್ಲಿ ಅನೇಕ ಮಕ್ಕಳು ಮತ್ತು ಯುವಕರು ಎದುರಿಸುತ್ತಿರುವ ವಾಸ್ತವಿಕತೆಯ ಬಗ್ಗೆ ಜಗದ್ಗುರುಗಳು ತೀವ್ರ ಕಾಳಜಿ ವ್ಯಕ್ತಪಡಿಸಿದರು. ಯೇಸು ತನ್ನ ಬಳಿಗೆ ಬರಬೇಕೆಂದು ಬಯಸಿದ ಜಗತ್ತಿನ ಮಕ್ಕಳು ಮತ್ತು ಯುವಕರು, ಬಹುಪಾಲು ಆರೈಕೆಯಿಂದ ಮತ್ತು ಜೀವನದ ಮೂಲಭೂತ ಅಗತ್ಯಗಳಿಂದ ವಂಚಿತರಾಗುತ್ತಿರುವುದು ಒಂದು ದುರಂತವೆಂದು ಅವರು ಹೇಳಿದರು. ದೇವರಿಂದ ನೀಡಲಾದ ಸಾಮರ್ಥ್ಯವನ್ನು ಸಾಧಿಸಲು ಅವರಿಗೆ ಅತಿ ಕಡಿಮೆ ಅವಕಾಶಗಳು ದೊರಕುತ್ತಿವೆ ಮತ್ತು ಕಳೆದ ವರ್ಷದಲ್ಲಿಯೂ ಈ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಮಕ್ಕಳನ್ನು ಅಪಾಯಗಳಿಂದ ರಕ್ಷಿಸುವಲ್ಲಿ ಪ್ರಗತಿಯ ಕೊರತೆ ಇರುವುದೂ ಗಂಭೀರ ಚಿಂತೆಯ ವಿಷಯವೆಂದು ಜಗದ್ಗುರುಗಳು ಹೇಳಿದರು. ಅನೇಕ ಮಕ್ಕಳು ತೀವ್ರ ದಾರಿದ್ರ್ಯದಲ್ಲಿ ಬದುಕುತ್ತಿದ್ದು, ದುರುಪಯೋಗಕ್ಕೆ ಒಳಗಾಗುತ್ತಿದ್ದು, ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದು, ತಮ್ಮ ಕುಟುಂಬಗಳಿಂದ ದೂರವಾಗುತ್ತಿರುವ ಸ್ಥಿತಿಯನ್ನು ಉಲ್ಲೇಖಿಸಿ, ಜಾಗತಿಕ ಆದ್ಯತೆಗಳು ಅತೀ ದುರ್ಬಲರಿಂದ ದೂರ ಸರಿದಿವೆಯೇ ಎಂಬ ಪ್ರಶ್ನೆಯನ್ನು ಅವರು ಎತ್ತಿದರು. ಈ ಸಂದರ್ಭದಲ್ಲಿ, ಕುಟುಂಬದ ಮಹತ್ವವನ್ನು ಪುನರುಚ್ಚರಿಸಿದ ಅವರು, ಮಗುವಿನ ಸಮಗ್ರ ಮತ್ತು ಸಮತೋಲನಯುತ ಬೆಳವಣಿಗೆಗೆ ತಾಯಿ ಮತ್ತು ತಂದೆಯಿಂದ ಪ್ರೀತಿಯನ್ನು ಪಡೆಯುವ ಹಕ್ಕು ಅವಶ್ಯಕವೆಂದು ನೆನಪಿಸಿದರು.

ಸಮಿತಿಯ ಕಾರ್ಯವನ್ನು ಮೆಚ್ಚಿಕೊಂಡ ಜಗದ್ಗುರು ಲಿಯೋರವರು, ಮಕ್ಕಳ ಪರವಾಗಿ ಧ್ವನಿಯಿಲ್ಲದವರ ಪರವಾಗಿ ಮಾತನಾಡುತ್ತಿರುವ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ ಎಂದು ಹೇಳಿದರು. ನಿರಾಶೆ, ವಿಫಲ ಪ್ರಯತ್ನಗಳು ಅಥವಾ ನಿರ್ಲಕ್ಷ್ಯ ಎದುರಾದರೂ ಸಹ, ಧೈರ್ಯದಿಂದ ಮುಂದುವರಿಯಲು ಅವರು ಉತ್ತೇಜಿಸಿದರು. ಜೊತೆಗೆ, ಮಕ್ಕಳ ದೈಹಿಕ, ಮಾನಸಿಕ ಮತ್ತು ಆತ್ಮಿಕ ಕಲ್ಯಾಣವನ್ನು ಸಮತೋಲನಯುತವಾಗಿ ಗಮನಿಸುವ ಸಮಗ್ರ ದೃಷ್ಟಿಕೋನ ಅಗತ್ಯವೆಂದು ಅವರು ಒತ್ತಿಹೇಳಿದರು.

ಕೊನೆಗೆ, ಮಕ್ಕಳ ಮಾತನ್ನು ಕೇಳಬೇಕೆಂಬ ಜಗದ್ಗುರು ಫ್ರಾನ್ಸಿಸ್ ರವರ ಬಲವಾದ ಸಂದೇಶವನ್ನು ಸ್ಮರಿಸಿ, ಜಗದ್ಗುರು XIVನೇ ಲಿಯೋರವರು ಮಕ್ಕಳಿಗಾಗಿ ಸ್ಪಷ್ಟ ಕ್ರಮಗಳು ಮತ್ತು ಕಾರ್ಯಯೋಜನೆಗಳನ್ನು ರೂಪಿಸುವಂತೆ ಕರೆ ನೀಡಿದರು. ವಿಶೇಷವಾಗಿ, ದುಃಖ ಅನುಭವಿಸುತ್ತಿರುವ ಮತ್ತು ಜೀವನದ ಮೂಲಭೂತ ಅಗತ್ಯಗಳಿಂದ ವಂಚಿತರಾಗಿರುವ ಮಕ್ಕಳಿಗಾಗಿ ಪ್ರಾರ್ಥನೆ ಮಾಡುವುದಾಗಿ ಅವರು ಹೇಳಿದರು.

05 ಫೆಬ್ರವರಿ 2026, 14:51