ಜಗದ್ಗುರುಗಳ ಫೆಬ್ರವರಿ ತಿಂಗಳ ಪ್ರಾರ್ಥನಾ ಉದ್ದೇಶ: ಗುಣವಾಗದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಪ್ರಾರ್ಥನೆ
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಫೆಬ್ರವರಿ ತಿಂಗಳ ಜಗದ್ಗುರುಗಳೊಂದಿಗೆ ಪ್ರಾರ್ಥನೆ ವೀಡಿಯೊವನ್ನು ಆರಂಭಿಸಿ, ಗುಣವಾಗದ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗಾಗಿ ಹೃದಯಸ್ಪರ್ಶಿ ಪ್ರಾರ್ಥನೆಯನ್ನು ಅರ್ಪಿಸಿದರು. ಯೇಸು ತಮ್ಮ ಕೈಗಳಲ್ಲಿ ಪುಟ್ಟ ಮಕ್ಕಳನ್ನು ಸ್ವಾಗತಿಸಿ ಆಶೀರ್ವದಿಸಿದಂತೆ, ಇಂದಿಗೂ ದುಃಖ ಅನುಭವಿಸುತ್ತಿರುವ ಈ ಮಕ್ಕಳನ್ನು ದೇವರ ಸನ್ನಿಧಿಯಲ್ಲಿ ಅರ್ಪಿಸುತ್ತೇವೆ ಎಂದು ಅವರು ಹೇಳಿದರು. ಅವರ ದುರ್ಬಲ ದೇಹಗಳು ಯೇಸುವಿನ ಸಾನ್ನಿಧ್ಯದ ಗುರುತುಗಳಾಗಿದ್ದು, ನೋವಿನ ಮಧ್ಯೆಯಲ್ಲೂ ಮೂಡುವ ಅವರ ನಗು ದೇವರ ರಾಜ್ಯಕ್ಕೆ ಸಾಕ್ಷಿಯಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.
ಈ ಮಕ್ಕಳಿಗೆ ಸಮರ್ಪಕ ವೈದ್ಯಕೀಯ ಆರೈಕೆ, ಮಾನವೀಯ ಮತ್ತು ಕರುಣಾಮಯ ಗಮನ, ಹಾಗೂ ಪ್ರೀತಿಯಿಂದ ಜೊತೆಯಾಗಿ ನಡೆಯುವ ಸಮುದಾಯದ ಬೆಂಬಲ ಎಂದಿಗೂ ಕೊರತೆಯಾಗದಿರಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಜೊತೆಗೆ, ರೋಗಪೀಡಿತ ಮಕ್ಕಳ ಕುಟುಂಬಗಳು, ಆರೈಕೆದಾರರು ಮತ್ತು ವೈದ್ಯರಿಗಾಗಿ ಅವರು ವಿಶೇಷವಾಗಿ ಪ್ರಾರ್ಥಿಸಿ, ಪವಿತ್ರಾತ್ಮನು ಅವರ ನಿರ್ಧಾರಗಳನ್ನು ಬೆಳಗಿಸಿ, ಅವರಿಗೆ ಸಹನಶೀಲತೆ ಮತ್ತು ಮೃದುತ್ವವನ್ನು ದಯಪಾಲಿಸಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಪ್ರತಿ ದುಃಖಿಸುತ್ತಿರುವ ಮಗುವಿನಲ್ಲಿ ನಿನ್ನ ಮುಖವನ್ನು ಗುರುತಿಸಲು ನಮಗೆ ಕಲಿಸು ಎಂದು ಜಗದ್ಗುರುಗಳು ಪ್ರಾರ್ಥಿಸಿದರು. ಮಕ್ಕಳ ಅಸಹಾಯಕತೆ ನಮ್ಮಲ್ಲಿನ ಕರುಣೆಯನ್ನು ಜಾಗೃತಗೊಳಿಸಿ, ಸ್ಪಷ್ಟ ಐಕ್ಯತೆಯ ಕೃತಿಗಳ ಮೂಲಕ ಕಾಳಜಿ ವಹಿಸಲು, ಜೊತೆಯಾಗಿ ನಡೆಯಲು ಮತ್ತು ಪ್ರೀತಿಸಲು ನಮ್ಮನ್ನು ಪ್ರೇರೇಪಿಸಲಿ ಎಂದು ಅವರು ಹೇಳಿದರು. ಧರ್ಮ ಸಭೆ ದುರ್ಬಲತೆಯನ್ನು ಕಾಪಾಡಿಕೊಳ್ಳುವ ಮತ್ತು ದುಃಖದ ನಡುವೆ ಆಧಾರ ಹಾಗೂ ಸಾಂತ್ವನದ ಮೂಲವಾಗುವಂತೆ ಆಗಲಿ ಎಂಬುದೂ ಅವರ ಪ್ರಾರ್ಥನೆಯ ಭಾಗವಾಗಿತ್ತು.
ಜಗದ್ಗುರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣದ ಪ್ರಕಟಣೆಯ ಪ್ರಕಾರ, ಈ ತಿಂಗಳು ಜಗದ್ಗುರು ಲಿಯೋರವರು ತಮ್ಮ ಹೃದಯದಲ್ಲಿ ವಿಶೇಷವಾಗಿ ದುಃಖ ಅನುಭವಿಸುತ್ತಿರುವ ಮಕ್ಕಳನ್ನು ಹೊತ್ತಿದ್ದಾರೆ. ವ್ಯಾಟಿಕನ್‌ನ ಸಂತ ಪೆಲ್ಲೆಗ್ರಿನೊ ಧರ್ಮ ಸಭೆಯಲ್ಲಿ ದಾಖಲಾಗಿದ ವೀಡಿಯೊದಲ್ಲಿ, ರೋಮ್‌ನ ಬಾಲ ಯೇಸು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಚಿತ್ರಗಳನ್ನು ಹಿಡಿದಿರುವ ಜಗದ್ಗುರುಗಳನ್ನು ಕಾಣಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಸುಮಾರು 4 ಲಕ್ಷ ಮಕ್ಕಳು ಮತ್ತು ಯುವಕರಿಗೆ ಕ್ಯಾನ್ಸರ್ ರೋಗ ಪತ್ತೆಯಾಗುತ್ತದೆ. ಯುನಿಸೆಫ್ ವರದಿಯಂತೆ, 20 ವರ್ಷದೊಳಗಿನ 2.1 ಬಿಲಿಯನ್‌ಗಿಂತ ಹೆಚ್ಚು ಮಕ್ಕಳು ಮತ್ತು ಯುವಕರು ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು 10 ಲಕ್ಷ ಮಕ್ಕಳು ಈ ಕಾಯಿಲೆಗಳ ಕಾರಣದಿಂದ ಮೃತಪಟ್ಟಿದ್ದಾರೆ.
ಈ ಉದ್ದೇಶಕ್ಕಾಗಿ 90ಕ್ಕೂ ಹೆಚ್ಚು ದೇಶಗಳಲ್ಲಿ 2 ಕೋಟಿ ಜನರು ಪ್ರಾರ್ಥನೆಯಲ್ಲಿ ಸೇರಿರುವುದು ಭರವಸೆಯ ಸಂಕೇತವೆಂದು ಜಗದ್ಗುರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲತಾಣದ ನಿರ್ದೇಶಕ ಫಾದರ್ ಕ್ರಿಸ್ತೋಬಾಲ್ ಫೋನೆಸ್ ರವರು ಹೇಳಿದ್ದಾರೆ. ಇಂತಹ ಕಠಿಣ ಮತ್ತು ನೋವಿನ ವಾಸ್ತವಿಕತೆ ಅನೇಕ ಹೃದಯಗಳನ್ನು ಸ್ಪರ್ಶಿಸಿ, ಮಕ್ಕಳಿಗಾಗಿ ಕಾಳಜಿ ವಹಿಸುವ ಬದ್ಧತೆಯನ್ನು ಗಾಢಗೊಳಿಸುತ್ತಿದೆ ಎಂಬುದು ಇದರ ಅರ್ಥವಾಗಿದೆ.
