ಸಾಹೆಲ್ ಪ್ರದೇಶದ ಪ್ರತಿಷ್ಠಾನಕ್ಕೆ ದ್ವಿತೀಯ ಜಾನ್ ಪಾಲ್ ರವರ ಹೊಸ ವಿಧಿವಿಧಾನ
ವ್ಯಾಟಿಕನ್ ವರದಿ
ಜನವರಿ 29, 2026ರಂದು ವ್ಯಾಟಿಕನ್‌ನಲ್ಲಿ ನಡೆದ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರೊಂದಿಗೆ ನಡೆದ ಸಭೆಯ ವೇಳೆ, ಜಗದ್ಗುರು XIVನೇ ಲಿಯೋರವರು ಸಾಹೆಲ್ ಪ್ರದೇಶದ ದ್ವಿತೀಯ ಜಾನ್ ಪಾಲ್ ರವರ ಪ್ರತಿಷ್ಠಾನದ ತಿದ್ದುಪಡಿ ಮಾಡಿದ ವಿಧಿವಿಧಾನಗಳನ್ನು ಅನುಮೋದಿಸಿದರು. ಈ ಹೊಸ ವಿಧಿವಿಧಾನಗಳು, ರೋಮನ್ ಧರ್ಮ ಪ್ರಾಂತ್ಯದ ಕಾನೂನು ವ್ಯಕ್ತಿಗಳಿಗೆ ಅನ್ವಯವಾಗುವ ಪ್ರಸ್ತುತ ನಿಯಮಾವಳಿ ಹಾಗೂ ಪ್ರೇಷಿತರ ಅಧಿಕಾರ ಸ್ಥಳದ ಆಸ್ತಿಗೆ ಸಂಬಂಧಿಸಿದ ನಿಯಮಗಳಿಗೆ ಪ್ರತಿಷ್ಠಾನದ ಕಾನೂನು ಸ್ಥಾನಮಾನವನ್ನು ಹೊಂದಿಕೊಳ್ಳುವಂತೆ ಮಾಡುತ್ತವೆ. ಈ ವಿಷಯವನ್ನು ಫೆಬ್ರವರಿ 5ರಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ಶಾಸನ ಪತ್ರದ ಮೂಲಕ ಪ್ರಕಟಿಸಿತು.
ಈ ಪ್ರತಿಷ್ಠಾನದ ಉದ್ಭವಕ್ಕೆ 1980ರ ಮೇ 10ರಂದು, ಆಗ ಅಪರ್ ವೋಲ್ಟಾ ಎಂದು ಕರೆಯಲ್ಪಟ್ಟಿದ್ದ (ಇಂದಿನ ಬುರ್ಕಿನಾ ಫಾಸೊ) ಔಗಾಡುಗು ನಗರದಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಮಾಡಿದ ಆಳವಾದ ಮನವಿ ಕಾರಣವಾಯಿತು. ನೀರು ಮತ್ತು ಆಹಾರದ ತೀವ್ರ ಕೊರತೆ ಹಾಗೂ ಹೆಚ್ಚುತ್ತಿರುವ ಮರುಭೂಮೀಕರಣದಿಂದ ಬಳಲುತ್ತಿದ್ದ ಸಾಹೆಲ್ ಪ್ರದೇಶದ ಜನರ ಪರವಾಗಿ ಅವರು ಜಗತ್ತಿಗೆ ತೀವ್ರ ಕರೆ ನೀಡಿದ್ದರು.
ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಧ್ವನಿಯಿಲ್ಲದವರ ಧ್ವನಿಯಾಗಲು ತಾವೇ ಮುಂದಾಗುತ್ತಾ, ನೀರು ಮತ್ತು ಅನ್ನದ ಕೊರತೆಯಿಂದ ಮರಣ ಹೊಂದಿದ ನಿರಪರಾಧಿಗಳ ಹಾಗೂ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ವೇದನೆಯನ್ನು ಜಗತ್ತಿನ ಮುಂದೆ ಇಟ್ಟರು. ಅವರ ಈ ಕರೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ, ಆಫ್ರಿಕಾ ಖಂಡದ ತಮ್ಮ ಸಹೋದರ-ಸಹೋದರಿಯರ ಮೇಲಿನ ಪ್ರೀತಿಯ ಚಿಹ್ನೆಯಾಗಿ, 1984ರ ಫೆಬ್ರವರಿ 22ರಂದು ಜಗದ್ಗುರುಗಳ ಅನುಮೋದನೆಯೊಂದಿಗೆ ಈ ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು.
ಹೊಸ ವಿಧಿವಿಧಾನಗಳ ಪ್ರಕಾರ, ಈ ಪ್ರತಿಷ್ಠಾನವು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರಿಯ ಒಂದು ಸಾಧನಾತ್ಮಕ ಕಾನೂನು ಘಟಕವಾಗಿದ್ದು, ಕ್ಯಾನನ್ ಕಾನೂನು ಮತ್ತು ವ್ಯಾಟಿಕನ್ ನಾಗರಿಕ ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಕಾನೂನು ಕೇಂದ್ರ ಕಚೇರಿ ವ್ಯಾಟಿಕನ್‌ನಲ್ಲಿದ್ದರೂ, ಕಾರ್ಯಾಚರಣಾ ಕೇಂದ್ರ ಔಗಾಡುಗು ನಗರದಲ್ಲಿದೆ.
ಸಮಗ್ರ ಮಾನವ ಉತ್ತೇಜನದ ಮನೋಭಾವದಲ್ಲಿ ಕಾರ್ಯನಿರ್ವಹಿಸುವ ಈ ಪ್ರತಿಷ್ಠಾನವು ಸಾಹೆಲ್ ಪ್ರದೇಶದ ಒಂಬತ್ತು ದೇಶಗಳನ್ನು ಒಳಗೊಂಡಿದೆ: ಬುರ್ಕಿನಾ ಫಾಸೊ, ಕೇಪ್ ವರ್ಡೆ, ಗ್ಯಾಂಬಿಯಾ, ಗಿನಿ-ಬಿಸ್ಸೌ, ಮಾಲಿ, ಮೌರಿಟಾನಿಯಾ, ನೈಜರ್, ಸೆನೆಗಲ್ ಮತ್ತು ಚಾಡ್. ಇದರ ಮುಖ್ಯ ಉದ್ದೇಶವೆಂದರೆ ಯಾವುದೇ ಭೇದಭಾವವಿಲ್ಲದೆ ದೇಶ ಮತ್ತು ಮಾನವಕುಲದ ಸೇವೆಗೆ ತಮ್ಮನ್ನು ಅರ್ಪಿಸುವ ವ್ಯಕ್ತಿಗಳ ತರಬೇತಿಯನ್ನು ಉತ್ತೇಜಿಸುವುದು, ಮರುಭೂಮೀಕರಣ ಮತ್ತು ಅದರ ಕಾರಣಗಳನ್ನು ಎದುರಿಸುವುದು ಹಾಗೂ ಬರದಿಂದ ಬಳಲುತ್ತಿರುವವರಿಗೆ ನೆರವು ನೀಡುವುದು.
ಈ ಉದ್ದೇಶಕ್ಕಾಗಿ, ಪ್ರತಿಷ್ಠಾನವು ಸ್ಥಳೀಯ ಕಾರ್ಯಕರ್ತರು ಮತ್ತು ತಜ್ಞರ ತರಬೇತಿಗೆ ಆದ್ಯತೆ ನೀಡುತ್ತದೆ. ಜೊತೆಗೆ ತಾಂತ್ರಿಕ ಅಭಿವೃದ್ಧಿ, ಸಾಮಾಜಿಕ-ಆರೋಗ್ಯ, ಸಾಮಾಜಿಕ-ಕೃಷಿ, ಸಾಮಾಜಿಕ-ಆರ್ಥಿಕ, ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಕ್ಷೇತ್ರಗಳಲ್ಲಿ ಯೋಜನೆಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ಜಗತ್ತಿನ ವಿವಿಧ ಧರ್ಮ ಸಭೆಗಳಲ್ಲಿ ಸಾಹೆಲ್ ಪ್ರದೇಶದ ಸಹಾಯಕ್ಕಾಗಿ ಸಂಗ್ರಹಿಸಲಾದ ದೇಣಿಗೆಗಳ ಆದಾಯವನ್ನು ಜಗದ್ಗುರುಗಳು ಈ ಪ್ರತಿಷ್ಠಾನಕ್ಕೆ ಒದಗಿಸುತ್ತಿದ್ದಾರೆ. ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆ ಫೆಬ್ರವರಿ ಮಧ್ಯದಲ್ಲಿ ಸೆನೆಗಲ್‌ನ ಡಾಕಾರ್‌ನಲ್ಲಿ ನಡೆಯಲಿದೆ.
