ಹುಡುಕಿ

The Via Crucis (Way of the Cross) procession during Good Friday celebrations, in Rome

ಪ್ರಭುವಿನ ಪಾಡು ವಿಧಿ: “ಯೇಸು ಶಿಲುಬೆಗೆ ಹಾಕಲ್ಪಡುವುದನ್ನು ರಕ್ಷಣೆಯಾಗಿ ಪರಿವರ್ತಿಸಿದರು.”

ಪವಿತ್ರ ಶುಕ್ರವಾರದಂದು, ಜಗದ್ಗುರು XIVನೇ ಲಿಯೋರವರು ಸಂತ ಪೀಟರ್ ಬಾಸಿಲಿಕಾದಲ್ಲಿ ಪ್ರಭುವಿನ ಪಾಡು ವಿಧಿಯ ಗಂಭೀರ ಪೂಜೆಯನ್ನು ಅಧ್ಯಕ್ಷತೆ ವಹಿಸುತ್ತಾರೆ. ಜಗದ್ಗುರುಗಳ ಗೃಹದ ಪ್ರಚಾರಕರಾದ ವಂ.ಸ್ವಾಮಿ ರೊಬೆರ್ಟೊ ಪಾಸೋಲಿನಿ, ತಮ್ಮ ಪ್ರಭೋಧನೆಯಲ್ಲಿ, ಶಿಲುಬೆಯ ಮಾರ್ಗವನ್ನು ನಡೆದು ಹೋಗುವ ಮೂಲಕ, ಪ್ರಭು ಅತಿ ಕಠಿಣವಾದ ವಿಧೇಯತೆಯನ್ನು ಅಂದರೆ, ಇನ್ನೊಬ್ಬರ ಮೇಲಿನ ಪ್ರೀತಿಯ ವಿಧೇಯತೆಯನ್ನು — ಕಲಿತರು ಎಂದು ಒತ್ತಿ ಹೇಳುತ್ತಾರೆ ಆ ಇನ್ನೊಬ್ಬನು ಶತ್ರುವಿನಂತೆ ಕಾಣುವಾಗಲೂ ಸಹ.

ವ್ಯಾಟಿಕನ್ ವರದಿ

ಪವಿತ್ರ ಶುಕ್ರವಾರದ ಮಧ್ಯಾಹ್ನ, ಜಗದ್ಗುರು XIVನೇ ಲಿಯೋರವರು ಸಂತ ಪೀಟರ್ ಬಾಸಿಲಿಕಾದಲ್ಲಿ ಯೇಸು ಕ್ರಿಸ್ತನ ಪಾಡು ಮತ್ತು ಮರಣದ ಪವಿತ್ರ ಪೂಜೆಯನ್ನು ನೆರವೇರಿಸಿದರು. ಈ ದಿನವೇ ವರ್ಷದ ಏಕೈಕ ದಿನವಾಗಿದ್ದು, ಪವಿತ್ರ ಬಲಿ ಪೂಜೆ ಆಚರಿಸಲಾಗುವುದಿಲ್ಲ. ಈ ದಿನದ ಗಂಭೀರ ವಿಧಿಯಲ್ಲಿ ಮೂರು ಮುಖ್ಯ ಭಾಗಗಳಿವೆ: ದೇವರ ವಾಕ್ಯದ ಪೂಜೆ (ಸಂತ ಯೋಹಾನನ ಪ್ರಕಾರ ಪಾಡುಗಳ ವಾಚನದೊಂದಿಗೆ), ಶಿಲುಬೆಯ ಆರಾಧನೆ, ಮತ್ತು ಪವಿತ್ರ ಸಮಾಗಮ ಸ್ವೀಕಾರ.

ಜಗದ್ಗುರು ಗೃಹದ ಪ್ರಚಾರಕರಾದ ವಂ.ಸ್ವಾಮಿ ರೊಬೆರ್ಟೊ ಪಾಸೋಲಿನಿ ತಮ್ಮ ಪ್ರಭೋಧನೆಯಲ್ಲಿ, ಯೇಸುವಿನ ಶಿಲುಬೆ ಪಾಡುಗಳನ್ನು ಒಂದು ಏಕಾಂಗ ಘಟನೆಯಾಗಿ ನೋಡದೆ, ಅದು ಒಂದು ಜೀವನಯಾತ್ರೆಯ ಶಿಖರವಾಗಿದೆ ಎಂದು ವಿವರಿಸಿದರು. ಯೇಸು ತನ್ನ ಜೀವನವಿಡೀ ತಂದೆಯ ಇಚ್ಛೆಯನ್ನು ಆಲಿಸಿ, ಅದನ್ನು ಸ್ವೀಕರಿಸುತ್ತಾ, ಪರಮ ಪ್ರೀತಿಯತ್ತ ತನ್ನನ್ನು ಮುನ್ನಡೆಸಿಕೊಳ್ಳಲು ಅವಕಾಶ ನೀಡಿದನು ಎಂದು ಅವರು ಹೇಳಿದರು.

ಪವಿತ್ರ ವಾರದ ವೇಳೆ ನಾವು ಕೇಳಿದ “ಪ್ರಭುವಿನ ಸೇವಕನ ಹಾಡುಗಳು” (ಪ್ರವಾದಿ ಯೆಶಾಯನ ಬರಹಗಳು) ಕುರಿತು ಅವರು ನೆನಪಿಸಿದರು. ಈ ಹಾಡುಗಳಲ್ಲಿ ದೇವರು ಕಳುಹಿಸಿದ ಸೇವಕನು ಅಂಧರ ಕಣ್ಣು ತೆರೆಸುವವನು, ಬಂಧಿತರನ್ನು ಬಿಡುಗಡೆ ಮಾಡುವವನು ಆಗಿದ್ದರೂ, ಹಿಂಸೆಯಿಲ್ಲದೆ, ಮೃದುಸ್ವಭಾವದಿಂದ ತನ್ನ ಕಾರ್ಯವನ್ನು ನೆರವೇರಿಸುತ್ತಾನೆ. ಆದರೆ ಈ ದಾರಿ ಸುಲಭವಲ್ಲ ಕೆಲವೊಮ್ಮೆ ಮಾಡಿದ ಪ್ರಯತ್ನಗಳು ಫಲ ನೀಡುವುದಿಲ್ಲವೆಂದು ಭಾಸವಾಗುತ್ತದೆ.

ಆದರೂ, ಸೇವಕನು ವಿರೋಧ, ಕೋಪ ಮತ್ತು ಹಿಂಸೆ ಎದುರಾದರೂ ದೇವರು ಸೂಚಿಸಿದ ದಾರಿಯನ್ನು ಬಿಡುವುದಿಲ್ಲ. ಕೊನೆಗೆ ಅವನ ಮೇಲೆ ಬೀಳುವ ಹಿಂಸೆ ಅವನ ರೂಪವನ್ನೇ ಬದಲಾಯಿಸುವಷ್ಟು ಭೀಕರವಾಗುತ್ತದೆ. ಆದಾಗ್ಯೂ, ಅವನು ಕೆಟ್ಟದಕ್ಕೆ ಕೆಟ್ಟದನ್ನು ಪ್ರತಿಯಾಗಿ ಕೊಡುವುದನ್ನು ತ್ಯಜಿಸುತ್ತಾನೆ. ಇದೇ ಯೇಸು ತನ್ನ ಜೀವನದಲ್ಲಿ ಸಂಪೂರ್ಣವಾಗಿ ಜೀವಿಸಿದ ಸತ್ಯ ಎಂದು ಪ್ರಚಾರಕರು ಒತ್ತಿ ಹೇಳಿದರು.

ಯೇಸು ತನ್ನ ಶಿಲುಬೆಯನ್ನು ರಕ್ಷಣೆಯ ಮಾರ್ಗವಾಗಿ ಪರಿವರ್ತಿಸಿದನು. ಇಂದಿನ ಜಗತ್ತಿನಲ್ಲಿ ಕೆಟ್ಟದಕ್ಕೆ ಎರಡು ಪ್ರತಿಕ್ರಿಯೆಗಳಷ್ಟೇ ಕಾಣುತ್ತವೆ ಅದಕ್ಕೆ ಶರಣಾಗುವುದು ಅಥವಾ ಅದಕ್ಕೆ ಪ್ರತಿಯಾಗಿ ಕೆಟ್ಟದನ್ನೇ ಮಾಡುವುದು. ಆದರೆ ಯೇಸು ಈ ಸರಪಳಿಯನ್ನು ಮುರಿದು, ಶತ್ರುವಿನಂತೆ ಕಾಣುವವರಿಗೂ ಪ್ರೀತಿಸುವ ಕಠಿಣ ವಿಧೇಯತೆಯನ್ನು ತೋರಿಸಿದನು. ಈ ಮೂಲಕ ಶಿಲುಬೆಯ ಮಾರ್ಗವು ನಿಜವಾದ ಪ್ರೀತಿಯ ಮಾರ್ಗವಾಗುತ್ತದೆ.

ಇಂದಿನ ಜಗತ್ತು ಹಿಂಸೆ, ಅನ್ಯಾಯ ಮತ್ತು ವಿಭಜನೆಗಳಿಂದ ಕಂಗೆಟ್ಟಿದೆ. ಆದರೂ, ಮೌನವಾಗಿ ದೇವರ ಧ್ವನಿಯನ್ನು ಆಲಿಸಿ, ತಮ್ಮ ಜೀವನವನ್ನು ಇತರರ ಸೇವೆಗೆ ಅರ್ಪಿಸುವ ಸಾಮಾನ್ಯ ಜನರ ಮೂಲಕವೇ ಜಗತ್ತು ಉಳಿಯುತ್ತಿದೆ. ಅವರು ಪ್ರತಿದಿನ ತಮ್ಮ ಜೀವನವನ್ನು ಪ್ರೀತಿಯ ಮಾರ್ಗದಲ್ಲಿ ಸಾಗಿಸುತ್ತಾರೆ.

ಕೊನೆಯಲ್ಲಿ, ನಾವು ಕೂಡ ಕೆಟ್ಟದಕ್ಕೆ ಪ್ರತಿಯಾಗಿ ಕೆಟ್ಟದನ್ನು ಮಾಡದೆ, ಸಂಕಷ್ಟಗಳಲ್ಲಿ ಧೈರ್ಯದಿಂದ ನಿಲ್ಲುವ ಮೂಲಕ ದೇವರ ಸಾಧನಗಳಾಗಬೇಕು ಎಂದು ಅವರು ಕರೆ ನೀಡಿದರು. ಶಿಲುಬೆ ನಮಗೆ ಭಯದ ಚಿಹ್ನೆಯಲ್ಲ, ಆದರೆ ಪರಮ ಪ್ರೀತಿಯ ಸಂಕೇತ. ನಮ್ಮ ನಂಬಿಕೆಯಲ್ಲಿ ದೃಢವಾಗಿದ್ದರೆ, ನಮ್ಮ ಜೀವನವೇ ಸಂತೋಷ ಮತ್ತು ದುಃಖದ ಹಾಡುಗಳ ಮೂಲಕ ದೇವರ ಮಹಾ ಪ್ರೀತಿಯನ್ನು ವ್ಯಕ್ತಪಡಿಸುವ ಸಾಧನವಾಗುತ್ತದೆ.

03 ಏಪ್ರಿಲ್ 2026, 20:09