ಹುಡುಕಿ

ಈಸ್ಟರ್ ಭಾನುವಾರದಂದು ಸಂತ ಪೇತ್ರರ ಚೌಕದಲ್ಲಿ ಜಗದ್ಗುರು XIVನೇ ಲಿಯೋರವರು ಈಸ್ಟರ್ ಭಾನುವಾರದಂದು ಸಂತ ಪೇತ್ರರ ಚೌಕದಲ್ಲಿ ಜಗದ್ಗುರು XIVನೇ ಲಿಯೋರವರು  (ANSA)

ಜಗದ್ಗುರು ಲಿಯೋರವರ ಶಾಂತಿಯ ಕೋರಿಕೆಗಳಲ್ಲಿ ಪಾಸ್ಖ ಹಬ್ಬದ “ಅಹಿಂಸಾತ್ಮಕ ಶಕ್ತಿ”

ಪವಿತ್ರ ವಾರ ಮತ್ತು ಪಾಸ್ಖ ಅವಧಿಯಲ್ಲೆಲ್ಲಾ, ಜಗದ್ಗುರು XIVನೇ ಲಿಯೋರವರು ಶಾಂತಿಗಾಗಿ ಅನೇಕ ಮನವಿಗಳನ್ನು ಮಾಡಿದರು. ನಿರ್ಲಕ್ಷ್ಯದಿಂದ ಮಣಿಯದೇ, ಯುದ್ಧವನ್ನು ತಿರಸ್ಕರಿಸುವ ದೇವರಲ್ಲಿ ದೃಢವಾಗಿ ನಂಬಿಕೆ ಇಡಬೇಕೆಂದು ಅವರು ಜಗತ್ತಿಗೆ ಹೃದಯಸ್ಪರ್ಶಿ ವಿನಂತಿಯನ್ನು ಸಲ್ಲಿಸಿದರು.

ವ್ಯಾಟಿಕನ್ ವರದಿ

ಜಗತ್ತಿನ ಅನೇಕ ದೇಶಗಳಲ್ಲಿ ಹಿಂಸಾಚಾರ ಮತ್ತು ಯುದ್ಧಗಳು ವ್ಯಾಪಕವಾಗುತ್ತಿರುವಾಗ, ಪ್ರತಿದಿನವೂ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಸಾವಿನ ಸಂಖ್ಯೆಯನ್ನು ಸುದ್ದಿಗಳು ವರದಿ ಮಾಡುತ್ತಿರುವ ಸಂದರ್ಭದಲ್ಲಿ, ಪವಿತ್ರ ವಾರ ಮತ್ತು ಪಾಸ್ಖ 3ದಿನದ ಆಚರಣೆಗಳ ಅವಧಿಯಲ್ಲಿ ಜಗದ್ಗುರು XIVನೇ ಲಿಯೋರವರ ನಿರಂತರ ಶಾಂತಿಯ ಮನವಿಗಳು ಪ್ರತಿಧ್ವನಿಸಿದವು. ಅವರು ಕ್ರಿಸ್ತನ ಪುನರುತ್ಥಾನ ಮತ್ತು ಮರಣದ ಮೇಲೆ ಜಯವನ್ನು ವಿಶೇಷವಾಗಿ ಒತ್ತಿಹೇಳಿದರು.

ಗರಿಗಳ ಭಾನುವಾರದ ದಿನದ ಪ್ರಭೋಧನೆಯಲ್ಲಿ ಅವರು, “ಸಹೋದರರೇ ಮತ್ತು ಸಹೋದರಿಯರೇ, ಇದೇ ನಮ್ಮ ದೇವರು ಶಾಂತಿಯ ಅರಸನಾದ ಯೇಸು. ಯುದ್ಧವನ್ನು ತಿರಸ್ಕರಿಸುವ ದೇವರು, ಯಾರೂ ಯುದ್ಧವನ್ನು ನ್ಯಾಯೀಕರಿಸಲು ಬಳಸಲಾಗದ ದೇವರು, ಎಂದು ಹೇಳಿದರು. ಇದು ಕಥೋಲಿಕರ ಅತ್ಯಂತ ಮಹತ್ವದ ವಾರದ ಆರಂಭವಾಗಿತ್ತು.

ಜಗದ್ಗುರು ಲಿಯೋರವರು ಗರಿಗಳ ಭಾನುವಾರದ ದಿನ “ರಕ್ತದಿಂದ ತುಂಬಿದ ಕೈಗಳನ್ನು ಹೊಂದಿರುವ” ಯುದ್ಧಮಾಡುವವರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ ಎಂದು ಎಚ್ಚರಿಸಿದರು. ಪವಿತ್ರ ಶುಕ್ರವಾರದ ದಿನ ಕೊಲೊಸ್ಸಿಯಂನಲ್ಲಿ ಶಿಲುಬೆಯ ಹಾದಿ ವೇಳೆ ಶಿಲುಬೆಯನ್ನು ಹೊತ್ತು ಜನರ ನೋವನ್ನು ಹಂಚಿಕೊಂಡರು. ಉರ್ಬಿ ಎಟ್ ಓರ್ಬಿ ಸಂದೇಶದಲ್ಲಿ ಶಸ್ತ್ರಗಳನ್ನು ಇಳಿಸಿಬಿಡಲು ಕರೆ ನೀಡಿದರು. ಅವರ ಮಾತುಗಳು ಸದಾ ಸಂಘರ್ಷಗಳನ್ನು ನಿಲ್ಲಿಸುವ ಶಕ್ತಿ ಹೊಂದಿರುವವರತ್ತ ಮುಖಮಾಡಿದ್ದವು ಮತ್ತು ಹಿಂಸಾಚಾರದಿಂದ ಬಳಲುತ್ತಿರುವವರಿಗಾಗಿ ಕಳಕಳಿಯಿಂದ ತುಂಬಿದ್ದವು.

ಪವಿತ್ರ ವಾರ ಮಾರ್ಚ್ 29ರಂದು ಸಂತ ಪೇತ್ರರ ಚೌಕದಲ್ಲಿ ನಡೆದ ಗರಿಗಳ ಭಾನುವಾರದ ಬಲಿ ಪೂಜೆಯಿಂದ ಆರಂಭವಾಯಿತು. ಸುಮಾರು 40,000 ಭಕ್ತರು ಮತ್ತು ಸಾವಿರಾರು ಆಲಿವ್ ಕೊಂಬೆಗಳು ಶಾಂತಿಯ ಸಂಕೇತವಾಗಿ ಎತ್ತಲ್ಪಟ್ಟಿದ್ದವು. ಯೇಸು “ಕತ್ತಿ ಹಿಡಿದವರ ನಡುವೆ ಕೂಡ ಮಾನವಕುಲವನ್ನು ಅಪ್ಪಿಕೊಳ್ಳಲು ತನ್ನನ್ನೇ ಅರ್ಪಿಸಿದನು” ಎಂದು ಜಗದ್ಗುರುಗಳು ನೆನಪಿಸಿದರು. “ಕತ್ತಿ ಹಿಡಿಯುವವರೆಲ್ಲರೂ ಕತ್ತಿಯಿಂದಲೇ ನಾಶವಾಗುವರು” ಎಂಬ ಕ್ರಿಸ್ತನ ಮಾತನ್ನೂ ಅವರು ಪುನರುಚ್ಚರಿಸಿದರು.

ಪವಿತ್ರ ಗುರುವಾರ ನಡೆದ ತೈಲಗಳ ಪವಿತ್ರೀಕರಣದ ಬಲಿಪೂಜೆಯ ವೇಳೆ, “ಅಧಿಕಾರದ ದುರುಪಯೋಗದಿಂದ ಒಳ್ಳೆಯದು ಬಾರದು” ಎಂದು ಜಗದ್ಗುರುಗಳು ಹೇಳಿದರು. ಹಿಂಸಾಚಾರ ಮತ್ತು ಸಾಮ್ರಾಜ್ಯಶಾಹಿಯು ಜಗತ್ತನ್ನು ನಾಶಪಡಿಸುತ್ತಿರುವುದನ್ನು ಅವರು ಖಂಡಿಸಿದರು. ಮರಣದ ಕತ್ತಲೆಗೆ ಇಳಿದ ಮೆಸ್ಸಿಯಾ ಹೊಸ ಜೀವನವನ್ನು ಬೆಳಕಿಗೆ ತರುತ್ತಾನೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.

ಅದೇ ದಿನ ಲ್ಯಾಟರನ್ ಬಸಿಲಿಕಾದಲ್ಲಿ ನಡೆದ ಪ್ರಭುವಿನ ಭೋಜನದ ಬಲಿ ಪೂಜೆಯಲ್ಲಿ, ಜಗದ್ಗುರುಗಳು ಯುವ ಯಾಜಕರ ಪಾದಗಳನ್ನು ತೊಳೆಯುವ ಮೂಲಕ ಸೇವೆ, ತ್ಯಾಗ ಮತ್ತು ಪ್ರೀತಿಯ ಮಾದರಿಯನ್ನು ತೋರಿಸಿದರು. “ನಾವು ಆಳುವಾಗ ಶಕ್ತಿಶಾಲಿಗಳೆಂದುಕೊಳ್ಳುತ್ತೇವೆ, ಆದರೆ ಕ್ರಿಸ್ತನು ಸೇವೆ ಮತ್ತು ಪ್ರೀತಿಯ ಮೂಲಕ ನಿಜವಾದ ಮಹತ್ವವನ್ನು ತೋರಿಸುತ್ತಾರೆ” ಎಂದು ಅವರು ಹೇಳಿದರು.

ಪವಿತ್ರ ಶುಕ್ರವಾರದ ರಾತ್ರಿ ಕೊಲೊಸ್ಸಿಯಂನಲ್ಲಿ ನಡೆದ ಶಿಲುಬೆ ಹಾದಿಯ ವೇಳೆ ಯೇಸುವಿನ ಹೆಜ್ಜೆಗುರುತುಗಳನ್ನು ಅನುಸರಿಸುವ ಮಹತ್ವವನ್ನು ಜಗದ್ಗುರುಗಳು ಒತ್ತಿಹೇಳಿದರು. ಮಾನವ ಜೀವನದಲ್ಲಿ ಕೆಡುಕು ಮತ್ತು ಪ್ರೀತಿ ನಡುವಿನ ಹೋರಾಟವನ್ನು ಅವರು ನೆನಪಿಸಿದರು. ದೇವರು “ನಮ್ಮ ಮರಣವನ್ನು ಬಯಸುವುದಿಲ್ಲ” ಎಂದು ಹೇಳಿ, ಮರಣಕ್ಕಿಂತಲೂ ಮೇಲುಗೈ ಸಾಧಿಸುವ ಶಾಶ್ವತ ಜೀವಿತದ ಭರವಸೆಯನ್ನು ನೀಡಿದರು.

ಪಾಸ್ಖ ಹಬ್ಬದ ದಿನ, “ಪ್ರಭು ಜೀವಂತನಾಗಿದ್ದಾರೆ  ಮತ್ತು ನಮ್ಮೊಂದಿಗೇ ಇದ್ದಾರೆ” ಎಂದು ಜಗದ್ಗುರುಗಳು ಘೋಷಿಸಿದರು. ಯುದ್ಧ, ಅನ್ಯಾಯ ಮತ್ತು ಹಿಂಸಾಚಾರ ನಡುವೆಯೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು. ಉರ್ಬಿ ಎಟ್ ಓರ್ಬಿ ಸಂದೇಶದಲ್ಲಿ ಅವರು ನಿರ್ಲಕ್ಷ್ಯವನ್ನು ತ್ಯಜಿಸಿ, ಸಂವಾದದ ಮೂಲಕ ಶಾಂತಿಯನ್ನು ನಿರ್ಮಿಸಲು ವಿಶ್ವ ನಾಯಕರಿಗೆ ಕರೆ ನೀಡಿದರು. “ಕ್ರಿಸ್ತನ ಪುನರುತ್ಥಾನದ ಶಕ್ತಿ ಅಹಿಂಸಾತ್ಮಕವಾಗಿದೆ ಅದೇ ಶಕ್ತಿ ನಮ್ಮ ಜಗತ್ತಿನ ಸಂಘರ್ಷಗಳನ್ನು ಜಯಿಸಬೇಕು” ಎಂದು ಅವರು ಪ್ರಭೋಧನೆ ನೀಡಿದರು.

07 ಏಪ್ರಿಲ್ 2026, 21:26