ಹುಡುಕಿ

Pope Leo XIV holds weekly general audience in St. Peter's Square at the Vatican

ಜಗದ್ಗುರುಗಳು: ಕನ್ಯಾ ಮರಿಯಮ್ಮನವರು ಧರ್ಮ ಸಭೆ ಆಗಬೇಕಾದ ಆದರ್ಶದ ಪರಿಪೂರ್ಣ ಮಾದರಿಯಾಗಿದ್ದಾರೆ.

ತಮ್ಮ ವಾರದ ಸಾಮಾನ್ಯ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಹಾಗೂ ಫಾತಿಮಾ ಮಾತೆಯ ಹಬ್ಬದ ದಿನದಂದು, ಜಗದ್ಗುರು XIVನೇ ಲಿಯೋರವರು, ಧನ್ಯ ಕನ್ಯಾ ಮರಿಯಮ್ಮನವರು ಧರ್ಮ ಸಭೆಯ ಪರಿಪೂರ್ಣ ಮಾದರಿ, ಸದಸ್ಯೆ ಮತ್ತು ತಾಯಿಯಾಗಿದ್ದಾರೆ ಎಂದು ಒತ್ತಿಹೇಳಿದರು.

ವ್ಯಾಟಿಕನ್ ವರದಿ

ಫಾತಿಮಾ ಮಾತೆಯ ಹಬ್ಬದ ದಿನವಾದ ಮೇ 13ರಂದು, ಜಗದ್ಗುರು XIVನೇ ಲಿಯೋರವರು ತಮ್ಮ ಸಾಮಾನ್ಯ ಸಾರ್ವಜನಿಕ ಸಭೆಯಲ್ಲಿನ  ಪ್ರಭೋಧನೆಯಲ್ಲಿ ಧನ್ಯ ಕನ್ಯಾ ಮರಿಯಮ್ಮನವರು ಧರ್ಮ ಸಭೆಯ ಮಾದರಿ, ಸದಸ್ಯೆ ಮತ್ತು ತಾಯಿಯಾಗಿದ್ದಾರೆ ಎಂದು ಒತ್ತಿಹೇಳಿದರು. ಲುಮೆನ್ ಜೆಂಟಿಯಮ್ ಎಂಬ ದ್ವೀತಿಯ ವ್ಯಾಟಿಕನ್ ಕೌನ್ಸಿಲ್ ನ ಧರ್ಮ ಸಭೆ ಕುರಿತ ಡೋಗ್ಮಾಟಿಕ್ ಸಂವಿಧಾನದ ಆಧಾರದ ಮೇಲೆ ಮಾತನಾಡಿದ ಜಗದ್ಗುರುಗಳು, ಮರಿಯಮ್ಮನವರಲ್ಲಿ ದೇವಜನರು ತಮ್ಮ ಮೂಲ, ಮಾದರಿ ಮತ್ತು ಅಂತಿಮ ಗುರಿಯನ್ನು ಕಂಡುಕೊಳ್ಳುತ್ತಾರೆ ಎಂದು ಹೇಳಿದರು.

ಜಗದ್ಗುರುಗಳ ಪ್ರಕಾರ, ದೇವರ ವಾಕ್ಯವನ್ನು ವಿಶ್ವಾಸದಿಂದ ಸ್ವೀಕರಿಸಿ ಯೇಸು ಕ್ರಿಸ್ತನ ತಾಯಿಯಾದ ಮರಿಯಮ್ಮನವರು, ಧರ್ಮ ಸಭೆ ಆಗಬೇಕಾದ ಆದರ್ಶದ ಪರಿಪೂರ್ಣ ರೂಪವಾಗಿದೆ. ಅವರು ಕನ್ಯಾವಿಶ್ವಾಸ, ತಾಯಿಯ ಪ್ರೀತಿ ಮತ್ತು ದೇವರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಮಾದರಿಯಾಗಿದ್ದಾರೆ. ಧರ್ಮ ಸಭೆ ಕೂಡ ದೇವರ ವಾಕ್ಯಕ್ಕೆ ವಿಧೇಯತೆಯಿಂದ ಪ್ರತಿಕ್ರಿಯಿಸಿ, ಪವಿತ್ರಾತ್ಮನ ಕಾರ್ಯದ ಮೂಲಕ ದೇವರ ಮಕ್ಕಳನ್ನು ಬೆಳೆಸುವ ಕರೆಯನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಮರಿಯಮ್ಮನವರು ಧರ್ಮ ಸಭೆಯ ಅತ್ಯುತ್ತಮ ಸದಸ್ಯೆಯೂ ಆಗಿದ್ದಾರೆ ಎಂದು ಜಗದ್ಗುರುಗಳು ಹೇಳಿದರು. ಅವರು “ವಿಶ್ವಾಸಿಗಳಲ್ಲಿ ಶ್ರೇಷ್ಠ ವಿಶ್ವಾಸಿ” ಯಾಗಿದ್ದು, ದೇವರ ರಹಸ್ಯಕ್ಕೆ ಸಂಪೂರ್ಣವಾಗಿ ತೆರೆದ ಮನಸ್ಸಿನಿಂದ ಪ್ರತಿಕ್ರಿಯಿಸಿದರು. ಅದೇ ಸಮಯದಲ್ಲಿ ಅವರು ಸಂಪೂರ್ಣ ಧರ್ಮ ಸಭೆಯ ತಾಯಿಯಾಗಿದ್ದು, ಎಲ್ಲಾ ವಿಶ್ವಾಸಿಗಳು ಪುತ್ರಭಾವದ ವಿಶ್ವಾಸದಿಂದ ಅವರ ಬಳಿಗೆ ಹೋಗಬಹುದು, ಏಕೆಂದರೆ ಅವರು ತಮ್ಮ ಮಕ್ಕಳನ್ನು ಆಲಿಸುತ್ತಾರೆ, ಕಾಪಾಡುತ್ತಾರೆ ಮತ್ತು ಪ್ರೀತಿಸುತ್ತಾರೆ ಎಂದು ಜಗದ್ಗುರುಗಳು ತಿಳಿಸಿದರು.

ಜಗದ್ಗುರು XIVನೇ ಲಿಯೋರವರು ಮರಿಯಮ್ಮನವರನ್ನು “ರಹಸ್ಯದ ಪ್ರತಿಮೆಯಾದ ಮಹಿಳೆ” ಎಂದು ವರ್ಣಿಸಿದರು. “ಮಹಿಳೆ” ಎಂಬ ಪದವು ಇಸ್ರೇಲ್‌ನ ಯುವತಿಯೊಬ್ಬಳ ನೈಜ ಇತಿಹಾಸವನ್ನು ಸೂಚಿಸುತ್ತದೆ,ದೇವರ ಕೃಪೆಯಿಂದ ಯೇಸುವಿನ ತಾಯಿಯಾಗುವ ಮಹತ್ತರ ಕರೆಯನ್ನು ಅವರು ಸ್ವೀಕರಿಸಿದರು. “ಪ್ರತಿಮೆ” ಎಂಬ ಪದವು ದೇವರ ಉಚಿತ ಆಯ್ಕೆ ಮತ್ತು ಮರಿಯಮ್ಮನವರ ಸ್ವತಂತ್ರ ವಿಶ್ವಾಸದ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಪ್ರಭೋಧನೆಯ ವೇಳೆ ಜಗದ್ಗುರುಗಳು ವಿಶ್ವಾಸಿಗಳಿಗೆ ಆತ್ಮಪರಿಶೀಲನೆಗೆ ಆಹ್ವಾನ ನೀಡಿದರು.“ನಾನು ಧರ್ಮ ಸಭೆಯ ಜೀವನದಲ್ಲಿ ವಿನಯಪೂರ್ವಕ ಮತ್ತು ಕ್ರಿಯಾಶೀಲ ವಿಶ್ವಾಸದಿಂದ ಭಾಗವಹಿಸುತ್ತೇನೆಯೇ? ದೇವರು ನೀಡಿದ ಈ ಒಡಂಬಡಿಕೆಯ ಸಮುದಾಯವನ್ನು ನಾನು ಗುರುತಿಸುತ್ತೇನೆಯೇ? ಮರಿಯಮ್ಮನವರನ್ನು ಧರ್ಮ ಸಭೆಯ ತಾಯಿ ಮತ್ತು ಮಾದರಿಯಾಗಿ ನೋಡಿ, ಕ್ರಿಸ್ತನ ನಿಷ್ಠಾವಂತ ಶಿಷ್ಯನಾಗಲು ಅವರ ಸಹಾಯವನ್ನು ಬೇಡುತ್ತೇನೆಯೇ?” ಎಂದು ಪ್ರಶ್ನಿಸಿದರು.

ಕೊನೆಯಲ್ಲಿ, ಧರ್ಮ ಸಭೆಯಲ್ಲಿನ ಮರಿಯಮ್ಮನವರ ವಿಶಿಷ್ಟ ಸ್ಥಾನವನ್ನು ಲುಮೆನ್ ಜೆಂಟಿಯಮ್  ಸ್ಪಷ್ಟವಾಗಿ ಬೋಧಿಸುತ್ತದೆ ಎಂದು ಜಗದ್ಗುರುಗಳು ನೆನಪಿಸಿದರು. ರಕ್ಷಣೆಯ ಏಕೈಕ ಮಧ್ಯಸ್ಥ ಯೇಸು ಕ್ರಿಸ್ತನೇ ಆಗಿದ್ದರೂ, ಅವರ ತಾಯಿ ವಿಶ್ವಾಸಿಗಳನ್ನು ಕ್ರಿಸ್ತನೊಂದಿಗೆ ಇನ್ನಷ್ಟು ಆಳವಾಗಿ ಒಂದಾಗಲು ನೆರವಾಗುತ್ತಾರೆ ಎಂದು ಹೇಳಿದರು. ಪವಿತ್ರಾತ್ಮನು ಎಲ್ಲರಲ್ಲೂ ಪವಿತ್ರ ತಾಯಿ ಧರ್ಮ ಸಭೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಲಿ ಎಂದು ಪ್ರಾರ್ಥಿಸಿ ಅವರು ತಮ್ಮ ಪ್ರಭೋಧನೆಯನ್ನು ಮುಕ್ತಾಯಗೊಳಿಸಿದರು.

13 ಮೇ 2026, 18:24