ಅನ್ನಾ ರೋಲ್ಯಾಂಡ್ಸ್: ಜಗದ್ಗುರು XIVನೇ ಲಿಯೋರವರ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ದೀರ್ಘಕಾಲಿಕ ಪರಿಣಾಮವನ್ನು ಉಂಟುಮಾಡಲಿದೆ.
ವ್ಯಾಟಿಕನ್ ವರದಿ
ಅನ್ನಾ ರೋಲ್ಯಾಂಡ್ಸ್ ರವರು ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸೈಕ್ಲಿಕಲ್ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್' ಕುರಿತು ಮಾತನಾಡುತ್ತಾ, “ಈ ವಿಷಯಗಳ ಬಗ್ಗೆ ಚಿಂತನೆ ಪ್ರಾರಂಭಿಸಲು ನಾಳೆ ಎಂಬುದೇ ಇಲ್ಲ” ಎಂದು ಎಚ್ಚರಿಸಿದರು. ಕೃತಕ ಬುದ್ಧಿಮತ್ತೆಯ ಪರಿಣಾಮಗಳು ಈಗಾಗಲೇ ಉದ್ಯೋಗ, ಕಾರ್ಮಿಕರ ಬದುಕು, ವಲಸಿಗರು, ಕುಟುಂಬಗಳು, ರಾಜಕೀಯ ಮತ್ತು ಜಾಗತಿಕ ಸಂಘರ್ಷಗಳ ಮೇಲೆ ಪ್ರಭಾವ ಬೀರುತ್ತಿವೆ ಎಂದು ಅವರು ಹೇಳಿದರು. ಆದ್ದರಿಂದ ಎಐ ಬಗ್ಗೆ ಚರ್ಚೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಡರ್ಹಾಮ್ ವಿಶ್ವವಿದ್ಯಾಲಯ ಧರ್ಮಶಾಸ್ತ್ರ ಪ್ರಾಧ್ಯಾಪಕಿಯಾದ ಅವರು, ವ್ಯಾಟಿಕನ್‌ನಲ್ಲಿ ನಡೆದ ಎನ್ಸೈಕ್ಲಿಕಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದಸ್ತಾವೇಜು ಮಾನವ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಅತ್ಯಂತ ಮಹತ್ವದ ಕೊಡುಗೆ ಎಂದು ಅವರು ವಿವರಿಸಿದರು. ಅನೇಕ ಜನರು ಎಐ ಕುರಿತು ತಾವು ಮಾತನಾಡಲು ಅರ್ಹರಲ್ಲ ಎಂದು ಭಾವಿಸುತ್ತಾರೆ; “ಯಾರಾದರೂ ಇದನ್ನು ನೋಡಿಕೊಳ್ಳುತ್ತಾರೆ” ಎಂಬ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ, “ನಾವು ಎಲ್ಲರೂ ಸೇರಿ ಈ ವಿಷಯಗಳ ಬಗ್ಗೆ ಯೋಚಿಸಬೇಕು” ಎಂದು ಅವರು ಹೇಳಿದರು.
ಪ್ರೊಫೆಸರ್ ರೋಲಂಡ್ಸ್ ಅವರ ಪ್ರಕಾರ, ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ನ ಮುಖ್ಯ ಸಂದೇಶವೆಂದರೆ ಎಐ ಕುರಿತ ನಿರ್ಧಾರಗಳನ್ನು ಕೇವಲ ಲಾಭದ ಆಧಾರದ ಮೇಲೆ ನಡೆಯುವ ಖಾಸಗಿ ವಲಯಗಳಿಗೆ ಬಿಟ್ಟುಕೊಡಬಾರದು. ಬದಲಾಗಿ, ವಿಶೇಷವಾಗಿ ಅಲ್ಗೋರಿದಮ್ ಮತ್ತು ಡಿಜಿಟಲ್ ವ್ಯವಸ್ಥೆಗಳ ಪರಿಣಾಮದಿಂದ ಹೆಚ್ಚು ನೋವು ಅನುಭವಿಸುವ ಬಡವರು ಮತ್ತು ಅಂಚಿನ ಸಮುದಾಯಗಳ ಧ್ವನಿಗಳು ಮೊದಲಿಗೆ ಕೇಳಿಸಬೇಕೆಂದು ಅವರು ಹೇಳಿದರು. ಸಾಮೂಹಿಕ ಹಿತಕ್ಕಾಗಿ ನಡೆಯುವ ಯಾವುದೇ ಚರ್ಚೆಯ ಕೇಂದ್ರದಲ್ಲೇ ಈ ಜನರ ಅನುಭವಗಳು ಇರಬೇಕು ಎಂದು ಎನ್ಸೈಕ್ಲಿಕಲ್ ಒತ್ತಿಹೇಳುತ್ತದೆ.
ಜಗದ್ಗುರು XIVನೇ ಲಿಯೋರವರು ಜಗತ್ತಿನ ಮುಂದೆ ಮಹತ್ವದ ನೈತಿಕ ಮತ್ತು ಆತ್ಮೀಯ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಅವರು ಹೇಳಿದರು. “ಮಾನವ ಜೀವನವೆಂದರೆ ಏನು? ನಾವು ಯಾರು? ಮಾನವೀಯತೆಯ ಗುರಿ ಏನು?” ಎಂಬ ಪ್ರಶ್ನೆಗಳನ್ನು ಜಗದ್ಗುರುಗಳು ಸಮಾಜದ ಮುಂದೆ ಇಡುತ್ತಾರೆ. ಶಕ್ತಿ, ಪ್ರಭುತ್ವ ಮತ್ತು ಯುದ್ಧವನ್ನು ಮಹತ್ವಪಡಿಸುವ ತಪ್ಪು ಮನೋಭಾವಗಳನ್ನು ಅವರು ತೀವ್ರವಾಗಿ ಟೀಕಿಸುತ್ತಾರೆ. ಅದರ ಬದಲಾಗಿ, “ಪ್ರೀತಿಯ ನಾಗರಿಕತೆ” ಎಂಬ ಸುಂದರ ದೃಷ್ಟಿಕೋನವನ್ನು ಅವರು ಪ್ರಸ್ತಾಪಿಸುತ್ತಾರೆ ಎಂದು ರೋಲಂಡ್ಸ್ ಹೇಳಿದರು.
ಈ ಎನ್ಸೈಕ್ಲಿಕಲ್ ಮಾನವ ವ್ಯಕ್ತಿಯ ಅಂತರಂಗ ಮೌಲ್ಯವನ್ನು ಮರುಪಡೆಯಲು ಮಾನವಕುಲವನ್ನು ಆಹ್ವಾನಿಸುತ್ತದೆ ಎಂದು ಅವರು ವಿವರಿಸಿದರು. ಎಐ ಯನ್ನು “ಮಾನವನಿಗಿಂತ ಹೆಚ್ಚು ಮಾನವೀಯ” ಎಂದು ಭಾವಿಸುವ ಅಪಾಯದ ವಿರುದ್ಧ ಇದು ಎಚ್ಚರಿಸುತ್ತದೆ. ತಂತ್ರಜ್ಞಾನಕ್ಕೆ ಮಾನವ ಗೌರವವನ್ನು ವರ್ಗಾಯಿಸುವ ಬದಲು, ಪ್ರೀತಿ, ನ್ಯಾಯ ಮತ್ತು ಪರಸ್ಪರ ಪಾಲ್ಗೊಳ್ಳುವಿಕೆಯಿಂದ ಕೂಡಿದ ಸಮಾಜವನ್ನು ನಿರ್ಮಿಸಬೇಕೆಂದು ಇದು ಕರೆ ನೀಡುತ್ತದೆ.
ಕೊನೆಯಲ್ಲಿ, ಪ್ರೊಫೆಸರ್ ರೋಲಂಡ್ಸ್ ರವರು ಮ್ಯಾಗ್ನಿಫಿಕಾ ಹ್ಯುಮಾನಿಟಾಸ್ ಧರ್ಮ ಸಭೆಯ ದೀರ್ಘ ಸಾಮಾಜಿಕ ಬೋಧನಾ ಪರಂಪರೆಯ ಭಾಗವಾಗಿದೆ ಎಂದು ಹೇಳಿದರು. ಕೈಗಾರಿಕೀಕರಣ, ಬಂಡವಾಳಶಾಹಿ ಕೆಲಸದ ಪರಿಸ್ಥಿತಿ ಮತ್ತು ತಂತ್ರಜ್ಞಾನದ ಅರ್ಥ ಕುರಿತು ಹಿಂದಿನ ಎನ್ಸೈಕ್ಲಿಕಲ್‌ಗಳು ಮಾತನಾಡಿದಂತೆ, ಈ ಹೊಸ ದಸ್ತಾವೇಜು ಎಐ ಯುಗದ ಸವಾಲುಗಳನ್ನು ಎದುರಿಸುತ್ತದೆ. ಆದರೆ ಇದರ ಸಂದೇಶ ಇಂದಿನ ಕಾಲಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ಅನೇಕ ತಲೆಮಾರುಗಳ ಮೇಲೂ ಇದು ಆಳವಾದ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
