ನೇಪಲ್ಸ್‌ನಲ್ಲಿ ಜಗದ್ಗುರುಗಳು: ಅಸಮಾನತೆಗಳು ಮತ್ತು ಸಂಕಷ್ಟಗಳ ನಡುವೆ ಸಭೆಯು ಸಾನ್ನಿಧ್ಯವನ್ನು ನೀಡಬೇಕು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ನೇಪಲ್ಸ್ ನಗರದಲ್ಲಿನ ಧರ್ಮಗುರುಗಳು, ಧಾರ್ಮಿಕರು ಮತ್ತು ವಿಶ್ವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಅಸಮಾನತೆ, ಬಡತನ, ನಿರುದ್ಯೋಗ, ಕುಟುಂಬಗಳ ಅಸ್ಥಿರತೆ ಮತ್ತು ಹಿಂಸಾಚಾರದಿಂದ ಬಳಲುತ್ತಿರುವ ಸಮಾಜದಲ್ಲಿ ಕ್ರಿಸ್ತನ ಪ್ರೀತಿಗೆ ಸಾಕ್ಷಿಯಾಗುವಂತೆ ಕರೆ ನೀಡಿದರು. ಸುವಾರ್ತೆಯ ಸಾರವನ್ನು ಕೇವಲ ಮಾತುಗಳಲ್ಲಿ ಮಾತ್ರವಲ್ಲದೆ, ಜನರ ಜೀವನದೊಂದಿಗೆ ಹತ್ತಿರವಾಗಿ ನಿಂತು ಸೇವೆ ಮಾಡುವ ಮೂಲಕ ತೋರಿಸಬೇಕೆಂದು ಅವರು ಹೇಳಿದರು.
ನೇಪಲ್ಸ್ ನಗರದ ಸೌಂದರ್ಯ, ಸಂಸ್ಕೃತಿ, ಪರಂಪರೆ ಮತ್ತು ಭಕ್ತಿಭಾವವನ್ನು ಶ್ಲಾಘಿಸಿದ ಜಗದ್ಗುರುಗಳು, ಅದೇ ಸಮಯದಲ್ಲಿ ಅಲ್ಲಿನ ಸಾಮಾಜಿಕ ದುರ್ಬಲತೆಗಳನ್ನೂ ಉಲ್ಲೇಖಿಸಿದರು. ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಸಭೆಯು ಜನರ ನಡುವೆ ಆಶಾಭರವಸೆಯ ಬೆಳಕಾಗಿರಬೇಕು ಎಂದು ಅವರು ಒತ್ತಿಹೇಳಿದರು. “ನೀವು ದೇವರ ಪ್ರೀತಿಯ ಕಥೆಯ ಭಾಗವಾಗಿದ್ದೀರಿ,ಕತ್ತಲೆಯ ನಡುವೆಯೂ ಬೆಳಕಾಗಿರಿ” ಎಂದು ಅವರು ಪ್ರೋತ್ಸಾಹಿಸಿದರು.
ಜಗದ್ಗುರುಗಳು ಯೇಸು ಎಮ್ಮಾವಿನ ಶಿಷ್ಯರೊಂದಿಗೆ ನಡೆದ ಘಟನೆಯನ್ನು ಸ್ಮರಿಸಿ, ಜೀವನದ ಸಂಕಷ್ಟಗಳಿಂದ ನಿರಾಶರಾಗಿರುವಾಗಲೂ ಯೇಸು ಸದಾ ನಮ್ಮೊಂದಿಗೇ ನಡೆಯುತ್ತಾರೆ ಎಂದು ಹೇಳಿದರು. ಜನರ ನೋವು ಮತ್ತು ಸಮಸ್ಯೆಗಳ ನಡುವೆ ದೇವರ ಸಾನ್ನಿಧ್ಯವನ್ನು ಅನುಭವಿಸುವಂತೆ ಮಾಡುವ ಕಾರ್ಯವೇ ಸಭೆಯ ಕರ್ತವ್ಯ ಎಂದು ಅವರು ತಿಳಿಸಿದರು.
ಧರ್ಮಗುರುಗಳು ಮತ್ತು ಧಾರ್ಮಿಕರಿಗೆ ವಿಶೇಷವಾಗಿ ಸಂದೇಶ ನೀಡಿದ ಜಗದ್ಗುರುಗಳು, ಸೇವೆಯ ಹೊಣೆಗಾರಿಕೆಗಳು ಇಂದಿನ ಕಾಲದಲ್ಲಿ ಇನ್ನಷ್ಟು ಕಠಿಣವಾಗಿವೆ ಎಂದು ಹೇಳಿದರು. ಕುಟುಂಬಗಳ ಸಂಕಷ್ಟಗಳು, ದಾರಿ ತಪ್ಪಿದ ಯುವಕರು ಮತ್ತು ಬಡವರ ಸಮಸ್ಯೆಗಳ ನಡುವೆ ಸೇವೆ ಮಾಡುವಾಗ ಒಂಟಿತನ ಮತ್ತು ನಿರಾಶೆ ಎದುರಾಗಬಹುದು ಎಂದು ಅವರು ಒಪ್ಪಿಕೊಂಡರು. ಆದರೂ ದೇವರೊಂದಿಗೆ ಆಂತರಿಕ ಸಂಬಂಧವನ್ನು ಬಲಪಡಿಸಿ, ಪವಿತ್ರಾತ್ಮನ ಮಾರ್ಗದರ್ಶನದಲ್ಲಿ ಸೇವೆ ಮುಂದುವರಿಸಬೇಕೆಂದು ಹೇಳಿದರು.
“ಸೇವೆಯನ್ನು ಕೇವಲ ಕರ್ತವ್ಯವನ್ನಾಗಿ ಮಾಡಬೇಡಿ” ಎಂದು ಎಚ್ಚರಿಸಿದ ಜಗದ್ಗುರುಗಳು, ಧರ್ಮಗುರುಗಳು ಪರಸ್ಪರ ಸಹಕಾರ, ಸ್ನೇಹ ಮತ್ತು ಸಹೋದರತ್ವದಲ್ಲಿ ಬದುಕಬೇಕು ಎಂದು ತಿಳಿಸಿದರು. ವ್ಯಕ್ತಿವಾದವನ್ನು ಮೀರಿ ಒಟ್ಟಾಗಿ ನಡೆಯುವುದು ಸಭೆಯ ಶಕ್ತಿಯಾಗಿದೆ ಎಂದು ಅವರು ಹೇಳಿದರು. ಒಂಟಿತನವನ್ನು ನಿವಾರಿಸಲು ಹೊಸ ರೀತಿಯ ಸಹಜೀವನ ಮತ್ತು ಪರಸ್ಪರ ಬೆಂಬಲದ ಅಗತ್ಯವಿದೆ ಎಂದರು.
ಕೊನೆಯಲ್ಲಿ, ಸಭೆಯ ಎಲ್ಲಾ ಸದಸ್ಯರು – ಧರ್ಮಗುರುಗಳು, ಧಾರ್ಮಿಕರು, ಪ್ರಜೆಗಳು ಮತ್ತು ಧರ್ಮಾಧ್ಯಕ್ಷರು ಕಾರ್ಯಕರ್ತರು ಒಂದಾಗಿ ನಡೆಯುವ ಮೂಲಕ ಸುವಾರ್ತೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸಬೇಕು ಎಂದು ಜಗದ್ಗುರುಗಳು ಕರೆ ನೀಡಿದರು. ಜನರ ನಿಜವಾದ ಜೀವನದ ಸಮಸ್ಯೆಗಳಿಗೆ ಸ್ಪಂದಿಸುವ ಮಿಷನರಿ ಸಭೆಯಾಗಿ ಬೆಳೆಯಬೇಕೆಂದು ಅವರು ಪ್ರೇರೇಪಿಸಿದರು. “ಸಭೆಯ ಪ್ರತಿಯೊಬ್ಬರೂ ಸಕ್ರಿಯ ಪಾಲುದಾರರು, ಎಲ್ಲರೂ ಸೇರಿ ನೇಪಲ್ಸ್ ನಗರವನ್ನು ಸುವಾರ್ತೆಯ ಬೆಳಕಿನಿಂದ ನವೀಕರಿಸಬೇಕು” ಎಂದು ಅವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.
