ಅಲ್ಗೋರಿದಮ್‌ಗಳ ಯುಗದಲ್ಲಿ ಮಾನವೀಯತೆಯನ್ನು ಉಳಿಸಿಕೊಳ್ಳುವುದು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರ ಮೊದಲ ಎನ್ಸೈಕ್ಲಿಕಲ್ 'ಮ್ಯಾಗ್ನಿಫಿಕಾ ಹ್ಯುಮಾನಿಟಾಸ್'ನಲ್ಲಿ, ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಮಾನವ ಗೌರವವು ಅಪಾಯಕ್ಕೆ ಒಳಗಾಗುತ್ತಿರುವ ಬಗ್ಗೆ ಗಂಭೀರ ಎಚ್ಚರಿಕೆ ನೀಡಲಾಗಿದೆ. ನಿಯಂತ್ರಣವಿಲ್ಲದ ತಾಂತ್ರಿಕ ಶಕ್ತಿ ಮತ್ತು ಮಾನವೀಯತೆಯನ್ನು ಕಳೆಯುವ ಹೊಸ ಪ್ರವೃತ್ತಿಗಳ ನಡುವೆ, “ನಿಜವಾದ ಮಾನವರಾಗಿಯೇ ಉಳಿಯುವುದು” ನಮ್ಮ ತುರ್ತು ಕರ್ತವ್ಯ ಎಂದು ಜಗದ್ಗುರುಗಳು ಹೇಳಿದ್ದಾರೆ. ತಂತ್ರಜ್ಞಾನವು ಮುಂದುವರಿಯಬೇಕು, ಆದರೆ ಮಾನವ ಹೃದಯ ಮತ್ತು ಕರುಣೆ ಹಿಂದುಳಿಯಬಾರದು ಎಂಬುದು ಅವರ ಪ್ರಮುಖ ಸಂದೇಶವಾಗಿದೆ.
ಜಗದ್ಗುರು XIVನೇ ಲಿಯೋರವರು, ಮಾನವನ ಮಿತಿಗಳು ಮತ್ತು ದೌರ್ಬಲ್ಯಗಳನ್ನು ತಪ್ಪು ಎಂದು ಕಾಣದೆ, ಅವನ್ನು ಸ್ವೀಕರಿಸಬೇಕೆಂದು ಕರೆ ನೀಡಿದ್ದಾರೆ. ದೇವರು ಮಾನವನ ದುರ್ಬಲತೆಯನ್ನು ಸ್ವೀಕರಿಸಿ ಅದನ್ನು ರಕ್ಷಣೆಯ ಮಾರ್ಗವನ್ನಾಗಿ ಮಾಡಿದಂತೆ, ನಾವು ಸಹ ನೋವು ಅನುಭವಿಸುವವರ ದೃಷ್ಟಿಕೋನದಿಂದ ಲೋಕವನ್ನು ನೋಡಬೇಕು ಎಂದು ಅವರು ಹೇಳಿದ್ದಾರೆ. ಯಂತ್ರಗಳು ಎಷ್ಟು ಪರಿಣಾಮಕಾರಿಯಾಗಿದ್ದರೂ, ಪ್ರೀತಿ ಮತ್ತು ಸಹಾನುಭೂತಿ ಹೊಂದಿರುವ ಮಾನವ ಮುಖವೇ ಇತಿಹಾಸದ ಕೇಂದ್ರವಾಗಿದೆ ಎಂದು ಅವರು ನೆನಪಿಸುತ್ತಾರೆ.
ಈ ಎನ್ಸೈಕ್ಲಿಕಲ್ ಕೇವಲ ಕೃತಕ ಬುದ್ಧಿಮತ್ತೆಯ ತಾಂತ್ರಿಕ ವಿಶ್ಲೇಷಣೆ ಅಲ್ಲ, ಬದಲಾಗಿ ಧರ್ಮ ಸಭೆಯ ಸಾಮಾಜಿಕ ಬೋಧನೆಗಳನ್ನು ಇಂದಿನ ಡಿಜಿಟಲ್ ಯುಗಕ್ಕೆ ಅನ್ವಯಿಸುವ ಮಾರ್ಗದರ್ಶಕ ಗ್ರಂಥವಾಗಿದೆ. ಮಾರುಕಟ್ಟೆಯ ಸ್ವಾತಂತ್ರ್ಯ ಮತ್ತು ತಂತ್ರಜ್ಞಾನವೇ ಎಲ್ಲ ಸಮಸ್ಯೆಗಳ ಪರಿಹಾರ ಎಂದು ನಂಬುವ ಮನೋಭಾವವನ್ನು ಇದು ಪ್ರಶ್ನಿಸುತ್ತದೆ. ಎಐ ಅಭಿವೃದ್ಧಿ ಮಾನವಕುಲದ ಒಳ್ಳೆಯದಕ್ಕಾಗಿ ಇರಬೇಕು ಕೆಲವರ ಕೈಯಲ್ಲಿ ಶಕ್ತಿ ಮತ್ತು ಸಂಪತ್ತು ಕೇಂದ್ರೀಕೃತವಾಗುವಂತಾಗಬಾರದು ಎಂದು ಜಗದ್ಗುರುಗಳು ಎಚ್ಚರಿಸುತ್ತಾರೆ.
ಜಗದ್ಗುರುಗಳ ಪ್ರಕಾರ, ಇಂದಿನ ತಂತ್ರಜ್ಞಾನವು ಕೇವಲ ಸಾಧನವಲ್ಲ, ಅದು ಜೀವನದ ಮೌಲ್ಯಗಳನ್ನು ನಿರ್ಧರಿಸುವ ಶಕ್ತಿಯಾಗುತ್ತಿದೆ. ಡೇಟಾ, ಅಲ್ಗೋರಿದಮ್‌ಗಳು, ಡಿಜಿಟಲ್ ವೇದಿಕೆಗಳು ಮತ್ತು ಗಣನಾಶಕ್ತಿಯ ಮೇಲಿನ ನಿಯಂತ್ರಣ ಕೆಲವೇ ದೊಡ್ಡ ಕಂಪನಿಗಳ ಕೈಯಲ್ಲಿ ಕೇಂದ್ರೀಕೃತವಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇದರಿಂದ ಹೊಸ ರೀತಿಯ ಅಸಮಾನತೆ, ಅವಲಂಬನೆ ಮತ್ತು ಸ್ವಾತಂತ್ರ್ಯದ ಕಳವು ಉಂಟಾಗಬಹುದು ಎಂದು ಅವರು ಹೇಳಿದ್ದಾರೆ.
ಯುದ್ಧದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಕೂಡ ಜಗದ್ಗುರುಗಳು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಯಾವುದೇ ಅಲ್ಗೋರಿದಮ್ ಯುದ್ಧವನ್ನು ನೈತಿಕವಾಗಿ ಸರಿಯೆಂದು ತೋರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅದೇ ಸಮಯದಲ್ಲಿ, ಎಐ ಜನಾಭಿಪ್ರಾಯವನ್ನು ಪ್ರಭಾವಿಸಲು ಮತ್ತು ಸುಳ್ಳು-ಸತ್ಯವನ್ನು ಗೊಂದಲಗೊಳಿಸಲು ಬಳಸಲಾಗುತ್ತಿರುವುದರ ಬಗ್ಗೆ ಅವರು ಎಚ್ಚರಿಸಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿಯೂ ಅನಿಶ್ಚಿತತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಗಳು ಮತ್ತು ರಾಜಕೀಯ ವ್ಯವಸ್ಥೆಗಳು ಸಾಮಾನ್ಯ ಹಿತಾಸಕ್ತಿಗಾಗಿ ತಂತ್ರಜ್ಞಾನವನ್ನು ನಿಯಂತ್ರಿಸುವ ಜವಾಬ್ದಾರಿ ವಹಿಸಬೇಕು ಎಂದು ಅವರು ಒತ್ತಿಹೇಳುತ್ತಾರೆ.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ತಂತ್ರಜ್ಞಾನವನ್ನು ತಿರಸ್ಕರಿಸುವುದಿಲ್ಲ, ಅದರ ಉತ್ತಮ ಬಳಕೆಗಳನ್ನು ಅವರು ಮೆಚ್ಚುತ್ತಾರೆ. ಆದರೆ ಎಐ ಅನ್ನು ವಿನ್ಯಾಸಗೊಳಿಸುವ ವಿಧಾನದಲ್ಲೇ ಮಾನವ ಗೌರವ ಮತ್ತು ಸಾಮಾಜಿಕ ನ್ಯಾಯ ಅಡಕವಾಗಿರಬೇಕು ಎಂದು ಅವರು ಹೇಳುತ್ತಾರೆ. ತಂತ್ರಜ್ಞಾನ ಮಾನವನ ಮೇಲೆ ಆಳ್ವಿಕೆ ನಡೆಸದಂತೆ, ಅದನ್ನು ಜವಾಬ್ದಾರಿಯುತವಾಗಿ ನಿಯಂತ್ರಿಸಿ, “ಮಾನವೀಯತೆಯ ಮಹತ್ವವನ್ನು” ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಕರೆ ನೀಡಿದ್ದಾರೆ.
