ಹುಡುಕಿ

FILE PHOTO: Pope Leo XIV holds weekly general audience in St. Peter's Square at the Vatican

“ಪ್ರೇಕ್ಷಕರ ಭೇಟಿಯಲ್ಲಿ ಜಗದ್ಗುರುಗಳು: ‘ಜೀವನವನ್ನು ಕುಂಠಿತಗೊಳಿಸುವ ಪ್ರತಿಯೊಂದರ ವಿರುದ್ಧ ಧ್ವನಿ ಎತ್ತುವುದು ಧರ್ಮ ಸಭೆಯ ಧ್ಯೇಯ"

ತಮ್ಮ ಸಾಮಾನ್ಯ ಪ್ರೇಕ್ಷಕರ ಭೇಟಿಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು‘ಲುಮೆನ್ ಜೆಂಟಿಯಂ’ದಲ್ಲಿ ವಿವರಿಸಲಾದ ಧರ್ಮ ಸಭೆಯ ಅಂತಿಮಕಾಲಿಕ (ಎಸ್ಕಟಾಲಾಜಿಕಲ್) ಆಯಾಮವನ್ನು ಕುರಿತು ಚಿಂತನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಯೇಸು ಕ್ರಿಸ್ತನು ವಿಶ್ವಾಸಿಗಳನ್ನು ರಕ್ಷಣೆಯ ಕಡೆಗೆ ನಡೆಸುವ ಧ್ಯೇಯವನ್ನು ಧರ್ಮ ಸಭೆಗೆ ನೀಡಿದ್ದಾನೆ ಎಂಬುದನ್ನು ಅವರು ಮರುಉಲ್ಲೇಖಿಸಿದರು. ಅದರಂತೆ, ಜೀವನವನ್ನು ಕುಂಠಿತಗೊಳಿಸುವ ಹಾಗೂ ಅದರ ಅಭಿವೃದ್ಧಿಯನ್ನು ತಡೆಯುವ ಪ್ರತಿಯೊಂದನ್ನೂ ಸ್ಪಷ್ಟವಾಗಿ ತಿರಸ್ಕರಿಸಲು, ಮತ್ತು ಕೆಟ್ಟತನವನ್ನು ಅದರ ಎಲ್ಲಾ ರೂಪಗಳಲ್ಲಿ ಖಂಡಿಸಲು ಧರ್ಮ ಸಭೆಗೆ ಸ್ಪಷ್ಟವಾಗಿ ಮಾತನಾಡುವ ಧ್ಯೇಯವನ್ನು ನೀಡಲಾಗಿದೆ.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ತಮ್ಮ ವಾರಾಂತ್ಯದ ಸಾಮಾನ್ಯ ಪ್ರೇಕ್ಷಕರ ಭೇಟಿಯಲ್ಲಿ, ಧರ್ಮ ಸಭೆಯನ್ನು ಭೂಮಿಯ ಮೇಲಿರುವ ಯಾತ್ರಿಕ ದೇವಜನರು ಎಂದು ವಿವರಿಸಿದರು. ಅವರು ‘ಲುಮೆನ್ ಜೆಂಟಿಯಂ’ ಗ್ರಂಥದ ಆಧಾರದ ಮೇಲೆ ಧರ್ಮ ಸಭೆಯ ಅಂತಿಮ ಗುರಿಯಾದ ಸ್ವರ್ಗೀಯ ಗೃಹದ ಕಡೆಗೆ ಸಾಗುವ ಎಸ್ಕಟಾಲಾಜಿಕಲ್ ಆಯಾಮವನ್ನು ವಿವರಿಸಿದರು. ಧರ್ಮ ಸಭೆಯ ಇತಿಹಾಸದ ಘಟನಾವಳಿಗಳನ್ನು ಸುವಾರ್ತೆಯ ಬೆಳಕಿನಲ್ಲಿ ಅರ್ಥೈಸಿ, ಕೆಟ್ಟತನವನ್ನು ಖಂಡಿಸಿ, ಕ್ರಿಸ್ತನು ಎಲ್ಲಾ ಮಾನವಕುಲಕ್ಕೆ ನೀಡಲು ಬಯಸುವ ರಕ್ಷಣೆಯನ್ನು ಘೋಷಿಸುತ್ತದೆ ಎಂದು ಅವರು ಹೇಳಿದರು.

ಜಗದ್ಗುರುಗಳು, ನಾವು ಬಹುಷಃ ತಕ್ಷಣ ಕಾಣುವ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವುದರಿಂದ ಧರ್ಮ ಸಭೆಯ ಈ ಮಹತ್ವದ ಅಂತಿಮ ಗುರಿಯನ್ನು ಮರೆಯುತ್ತೇವೆ ಎಂದು ವಿಷಾದಿಸಿದರು. ದೇವರ ರಾಜ್ಯವೇ ಧರ್ಮ ಸಭೆಯ ಎಲ್ಲಾ ಕಾರ್ಯಗಳ ಉದ್ದೇಶವಾಗಿದ್ದು, ಧರ್ಮ ಸಭೆ ತನ್ನನ್ನು ತಾನೇ ಘೋಷಿಸುವುದಿಲ್ಲ ಅದರಲ್ಲಿರುವ ಎಲ್ಲವೂ ಕ್ರಿಸ್ತನಲ್ಲಿ ರಕ್ಷಣೆಯತ್ತ ತೋರಿಸಬೇಕು ಎಂದು ಅವರು ಒತ್ತಿಹೇಳಿದರು.

ಧರ್ಮ ಸಭೆಯ ಜೀವನವನ್ನು ಕುಂಠಿತಗೊಳಿಸುವ ಮತ್ತು ಅದರ ಬೆಳವಣಿಗೆಯನ್ನು ತಡೆಯುವ ಪ್ರತಿಯೊಂದರ ವಿರುದ್ಧ ಸ್ಪಷ್ಟವಾಗಿ ಮಾತನಾಡುವ ಧ್ಯೇಯವನ್ನು ಹೊಂದಿದೆ ಎಂದು ಜಗದ್ಗುರುಗಳು ಹೇಳಿದರು. ಜೊತೆಗೆ, ಬಡವರು, ಶೋಷಿತರು, ಹಿಂಸಾಚಾರ ಮತ್ತು ಯುದ್ಧದ ಬಲಿಯಾಗಿರುವವರು, ದೇಹ ಮತ್ತು ಆತ್ಮದಲ್ಲಿ ನೋವು ಅನುಭವಿಸುವವರ ಪರವಾಗಿ ನಿಲ್ಲುವುದು ಧರ್ಮ ಸಭೆಯ ಕರ್ತವ್ಯ ಎಂದು ಅವರು ವಿವರಿಸಿದರು.

ಜಗದ್ಗುರು ಲಿಯೋರವರು ಧರ್ಮ ಸಭೆ ತನ್ನದೇ ಸಂಸ್ಥೆಗಳ ಮಿತಿಗಳನ್ನು ವಿನಮ್ರವಾಗಿ ಅರಿಯಬೇಕು ಎಂದು ತಿಳಿಸಿದರು. ಯಾವುದೇ ಧರ್ಮ ಸಭೆಯ ಸಂಸ್ಥೆಯನ್ನು ಪರಿಪೂರ್ಣ ಅಥವಾ ಅಂತಿಮವೆಂದು ಪರಿಗಣಿಸಲಾಗುವುದಿಲ್ಲ ಅವು ಇತಿಹಾಸ ಮತ್ತು ಕಾಲದೊಳಗೆ ಇರುವುದರಿಂದ ನಿರಂತರ ಪರಿವರ್ತನೆ, ನವೀಕರಣ ಮತ್ತು ಸುಧಾರಣೆ ಅಗತ್ಯವಿದೆ ಎಂದು ಹೇಳಿದರು.

ಯೇಸು ಕ್ರಿಸ್ತನು ಪ್ರೀತಿ, ನ್ಯಾಯ ಮತ್ತು ಶಾಂತಿಯ ರಾಜ್ಯವನ್ನು ಘೋಷಿಸುವ ಮೂಲಕ ಧರ್ಮ ಸಭೆಗೆ ಆರಂಭ ನೀಡಿದರು ಎಂದು ಜಗದ್ಗುರುಗಳು ಹೇಳಿದರು. ಆದ್ದರಿಂದ ಕ್ರಿಸ್ತನಲ್ಲಿ ದೊರೆಯುವ ರಕ್ಷಣೆಯ ಸಮಗ್ರ ಅರ್ಥವನ್ನು ಅರಿತುಕೊಳ್ಳಲು ನಾವು ಈ ಅಂತಿಮ ಗುರಿಯತ್ತ ದೃಷ್ಟಿ ಹರಿಸಬೇಕು. ಧರ್ಮ ಸಭೆ ಸಂಸ್ಕಾರಗಳ ಮೂಲಕ, ವಿಶೇಷವಾಗಿ ಬಲಿಪೂಜೆಯಲ್ಲಿ, ಈ ವಾಗ್ದಾನವನ್ನು ಅನುಭವಿಸಿ, ಅದರ ಸಂದೇಶವನ್ನು ಜಗತ್ತಿಗೆ ಸಾರುತ್ತದೆ.

ಕೊನೆಗೆ, ಎಲ್ಲಾ ಕ್ರೈಸ್ತರು ಒಂದೇ ಧರ್ಮ ಸಭೆಯ ಭಾಗವಾಗಿದ್ದಾರೆ ಮತ್ತು ಪರಸ್ಪರ ಆತ್ಮಿಕ ಸಹಭಾಗಿತ್ವವನ್ನು ಹೊಂದಿದ್ದಾರೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಜೀವಿತರಾದವರೂ, ಸ್ವರ್ಗದಲ್ಲಿರುವವರೂ ಒಂದೇ ಸಮುದಾಯವಾಗಿದ್ದು, ಲಿಟರ್ಜಿ ಮೂಲಕ ಈ ಪವಿತ್ರರ ಸಹಭಾಗಿತ್ವ ಅನುಭವವಾಗುತ್ತದೆ. ಈ ಸತ್ಯವನ್ನು ನೆನಪಿಸಿದ ಸಭಾಪಿತೃಗಳಿಗೆ ಕೃತಜ್ಞರಾಗಿರಬೇಕು ಮತ್ತು ನಮ್ಮ ಜೀವನದಲ್ಲಿ ಅದನ್ನು ಬೆಳೆಸಬೇಕು ಎಂದು ಜಗದ್ಗುರು ಲಿಯೋರವರು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸಿದರು.

06 ಮೇ 2026, 18:33