ಹುಡುಕಿ

Pope Leo XIV visits Angola

ಜಗದ್ಗುರು ಲಿಯೋರವರ ಅಧಿಕಾರವಧಿಯ ಮೊದಲ ವರ್ಷದಲ್ಲಿ ಶಾಂತಿಗಾಗಿ 400ಕ್ಕೂ ಹೆಚ್ಚು ಮನವಿಗಳು.

ತಮ್ಮ ಅಧಿಕಾರವಧಿಯ ಮೊದಲ ವರ್ಷದಲ್ಲಿ, ಜಗದ್ಗುರು XIVನೇ ಲಿಯೋರವರು “ನಿರಾಯುಧ ಮತ್ತು ನಿರಾಯುಧಗೊಳಿಸುವ” ಸಮನ್ವಯಕ್ಕಾಗಿ ನೂರಾರು ಬಾರಿ ಮನವಿ ಮಾಡಿದ್ದು, “ಯುದ್ಧದ ಅಧಿಪತಿಗಳು” “ನಮಗಿಂತ ಮಹತ್ತರವಾದ ಒಂದು ಸಂಗೀತಧ್ವನಿಯನ್ನು” ಆಲಿಸಬೇಕು ಎಂದು ಕರೆ ನೀಡಿದ್ದಾರೆ.

ವ್ಯಾಟಿಕನ್ ವರದಿ

2025ರ ಮೇ 8ರಂದು ತಮ್ಮ ಅಧಿಕಾರವಧಿಯ ಆರಂಭದಲ್ಲಿ ಜಗದ್ಗುರು XIVನೇ ಲಿಯೋರವರು “ನಿರಾಯುಧ ಮತ್ತು ನಿರಾಯುಧಗೊಳಿಸುವ” ಎಂಬ ಪದಗಳ ಮೂಲಕ ಶಾಂತಿಯ ಕುರಿತು ತಮ್ಮ ದೃಷ್ಟಿಕೋನವನ್ನು ವಿವರಿಸಿದರು. ಅವರ ಪ್ರಕಾರ, ನಿಜವಾದ ಶಾಂತಿ ಎಂದರೆ ಕೇವಲ ಯುದ್ಧ ವಿರಾಮದಿಂದ ಉಂಟಾಗುವ ಶಸ್ತ್ರಗಳ ಮೌನವಲ್ಲ, ಅದು ಮಾನವ ಹೃದಯಗಳನ್ನು ಸ್ಪರ್ಶಿಸಿ, ಸಮನ್ವಯ ಮತ್ತು ಸೌಹಾರ್ದತೆಯನ್ನು ಹುಟ್ಟುಹಾಕುವ ದೈವಿಕ ಅನುಭವವಾಗಿದೆ. ಕ್ರಿಸ್ಮಸ್ ದಿನದ “ಉರ್ಬಿ ಎಟ್ ಓರ್ಬಿ” ಸಂದೇಶದಲ್ಲಿ ಅವರು “ಕಾಡುಹೂವಿನಂತಿರುವ ಶಾಂತಿ”ಯನ್ನು ಉಲ್ಲೇಖಿಸಿ, ಕಾಂಕ್ರೀಟ್ ಬಿರುಕುಗಳ ಮಧ್ಯೆಯೂ ಹಠಾತ್ ಅರಳುವ ಹೂವಿನಂತೆ ಶಾಂತಿ ಜಗತ್ತಿನಲ್ಲಿ ಅರಳಲಿ ಎಂದು ಪ್ರಾರ್ಥಿಸಿದರು.

ತಮ್ಮ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಜಗದ್ಗುರು XIVನೇ ಲಿಯೋರವರು “ಶಾಂತಿ” ಎಂಬ ಪದವನ್ನು 400ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿದ್ದಾರೆ. ಪತ್ರಕರ್ತರನ್ನುದ್ದೇಶಿಸಿ ಮಾತನಾಡುವಾಗ, ಯುದ್ಧಗಳ ಸತ್ಯವನ್ನು ಜಗತ್ತಿಗೆ ತಲುಪಿಸುವಲ್ಲಿ ಮತ್ತು ಸಮನ್ವಯದ ಭರವಸೆಯನ್ನು ಜೀವಂತವಾಗಿಡುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ಪ್ರೀತಿ ಮತ್ತು ಸತ್ಯದಿಂದ ಕೂಡಿದ ಸಂವಹನವು ಮಾನವರನ್ನು ವಿಭಜನೆಯ “ಬಾಬೇಲ್ ಗೋಪುರ”ದಿಂದ ಹೊರಗೆಳೆಯಬಲ್ಲದು ಎಂದು ಅವರು ಹೇಳಿದರು.

ಜಗದ್ಗುರುಗಳು ಯುದ್ಧದ ನಾಯಕರನ್ನು ತೀವ್ರವಾಗಿ ಟೀಕಿಸಿದರು. “ನಾಶಮಾಡಲು ಒಂದು ಕ್ಷಣ ಸಾಕು, ಆದರೆ ಪುನರ್‌ನಿರ್ಮಿಸಲು ಕೆಲವೊಮ್ಮೆ ಒಂದು ಜೀವನಾವಧಿಯೂ ಸಾಲದು” ಎಂದು ಎಚ್ಚರಿಸಿದರು. ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಲು ಬಳಸಬಹುದಾದ ಹಣವನ್ನು ಯುದ್ಧ ಮತ್ತು ವಿನಾಶಕ್ಕೆ ವ್ಯಯಿಸಲಾಗುತ್ತಿದೆ ಎಂಬ ವಿಷಾದವನ್ನು ವ್ಯಕ್ತಪಡಿಸಿದರು. ಯುದ್ಧಾಸ್ತ್ರ ವ್ಯಾಪಾರಿಗಳ ಕೈಗೆ ಹರಿಯುವ ಅಪಾರ ಹಣದ ಬಗ್ಗೆ ಜನರು ಈಗ ಅರಿವು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಜಗದ್ಗುರು ಲಿಯೋರವರ ಶಾಂತಿಯ ಸಂದೇಶವು ಕೇವಲ ರಾಜಕೀಯ ವಲಯಗಳಿಗೆ ಮಾತ್ರ ಸೀಮಿತವಾಗಿರದೆ, ಯುದ್ಧದಿಂದ ನೋವು ಅನುಭವಿಸುವ ಬಡವರು, ಹಸಿವಿನಿಂದ ಬಳಲುವವರು ಮತ್ತು ನಿರಾಶೆಯಲ್ಲಿ ಬದುಕುವವರತ್ತವೂ ತಲುಪಿದೆ. ಎಫ್ಎಒ ಸಂಸ್ಥೆಯಲ್ಲಿ ಮಾತನಾಡುವಾಗ, ಯುದ್ಧದ ಅತ್ಯಂತ ಭೀಕರ ಪರಿಣಾಮಗಳಲ್ಲಿ ಹಸಿವು ಕೂಡ ಒಂದು ಎಂದು ಅವರು ನೆನಪಿಸಿದರು. ಪವಿತ್ರ ವಾರದ ಸಂದರ್ಭದಲ್ಲಿ ದೇವರ ಹೆಸರಿನಲ್ಲಿ ಯುದ್ಧವನ್ನು ಯಾವತ್ತೂ ಸಮರ್ಥಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಘೋಷಿಸಿದರು.

ಅವರು ಶಾಂತಿಯನ್ನು ದೈವಿಕ ಪ್ರೀತಿಯ ಸಂಗೀತಕ್ಕೆ ಹೊಂದಿಕೊಂಡ ನೃತ್ಯದಂತೆ ವರ್ಣಿಸಿದರು. ಲೆಬನಾನ್ ಜನರಿಗೆ ಮಾತನಾಡುವಾಗ, ಶಾಂತಿ ಎಂದರೆ ನಮಗಿಂತ ಮಹತ್ತರವಾದ ದೇವರ ಪ್ರೀತಿಯ ರಾಗದಿಂದ ಮಾರ್ಗದರ್ಶನ ಪಡೆಯುವ ಒಳಗಿನ ಚಲನೆ ಎಂದು ಹೇಳಿದರು. “ನಿರಾಯುಧ ಮತ್ತು ನಿರಾಯುಧಗೊಳಿಸುವ ಶಾಂತಿ”ಯತ್ತ ಸಾಗುವುದು ಮಾನವಕುಲದ ಕರೆಯಾಗಿದೆ ಎಂದು ಅವರು ವಿಶ್ವ ಶಾಂತಿ ದಿನದ ಸಂದೇಶದಲ್ಲಿ ಒತ್ತಿಹೇಳಿದರು.

ಕೊನೆಯಲ್ಲಿ, ಜಗದ್ಗುರುಗಳು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತೀವ್ರವಾಗಿ ಖಂಡಿಸಿ, “ನಿಮ್ಮ ಕತ್ತಿಗಳನ್ನು ಕೆಳಗಿಡಿರಿ” ಎಂದು ಜಗತ್ತಿನ ಶಕ್ತಿಶಾಲಿಗಳಿಗೆ ಕರೆ ನೀಡಿದರು. ಡ್ರೋನ್‌ಗಳು ಮತ್ತು ಆಧುನಿಕ ತಂತ್ರಜ್ಞಾನಗಳು ಯುದ್ಧವನ್ನು ವಿಡಿಯೋ ಆಟದಂತಾಗಿಸಿದ್ದರೂ, ಅದರ ಪರಿಣಾಮಗಳು ಮಾನವ ದುಃಖವೇ ಎಂಬುದನ್ನು ಅವರು ನೆನಪಿಸಿದರು. ಕ್ರೀಡೆ, ಶಿಕ್ಷಣ, ಸಂಸ್ಕೃತಿ ಮತ್ತು ಅಹಿಂಸೆಯ ಮೂಲಕ ಶಾಂತಿಯನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿ, “ಕಾಂಕ್ರೀಟ್ ಮಧ್ಯೆ ಅರಳುವ ಕಾಡುಹೂವಿನಂತೆ ಶಾಂತಿ ಜಗತ್ತಿನಲ್ಲಿ ಮೂಡಿಬರಲಿ” ಎಂದು ಪ್ರಾರ್ಥಿಸಿದರು.

07 ಮೇ 2026, 18:39