ಹುಡುಕಿ

ಬುಧವಾರದ ಸಾಮಾನ್ಯ ಸಭೆಗೆ ಆಗಮಿಸುತ್ತಿರುವಾಗ ಜಗದ್ಗುರು XIVನೇ ಲಿಯೋರವರು ಅರ್ಮೇನಿಯನ್ ಕ್ಯಾಥೊಲಿಕೋಸ್ Iನೇ ಅರಾಮ್  ರವರೊಂದಿಗೆ ಹಸ್ತಲಾಘವ ಮಾಡುತ್ತಿದ್ದಾರೆ. ಬುಧವಾರದ ಸಾಮಾನ್ಯ ಸಭೆಗೆ ಆಗಮಿಸುತ್ತಿರುವಾಗ ಜಗದ್ಗುರು XIVನೇ ಲಿಯೋರವರು ಅರ್ಮೇನಿಯನ್ ಕ್ಯಾಥೊಲಿಕೋಸ್ Iನೇ ಅರಾಮ್ ರವರೊಂದಿಗೆ ಹಸ್ತಲಾಘವ ಮಾಡುತ್ತಿದ್ದಾರೆ.  (AFP or licensors)

ಜಗದ್ಗುರು ಲಿಯೋರವರು ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾರೆ.

ವಾರದ ಸಾರ್ವಜನಿಕ ಸಭೆಯಲ್ಲಿ ಅರ್ಮೇನಿಯನ್ ಕ್ಯಾಥೊಲಿಕೋಸ್ ಅರಾಮ್ ಪ್ರಥಮರನ್ನು ಸ್ವಾಗತಿಸಿದ ಜಗದ್ಗುರು XIVನೇ ಲಿಯೋರವರು, ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲೆಂದು ಎಲ್ಲರೂ ಪ್ರಾರ್ಥಿಸಬೇಕೆಂದು ಆಹ್ವಾನಿಸಿದರು.

ವ್ಯಾಟಿಕನ್ ವರದಿ

ಬುಧವಾರದ ಸಾರ್ವಜನಿಕ ಸಭೆಯ ವೇಳೆ, ಜಗದ್ಗುರು XIVನೇ ಲಿಯೋರವರು ಅರ್ಮೇನಿಯನ್ ಪ್ರೇಷಿತರ ಧರ್ಮ ಸಭೆಯ ಸಿಲಿಸಿಯಾ ಪೀಠದ ಕ್ಯಾಥೊಲಿಕೋಸ್ ಅವರ ಪವಿತ್ರತೆ ಪ್ರಥಮ ಅರಾಮರಿಗೆ ಮತ್ತೊಮ್ಮೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಮೇ 18ರ ಸೋಮವಾರ ವ್ಯಾಟಿಕನ್ ಪ್ರೇಷಿತರ ಅರಮನೆಯಲ್ಲಿ ಇಬ್ಬರು ಧರ್ಮ ಸಭೆಯ ನಾಯಕರು ಭೇಟಿಯಾಗಿ ಒಟ್ಟಾಗಿ ಪ್ರಾರ್ಥಿಸಿದ ಎರಡು ದಿನಗಳ ನಂತರ, ಕ್ಯಾಥೊಲಿಕೋಸ್ ಪ್ರಥಮ ಅರಾಮರು ಸಂತ ಪೇತ್ರರ ಚೌಕದಲ್ಲಿನ ವೇದಿಕೆಯಲ್ಲಿ ಜಗದ್ಗುರು ಲಿಯೋರವರೊಂದಿಗೆ ಸೇರಿಕೊಂಡರು.

ಸಾರ್ವಜನಿಕ ಸಭೆಯ ಆರಂಭದಲ್ಲಿ ಮಾತನಾಡಿದ ಜಗದ್ಗುರು ಲಿಯೋರವರು, ಕ್ಯಾಥೊಲಿಕೋಸ್  ಪ್ರಥಮ ಅರಾಮರು ಹಾಗೂ ಅವರ ಪ್ರತಿನಿಧಿ ಮಂಡಳಿಯನ್ನು ಸಂತೋಷದಿಂದ ಸ್ವಾಗತಿಸಿದರು. “ನಮ್ಮ ಧರ್ಮ ಸಭೆಗಳ ನಡುವೆ ಈಗಾಗಲೇ ಇರುವ ಏಕತೆಯ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಹಾಗೂ ಸಂಪೂರ್ಣ ಐಕ್ಯತೆಯತ್ತ ಇನ್ನಷ್ಟು ಹತ್ತಿರವಾಗಲು ಈ ಸಹೋದರಭಾವದ ಭೇಟಿ ಒಂದು ಮಹತ್ವದ ಅವಕಾಶವಾಗಿದೆ” ಎಂದು ಅವರು ಹೇಳಿದರು.

ಅರ್ಮೇನಿಯನ್ ಕ್ಯಾಥೊಲಿಕೋಸ್ ರವರ ಪ್ರೇಷಿತರಾದ ಸಂತ ಪೇತ್ರ ಮತ್ತು ಸಂತ ಪೌಲರ ಸಮಾಧಿಗಳ ತೀರ್ಥಯಾತ್ರೆಯನ್ನು ಪವಿತ್ರಾತ್ಮನು ಆಶೀರ್ವದಿಸಲಿ ಎಂದು ಜಗದ್ಗುರುಗಳು ಪ್ರಾರ್ಥಿಸಿದರು.

“ನಿಮ್ಮ ಈ ಭೇಟಿ ಮತ್ತು ಸಭೆಗಳು ಸಂಪೂರ್ಣ ಏಕತೆಯ ಮಾರ್ಗದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಲಿ ಎಂದು ಇಲ್ಲಿ ಹಾಜರಿರುವ ಎಲ್ಲರೂ ಪ್ರಭುವಿಗೆ ಉತ್ಸಾಹಭರಿತ ಪ್ರಾರ್ಥನೆ ಸಲ್ಲಿಸಬೇಕೆಂದು ನಾನು ಆಹ್ವಾನಿಸುತ್ತೇನೆ” ಎಂದು ಅವರು ಹೇಳಿದರು.

ನಂತರ ಜಗದ್ಗುರು ಲಿಯೋರವರು, ಲೆಬನಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಎಲ್ಲರೂ ಪ್ರಾರ್ಥಿಸಬೇಕೆಂದು ಮನವಿ ಮಾಡಿದರು. “ಹಿಂಸೆ ಮತ್ತು ಯುದ್ಧದಿಂದ ಮತ್ತೊಮ್ಮೆ ಕಂಗೆಟ್ಟಿರುವ ಈ ಪ್ರದೇಶಗಳಿಗೆ ಶಾಂತಿ ಅತ್ಯಗತ್ಯ” ಎಂದು ಅವರು ಹೇಳಿದರು.

ಸಿಲಿಸಿಯಾ ಕ್ಯಾಥೊಲಿಕೋಸೇಟ್‌ನ ವ್ಯಾಪ್ತಿಯಲ್ಲಿ ಲೆಬನಾನ್, ಸಿರಿಯಾ, ಸೈಪ್ರಸ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಗಲ್ಫ್ ಪ್ರದೇಶ, ಇರಾನ್, ಗ್ರೀಸ್ ಮತ್ತು ಅಮೆರಿಕಾ ಪ್ರದೇಶಗಳು ಸೇರಿವೆ. 1930ರಿಂದ ಮಹಾನ್ ಸಿಲಿಸಿಯಾ ಕ್ಯಾಥೊಲಿಕೋಸೇಟ್‌ನ ಕೇಂದ್ರ ಕಚೇರಿ ಲೆಬನಾನ್‌ನ ಅಂಟೆಲಿಯಾಸ್‌ನಲ್ಲಿ ಇದೆ.

ಸೋಮವಾರ ನಡೆದ ಭೇಟಿಯ ವೇಳೆ, ಲೆಬನಾನ್‌ನ ಜನರು ಮತ್ತು ಮಧ್ಯಪ್ರಾಚ್ಯದ ಧರ್ಮ ಸಭೆಗಳಿಗಾಗಿ ತಾನು ಪ್ರತಿದಿನವೂ ಪ್ರಾರ್ಥಿಸುತ್ತಿರುವುದಾಗಿ ಹಾಗೂ ಅವರ ಪರಿಸ್ಥಿತಿಯ ಬಗ್ಗೆ ಕಾಳಜಿ ಹೊಂದಿರುವುದಾಗಿ ಜಗದ್ಗುರುಗಳು ಕ್ಯಾಥೊಲಿಕೋಸ್ ರವರಿಗೆ ಭರವಸೆ ನೀಡಿದರು.

ಸಾರ್ವಜನಿಕ ಸಭೆಯಲ್ಲಿ ಜಗದ್ಗುರು XIVನೇ ಲಿಯೋರವರು, ವಿಶೇಷವಾಗಿ ಕಥೋಲಿಕ ಧರ್ಮ ಸಭೆ ಮತ್ತು ಓರಿಯಂಟಲ್ ಆರ್ಥೋಡಾಕ್ಸ್ ಧರ್ಮ ಸಭೆಗಳ ನಡುವಿನ ಧಾರ್ಮಿಕ ಸಂವಾದದ ಮೂಲಕ, ಏಕತಾವಾದಕ್ಕಾಗಿ ಕ್ಯಾಥೊಲಿಕೋಸ್ ಪ್ರಥಮ ಅರಾಮರು ತೋರಿಸುತ್ತಿರುವ “ನಿರಂತರ ವೈಯುಕ್ತಿಕ ಬದ್ಧತೆ”ಗೆ ಕೃತಜ್ಞತೆ ಸಲ್ಲಿಸಿದರು.

“ನಾವು ಎಲ್ಲರೂ ಬಯಸುವ ಸಂಪೂರ್ಣ ಏಕತೆಯತ್ತ ನಮ್ಮ ಪಯಣವನ್ನು ಬೆಳಗಿಸಲು ಸಂತ ಗ್ರೆಗೊರಿ ದಿ ಇಲ್ಯೂಮಿನೇಟರ್, ಸಂತ ಗ್ರೆಗೊರಿ ಆಫ್ ನರೇಕ್, ಸಂತ ನೆರ್ಸೆಸ್ ದಿ ಗ್ರೇಷಿಯಸ್ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದೇವಮಾತೆ ಕನ್ಯಾ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಒಟ್ಟಾಗಿ ಬೇಡಿಕೊಳ್ಳೋಣ” ಎಂದು ಜಗದ್ಗುರುಗಳು ತಮ್ಮ ಮಾತುಗಳನ್ನು ಸಮಾಪ್ತಿಗೊಳಿಸಿದರು.

20 ಮೇ 2026, 16:59