“ತಂತ್ರಜ್ಞಾನದ ಮೇಲಿನ ವಿಶ್ವಾಸವನ್ನು ಧರ್ಮ ಸಭೆ ಪುನಃಸ್ಥಾಪಿಸಿ, ಜನರನ್ನು ಕ್ರಿಸ್ತನತ್ತ ನಡೆಸಬೇಕು ಎಂದು ಜಗದ್ಗುರುಗಳು ಹೇಳಿದರು.”
ವ್ಯಾಟಿಕನ್ ವರದಿ
ಶುಕ್ರವಾರ ಜಗದ್ಗುರು XIVನೇ ಲಿಯೋರವರು “ಮಾನವ ಮುಖಗಳು ಮತ್ತು ಧ್ವನಿಗಳನ್ನು ಸಂರಕ್ಷಿಸುವುದು” ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ ಭಾಗವಹಿಸಿದವರನ್ನು ಭೇಟಿಯಾದರು.
ಸಂವಹನ ಡಿಕಾಸ್ಟರಿ ಮತ್ತು ಸಂಸ್ಕೃತಿ ಹಾಗೂ ಶಿಕ್ಷಣ ಡಿಕಾಸ್ಟರಿಯು ಆಯೋಜಿಸಿದ್ದ ಈ ಒಂದು ದಿನದ ಸಮ್ಮೇಳನದಲ್ಲಿ, ಎಐ, ಶಿಕ್ಷಣ ಮತ್ತು ಧರ್ಮಶಾಸ್ತ್ರ ಕ್ಷೇತ್ರಗಳ ತಜ್ಞರು ಸೇರಿಕೊಂಡು, ಈ ವರ್ಷದ ವಿಶ್ವ ಸಂವಹನ ದಿನಕ್ಕಾಗಿ ಜಗದ್ಗುರುಗಳು ನೀಡಿದ ಸಂದೇಶವನ್ನು ಆಳವಾಗಿ ಚರ್ಚಿಸಿದರು.
ತಮ್ಮ ಭಾಷಣದಲ್ಲಿ ಜಗದ್ಗುರುಗಳು, ಡಿಜಿಟಲ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಧರ್ಮ ಸಭೆಯ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು. ಜನರು ಈ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಮತ್ತು ವಿವೇಕಪೂರ್ಣವಾಗಿ ಬಳಸಲು ಧರ್ಮ ಸಭೆ ಸಹಾಯ ಮಾಡಬೇಕು ಎಂದು ಹೇಳಿದರು. ದ್ವಿತೀಯ ವ್ಯಾಟಿಕನ್ ಮಹಾಸಭೆಯ ಮಾಧ್ಯಮಗಳ ಕುರಿತ ಆದೇಶವನ್ನು ಉಲ್ಲೇಖಿಸಿದ ಅವರು, ಕ್ರಿಸ್ತನು ಧರ್ಮ ಸಭೆಯನ್ನು ಸುವಾರ್ತೆಯ ಮೂಲಕ ಎಲ್ಲರಿಗೂ ರಕ್ಷಣೆಯನ್ನು ತಲುಪಿಸಲು ಸ್ಥಾಪಿಸಿದ್ದಾರೆ ಎಂದು ನೆನಪಿಸಿದರು.
“ಎಲ್ಲರೂ ರಕ್ಷಿಸಲ್ಪಟ್ಟು ಸತ್ಯದ ಜ್ಞಾನಕ್ಕೆ ಬರಬೇಕು” ಎಂಬ ಧರ್ಮ ಸಭೆಯ ಆಶಯವು, ಮಾಧ್ಯಮಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ದಿಕ್ಕನ್ನು ನಿರ್ಧರಿಸುವಲ್ಲಿಯೂ ಮಾರ್ಗದರ್ಶಿಯಾಗಬೇಕು ಎಂದು ಜಗದ್ಗುರುಗಳು ಹೇಳಿದರು. ಈ ಸಾಧನಗಳು ಮಾನವಕುಲದ ನಿಜವಾದ ಸೇವೆಗೆ ಬಳಸಲ್ಪಡಬೇಕು ಎಂದು ಅವರು ಒತ್ತಿಹೇಳಿದರು.
ಆದರೆ, ಮಾನವ ಗೌರವವನ್ನು ಕಡೆಗಣಿಸಿ ನಿಯಂತ್ರಣವಿಲ್ಲದೆ ತಂತ್ರಜ್ಞಾನವನ್ನು ಬಳಸಿದಾಗ, ಅದು ಮಾನವ ಸಂಬಂಧಗಳ ಅಗತ್ಯವನ್ನು ದುರುಪಯೋಗಪಡಿಸಿಕೊಳ್ಳುವ ಸಾಧನಗಳಾಗಿ ಮಾರ್ಪಡುತ್ತದೆ ಎಂದು ಜಗದ್ಗುರುಗಳು ಎಚ್ಚರಿಸಿದರು. ಆದ್ದರಿಂದ, ದೇವರು ಉದ್ದೇಶಿಸಿದ ಮಾನವತ್ವದ ನಿಜವಾದ ಅರ್ಥ ಮತ್ತು ಮಹತ್ತ್ವವನ್ನು ಜನರು ಮರುಶೋಧಿಸಿಕೊಳ್ಳಲು ಧರ್ಮ ಸಭೆ ಸಹಾಯ ಮಾಡಬೇಕು ಎಂದು ಹೇಳಿದರು.
ಮಾನವಕುಲದ ಮುಂದಿರುವ ಸವಾಲು ಕೇವಲ ತಾಂತ್ರಿಕವಲ್ಲ, ಅದು ಮಾನವಶಾಸ್ತ್ರೀಯ ಸವಾಲು ಎಂದು ಜಗದ್ಗುರುಗಳು ತಿಳಿಸಿದರು. ಕ್ರಿಸ್ತನನ್ನು ಧ್ಯಾನಿಸುವ ಮೂಲಕವೇ ನಾವು ನಮ್ಮನ್ನು ಚೆನ್ನಾಗಿ ಅರಿತುಕೊಳ್ಳಬಹುದು, ಏಕೆಂದರೆ ಕ್ರಿಸ್ತನ ಹೃದಯವನ್ನು ಅರಿಯದೆ ನಮ್ಮ ಹೃದಯವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಯುವಜನರಲ್ಲಿ ಮಾಧ್ಯಮ ಮತ್ತು ಎಐ ಕುರಿತು ಜಾಗೃತಿ ಮತ್ತು ವಿಮರ್ಶಾತ್ಮಕ ಚಿಂತನೆ ಬೆಳೆಸಲು ಧರ್ಮ ಸಭೆ ಮತ್ತು ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಜಗದ್ಗುರುಗಳು ಆಹ್ವಾನಿಸಿದರು. ಯುವಕರು ತಂತ್ರಜ್ಞಾನ ಬಳಕೆಯಲ್ಲಿ ಮಿತಿ ಮತ್ತು ಶಿಸ್ತು ಕಲಿಯಬೇಕು ಹಾಗೂ ಜೀವಂತ ಕ್ರಿಸ್ತನನ್ನು ಭೇಟಿಯಾಗಿ, ತಂತ್ರಜ್ಞಾನವನ್ನು ಸಮಗ್ರ ಕ್ರೈಸ್ತ ಜೀವನಶೈಲಿಯೊಳಗೆ ಸೇರಿಸಿಕೊಳ್ಳಬೇಕು ಎಂದು ಹೇಳಿದರು.
ಕೊನೆಯಲ್ಲಿ, ಎಐ ಯುಗ ಮತ್ತು ಅದಕ್ಕೆ ಧರ್ಮ ಸಭೆ ನೀಡುವ ಪ್ರತಿಕ್ರಿಯೆ ಅತ್ಯಂತ ಮಹತ್ವದ ವಿಷಯವಾಗಿದೆ ಎಂದು ಜಗದ್ಗುರು ಲಿಯೋರವರು ಹೇಳಿದರು. “ಮಾನವ ವ್ಯಕ್ತಿಯ ಪ್ರತಿಭೆಯ ಫಲವಾಗಿರುವ ತಂತ್ರಜ್ಞಾನದ ಮೇಲೆ, ದೇವರ ಸೃಷ್ಟಿ ಯೋಜನೆಯೊಂದಿಗೆ ಹೊಂದಾಣಿಕೆಯಲ್ಲಿ, ಪುನಃಸ್ಥಾಪಿತ ವಿಶ್ವಾಸ ಮೂಡಲಿ” ಎಂಬುದು ತಮ್ಮ ಆಶಯ ಎಂದು ಅವರು ತಿಳಿಸಿದರು.
